ADVERTISEMENT

ಕಾಂಗ್ರೆಸ್‌ ಶಾಸಕರು, ಸಚಿವರ ಬಡಿದಾಟದಿಂದ ಆಡಳಿತ ವ್ಯವಸ್ಥೆ ಕುಸಿದಿದೆ: ಜೋಶಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 10:17 IST
Last Updated 12 ಅಕ್ಟೋಬರ್ 2025, 10:17 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಹಾಗೂ ಇದ್ದ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್‌ ಶಾಸಕರು ಮತ್ತು ಸಚಿವರು ಪರಸ್ಪರ ಬಡಿದಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಪಕ್ಷದಲ್ಲಿನ ಗೊಂದಲದಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಬೇಕಾದ ಸಚಿವರು ಹಾಗೂ ಶಾಸಕರನ್ನು ಕರೆದು ಡಿನ್ನರ್‌ ಪಾರ್ಟಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಆಗಲು ಡಿ.ಕೆ. ಶಿವಕುಮಾರ್‌ ಅವರು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದಾರೆ’ ಎಂದು ಟೀಕಿಸಿದರು.

‘ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಕಾನೂನು ಸುವ್ಯವಸ್ಥೆ ಹಳಿತಪ್ಪಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಅತಿವೃಷ್ಟಿಯಿಂದಾಗಿ ಪರಿಹಾರ ಸಿಗದೆ ರೈತರು ಬೀದಿಗೆ ಸಂಕಷ್ಟ ಅನುಭವಿಸುತ್ತಿದ್ದಾರೆ. ವಯಾನಾಡಿನಲ್ಲಿ ಆನೆ ತುಳಿದು ಮೃತಪಟ್ಟ ಕುಟುಂಬದವರಿಗೆ, ಇದೇ ರಾಜ್ಯ ಸರ್ಕಾರ ಆನೆ ತಮ್ಮದು ಎಂದು ಪರಿಹಾರ ನೀಡಿದೆ. ಆದರೆ, ಕರ್ನಾಟಕದಲ್ಲಿ ಆನೆ ತುಳಿದು ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡುತ್ತಿಲ್ಲ. ಆನೆ ಮೇಲೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಹೆಸರು ಬರೆಯಲಾಗಿದೆಯೇ’ ಎಂದು ವ್ಯಂಗ್ಯವಾಡಿದ ಜೋಶಿ, ‘ಇಲ್ಲಿ ಮನೆ ಬಿದ್ದರೂ, ಸತ್ತರೂ, ಬೆಳೆನಷ್ಟ ಅನುಭವಿಸಿದರೂ ಪರಿಹಾರ ಸಿಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಡಿ.ಕೆ. ಶಿವಕುಮಾರ್‌ ‘ಕರಿ ಟೋಪಿ’ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿದ ಜೋಶಿ, ‘‌‌‌ಧೈರ್ಯ ಇದ್ದರೆ ಅವರು, ಮುಸ್ಲಿಮರು ಧರಿಸುವ ಟೋಪಿಗೆ ಜಾಲರಿ ಟೋಪಿ ಎಂದು ಕರೆಯಲಿ ನೋಡೋಣ. ಹಾಗೇನಾದರೂ ಹೇಳಿದರೆ, ಮುಸ್ಲಿಮರು ಅವರಿಗೆ ಆಡಳಿತ ನಡೆಸಲು ಬಿಡುವುದಿಲ್ಲ. ಕರಿ ಟೋಪಿ ಎಂದು ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದು ಖಂಡನೀಯ’ ಎಂದರು.

‘ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೀಡಬೇಕಾದ ₹350 ಕೋಟಿಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ನೀಡುವಂತೆ ಪಾಲಿಕೆ ಸಾಕಷ್ಟು ಬಾರಿ ವಿನಂತಿಸಿದರೂ, ನಿರ್ಲಕ್ಚ್ಯ ಮಾಡುತ್ತಿದೆ. ಸರ್ಕಾರ ದಿವಾಳಿಯಾಗಿದ್ದು, ಜನರೇ ಪಾಠ ಕಲಿಸುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.