ADVERTISEMENT

2025ರ ಮೆಲುಕು | ಕಟ್ಟುವ ಕಾಯಕದಲ್ಲಿ ಕಳೆಯಿತು ವರ್ಷ: ಶೀತಲ್ ಶೆಟ್ಟಿ ಸಂದರ್ಶನ

ಶ್ವೇತಕುಮಾರಿ
Published 23 ಡಿಸೆಂಬರ್ 2025, 4:52 IST
Last Updated 23 ಡಿಸೆಂಬರ್ 2025, 4:52 IST
   
ದೃಶ್ಯಮಾಧ್ಯಮದಲ್ಲಿ ನಿರೂಪಕಿಯಾಗಿ ಧ್ವನಿ, ಮಾತಿನ ಶೈಲಿಯ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚೊತ್ತಿದ ಮುಖ ಶೀತಲ್ ಶೆಟ್ಟಿ ಅವರದ್ದು. 'ಉಳಿದವರು ಕಂಡಂತೆ' ಸಿನಿಮಾದಲ್ಲಿ ಬಣ್ಣದ ಹುಲಿಗಳ ನಡುವೆ ಮಿಂಚಿದ ಈ ಚೆಲುವೆ, ನಂತರ 'ವಿಂಡೋ ಸೀಟ್' ಸಿನಿಮಾದ ಮೂಲಕ ನಿರ್ದೇಶಕಿಯಾದರು. ನಟಿಯಾಗಿ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಕೂಡ, ಅವರನ್ನು ಅಭಿಮಾನಿಗಳು ಸದಾ ಭೇಟಿಯಾಗುವುದು ಅವರ ಕವಿತೆಗಳಿಗಾಗಿ. ಶೀತಲ್ ಕೂಡ ಜನರಿಗೆ ಹೆಚ್ಚು ಹತ್ತಿರವಾಗುತ್ತಿರುವುದು 'ಶೀತಲಾಕ್ಷರ'ದ ಮನಮುಟ್ಟುವ ಸಾಲುಗಳ ಮೂಲಕ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಕವಿತೆ ವಾಚಿಸಿ ಅಪ್ಲೋಡ್ ಮಾಡಿದ್ದಾರೆಂದರೆ ಕಾವ್ಯಾಸಕ್ತರು ಕಿವಿಯರಳಿಸಿ ಕೂರುವುದು ಸಹಜ. ವಾಚನದ ಧ್ವನಿ, ಕಾವ್ಯದ ಧ್ವನಿ ಎರಡೂ ಹದ ಬೆರೆತಿರುವುದು ಶೀತಲ್ ಶೆಟ್ಟಿ ಅವರ ಕಾವ್ಯಕ್ಕಷ್ಟೇ ಅಲ್ಲ, ಬದುಕಿಗೂ ಹೌದು ಎನ್ನಬಹುದೇನೊ. ಹಳೆ ವರ್ಷ ಕಳೆದದ್ದು ಹೇಗೆ, ಹೊಸ ವರ್ಷ ಹೊಸೆಯುವಿರಿ ಹೇಗೆ ಎಂದು 'ಪ್ರಜಾವಾಣಿ ಡಿಜಿಟಲ್' ಶೀತಲ್‌‌ ಶೆಟ್ಟಿ ಅವರನ್ನು ಕೇಳಿದಾಗ....

ಈ ವರ್ಷ ನಿಮ್ಮ ಪಾಲಿಗೆ ಹೇಗಿತ್ತು?

