ಬೆಂಗಳೂರು: ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ಹೊಸ ವರ್ಷದ ಆರಂಭ ದಲ್ಲೇ ನೇಮಕ ಮಾಡಲು ಪಕ್ಷದ ಹೈಕಮಾಂಡ್ ಮುಂದಾಗಿದ್ದು, ರಾಜ್ಯ ನಾಯಕರ ಜತೆಗೆ ಮಾತುಕತೆ ನಡೆಸುತ್ತಿದೆ.
ಶಾಸಕ ಜಿ.ಪರಮೇಶ್ವರ ಅವರಿಂದ ಕೆಲ ಮಾಹಿತಿಗಳನ್ನು ವರಿಷ್ಠರು ಪಡೆದು ಕೊಂಡಿದ್ದಾರೆ. ಇನ್ನೂ ಒಂದೆರಡು ದಿನಗಳಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾಗಲಿದ್ದಾರೆ.
ನ್ಯಾಯಾಲಯ ಪ್ರಕರಣ ಸಂಬಂಧ ದೆಹಲಿಗೆ ತೆರಳುತ್ತಿದ್ದು, ಅದೇ ಸಮಯದಲ್ಲಿ ಭೇಟಿಯಾಗಿ ಚರ್ಚಿಸಲಿ ದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆ ನಂತರ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ ಹಾಗೂ ಪಕ್ಷದ ಆಂತರಿಕ ವಿಚಾರಗಳನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಆಂಜಿಯೊಪ್ಲಾಸ್ಟಿ ಚಿಕಿತ್ಸೆ ನಂತರ ವಿಶ್ರಾಂತಿ ಪಡೆಯುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಹೊಸ ವರ್ಷದಂದು ದೆಹಲಿಗೆ ತೆರಳಲಿದ್ದಾರೆ. ಹೊಸ ವರ್ಷದ ಶುಭಾಶಯ ಕೋರುವ ನೆಪದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದು, ಪಕ್ಷದ ಸಂಘಟನೆ ವಿಚಾರವೂ ಪ್ರಮುಖವಾಗಿ ಚರ್ಚೆಯಾಗಲಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ನಂತರ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಮುಖಂಡ ಮಧುಸೂದನ ಮಿಸ್ತ್ರಿ ನೇತೃತ್ವದ ತಂಡ ನಗರಕ್ಕೆ ಭೇಟಿ ನೀಡಿತ್ತು.
ಈ ಸಮಯದಲ್ಲಿ ಚಿಕಿತ್ಸೆ ಪಡೆದಿದ್ದ ಸಿದ್ದರಾಮಯ್ಯ ವಿಶ್ರಾಂತಿ ಯಲ್ಲಿದ್ದರು. ಗುಣಮುಖರಾದ ನಂತರ ದೆಹಲಿಗೆ ಬರುವಂತೆ ವರಿಷ್ಠರು ಸಲಹೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರುದೆಹಲಿಗೆ ಹೋಗುತ್ತಿದ್ದಾರೆ. ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿ ಪ್ರಸಾದ್, ಎಚ್.ಕೆ. ಪಾಟೀಲ, ಸೇರಿದಂತೆ ಹಿರಿಯ ನಾಯಕರು ಈಗಾಗಲೇ ವರಿಷ್ಠರ ಜತೆ ಮಾತುಕತೆ ನಡೆಸಿದ್ದಾರೆ.
ಮಧುಸೂದನ ಮಿಸ್ತ್ರಿ ನೇತೃತ್ವದ ತಂಡ ಈಗಾಗಲೇ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದು, ರಾಜ್ಯ ನಾಯಕರಿಂದ ಮತ್ತೊಮ್ಮೆ ಅಭಿಪ್ರಾಯ ಪಡೆದುಕೊಂಡ ನಂತರ ಪಟ್ಟಿ ಸಿದ್ಧಪಡಿಸಲಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಹಿಂದೆ ಇದ್ದಂತೆ ಒಬ್ಬರಿಗೆ ನೀಡಬೇಕೇ? ಇಲ್ಲವೆ ಪ್ರತ್ಯೇಕಿಸಿ ಇಬ್ಬರಿಗೆ ಅವಕಾಶ ಕಲ್ಪಿಸಬೇಕೇ? ಎಂಬುದು ಈ ಸಂದರ್ಭದಲ್ಲಿ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.