ADVERTISEMENT

ಭಯ ಸೃಷ್ಟಿಸಿ ಚುನಾವಣೆ ಗೆಲ್ಲಲು ಐಟಿ ದಾಳಿ: ಮಲ್ಲಿಕಾರ್ಜುನ ಖರ್ಗೆ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 9:14 IST
Last Updated 28 ಮಾರ್ಚ್ 2019, 9:14 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ವಿರೋಧ ಪಕ್ಷಗಳ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ಭಯದ ವಾತಾವರಣ ಸೃಷ್ಟಿಸುವ ತಂತ್ರ. ಚುನಾವಣೆಯಲ್ಲಿ ಈ ನಾಯಕರು ಕೆಲಸ ಮಾಡದಂತೆ ಹೆದರಿಸಿ ಚುನಾವಣೆ ಗೆಲ್ಲುವ ತಂತ್ರವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಜೆಡಿಎಸ್‌ ಮುಖಂಡರ ಮನೆ ಮೇಲೆ ನಡೆದ ಐಟಿ ದಾಳಿ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ‘ಅನೇಕ ನಾಯಕರನ್ನು ಹೆದರಿಸಿ, ಬೆದರಿಸಿ ಅವರ ಮೇಲೆ ಮಾನಸಿಕ ಒತ್ತಡ ಹೇರುವ ಕಲುಷಿತ ವಾತಾವರಣವನ್ನು ಮೋದಿ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.

‘ಚುನಾವಣೆ ಘೋಷಣೆಗೂ ಮುನ್ನ ದಾಳಿ ನಡೆಸಲು ಇವರಿಗೆ ಸಮಯ ಇರಲಿಲ್ಲವೇ? ಮತಕ್ಕಾಗಿ ಇಂತಹ ತಂತ್ರ ಪ್ರಯೋಗ ಸರಿಯಲ್ಲ. ನೀವು ಎಷ್ಟೇ ಹೆದರಿಸುವ ತಂತ್ರ ಅನುಸರಿಸಿದರೂ ಜನರು ತಮ್ಮ ನಿಲುವು ಬದಲಿಸುವುದಿಲ್ಲ. ತಮ್ಮ ಮನಸ್ಸಿನಲ್ಲಿರುವುದನ್ನು ಮತದಾನದ ದಿನ ವ್ಯಕ್ತಪಡಿಸುತ್ತಾರೆ’ ಎಂದರು.

ADVERTISEMENT

‘ಸಿಬಿಐಯನ್ನು ದುರುಪಯೋಗ ಪಡಿಸಿಕೊಂಡು ರಾಜಕೀಯ ಮಾಡಿದ್ದೀರಿ ಎಂದು ನಾನು ಲೋಕಸಭೆಯಲ್ಲಿಯೇ ಮೋದಿ ಅವರಿಗೆ ಹೇಳಿದ್ದೇನೆ. ಇಂತ ಹೆದರಿಸುವ ಯತ್ನವನ್ನು ಅವರು ಬಿಡಬೇಕು’ ಎಂದು ಆಗ್ರಹಿಸಿದರು.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.