ADVERTISEMENT

ವಿಜಯನಗರ | ಎಸ್‌ಟಿಗೆ ಕುರುಬ: 25ರಂದು ಪ್ರತಿಭಟನೆಗೆ ವಾಲ್ಮೀಕಿ ಸಮುದಾಯ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 8:12 IST
Last Updated 21 ಸೆಪ್ಟೆಂಬರ್ 2025, 8:12 IST
<div class="paragraphs"><p>ಸುದ್ದಿಗೋಷ್ಠಿಯಲ್ಲಿ ಹೊಸಪೇಟೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ಮಾತನಾಡಿದರು</p></div>

ಸುದ್ದಿಗೋಷ್ಠಿಯಲ್ಲಿ ಹೊಸಪೇಟೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ಮಾತನಾಡಿದರು

   

ಹೊಸಪೇಟೆ (ವಿಜಯನಗರ): ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಕುರುಬ ಮತ್ತಿತರ ಕೆಲವು ಸಮುದಾಯಗಳನ್ನು ಸೇರಿಸಲು ರಾಜ್ಯ ಸರ್ಕಾರ ಉದ್ದೇಶಿಸಿರುವುದನ್ನು ವಿರೋಧಿಸಿ ಸೆ.25ರಂದು ರಾಜ್ಯದ ಎಲ್ಲಡೆಯಂತೆ ನಗರದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಹೊಸಪೇಟೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಅಕ್ಟೋಬರ್ 5ರೊಳಗೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ನಿರ್ಧಾರ ಪ್ರಕಟಿಸಬೇಕು, ತಪ್ಪಿದಲ್ಲಿ ಅ.7ರಂದು ನಡೆಯಲಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದರು.

ADVERTISEMENT

‘ಪರಿಶಿಷ್ಟ ಪಂಗಡಕ್ಕೆ ಕುರುಬ ಮತ್ತು ಇತರೆ ಸಮುದಾಯಗಳನ್ನು ಸೇರ್ಪಡೆಗೊಳಿಸುವ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು, ಈಗಾಗಲೇ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಎಸ್‌ಟಿ ಫಲಾನುಭವಿಗಳಾಗಿವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಬೇಕು ಎಂಬುದು ನಮ್ಮ ಸಮುದಾಯದ ಪ್ರಮುಖ ಬೇಡಿಕೆ’ ಎಂದು ಅವರು ಹೇಳಿದರು.

ಸಿಎಂ ವಿರುದ್ಧ ಆಕ್ರೊಶ: ‘ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಜಾತಿ, ಜಾತಿಗಳ ನಡುವೆ ಬಡಿದಾಡಿಕೊಳ್ಳುವ ಸ್ಥಿತಿ ತಂದಿಡುತ್ತಿದ್ದಾರೆ. ಸಿಎಂ ನಿಲುವನ್ನು ಅವರ ಜಾತಿಯವರೇ ವಿರೋಧಿಸುತ್ತಿದ್ದಾರೆ. ಸರ್ಕಾರ ತನ್ನ ನಿಲುವು ಬದಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಿಶ್ಚಿತ’ ಎಂದು ಭರಮಪ್ಪ ಎಚ್ಚರಿಸಿದರು.

ಸಮಾಜದ ಇನ್ನೊಬ್ಬ ಮುಖಂಡ ಜಂಬಯ್ಯ ನಾಯಕ ಮಾತನಾಡಿ, ಸಮಾಜದ 14 ಮಂದಿ ಶಾಸಕರು ಕಾಂಗ್ರೆಸ್‌ನಿಂದಲೇ ಆಯ್ಕೆಯಾಗಿ ಬಂದವರು, ಸೆ.18ರಂದು ರಾಜನಹಳ್ಳಿ ಗುರುಪೀಠದಲ್ಲಿ ನಡೆದ ಸಭೆಯಲ್ಲಿ ಹೆಚ್ಚಿನ ಶಾಸಕರು ಪಾಲ್ಗೊಂಡಿಲ್ಲ. ಇದು ಇವರು ಸಮಾಜಕ್ಕೆ ಮಾಡುತ್ತಿರುವ ದ್ರೋಹ. ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಿದ ಅರ್ಧ ಗಂಟೆಯಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಳ್ಳಾರಿ–ವಿಜಯನಗರ ಸಂಸದ ಇ.ತುಕಾರಾಂ ಗುರುಪೀಠದಲ್ಲಿ ಪ್ರತಿಜ್ಞೆ ಮಾಡಿದ್ದಾರೆ’ ಎಂದರು.

ಇನ್ನೊಬ್ಬ ಮುಖಂಡ ದೇವರಮನೆ ಶ್ರೀನಿವಾಸ್‌ ಮಾತನಾಡಿ, 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಿದರೆ ವಾಲ್ಮೀಕಿ ಸಮುದಾಯದವರ ಬದುಕು ನಾಶವಾಗುತ್ತದೆ. ಇದು ನಮ್ಮ ಅಸ್ತಿತ್ವದ ಪ್ರಶ್ನೆಯಾಗಿರುತ್ತದೆ ಎಂದರು.

ಸಮಾಜದ ಮುಖಂಡರಾದ ಎಸ್‌.ಎಸ್.ಚಂದ್ರಶೇಖರ್, ಗುಡುಗುಡಿ ಸೋಮನಾಥ್‌, ಎಚ್‌.ಆಂಜನೇಯ, ಬೆಳಗೋಡು ಅಂಬಣ್ಣ, ಕಿನ್ನಾಳ ಹನುಮಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.