ADVERTISEMENT

ಬೆಂಗಳೂರು | ಬಗೆಹರಿದ ಬಿಕ್ಕಟ್ಟು: ಭೂಭರ್ತಿಗೆ ತ್ಯಾಜ್ಯ ವಿಲೇವಾರಿ ಆರಂಭ

ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳ ಮಾತುಕತೆ ಫಲಪ್ರದ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 16:05 IST
Last Updated 19 ಫೆಬ್ರುವರಿ 2026, 16:05 IST
ಭೂಭರ್ತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಗುರುವಾರ ಬೆಳಿಗ್ಗೆಯಿಂದ ಆರಂಭವಾಯಿತು
ಭೂಭರ್ತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಗುರುವಾರ ಬೆಳಿಗ್ಗೆಯಿಂದ ಆರಂಭವಾಯಿತು   

ಕೆ.ಆರ್.ಪುರ: ಮಿಟ್ಟಗಾನಹಳ್ಳಿ– ಬೆಳ್ಳಹಳ್ಳಿ– ಕಣ್ಣೂರು ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳು ಗುರುವಾರ ಬೆಳಿಗ್ಗೆಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ‌

ಗ್ರಾಮಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸ್ಥಳೀಯರು ಕಾಂಪ್ಯಾಕ್ಟರ್‌ಗಳನ್ನು ಎರಡು ದಿನದಿಂದ ತಡೆ ಹಿಡಿದಿದ್ದರು.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಅಧಿಕಾರಿಗಳು ಮಹದೇವಪುರ ವಿಧಾನಸಭೆ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ಮುಖಂಡರೊಂದಿಗೆ ಬುಧವಾರವೇ ಮಾತುಕತೆ ನಡೆಸಿದರು. ತಲಾ ₹90 ಕೋಟಿ ಅನುದಾನದ ಭರವಸನೆಯನ್ನೂ ನೀಡಿದ್ದರು.

ADVERTISEMENT

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಎಸ್ಮಾ ಜಾರಿಯ ಎಚ್ಚರಿಕೆಯನ್ನೂ ನೀಡಿದ್ದರು. ಈ ಬೆಳವಣಿಗೆ ನಂತರ, ಗುರುವಾರ ಬೆಳಿಗ್ಗೆಯಿಂದ ಕಾಂಪ್ಯಾಕ್ಟರ್‌ಗಳಿಂದ ತ್ಯಾಜ್ಯ ವಿಲೇವಾರಿಗೆ ಯಾರೂ ತಡೆ ಹಾಕಿಲ್ಲ.

ನಗರದಲ್ಲಿ ಉಳಿದ ತ್ಯಾಜ್ಯ: ತ್ಯಾಜ್ಯ ತುಂಬಿದ ಕಾಂಪ್ಯಾಕ್ಟರ್‌ಗಳು ಬೆಳ್ಳಹಳ್ಳಿ ಮುಖ್ಯರಸ್ತೆಯಲ್ಲೇ ಮಂಗಳವಾರ ಬೆಳಿಗ್ಗೆಯಿಂದ ನಿಂತಿದ್ದರಿಂದ, ಗುರುವಾರ ಬೆಳಿಗ್ಗೆಯಿಂದ ಅವುಗಳಲ್ಲಿದ್ದ ತ್ಯಾಜ್ಯ ವಿಲೇವಾರಿಯಾಗಿದೆ. ಆದರೆ, ನಗರದ ಹಲವು ಪ್ರದೇಶಗಳಲ್ಲಿ ತ್ಯಾಜ್ಯ ತುಂಬಿದ ಆಟೊಗಳು ರಸ್ತೆಗಳಲ್ಲೇ ನಿಂತಿದ್ದವು.

