
ತುಂಗಭದ್ರಾ ಜಲಾಶಯ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಿಂದ ಈ ಬಾರಿ ಎರಡನೇ ಬೆಳೆಗೆ ನೀರು ಹರಿಯುತ್ತಿಲ್ಲವಾದ ಕಾರಣ ರೈತರಿಗೆ ಎಕರೆಗೆ ₹25 ಸಾವಿರದಂತೆ ಪರಿಹಾರ ನೀಡಬೇಕು ಎಂಬ ಒತ್ತಾಯವನ್ನು ಸರ್ಕಾರ ಸಾರಾಸಗಟಾಗಿ ತಳ್ಳಿ ಹಾಕಿರುವುದು ಗೊತ್ತಾಗಿದೆ.
ತುಂಗಭದ್ರಾ ಅಣೆಕಟ್ಟೆ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ್ದ ಸಿಂಧನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿ ಅವರು ಈ ವಿಷಯ ತಿಳಿಸುವ ಮೂಲಕ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ತುಂಗಭದ್ರಾ ಜಲಾಶಯದ ನೀರನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡು ಭತ್ತ ಬೆಳೆಯುವ ಪ್ರದೇಶದ ಶಾಸಕರೇ ಈ ಹೇಳಿಕೆ ನೀಡಿರುವುದರಿಂದ ರೈತರಿಗೆ ನಯಾ ಪೈಸೆ ಪರಿಹಾರ ಸಿಗುವುದಿಲ್ಲ ಎಂಬ ಸುಳಿವೂ ಲಭ್ಯವಾಗಿದೆ.
‘ಬೆಳೆ ನಷ್ಟ ಪರಿಹಾರ ವಿಚಾರದಲ್ಲಿ ಹಲವು ಮಾನದಂಡಗಳಿವೆ, ಅದರಂತೆಯೇ ಪರಿಹಾರ ನೀಡಬೇಕಾಗುತ್ತದೆ. ಇದು ಕೇಂದ್ರಕ್ಕೂ ಅನ್ವಯವಾಗುವ ವಿಷಯ. ಬೆಳೆಯನ್ನೇ ಬೆಳೆಯದಿದ್ದಾಗ ಪರಿಹಾರ ನೀಡುವ ಪ್ರಶ್ನೆ ಬರುತ್ತದೆಯೇ? ಬರಗಾಲದಿಂದ ಎರಡನೇ ಬೆಳೆಗೆ ನೀರು ಸಿಗದಿದ್ದಾಗ ಈ ಹಿಂದೆ ಪರಿಹಾರ ನೀಡಲಾಗಿತ್ತೇ?’ ಎಂಬುದು ಶಾಸಕ ಬಾದರ್ಲಿ ಅವರ ಪ್ರಶ್ನೆ.
ಆದರೆ ಬಿಜೆಪಿ ಇದಕ್ಕೆ ತಿರುಗೇಟು ನೀಡಿದ್ದು, ಸರ್ಕಾರದ ವೈಫಲ್ಯದಿಂದಲೇ ಈ ವರ್ಷ ಈ ಪರಿಸ್ಥಿತಿ ನಿರ್ಮಾಣವಾಗಿದ್ದಕ್ಕೆ ಪರಿಹಾರ ನೀಡಬೇಕಾಗುತ್ತದೆ ಎಂದು ಹೇಳಿದೆ. ‘ಗೇಟ್ ವಿಚಾರದಲ್ಲಿ ವಿಳಂಬ ಧೋರಣೆ ಬಿಟ್ಟು ಶೀಘ್ರ ಗೇಟ್ ಅಳವಡಿಕೆ ಮಾಡುತ್ತಿದ್ದರೆ ಈ ಬಾರಿ ಎರಡನೇ ಬೆಳೆಗೆ ನೀರು ಸಿಗುತ್ತಿತ್ತು, ಉತ್ತಮ ಮಳೆಯಾಗಿದ್ದರೂ ಎರಡನೇ ಬೆಳೆಗೆ ನೀರು ಸಿಗದೆ ಇರುವುದಕ್ಕೆ ಕಾರಣ ಸರ್ಕಾರವೇ ಆಗಿರುವ ಕಾರಣ ಪರಿಹಾರ ನೀಡಲೇಬೇಕು ಎಂದು ಪಕ್ಷ ಒತ್ತಾಯಿಸುತ್ತದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪಕ್ಷದ ಹೋರಾಟ ನಿಂತಿಲ್ಲ, ವಿಧಾನಮಂಡಲ ಅಧಿವೇಶನದ ಅವಧಿ ಮುಂದುವರಿದರೆ ಮತ್ತೆ ಈ ವಿಚಾರದಲ್ಲಿ ಪಕ್ಷ ಸದನದೊಳಗೆ ಹೋರಾಟ ನಡೆಸುವುದು ನಿಶ್ಚಿತ ಎಂದು ಅವರು ಹೇಳಿದರು.
