ADVERTISEMENT

ಚಾಮುಂಡೇಶ್ವರಿ ದೇಗುಲ ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಬೇಸರವಿದೆ: ಪ್ರಮೋದಾದೇವಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:31 IST
Last Updated 30 ಆಗಸ್ಟ್ 2025, 6:31 IST
<div class="paragraphs"><p>ಪ್ರಮೋದಾದೇವಿ ಒಡೆಯರ್</p></div>

ಪ್ರಮೋದಾದೇವಿ ಒಡೆಯರ್

   

ಮೈಸೂರು: ‘ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು. ಚಾಮುಂಡೇಶ್ವರಿ ಹಿಂದೂ ದೇವರು. ಹೀಗಿದ್ದರೂ ದೇವಾಲಯವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಬೇಸರವಿದೆ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಚಾಮುಂಡಿ ಯದುವಂಶದ ಮನೆ ದೇವರು. ನಮ್ಮ ಕುಲದೇವಿ. ಯದುವಂಶಕ್ಕೆ ಚಾಮುಂಡಿ ದೇವಿ ಧಾರ್ಮಿಕ ತಾಯಿ ಇದ್ದಂತೆ. ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆಯೇ ಪೂಜೆ ನಡೆಯುತ್ತದೆ’ ಎಂದರು.

ADVERTISEMENT

‘ರಾಜಕಾರಣಿಗಳು ಏನು ಬೇಕಾದರೂ ಹೇಳಲಿ. ಏನೆಂದು ಬೇಕಾದರೂ ಕರೆಯಲಿ. ಅವರು ಹೇಳಿದಂತೆಲ್ಲಾ ಆಗುವುದಿಲ್ಲ’ ಎಂದರು.

‘ನಮ್ಮ ಮನೆತನ ಹಾಗೂ ದೇವಸ್ಥಾನದ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇವೆ. ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ಸಂಬಂಧಿಸಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದರೂ ಅದು ಅಧಿಕೃತವಲ್ಲ. ನ್ಯಾಯಾಲಯದ ಆದೇಶ ಬಂದ ಮೇಲಷ್ಟೆ ಎಲ್ಲವೂ ಸ್ಪಷ್ಟ ಆಗುತ್ತದೆ’ ಎಂದು ಹೇಳಿದರು.

‘70 ವರ್ಷಗಳಿಂದ ಈ ಹೋರಾಟ ನಡೆದಿದ್ದು, ಎಲ್ಲವೂ ನ್ಯಾಯಾಲಯದಲ್ಲಿದೆ’ ಎಂದರು.

‘ದಸರಾ ಉದ್ಘಾಟಕರ ವಿಚಾರದಲ್ಲಿ ನನ್ನ ಅಭಿಪ್ರಾಯವೇನೂ ಇಲ್ಲ. ಕರೆದವರು, ಕರೆಸಿಕೊಂಡವರಿಗಷ್ಟೇ ಅದು ಗೊತ್ತು. ಸರ್ಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೇ ನಡೆಯುತ್ತದೆ. ಸರ್ಕಾರದವರು ಅವರಿಗೆ ಬೇಕಾದ ರೀತಿ ದಸರಾ ಮಾಡುತ್ತಾರೆ. ಅದಕ್ಕೂ-ನಮಗೂ ಸಂಬಂಧ ಇಲ್ಲ’ ಎಂದರು.

‘ವಿಜಯದಶಮಿಯಂದು ದಿನ ನಾನು ಅಂಬಾರಿ ಕಡೆ ಗಮನ ಕೊಡುವ ಕಾರಣ ನಾನು ಮೆರವಣಿಗೆಗೆ ಹೋಗುವುದಿಲ್ಲ. ನಮ್ಮ ಮನೆಯಿಂದ ಒಬ್ಬರು ಹೋಗುತ್ತಾರಷ್ಟೆ’ ಎಂದು ಪ್ರತಿಕ್ರಿಯಿಸಿದರು.

ದಸರಾ ವಿಚಾರದಲ್ಲಿ ಇಲ್ಲಿಯವರೆಗೆ ಆಗಿರುವ ರಾಜಕೀಯವೇ ಸಾಕು. ಆ ವಿಚಾರವನ್ನು ಮುಂದುವರಿಸುವುದು ಬೇಡ ಎಂದು‌ ಕೋರಿದರು.

ದಸರಾ ವಿಚಾರದಲ್ಲಿ ಇಲ್ಲಿಯವರೆಗೆ ಆಗಿರುವ ರಾಜಕೀಯವೇ ಸಾಕು. ಆ ವಿಚಾರವನ್ನು ಮುಂದುವರಿಸುವುದು ಬೇಡ
ಪ್ರಮೋದಾದೇವಿ ಒಡೆಯರ್ ರಾಜವಂಶಸ್ಥೆ

‘ಬಾನು ಮುಷ್ತಾಕ್ ಆಯ್ಕೆ ಸರಿಯಲ್ಲ’

ಮೈಸೂರು: ‘ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಸರಿಯಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ್ ಕಾಮತ್ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಾನು ಮುಷ್ತಾಕ್ ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮದ ಆಚರಣೆ ವಿರೋಧಿಯಾಗಿರುವ ಅವರು ದಸರಾ ಹೇಗೆ ಉದ್ಘಾಟಿಸುತ್ತಾರೆ. ಆಯ್ಕೆ ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬರಲು ಅವರ ಕೃತಿ ಅನುವಾದಿಸಿದ ದೀಪಾ ಬಸ್ತಿ ಅವರೂ ಕಾರಣ. ಹೀಗಾಗಿ ಅವರನ್ನೂ ಆಹ್ವಾನಿಸಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್ ಚಾಮುಂಡಿಬೆಟ್ಟ ಹಿಂದೂಗಳದ್ದಲ್ಲ ಎಂದಿರುವುದು ಸರಿಯಲ್ಲ. ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಮಧುಶಂಕರ್, ಅರುಣಾಚಲಂ, ಅಂಬಿಕಾ, ವಿಜೇಂದ್ರ, ಜಯಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.