
ಶಾಮನೂರು ವೇದಮೂರ್ತಿ
ದಾವಣಗೆರೆ: ರಾಜಸ್ಥಾನದಿಂದ ದಾವಣಗೆರೆಗೆ ಮಾದಕವಸ್ತು ಪೂರೈಸುತ್ತಿದ್ದ ಜಾಲವೊಂದನ್ನು ಭೇದಿಸಿದ ವಿದ್ಯಾನಗರ ಠಾಣೆಯ ಪೊಲೀಸರು, ಕಾಂಗ್ರೆಸ್ ಮುಖಂಡ ಶಾಮನೂರು ವೇದಮೂರ್ತಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹10 ಲಕ್ಷ ಮೌಲ್ಯದ ಮಾದಕವಸ್ತು ಹಾಗೂ ₹1 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
ರಾಜಸ್ಥಾನದ ಜೋಧಪುರ ತಾಲ್ಲೂಕಿನ ರಾಮ್ ಸ್ವರೂಪ್ (33), ಧೋಲಾರಾಮ್ (36) ಹಾಗೂ ಸಿದ್ಧವೀರಪ್ಪ ಬಡಾವಣೆಯ ದೇವಕಿಶನ್ (35) ಬಂಧಿತರಾಗಿದ್ದು, ಇತರ ಮೂವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ 200 ಗ್ರಾಂ ಓಪಿಎಂ ಹಾಗೂ 90 ಗ್ರಾಂ ಎಂಡಿಎಂ ವಶಪಡಿಸಿಕೊಂಡಿದ್ದಾರೆ.
ನಗರದ ಜೆ.ಎಚ್. ಪಟೇಲ್ ಬಡಾವಣೆಯ ಉದ್ಯಾನದಲ್ಲಿ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ವಿದ್ಯಾನಗರ ಠಾಣೆಯ ಪೊಲೀಸರು ಸೋಮವಾರ ದಾಳಿ ನಡೆಸಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ರಾಮಸ್ವರೂಪ್ ವಿರುದ್ಧ ರಾಜಸ್ಥಾನದ ಜೋಧಪುರದಲ್ಲಿ ಮಾದಕವಸ್ತು ಹಾಗೂ ಶಸ್ತ್ರಾಸ್ತ ಕಾಯ್ದೆಯಡಿಯೂ ಹಲವು ಪ್ರಕರಣಗಳು ದಾಖಲಾಗಿದ್ದು, ತನಿಖೆಯಿಂದ ಗೊತ್ತಾಗಿದೆ.
‘ರಾಜಸ್ಥಾನದಿಂದ ದಾವಣಗೆರೆಗೆ ಬರುತ್ತಿದ್ದ ಡ್ರಗ್ಸ್‌ನ್ನು ವೇದಮೂರ್ತಿ ಸೇರಿದಂತೆ ಇತರರು ಸರಬರಾಜು ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಯಾವ ಆರೋಪಿಗಳ ಪಾತ್ರ ಏನು? ಜಾಲದಲ್ಲಿ ಇನ್ನೂ ಯಾರಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಾಜಸ್ಥಾನದ ಪೆಡ್ಲರ್‌ಗಳಿಂದ ಪ್ರತಿ ಗ್ರಾಂ ಮಾದಕವಸ್ತುವನ್ನು ₹ 3,500ರಿಂದ ₹ 4,000ಕ್ಕೆ ವೇದಮೂರ್ತಿ ಹಾಗೂ ದೇವಕಿಶನ್ ಖರೀದಿಸುತ್ತಿದ್ದರು. ದುಬಾರಿ ಹಣ ಕೊಟ್ಟು ಖರೀದಿ ಮಾಡುವ ಸಾಮರ್ಥ್ಯ ಇರುವ ಶ್ರೀಮಂತರಿಗೆ ಇದನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
‘ಮಾದಕವಸ್ತು ನಿಗ್ರಹ ಪಡೆ ರಚನೆಯಾದ ಬಳಿಕ ಮಾದಕವಸ್ತು ಸಾಗಣೆಗೆ ಸಂಬಂಧಿಸಿದಂತೆ 8 ಪ್ರಕರಣ ದಾಖಲಿಸಲಾಗಿದ್ದು, 24 ಜನರನ್ನು ಬಂಧಿಸಲಾಗಿದೆ. ಹರಿಹರ, ಹೊನ್ನಾಳಿ ಸೇರಿ ಜಿಲ್ಲೆಯ ಹಲವೆಡೆ ಇಂತಹ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ಮಾಡಲು ಜಾಗೃತಿ ಮೂಡಿಸುವುದರ ಜೊತೆಗೆ ಜಾಲದಲ್ಲಿ ಸಕ್ರಿಯವಾಗಿರುವವರ ಪತ್ತೆಗೂ ಗಮನ ಹರಿಸಲಾಗಿದೆ’ ಎಂದು ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಮಾದಕವಸ್ತು ಸಾಗಣೆ ಆರೋಪದಡಿ ರಾಜಸ್ಥಾನದ ಕೆಲವರ ವಿರುದ್ಧ ಈ ಹಿಂದೆಯೂ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.–ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.