ಕೆಲವು ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹವಾಗದ್ದರಿಂದ, ರಸ್ತೆಯಲ್ಲಿ ಕಸದ ರಾಶಿ ಬಿದ್ದಿತ್ತು. ಗುರುವಾರ ಸಂಜೆಯಿಂದ ನಗರದಿಂದಲೂ ತ್ಯಾಜ್ಯ ಸಾಗಣೆ ಆರಂಭವಾಗಿದ್ದು, ಶನಿವಾರದ ವೇಳೆಗೆ ಎಲ್ಲ ತ್ಯಾಜ್ಯ ಸಾಗಣೆಯಾಗಲಿದೆ ಎನ್ನಲಾಗಿದೆ.

ನಗರದ ಹೊಸಗುಡ್ಡದಹಳ್ಳಿ ಪೈಪ್‌ಲೈನ್ ರಸ್ತೆಯಲ್ಲಿ ಗುರುವಾರ ಕಸದ ರಾಶಿ ಕಂಡುಬಂದಿತು ಪ್ರಜಾವಾಣಿ ಚಿತ್ರ

ಶಾಸಕರ ಕ್ಷೇತ್ರದಲ್ಲಿ ಕಸವನ್ನೇ ತೆಗೆಸುವುದಿಲ್ಲ: ಡಿಸಿಎಂ

ಬೆಂಗಳೂರು: ‘ಬಿಜೆಪಿ ನಾಯಕರು ಕಸ ವಿಲೇವಾರಿಗೆ ಬಿಡುವುದು ಬೇಡ‌. ಅವರೇ ಕಸವನ್ನು ಇಟ್ಟುಕೊಳ್ಳಲಿ. ಯಾರು ಬಿಡುವುದಿಲ್ಲವೋ ಅವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಯುವುದಿಲ್ಲ ತೆಗೆಸುವುದಿಲ್ಲ. ಆಗ ಜನರೇ ಅವರಿಗೆ ಉಗಿಯುತ್ತಾರೆ. ಮೈಕ್ ಹಾಕಿ ಪ್ರಚಾರ ಮಾಡಿಸುತ್ತೇನೆ. ಅವರ ಕಾಲು ಕಟ್ಟಿಕೊಳ್ಳಲು ಆಗುತ್ತದೆಯೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು. ಅಸ್ಸಾಂ ರಾಜ್ಯಕ್ಕೆ ತೆರಳುವುದಕ್ಕೆ ಮುನ್ನ ಗುರುವಾರ ಬೆಳಿಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ‘ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಮೊದಲಿನಿಂದಲೂ ಹೇಗೆ ಸಂಪ್ರದಾಯವಿತ್ತೋ ಅದೇ ರೀತಿ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಹಾಗೂ ನಮ್ಮ ಸಮಯದಲ್ಲಿ ತೀರ್ಮಾನ ಮಾಡಿದ್ದು ಇದೇ ರೀತಿ’ ಎಂದರು.

‘ನಾವು ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಕೊಟ್ಟಿದ್ದೇವೆ. ಇನ್ನೆಷ್ಟು ಕೊಡಲು ಸಾಧ್ಯ? ₹20 ಕೋಟಿ ₹30 ಕೋಟಿ ಸೇರಿದಂತೆ ₹50ರಿಂದ ₹100 ಕೋಟಿ ಹಣವನ್ನು ಅಭಿವೃದ್ಧಿಗೆ ಕೊಡುತ್ತಾ ಬಂದಿದ್ದೇವೆ. ಅವರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು. ‘ಕಸ ವಿಲೇವಾರಿಗೆ ನಾಲ್ಕು ಕಡೆ ಜಮೀನುಗಳನ್ನು ನೋಡಿದ್ದೆವು. ಭೂಮಿ ಸಮಸ್ಯೆಯಿಂದ ಎರಡು ಕಡೆ ಅಂತಿಮ‌ ಮಾಡಿದ್ದೇವೆ. ಟೆಂಡರ್ ಕೂಡ ಕರೆಯಲಾಗಿದೆ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ’ ಎಂದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.