ADVERTISEMENT

ಧ್ವಜಸಂಹಿತೆ ತಿದ್ದುಪಡಿ ವಿರೋಧಿಸಿ ಖಾದಿ ನೂಲು ನೇಯುವ ಕಾರ್ಯಾಗಾರ; ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 16:14 IST
Last Updated 3 ಜುಲೈ 2022, 16:14 IST
   

ಮೈಸೂರು: ಕೇಂದ್ರ ಸರ್ಕಾರವು ಧ್ವಜ ಸಂಹಿತೆ-2002ಕ್ಕೆ ತಿದ್ದುಪಡಿ ತಂದು ಖಾದಿ ಬಟ್ಟೆಯ ಬದಲು ಪಾಲಿಸ್ಟರ್‌ ಧ್ವಜಗಳಿಗೆ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ‘ಮೈಸೂರು ಖಾದಿ ನೂಲುಗಾರರ ಬಳಗ’ವು ಮಕ್ಕಳು ಮತ್ತು ನಾಗರಿಕರಿಗೆ ಖಾದಿ ನೂಲು ನೇಯುವ ಕಾರ್ಯಾಗಾರ ನಡೆಸಿ ಭಾನುವಾರ ಮೌನ ಪ್ರತಿಭಟನೆ ದಾಖಲಿಸಿತು.

ಇಲ್ಲಿನ ಕೃಷ್ಣಬುಲೇವಾರ್ಡ್‌ನಲ್ಲಿರುವ ‘ಪ್ರಕೃತಿ ಆಹಾರ’ ಮನೆಯಲ್ಲಿ ಕೆಲವು ಮಕ್ಕಳು ಹಾಗೂ ಖಾದಿಪ್ರಿಯರು ಚರಕ ಹಾಗೂ ನೂಲುವ ಪೆಟ್ಟಿಗೆಗಳಲ್ಲಿ ದಾರವನ್ನು ತೆಗೆದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಗಾಂಧಿ ಆಶಯಗಳಿಗೆ ಧಕ್ಕೆ ತರಲಾಗಿದೆ. ಗ್ರಾಮ ಸ್ವರಾಜ್ಯದ ಹೆಗ್ಗುರುತಾದ ಖಾದಿಯನ್ನು ತ್ಯಜಿಸಿ, ಗ್ರಾಮೋದ್ಯೋಗಗಳನ್ನು ನಾಶಗೊಳಿಸಲು ಆಳುವವರು ಮುಂದಾಗಿದ್ದಾರೆ’ ಎಂದು ಬಳಗಕ್ಕೆ ಬೆಂಬಲ ನೀಡಿ ಕಾರ್ಯಾಗಾರದಲ್ಲಿ ‍ಪಾಲ್ಗೊಂಡಿದ್ದ ರಂಗಕರ್ಮಿ ಪ್ರಸನ್ನ ಆರೋಪಿಸಿದರು.

ADVERTISEMENT

‘ಸರ್ಕಾರವು ಧ್ವಜದಿಂದಲೇ ಖಾದಿಯನ್ನು ಕಿತ್ತು ಹಾಕಲು ಮುಂದಾಗಿದೆ. ದೇಶದ ಆರ್ಥಿಕತೆಯಲ್ಲಿ ನಿಮ್ಮದೇನೂ ಸ್ಥಾನವಿಲ್ಲ. ನೀವು ಚರಕದಿಂದ ನೂಲುವ ಖಾದಿ ನಮಗೆ ಬೇಕಿಲ್ಲವೆಂದು ಹೇಳುವ ಮೂಲಕ ಸರ್ಕಾರವು ದುರಂತವನ್ನು ಸೃಷ್ಟಿಸಿದೆ. ಅದರ ವಿರುದ್ಧವಾಗಿ ಶಿವಪುರ ಸತ್ಯಾಗ್ರಹದ ಮಾದರಿಯಲ್ಲಿ ಬೆಂಗಳೂರು, ಧಾರವಾಡಗಳಲ್ಲಿ ಧ್ವಜ ಸತ್ಯಾಗ್ರಹ ಆರಂಭವಾಗಲಿದ್ದು, ನಾಡಿನಾದ್ಯಂತ ಚಳವಳಿ ನಡೆಯಲಿದೆ’ ಎಂದರು.

‘ಬಾವುಟವನ್ನೇ ನೇಯುತ್ತಿದ್ದ ಉತ್ತರ ಕರ್ನಾಟಕದ ಕೈ ಮಗ್ಗಗಳು, ಧ್ವಜ ಸಂಹಿತೆ ತಿದ್ದುಪಡಿಯಿಂದಾಗಿ ನಷ್ಟಕ್ಕೆ ಸಿಲುಕಲಿವೆ. ತಿದ್ದುಪಡಿ ವಾಪಸ್‌ ಪಡೆಯುವಂತೆ ತಿಂಗಳ ಹಿಂದೆಯೇ ಕೋರಿದ್ದರೂ ಯಾವುದೇ ಕ್ರಮ ವಹಿಸಿಲ್ಲದಿರುವುದು ನಿರಾಸೆ ತರಿಸಿದೆ’ ಎಂದು ಬಳಗದ ಬಾಲಚಂದ್ರ ಹೇಳಿದರು.

‘ಗ್ರಾಮಗಳು ಸ್ವಾವಲಂಬಿಯಾಗುವುದು ಯಾವುದೇ ಸರ್ಕಾರಗಳಿಗೂ ಬೇಡವಾಗಿದೆ. ‍‍‍ಪಾರಂಪರಿಕ ಗುಡಿ ಕೈಗಾರಿಕೆಗಳನ್ನು, ಕೈಮಗ್ಗಗಳನ್ನು ನಾಶಗೊಳಿಸುವುದೇ ಮಾರುಕಟ್ಟೆ ಸಂಸ್ಕೃತಿಗೆ ಬೆಂಬಲ ನೀಡುತ್ತಿರುವ ಸರ್ಕಾರದ ಉದ್ದೇಶವಾಗಿದೆ’ ಎಂದು ದೂರಿದರು.

‘ಆತ್ಮನಿರ್ಭರ ಭಾರತ ರೂಪಿಸುವುದಾಗಿ ಹೇಳುವ ಸರ್ಕಾರವು ನೇಕಾರರ ಸ್ವಾವಲಂಬಿ ಬದುಕನ್ನು ಕಿತ್ತುಕೊಳ್ಳುತ್ತಿದೆ. ಕೃತಕ ನೂಲಿನಿಂದ ತಯಾರಿಸಿದ ಬಾವುಟವನ್ನು ಆಮದು ಮಾಡಿಕೊಳ್ಳುವುದರಿಂದ ರಾಷ್ಟ್ರ ಬಾವುಟದ ಮೌಲ್ಯವೂ ಕುಗ್ಗಲಿದೆ. ಸಾವಿರಾರು ಜನರು ಕೆಲಸ ಕಳೆದುಕೊಳ್ಳಲಿದ್ದಾರೆ’ ಎಂದು ಗ್ರಾಮ ಸೇವಾ ಸಂಘದ ಸದಸ್ಯ ಸಿ.ಎ. ಅಭಿಲಾಷ್‌ ಪ್ರತಿಕ್ರಿಯಿಸಿದರು.

ಚಿತ್ರ ಕಲಾವಿದ ಕೆ.ಜೆ. ಸಚ್ಚಿದಾನಂದ, ಗಾಂಧಿ ಚಿಂತಕ ಸಂತೋಷ್‌ ಕೌಲಗಿ, ರಜನಿ, ಸೌಮ್ಯಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.