ದಿನಗಳು ಕಳೆದು ಹೋಗುವುದು ವಿಶೇಷ ಅನಿಸುವುದಿಲ್ಲ. ಆದರೆ ಇಡೀ ವರ್ಷ ಮುಗಿಯುವ ಹೊತ್ತಲ್ಲಿ ತಿರುಗಿ ನೋಡುವಾಗ ನಾವು ತುಂಬಾ ಕೆಲಸಗಳನ್ನು ಮಾಡಿದ್ದೇವೆ ಎನ್ನುವುದು ಅರಿವಾಗುತ್ತದೆ. ಹಾಗೆ, ಈ ವರ್ಷ ಪೂರ್ತಿ ನಮ್ಮ ‘ಶಿಟೇಲ್ಸ್’ ಸಂಸ್ಥೆಯ ಕೆಲಸ ಕಾರ್ಯಗಳಲ್ಲಿಯೇ ಮುಗಿದು ಹೋಯಿತು. ನಿರಂತರ ಕೆಲಸದಲ್ಲಿ ತೊಡಗಿದ್ದೆವು. ಈ‌ ಬಾರಿ ರಾಜ್ಯದಾಚೆಗೂ ಹೋಗಿ ಕೇಂದ್ರದ ಯೋಜನೆಯೊಂದರ ಕೆಲಸ ಕೈಗೆತ್ತಿಕೊಂಡು ಮುಗಿಸಿದ್ದೇವೆ. ಅದು ಖುಷಿಯ ಸಂಗತಿ. ಜೊತೆಗೆ ಭಾರತೀಯ ನೌಕಾದಳದೊಂದಿಗೆ ಕೆಲಸ ಮಾಡಲು ಸ್ವಲ್ಪ ಸಮಯ ಕಳೆಯಲು ಇಡೀ ತಂಡಕ್ಕೆ ಅವಕಾಶ ಸಿಕ್ಕಿತ್ತು. ಅದು ಹೆಮ್ಮೆಯ ಕ್ಷಣ. ಒಟ್ಟಿನಲ್ಲಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡುಹೋಗುವ ನಿಟ್ಟಿನಲ್ಲಿ ದುಡಿದೆ.

ವರ್ಷದ ಸಿಹಿ ನೆನಪು?

ADVERTISEMENT

ಮೊದಲೇ ಹೇಳಿದಂತೆ ಭಾರತೀಯ ನೌಕಾದಳಕ್ಕೆ ಕೆಲಸ ಮಾಡಿದ್ದು, ದಳದ ಹಡಗಿನಲ್ಲಿ ಕೆಲಸಕ್ಕಾಗಿ ಹತ್ತು ದಿನ ಕಳೆಯುವ ಅವಕಾಶ ಸಿಕ್ಕಿತ್ತು. ನೌಕಾದಳದ ಕಾರ್ಯವೈಖರಿ ಬಗ್ಗೆ ತಿಳಿಯುವುದಕ್ಕೆ, ಹತ್ತಿರದಿಂದ ನೋಡುವುದಕ್ಕೆ ಸಾಧ್ಯವಾಯಿತು. ಆ ಮೂಲಕ ಕೆಲವು ಹೊಸ ವಿಚಾರಗಳನ್ನು ಕಲಿತೆವು. ಅದು ಈ ವರ್ಷದ ಅತ್ಯಂತ ಖುಷಿಯ, ಸಿಹಿಯ ನೆನಪು.

ಕಹಿ ಅನಿಸಿದ ಸಂಗತಿಯೇನಾದರೂ..?

ಅನುಭವಗಳು ಕಲಿಸುವ ಪಾಠ ನನ್ನನ್ನು ಪಕ್ವಗೊಳಿಸಿದೆ. ವೈಯಕ್ತಿಕ ನೆಲೆಯಲ್ಲಿರಲಿ, ಔದ್ಯೋಗಿಕ ನೆಲೆಯಲ್ಲಿರಲಿ, ಮನುಷ್ಯ ಸಹಜವಾದ ಬೇಸರ ಎಲ್ಲರಿಗೂ ಆಗಿಯೇ ಆಗುತ್ತದೆ. ಹಾಗಾಗಿ ಆ ಕ್ಷಣದ ಬೇಸರ ಆ ಕ್ಷಣಕ್ಕೆ, ಆ ಕ್ಷಣದ ಖುಷಿ ಆ ಕ್ಷಣಕ್ಕೆ ಅಷ್ಟೆ ಎಂಬಂತೆ ಬದುಕುತ್ತೇನೆ. ಆದರೆ, ಮುಖ್ಯವಾದ ಒಂದು ಘಟನೆ ಹೇಳಲೇಬೇಕು ಅನಿಸುತ್ತಿದೆ. ನನ್ನ ತಂಡದ ವ್ಯಕ್ತಿಯೊಬ್ಬರ ನಾಲ್ಕು ತಿಂಗಳ ಮಗುವಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆವು. ಅಲ್ಲಿ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಮಕ್ಕಳನ್ನೆಲ್ಲ ನೆಲದಲ್ಲಿ ಮಲಗಿಸಿ ತಾಯಂದಿರು ಪಕ್ಕದಲ್ಲಿ ಡ್ರಿಪ್ಸ್ ಬಾಟಲ್ ಹಿಡಿದುಕೊಂಡು ಕೂತಿರುವುದು ಕಾಣಿಸಿತು. ಅದನ್ನು ನೋಡಿ ಬಹಳ ದುಃಖ ಆಯ್ತು.‌ ನಾವೇನೋ ಆರಾಮಾಗಿದ್ದೇವೆ. ಆದರೆ ಬಹಳಷ್ಟು ಜನಸಾಮಾನ್ಯರು ಮೂಲಭೂತ ಸೌಕರ್ಯಗಳಿಲ್ಲದೆ ಒದ್ದಾಡುತ್ತಿರುವುದು ಕಂಡಾಗ ಬಹಳ ನೋವಾಯಿತು. ಸಾಧನೆಗಳನ್ನು ಕೊಚ್ಚಿಕೊಳ್ಳುವ ಸರ್ಕಾರಗಳು ಈ ಬಗ್ಗೆ ಹೆಚ್ಚು ಜವಾಬ್ದಾರಿ ವಹಿಸಿದ್ದರೆ ಚೆನ್ನಾಗಿರುತ್ತಿತ್ತು ಅನಿಸಿತು. ಅಲ್ಲದೆ ಅಲ್ಲಿನ ಸಿಬ್ಬಂದಿ ವರ್ಗ ಕೂಡ ರೋಗಿಗಳೊಂದಿಗೆ, ಕುಟುಂಬಸ್ಥರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದ ಘಟನೆ ನನ್ನ ಕಣ್ಣಲ್ಲಿ ನೀರು ತರಿಸಿತ್ತು.

