
ಹುಬ್ಬಳ್ಳಿ: ಮೆಲ್ಲಗೆ ಚಳಿಗಾಲ ಆರಂಭವಾಗಿದ್ದು, ಮುಂಜಾನೆ ಹಾಗೂ ಸಂಜೆಯಾಗುತ್ತಿದ್ದಂತೆ ಚಳಿಯ ವಾತಾವರಣವು ಇಡೀ ಭೂರಮೆಯನ್ನು ಆವರಿಸಿಕೊಳ್ಳುತ್ತಿದೆ. ಎಂದಿನಂತೆ ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರು ಬೆಚ್ಚಗಿನ ಉಡುಪುಗಳ ಮೊರೆ ಹೋಗುತ್ತಿದ್ದಾರೆ.
ಈ ಬಾರಿ ಮುಂಗಾರು ಅವಧಿಯಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಭೂಮಿಯಲ್ಲಿ ತೇವಾಂಶ ಸಹಜವಾಗಿ ಹೆಚ್ಚಾಗಿದೆ. ಇದರಿಂದಾಗಿ ನವೆಂಬರ್ ಆರಂಭದಿಂದಲೇ ಚಳಿಯ ವಾತಾವರಣ ಶುರುವಾಗಿದೆ. ಮಳೆ ಹಾಗೂ ಬಿಸಿಲಿನ ತಾಪಕ್ಕೆ ಮೈಒಡ್ಡಿದ್ದ ಜನರು ಇದೀಗ ನಿಧಾನವಾಗಿ ಚಳಿಗಾಲದ ತಾಪಮಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ.
ಕಳೆದ ಒಂದು ವಾರದಿಂದ ನಗರದ ಕನಿಷ್ಠ ತಾಪಮಾನವು ಸರಾಸರಿ 16 ರಿಂದ 20 ಡಿಗ್ರಿ ಸೆಲ್ಸಿಯಸ್ ತನಕ ದಾಖಲಾಗಿದೆ. ಮಕರ ಸಂಕ್ರಾಂತಿವರೆಗೆ ಕನಿಷ್ಠ 16ರಿಂದ 17ಡಿಗ್ರಿ ತಾಪಮಾನದವರೆಗೂ ಇರುತ್ತದೆ ಎನ್ನುತ್ತವೆ ಹವಾಮಾನ ಇಲಾಖೆಯ ಮೂಲಗಳು.
ಮುಂಜಾನೆಯ ಮಂಜು ಮುಸುಕಿದ ವಾತಾವರಣದ ಜತೆ ಮೈಕೊರೆಯುವ ಚಳಿಯ ಅನುಭವವಾಗುತ್ತಿದೆ. ನಗರ ಮಾತ್ರವಲ್ಲದೇ, ಗ್ರಾಮೀಣ ಪ್ರದೇಶದಲ್ಲಿಯೂ ತಾಪಮಾನ ಕುಸಿದಿದೆ. ಮಧ್ಯಾಹ್ನದ ವೇಳೆಗೆ ಗರಿಷ್ಠ ತಾಪಮಾನ 29 ರಿಂದ 30 ಡಿಗ್ರಿ ಸೆಲ್ಸಿಯಸ್ ತನಕ ಏರಿಕೆಯಲ್ಲಿರುತ್ತದೆ.
ಬೆಚ್ಚಗಿನ ಉಡುಪಿಗೆ ಮೊರೆ: ನಗರದ ತೋಳನಕೆರೆ, ಉಣಕಲ್ ಕೆರೆ, ನೃಪತುಂಗ ಬೆಟ್ಟ, ಧಾರವಾಡದ ಸಾಧನ ಕೆರೆ ಉದ್ಯಾನ ಸೇರಿದಂತೆ ನಗರದ ಉದ್ಯಾನ, ಕ್ರೀಡಾ ಮೈದಾನಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಹೊರವಲಯದಲ್ಲಿ ಮುಂಜಾನೆ, ಸಂಜೆ ವಾಯುವಿಹಾರ ಮಾಡುವವರು, ಸೈಕ್ಲಿಂಗ್ ಮಾಡುವವರು ಸ್ವೆಟರ್, ಟೋಪಿ ಧರಿಸಿ ಸಂಚರಿಸುತ್ತಿದ್ದಾರೆ. ದ್ವಿಚಕ್ರ ವಾಹನ, ಆಟೊ ಹಾಗೂ ಟಂಟಂ ವಾಹನಗಳಲ್ಲಿ ಶಾಲೆಗೆ ತೆರಳುವ ಮಕ್ಕಳು ಸಹ ಸ್ವೆಟರ್, ಮಪ್ಲರ್ ಧರಿಸಿ ಹೋಗುತ್ತಿದ್ದಾರೆ.
