ಬಿ. ಸರೋಜಾದೇವಿ
ಇನ್‌ಸ್ಟಾಗ್ರಾಂ ಚಿತ್ರ
ಬೆಂಗಳೂರು: ಬಹುಭಾಷಾ ನಟಿ ಬಿ. ಸರೋಜಾದೇವಿ (87) ಅವರು ಸೋಮವಾರ ನಿಧನರಾಗಿದ್ದಾರೆ. ಸರೋಜಾದೇವಿ ಅವರ ರಾಜಕೀಯ ಮುಖಂಡರು, ನಟ ರಜನಿಕಾಂತ್, ಸುದೀಪ್, ಖುಷ್ಬು ಸುಂದರ್ ಸೇರಿದಂತೆ ಚಿತ್ರರಂಗದ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.
‘ಲಕ್ಷಾಂತರ ಅಭಿಮಾನಿಗಳ ಹೃದಯಗಳನ್ನು ಸೂರೆಗೊಂಡ ಮಹಾನ್ ನಟಿ ಸರೋಜಾದೇವಿ ಅವರು ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಭಿನಯ ಸರಸ್ವತಿ ಎಂದೇ ಹೆಸರಾದ ಬಹುಭಾಷಾ ತಾರೆ ಸರೋಜಾದೇವಿ ಅವರು ತಮ್ಮ ಮೋಹಕತೆಯೊಂದಿಗೆ ಹೊರಟಿದ್ದಾರೆ. ಹಲವು ಭಾಷೆಗಳ ಪ್ರೌಢಮೆ ಹೊಂದಿದ್ದ ಅವರು ಅನೇಕ ದಿಗ್ಗಜರೊಂದಿಗೆ ನಟಿಸಿ ತಾನೇ ಪಾತ್ರವಾಗಿ ಬೆಳ್ಳಿತೆರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ತುಂಬು ಜೀವನ ನೆಡೆಸಿ ನಮ್ಮನ್ನು ಆಗಲಿ ಹೊರಟಿದೆ. ಕಲಾ ಸರಸ್ವತಿಗೆ ವಿನಯಪೂರ್ವಕ ನಮನ’ ಎಂದು ಕಿಚ್ಚ ಸುದೀಪ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಒಂದು ಸುವರ್ಣ ಸಿನಿಮಾ ಯುಗ ಅಂತ್ಯಗೊಂಡಿದೆ. ಸರೋಜಾದೇವಿ ಅಮ್ಮ ಅವರು ಎಲ್ಲಾ ಕಾಲಕ್ಕೂ ಶ್ರೇಷ್ಠರು. ದಕ್ಷಿಣ ಭಾರತದಲ್ಲಿ ಬೇರೆ ಯಾವುದೇ ಮಹಿಳಾ ನಟಿ ಅವರಷ್ಟು ಹೆಸರು ಮತ್ತು ಖ್ಯಾತಿ ಗಳಿಸಿಲ್ಲ. ಅವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನಾನು ಬೆಂಗಳೂರಿಗೆ ಹೋದಾಗಲೆಲ್ಲಾ ಅವರನ್ನು ಭೇಟಿಯಾಗುತ್ತಿದೆ. ಅವರು ಚೆನ್ನೈನಲ್ಲಿದ್ದಾಗಲೆಲ್ಲಾ ನನಗೆ ಕರೆ ಮಾಡುತ್ತಿದ್ದರು. ಈಗ ಅವರನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತೇನೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಮ್ಮ. ಓಂ ಶಾಂತಿ’ ಎಂದು ನಟಿ ಖುಷ್ಬೂ ಸುಂದರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಪ್ರತಿಮ ಸರೋಜಾದೇವಿ ಅಮ್ಮ ಇನ್ನಿಲ್ಲ. ಆದರೆ, ಭಾರತೀಯ ಚಿತ್ರರಂಗದಲ್ಲಿ ಅವರ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ. ‘ಒನ್ಸ್ ಮೋರ್’ ಚಿತ್ರದಲ್ಲಿ ಅವರೊಂದಿಗೆ ನಟಿಸುವ ಸೌಭಾಗ್ಯ ನನಗೆ ಸಿಕ್ಕಿತು. ಇಂದು ಅದು ಇನ್ನೂ ಹೆಚ್ಚು ಅಮೂಲ್ಯವೆನಿಸುವ ಹೆಮ್ಮೆಯ ಕ್ಷಣ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ’ ಎಂದು ನಟಿ ಸಿಮ್ರಾನ್ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸರೋಜಾದೇವಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.