ADVERTISEMENT

Bengaluru Stampede: ನೈತಿಕ ಹೊಣೆ ಹೊತ್ತು KSCA ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2025, 6:40 IST
Last Updated 7 ಜೂನ್ 2025, 6:40 IST
   

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ 'ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ' (ಕೆಎಸ್‌ಸಿಎ) ಕಾರ್ಯದರ್ಶಿ ಎ.ಶಂಕರ್‌ ಹಾಗೂ ಖಜಾಂಚಿ ಇ.ಎಸ್‌. ಜೈರಾಮ್‌ ಅವರು ತಮ್ಮ ಹುದ್ದೆಗಳಿಗೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಈ ಇಬ್ಬರು, 'ಕಳೆದೆರಡು ದಿನಗಳಲ್ಲಿ ನಡೆದ ಅನಿರೀಕ್ಷಿತ ಹಾಗೂ ದುರದೃಷ್ಟಕರ ಘಟನೆಯಲ್ಲಿ ತಮ್ಮ ಪಾತ್ರ ಸೀಮಿತವಾಗಿದ್ದರೂ, ನೈತಿಕ ಹೊಣೆ ಹೊತ್ತು ನಾವು ಕೆಎಸ್‌ಸಿಎ ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇವೆ. ಈ ಕುರಿತು ಸಂಸ್ಥೆಯ ಅಧ್ಯಕ್ಷರಿಗೆ ಶನಿವಾರ (2025ರ ಜೂನ್‌ 6ರಂದು) ರಾತ್ರಿ ಪತ್ರ ಬರೆದಿದ್ದೇವೆ ಎಂದು ತಿಳಿಸಲು ಬಯಸುತ್ತೇವೆ' ಎಂದು ಉಲ್ಲೇಖಿಸಿದ್ದಾರೆ.

2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದಲೂ ಆಡುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಈ ಬಾರಿ ಚೊಚ್ಚಲ ಪ್ರಶಸ್ತಿ ಜಯಿಸಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಜೂನ್‌ 3ರಂದು ನಡೆದ ಫೈನಲ್‌ನಲ್ಲಿ 6 ರನ್‌ ಅಂತರದ ಜಯ ಸಾಧಿಸಿತ್ತು. ಹೀಗಾಗಿ, ದೇಶದಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ADVERTISEMENT

ಮರುದಿನ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ನಡೆಸಲು ಉದ್ದೇಶಿಸಿದ್ದ ಆರ್‌ಸಿಬಿ, ಮಧ್ಯಾಹ್ನ 3ಕ್ಕೆ ತಂಡದ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿತ್ತು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಟಗಾರರಿಗೆ ಸನ್ಮಾನ ನಡೆಯುವುದು, ಪರೇಡ್‌ ನಡೆಯುವುದು ಹಾಗೂ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳು ಮೂಡಿದ್ದವು.

ಅಭಿಮಾನಿಗಳು ಕ್ರೀಡಾಂಗಣದ ಬಳಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಈ ವೇಳೆ 11 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಈ ದುರಂತಕ್ಕೆ ಸರ್ಕಾರ, ಕೆಎಸ್‌ಸಿಎ, ಆರ್‌ಸಿಬಿ ಫ್ರಾಂಚೈಸ್‌ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.