ಚಳಿಗಾಲ ಆರಂಭವಾಗುತ್ತಿದ್ದಂತೆ ಬೆಚ್ಚಗಿನ ಉಡುಪುಗಳ ಮಾರಾಟವೂ ಸಹ ಗರಿಗೆದರಿಕೊಂಡಿದೆ. ನಗರದ ದುರ್ಗದ ಬೈಲ್, ಜನತಾಬಜಾರ್, ಕೊಪ್ಪಿಕರ್ ರಸ್ತೆ, ದಾಜೀಬಾನ್ ಪೇಟೆ, ಷಾ ಬಜಾರ್, ಸಿಬಿಟಿ ಸೇರಿದಂತೆ ನಗರದ ಪ್ರಮುಖ ಮಾರ್ಕೆಟ್ ಸ್ಥಳ ಹಾಗೂ ಜನದಟ್ಟಣೆ ಪ್ರದೇಶ, ರಸ್ತೆ ಬದಿಯಲ್ಲಿ ಸ್ವೆಟರ್, ಮಫ್ಲರ್, ಟೋಪಿ ಸೇರಿದಂತೆ ಬೆಚ್ಚಗಿನ ಉಡುಪುಗಳ ಮಾರಾಟ ತುಸು ಜೋರಾಗಿಯೇ ನಡೆದಿದೆ.
ಕೆಲ ದಿನಗಳ ಹಿಂದೆ ಬಿಸಿಲಿನ ತಾಪಮಾನದಿಂದ ದೇಹವನ್ನು ತಂಪಾಗಿಸಿಕೊಳ್ಳಲು ತಂಪು ಪಾನೀಯ, ಎಳನೀರು, ಐಸ್‌ಕ್ರೀಂ ಸೇವನೆಗೆ ಮೊರೆ ಹೊಗಿದ್ದವರು, ಇದೀಗ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಲು ಬಿಸಿ ಚಹಾ, ಕಾಫಿ ಹಾಗೂ ಬಿಸಿಯಾದ ಆಹಾರ ಸೇವನೆಗೆ ಇಷ್ಟಪಡುತ್ತಿದ್ದಾರೆ. ಮುಂಜಾನೆಯ ವೇಳೆಯಲ್ಲಿ ರಸ್ತೆ ಬದಿಯ ಚಹಾದಂಗಡಿ ಮುಂದೆ ಚಹಾ ಹೀರುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ನಿತ್ಯ ಹಾಲು ಮಾರುವವರು, ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವವರು, ಮುಂಜಾನೆಯೇ ಮಾರುಕಟ್ಟೆಗೆ ತೆರಳಿ ಸಗಟು ತರಕಾರಿ ತರುವ ವ್ಯಾಪಾರಿಗಳು ಸೇರಿದಂತೆ ಎಂದಿನಂತೆ ಬೆಳಿಗ್ಗೆಯೇ ನಿತ್ಯದ ಕಾಯಕ ಆರಂಭಿಸುವವರು ಹಿಬ್ಬನಿ ಹಾಗೂ ಚಳಿಯನ್ನು ಲೆಕ್ಕಿಸದೇ ತಮ್ಮ ಕೆಲಸ ಮುಂದುವರೆಸಿದ್ದಾರೆ. ಪೌರಕಾರ್ಮಿಕರು ಚಳಿಯ ನಡುವೆಯೂ ಎಂದಿನಂತೆ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಆರೋಗ್ಯ ಜಾಗೃತಿಗೆ ಆದ್ಯತೆ: ‘ಚಳಿಯಿಂದಾಗಿ ನಮ್ಮ ಜೀವನ ಕ್ರಮದಲ್ಲಿಯೂ ಅಲ್ಪ ಬದಲಾವಣೆಯಾಗಿದೆ. ಮನೆಯಲ್ಲಿನ ಹಿರಿಯರನ್ನು, ಮಕ್ಕಳನ್ನು, ಆರೋಗ್ಯ ಸಮಸ್ಯೆ ಇರುವವರನ್ನು ಬೆಚ್ಚಗಿರಿಸಿ ಕೊಳ್ಳಬೇಕಿದೆ. ಅಲ್ಮೆರಾದಲ್ಲಿ ಇಟ್ಟಿದ್ದ ಸ್ವೆಟರ್, ಶಾಲು, ಮಫ್ಲರ್‌ಗಳು ಹೊರಗೆ ಬಂದಿವೆ. ಮುಂಜಾನೆ ವಾಕಿಂಗ್ ಹೋಗುವ ಹಿರಿಯರಿಗೆ ಶಾಲು, ಟೋಪಿ ಕೊಟ್ಟು ಕಳುಹಿಸಬೇಕು. ಶಾಲೆಗೆ ಹೋಗುವ ಮಕ್ಕಳಿಗೆ ಸ್ವೆಟರ್ ತೊಡಿಸಿ ಕಳುಹಿಸಬೇಕು. ಚಳಿಗಾಲದ ವೇಳೆ ಹಿರಿಯರ ಹಾಗೂ ಮಕ್ಕಳ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಜಾಗೃತಿಯಿಂದ ಅವರನ್ನು ನೋಡಿಕೊಳ್ಳಬೇಕಿದೆ‘ ಎನ್ನುತ್ತಾರೆ ವಿದ್ಯಾನಗರದ ಗೃಹಿಣಿಯೊಬ್ಬರು.
‘ಚಳಿಗಾಲ ಆರಂಭವಾಗುತ್ತಿದ್ದಂತೆ ಸಹಜವಾಗಿ ನೆಗಡಿ ಶೀತ ಕೆಮ್ಮು ಹಿರಿಯರಿಗೆ ಮೈಕೈ ನೋವು ಶ್ವಾಸಕೋಶ ಸಂಬಂಧಿ ಕಾಯಿಲೆ ಚರ್ಮ ಸುಕ್ಕುಗಟ್ಟುವುದು ತುರಿಕೆ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಎಲ್ಲರೂ ಆರೋಗ್ಯ ಕಾಳಜಿ ವಹಿಸಬೇಕು‘ ಎನ್ನುತ್ತಾರೆ ಕೆಎಂಸಿಆರ್‌ಐ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ರಾಜಶೇಖರ ದ್ಯಾಬೇರಿ. ‘ಆರೋಗ್ಯ ಸಮಸ್ಯೆ ಇರುವವರು ಆದಷ್ಟು ಬೆಚ್ಚಗಿನ ಉಡುಪು ಧರಿಸಬೇಕು. ಬೆಚ್ಚಗಿನ/ ಕುದಿಸಿ ಆರಿಸಿದ ನೀರು ಕುಡಿಯಬೇಕು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ವೈದ್ಯರು ಶಿಫಾರಸು ಇಲ್ಲದೇ ಯಾರೂ ಸ್ವತಃ ತಾವೇ ಔಷಧಿ ಖರೀದಿಸಿ ಸೇವಿಸಬಾರದು. ಮುಂಜಾನೆ ವಾಕಿಂಗ್ ಮಾಡುವವರು ಆದಷ್ಟು ಬೆಚ್ಚಗಿನ ಉಡುಪುಗಳನ್ನು ಧರಿಸಬೇಕು’ ಎನ್ನುತ್ತಾರೆ ಅವರು.