ಹೊಸ ವರ್ಷದ ಯೋಜನೆಗಳೇನು?

ಹೆಚ್ಚಾಗಿ ದೊಡ್ಡ, ದೀರ್ಘಾವಧಿಯ ಯೋಜನೆಗಳೇನೂ ಹಾಕಿಕೊಂಡಿಲ್ಲ. ಅವೆಲ್ಲ ಆಗುವುದೂ ಇಲ್ಲ. ನನ್ನದು ಸಣ್ಣಪುಟ್ಟ ಯೋಜನೆಗಳು ಅಷ್ಟೆ. ಕಣ್ಣೆದುರಿನ‌ ಅವಕಾಶಕ್ಕೆ ಬಲ ಕೊಡುತ್ತ ಯಶಸ್ಸುಗೊಳಿಸಲು ಯತ್ನಿಸುತ್ತೇನೆ. ಶೀತಲಾಕ್ಷರ ಕಾವ್ಯನಾಮದಲ್ಲಿ ಇದುವರೆಗೆ ಬರೆದು, ನನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಾಚಿಸುತ್ತಿದ್ದ ಕವಿತೆಗಳನ್ನು ಒಟ್ಟುಗೂಡಿಸಿ ಪುಸ್ತಕವಾಗಿ ಹೊರತರುತ್ತಿದ್ದೇನೆ. ಜೊತೆಗೆ ಅದನ್ನು ಇನ್ನು ಭಿನ್ನ ರೂಪಗಳಲ್ಲಿ ಜನರ ಮುಂದಿಡಬೇಕು ಎಂದುಕೊಂಡಿದ್ದೇನೆ. ಆ ಮೂಲಕ ಜನಗಳಿಗೆ ಇನ್ನಷ್ಟು ಹತ್ತಿರವಾಗುತ್ತೇನೆ ಎಂಬ ಭರವಸೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರ ಇಷ್ಟ ಕಷ್ಟಗಳ ಬಗ್ಗೆ ಅಳೆಯುವುದೇ ಕಷ್ಟ. ಅಲ್ಲಿ ಎಲ್ಲವನ್ನೂ ಜನ ಇಷ್ಟಪಡುತ್ತಾರೆ. ಲೈಕ್ ಕೊಡುತ್ತಾರೆ. ಹಾಗಾಗಿ ನನ್ನ ಕವಿತೆಗಳಿಗೂ ಹಾಗೆ ಮಾಡುತ್ತಾರೋ ಎಂಬ ಅನುಮಾನ(ನಗು). ಎಲ್ಲೋ ಒಂದು ಕಡೆ ಭಾವನಾತ್ಮಕವಾಗಿ ಕವಿತೆ ಅವರನ್ನು ತಟ್ಟುತ್ತಿದೆ ಅಂತ‌ ಅನಿಸುವುದರಿಂದ ಅದನ್ನು ಬೇರೆ ರೂಪಕ್ಕೆ ತರುವ ಪ್ರಯತ್ನ ಮಾಡಬೇಕು ಎಂದುಕೊಂಡಿದ್ದೇನೆ. ಒಂದು ಸಿನಿಮಾ ಬರೆಯುತ್ತಿದ್ದೇನೆ. 2026ರಲ್ಲಿ ಮತ್ತೆ ಸಿನಿಮಾ ಮಾಡುವ ಅವಕಾಶ ಒದಗಬಹುದು ಎಂದು ಯೋಚಿಸುತ್ತಿದ್ದೇನೆ.

