ಅಲ್ಲು ಅರ್ಜುನ್ ಬಂಧನ
–ಪಿಟಿಐ ಚಿತ್ರ
ಹೈದರಾಬಾದ್: ‘ಪುಷ್ಪ–2’ ಚಿತ್ರ ಪ್ರದರ್ಶನ ವೇಳೆ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ನಾಂಪಲ್ಲಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದೇ ಪ್ರಕರಣ ಸಂಬಂಧ ಅಲ್ಲು ಅರ್ಜುನ್ ಅವರನ್ನು ಇಂದು ಬೆಳಿಗ್ಗೆ ಹೈದರಾಬಾದ್ ನಿವಾಸದಲ್ಲಿ ಪೊಲೀಸರು ಬಂಧಿಸಿ, ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು.
ಹೈದರಾಬಾದ್‌ನಲ್ಲಿ ಡಿ.4ರಂದು ಪುಷ್ಪ–2 ಪ್ರೀಮಿಯರ್ ಪ್ರದರ್ಶನದ ವೇಳೆ 35 ವರ್ಷದ ಮಹಿಳೆ ಮೃತಪಟ್ಟಿದ್ದು, ಆಕೆಯ ಎಂಟು ವರ್ಷದ ಮಗ ಗಾಯಗೊಂಡಿದ್ದ. ಹೈದರಾಬಾದ್‌ನಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ ಘಟನೆ ನಡೆದಿತ್ತು.
ಚಿತ್ರಮಂದಿರದಲ್ಲಿ ನಟನ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಭಿಮಾನಿಗಳ ಜೊತೆಯಲ್ಲಿ ಸಿನಿಮಾ ವೀಕ್ಷಿಸಲು ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಚಿತ್ರಮಂದಿರಕ್ಕೆ ಬಂದಿದ್ದರು. ಈ ವೇಳೆ ಚಿತ್ರಮಂದಿರದೊಳಗೆ ನೂಕುನುಗ್ಗಲು ಉಂಟಾಗಿತ್ತು.
ಚಿತ್ರ ವೀಕ್ಷಣೆಗಾಗಿ ಚಿತ್ರಮಂದಿರದ ಬಳಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ನೂಕುನುಗ್ಗಲು ಉಂಟಾಗುವ ಸಾಧ್ಯತೆ ಇದ್ದು, ಚಿತ್ರಮಂದಿರಕ್ಕೆ ಬರದಂತೆ ಅಲ್ಲು ಅರ್ಜುನ್ ಅವರಿಗೆ ಪೊಲೀಸರು ಸೂಚನೆ ನೀಡಿದ್ದರು. ಆದರೂ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಬಂಧ ಮೃತ ಮಹಿಳೆಯ ಕುಟುಂಬಸ್ಥರು ಡಿ.5ರಂದು ಚಿತ್ರಮಂದಿರದ ಆಡಳಿತ ಮಂಡಳಿ, ಅಲ್ಲು ಅರ್ಜುನ್ ಹಾಗೂ ಅವರ ಭದ್ರತಾ ತಂಡದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.