‘ಸಮತೋಲಿತ ಆಹಾರವಿರಲಿ’
‘ಚಳಿಗಾಲದ ಅವಧಿಯಲ್ಲಿ ಹಗಲಿನ ಅವಧಿ ಕಡಿಮೆ ರಾತ್ರಿ ಅವಧಿ ಹೆಚ್ಚಿರುತ್ತದೆ. ಈ ವೇಳೆ ದೇಹವನ್ನು ಬೆಚ್ಚಗಿರಿಸುವ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಸಮತೋಲಿತ ಆಹಾರ ಸೇವಿಸಬೇಕು. ಜೀರ್ಣಕ್ರಿಯೆಗೆ ಪೂರಕವಾಗುವ ಶುಂಠಿ ಮೆಣಸು ಹಾಗೂ ಅರಿಶಿಣ ಬಳಸಿದ ಬಿಸಿ ಬಿಸಿ ಆಹಾರ ಸೇವಿಸುವುದು ಉತ್ತಮ. ಸೊಪ್ಪು ತರಕಾರಿ ಮತ್ತು ದ್ವಿದಳ ಧಾನ್ಯಗಳಿಂದ ತಯಾರಿಸಿದ ಆಹಾರ ಸೇವಿಸಬೇಕು. ಹಣ್ಣುಗಳನ್ನು ಸೇವಿಸಬೇಕು. ಕರಿದ ಪದಾರ್ಥ ಹೆಚ್ಚು ಎಣ್ಣೆ ಅಂಶವಿರುವ ತಿನಿಸನ್ನು ತಿನ್ನಬಾರದು’ ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯದ ಆಹಾರ ಮತ್ತು ತಂತ್ರಜ್ಞಾನ ವಿಭಾಗದ ಪ್ರೊ.ಎಸ್.ಹೇಮಲತಾ.
ಕಡಲೆ ಗೋಧಿ ದ್ವಿದಳ ಧಾನ್ಯ ಸೇರಿದಂತೆ ಹಿಂಗಾರಿನ ಬೆಳೆಗಳಿಗೆ ಚಳಿಗಾಲದ ಹವಾಮಾನವೇ ಸಾಕು. ಮುಂಜಾನೆ ಹಾಗೂ ಸಂಜೆ ಬಿಳುವ ಹಿಬ್ಬನಿಗೆ ಹಿಂಗಾರಿನ ಫಸಲು ಬೆಳೆದು ರೈತರಿಗೆ ಆರ್ಥಿಕ ಭದ್ರತೆ ನೀಡುತ್ತದೆ.–ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಧಾರವಾಡ
ಈ ಬಾರಿ ಅಕ್ಟೋಬರ್ ತನಕವೂ ಮಳೆಯಾದ ಪರಿಣಾಮ. ಕನಿಷ್ಠ ತಾಪಮಾನವು 16-17 ಡಿಗ್ರಿ ಸೆಲ್ಸಿಯಸ್ ತನಕ ತಲುಪುವ ಸಾಧ್ಯತೆ ಇದೆ. ಮಾವು ಹೂವು ಬಿಡುವ ಸಮಯವಿದು ಈ ವೇಳೆ ಕನಿಷ್ಠ 2ರಿಂದ 3 ವಾರ ಚಳಿ ಇರಬೇಕು–ರವಿ ಪಾಟೀಲ, ಕೃಷಿ ಹವಾಮಾನ ತಜ್ಞ ಕೃಷಿ ವಿಶ್ವವಿದ್ಯಾಲಯ ಧಾರವಾಡ
ಮುಂಜಾನೆ 5ಕ್ಕೆ ಚಹಾ ತಯಾರಿಸುತ್ತೇನೆ. ವಾಕಿಂಗ್ ಮಾಡುವವರು ಕೆಲಸಕ್ಕೆ ಊರುಗಳಿಗೆ ತೆರಳುವವರು ಚಹಾ ಕುಡಿಯಲು ಬರುತ್ತಾರೆ. ವ್ಯಾಪಾರ ಚೆನ್ನಾಗಿದೆ–ಯಲ್ಲಪ್ಪ , ರಸ್ತೆಬದಿ ಹೋಟೆಲ್‌ನ ಚಹಾ ವ್ಯಾಪಾರಿ ಗೋಕುಲ ರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.