ಮುಂದಿನ ವರ್ಷದಿಂದ ಏನು ಬದಲಿಸಬೇಕು ಅಂದುಕೊಂಡಿದ್ದೀರಿ?

ಸ್ವಲ್ಪ ಸೋಮಾರಿ ನಾನು. ರಾತ್ರಿ ನಿದ್ದೆಯೂ ತಡ, ಬೆಳಿಗ್ಗೆ ಎದ್ದೇಳುವುದೂ ತಡ, ಇನ್ನುಮುಂದೆ ಆರೋಗ್ಯದ ಕಡೆ ಗಮನ ಕೊಡಬೇಕು, ಸೋಮಾರಿತನ ಬಿಡಬೇಕು ಅಂತಂದುಕೊಂಡಿರುವೆ. ಈ ಬಾರಿ ಮಾತ್ರ ಅಲ್ಲ, ಪ್ರತಿ ವರ್ಷನೂ ಇದೇ ಅಂದುಕೊಳ್ಳುತ್ತಾ ಇದ್ದೇನೆ. ಆದರೆ ಅದು ಆಗ್ತಾ ಇಲ್ಲ(ನಗು).

ನಿಮ್ಮ ಅನುಭವ ಸಾರದ ಸಂದೇಶ?

ಸಾವಿರ ಜನ ಸಾವಿರ ಹೇಳುತ್ತಾರೆ. ಸರಿ- ತಪ್ಪುಗಳಿಗೆ ಅವರವರ ದೃಷ್ಟಿಕೋನ ಇರುತ್ತದೆ. ನಿಮ್ಮೊಳಗಿನ ದೃಷ್ಟಿಕೋನಕ್ಕೆ ಮಹತ್ವ ಕೊಡಿ. ಬದುಕನ್ನು ಎಂಜಾಯ್ ಮಾಡಿ. ಮುಕ್ತ ಮನಸ್ಸಿನೊಂದಿಗೆ ಬದುಕನ್ನು ಸಂಭ್ರಮಿಸಿ. ನೀವು ನಿಮ್ಮ ಆಂತರ್ಯದಿಂದ ಸಂತೋಷವಾಗಿದ್ದರೆ ನಿಮ್ಮ ಸುತ್ತಲಿನ ಜನರನ್ನೂ ಖುಷಿಯಾಗಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ನಗುತ್ತ ಮಾತನಾಡಲು, ಪ್ರೀತಿ ತೋರಲು ಸಾಧ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಇನ್ನೊಬ್ಬರ ತಪ್ಪುಗಳನ್ನು ಹೆಕ್ಕಿ ಹುಡುಕಿ ಹೇಳುವುದರಲ್ಲಿ ನಾವೆಲ್ಲ ಹೆಚ್ಚು ತೊಡಗಿಸಿಕೊಂಡಿದ್ದೇವೆ. ನಮ್ಮೊಳಗನ್ನು ಕಾಣಲು ಸಮಯವೇ ಸಿಗುತ್ತಿಲ್ಲ. ಇದು ಎಲ್ಲಾ ಬಗೆಯ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತದೆ. ದ್ವೇಷ ಅಸೂಯೆ, ದುಃಖ ಎಲ್ಲವೂ ಹೆಚ್ಚುತ್ತದೆ. ಹಾಗಾಗಿ ಇನ್ನೊಬ್ಬರ ಬಗ್ಗೆ ದೂರುವುದನ್ನು ಬಿಟ್ಟು ಸ್ವವಿಮರ್ಶೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಅದು ಬದುಕಿಗೆ ಬಹಳ ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.