ಪರಿಹಾರಕ್ಕೆ ಆಗ್ರಹ–ಕ್ಷೀಣ ಧ್ವನಿ
ತುಂಗಭದ್ರಾ ಜಲಾಶಯ ಇರುವುದು ಹೊಸಪೇಟೆ ಸಮೀಪವಾಗಿದ್ದರೂ ಅದರ ನೀರಿನ ಪ್ರಯೋಜನ ಪಡೆಯುವುದು ಬಹುತೇಕ ಕೊಪ್ಪಳ ರಾಯಚೂರು ಬಳ್ಳಾರಿ ಭಾಗದ ರೈತರು. ಆದರೆ ಎರಡನೇ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂಬ ವಿಚಾರದಲ್ಲಿ ಧ್ವನಿ ಬಹಳ ಕ್ಷೀಣವಾಗಿಯಷ್ಟೇ ಕೇಳಿಸಿದೆ. ಈಚೆಗೆ ಬಿಜೆಪಿ ನಡೆಸಿದ ಹೋರಾಟದಲ್ಲಿ ಕೆಲವು ರೈತ ಸಂಘಟನೆಗಳು ಒತ್ತಾಯಿಸಿದ್ದು ಬಿಟ್ಟರೆ ಇತರರಿಂದ ಈ ಬಗ್ಗೆ ಉಗ್ರ ಸ್ವರೂಪದ ಹೋರಾಟ ನಡೆದಿಲ್ಲ. ಬಾದರ್ಲಿ ಅವರು ಸರ್ಕಾರದ ಪರವಾಗಿಯೇ ಹೇಳಿಕೆ ನೀಡಿದಂತಿದ್ದು ಮುಂದೆ ಪರಿಹಾರ ನೀಡಬೇಕೆಂಬ ಬೇಡಿಕೆ ಮುಂದಿಡುವುದರಲ್ಲಿ ಅರ್ಥವಿಲ್ಲ ಎಂಬುದು ಸ್ಪಷ್ಟ ಎಂದು ಸ್ಥಳೀಯ ಕೆಲವು ರೈತ ಮುಖಂಡರು ಹೇಳುತ್ತಿದ್ದಾರೆ.
ತುಂಗಭದ್ರಾ ನೀರು ಬಳಸುವ ರೈತರು ಜಾಣರು ಒಂದು ಕ್ಯೂಸೆಕ್ ನೀರಲ್ಲಿ ಅವರು ನಿಗದಿತ 60 ಎಕರೆ ಬದಲಿಗೆ 120 ಎಕರೆಗೆ ನೀರುಣಿಸುತ್ತಿದ್ದಾರೆ ಈ ಬಾರಿಯ ವಾಸ್ತವ ಅವರಿಗೆ ಗೊತ್ತಿದೆ–ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ
ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಕೆಆರ್‌ಎಸ್ ಅಣೆಕಟ್ಟೆಯಿಂದ ಎರಡನೇ ಬೆಳೆಗೆ ನೀರು ಸಿಗದಿದ್ದಾಗ ರೈತರಿಗೆ ಪರಿಹಾರ ನೀಡಲಾಗಿತ್ತು ಅದನ್ನೇ ಆಧರಿಸಿ ಬಿಜೆಪಿ ಪರಿಹಾರ ನೀಡಲು ಆಗ್ರಹಿಸುತ್ತಿದೆ–ಎಸ್.ಸಂಜೀವ ರೆಡ್ಡಿ, ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.