
ರಾಮನಗರ: ಬಿಪಿಎಲ್ ಕಾರ್ಡ್ (ಆದ್ಯತಾ ಕುಟುಂಬ) ಮತ್ತು ಎಎವೈ ಕಾರ್ಡ್ (ಅಂತ್ಯೋದಯ ಅನ್ನ ಯೋಜನೆ) ಮೂಲಕ ಬಡವರ ಮನೆ ಸೇರಬೇಕಾದ ಈ ಅಕ್ಕಿ,ರಾಗಿ ಸೇರಿದಂತೆ ಪಡಿತರ ಕಾಳಸಂತೆಯಲ್ಲೂ ಮಾರಾಟವಾಗುತ್ತಿವೆ.ಪಡಿತರವನ್ನು ಕದ್ದು ಮಾರಿಕೊಳ್ಳುವ ಜಾಲ ಸಕ್ರಿಯವಾಗಿದೆ.
ಕಳೆದ ಎರಡು ವರ್ಷದಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ 701.25 ಕ್ವಿಂಟಲ್ ಅಕ್ಕಿ ಮತ್ತು 166.31 ಕ್ವಿಂಟಲ್ ರಾಗಿಯನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವಶಪಡಿಸಿಕೊಂಡಿದೆ. ವಿವಿಧ ಪೊಲೀಸ್ ಠಾಣೆಯಲ್ಲಿ 26 ಪ್ರಕರಣ ದಾಖಲಾಗಿವೆ.
ಜಿಲ್ಲೆಯಲ್ಲಿ ವಶಪಡಿಸಿಕೊಂಡಿರುವ ಬಹುತೇಕ ಪಡಿತರ ಕಳ್ಳಸಾಗಣೆಯ ಪ್ರಕರಣ ಪತ್ತೆಯಾಗಿರುವುದು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೇ. ಬೆಂಗಳೂರು, ಮಂಡ್ಯ ಹಾಗೂ ಮೈಸೂರಿಗೆ ವಾಹನಗಳಲ್ಲಿ ಕಳ್ಳಸಾಗಣೆ ಮಾಡುವಾಗ ಸಿಗುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪಡಿತರ ವಶಪಡಿಸಿಕೊಂಡಿದ್ದೇವೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.
ಖರೀದಿ ಜಾಲ ಸಕ್ರಿಯ: ಪಡಿತರ ಅಕ್ಕಿ, ರಾಗಿಯನ್ನು ಯೋಜನೆಯ ಫಲಾನುಭವಿಗಳಿಂದಲೂ ಪ್ರತಿ ಕೆ.ಜಿ.ಗೆ ₹20ರಿಂದ ₹25ಕ್ಕೆ ಖರೀದಿ ಮಾಡುವ ಜಾಲ ಸಕ್ರಿಯವಾಗಿದೆ. ಪಡಿತರ ಬಳಕೆ ಮಾಡದ ಎಷ್ಟೋ ಫಲಾನುಭವಿಗಳು ಪ್ರತಿ ತಿಂಗಳು ತಮ್ಮ ಪಾಲಿನ ಅಕ್ಕಿ, ರಾಗಿಯನ್ನು ಈ ಜಾಲಕ್ಕೆ ಮಾರಾಟ ಮಾಡುತ್ತಾರೆ ಎನ್ನುತ್ತವೆ ಆಹಾರ ಇಲಾಖೆ ಮೂಲಗಳು.
ಮತ್ತೊಂದೆಡೆ, ಕಳ್ಳಸಾಗಣೆ ಜಾಲವು ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ಪಡಿತರ ಸಾಗಿಸುವ ವಾಹನಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಅಕ್ಕಿ, ರಾಗಿಗೆ ಕನ್ನ ಹಾಕುತ್ತದೆ. ಈ ರೀತಿ ಸಂಗ್ರಹಿಸಿದ ಅಕ್ಕಿ, ರಾಗಿಯನ್ನು ಕೆಲ ರೈಸ್ ಮಿಲ್‌ಗಳಲ್ಲಿ ಪಾಲಿಶ್ ಮಾಡುತ್ತಾರೆ. ಹೊಸ ಚೀಲಗಳಲ್ಲಿ ತುಂಬಿಸಿ ಅದನ್ನು ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ.
ಎಪಿಎಲ್ ಆದ 12,216 ಬಿಪಿಎಲ್ ಕಾರ್ಡ್
ಮಾನದಂಡಗಳನ್ನು ಆಧರಿಸಿ ಬಿಪಿಎಲ್ ಕಾರ್ಡುದಾರರನ್ನು ಪರಿಷ್ಕರಿಸುವ ಕೆಲಸವನ್ನು ಆಹಾರ ಇಲಾಖೆಯು ವ್ಯವಸ್ಥಿತವಾಗಿ ಮಾಡುತ್ತಿದ. ಆದಾಯ ತೆರಿಗೆ ಪಾವತಿ ಸೇರಿದಂತೆ ಬಿಪಿಎಲ್ ಮಾನದಂಡ ಮೀರಿದವರನ್ನು ಗುರುತಿಸಿ ಅಂತಹವರನ್ನು ಎಪಿಎಲ್ ವ್ಯಾಪ್ತಿಗೆ ತರಲಾಗುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ 12,216 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಬದಲಾವಣೆ ಮಾಡಲಾಗಿದೆ. ಅರ್ಹ ಬಿಪಿಎಲ್ ಕಾರ್ಡ್ ಏನಾದರೂ ಎಪಿಎಲ್ ಆಗಿ ಬದಲಾಗಿದ್ದರೆ, ಅಂತಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರ ಕಾರ್ಡ್ ಅನ್ನು ಬಿಪಿಎಲ್ ಆಗಿಯೇ ಮುಂದುವರಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದರು.
ಪಡಿತರ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಕುರಿತು ಇಲಾಖೆಗೆ ಬರುವ ಮಾಹಿತಿ ಆಧರಿಸಿ ನಮ್ಮ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಬಳಿಕ ಸಾಗಾಣೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತದೆ.–ಶಿಲ್ಪಾ, ಉಪ ನಿರ್ದೇಶಕಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.