ನವದೆಹಲಿ: ಸಿದ್ಧಸೂತ್ರಗಳ ಕಥೆಗಳು ಹಾಗೂ ಆ್ಯಕ್ಷನ್ ಡ್ರಾಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ದೂಳು ತಿನ್ನುತ್ತಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ತಲುಪುವಲ್ಲಿ ಬಾಲಿವುಡ್ 2024ರಲ್ಲಿ ವಿಫಲವಾಗಿದೆ. ಆದರೆ ‘ಪುಷ್ಪ–2’ ಸೇರಿದಂತೆ ಟಾಲಿವುಡ್ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿದ್ದಾರೆ.
ಈ ವರ್ಷ ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಸೆಳೆಯಲು ಬಾಲಿವುಡ್ ಹಳೇ ಚಿತ್ರಗಳ ಮೊರೆ ಹೋಗಿತ್ತು. ಲೈಲಾ ಮಜ್ನು, ತುಂಬ್ಬದ್, ವೀರ್ ಝರಾ ಸೇರಿದಂತೆ ಹಲವು ಹಳೆಯ ಚಿತ್ರಗಳ ಮರು ಬಿಡುಗಡೆಯ ತಂತ್ರದ ಮೊರೆಹೋಗಲಾಗಿತ್ತು. ಆದರೂ ಬಾಲಿವುಡ್‌ನ ಈ ಪ್ರಯತ್ನ ಅಷ್ಟಾಗಿ ಫಲ ನೀಡಲಿಲ್ಲ. ಸ್ತ್ರೀ–2 ಚಿತ್ರದ ಮೂಲಕ ಬಾಲಿವುಡ್ ಸಮಾಧಾನ ಕಂಡುಕೊಂಡಿತು. 2024ರಲ್ಲಿ ₹500 ಕೋಟಿಗೂ ಮೀರಿದ ಗಳಿಕೆ ಕಂಡ ಬಾಲಿವುಡ್‌ನ ಏಕೈಕ ಚಿತ್ರ ಎಂಬ ಖ್ಯಾತಿ ಪಡೆದಿದ್ದು ಈ ಚಿತ್ರ ಮಾತ್ರ.
ಡಿ. 5ರಂದು ಬಿಡುಗಡೆಗೊಂಡ ಅಲ್ಲು ಅರ್ಜುನ್ ನಟನೆಯ ಪುಷ್ಪ–2 ಸಿನಿಮಾ ದೇಶ, ವಿದೇಶಗಳಲ್ಲಿ ಸದ್ದು ಮಾಡಿತು. ಈ ಹಿಂದೆ 2021ರಲ್ಲಿ ಬಿಡುಗಡೆಯಾದ ಪುಷ್ಪ ಚಿತ್ರದ ಯಶಸ್ಸಿನ ಬೆನ್ನಲ್ಲೇ ಬಿಡುಗಡೆಯಾದ ಈ ಪ್ಯಾನ್ ಇಂಡಿಯಾ ಸಿನಿಮಾ ಹಿಂದಿ ಭಾಷೆಯೊಂದರಲ್ಲೇ ₹700 ಕೋಟಿ ಗಳಿಕೆ ಕಂಡಿದೆ. ಒಟ್ಟಾರೆ ಈ ಚಿತ್ರದ ಈವರೆಗಿನ ಗಳಿಕೆ ₹1,700 ಕೋಟಿ ಎಂದು ಚಿತ್ರದ ನಿರ್ಮಾಪಕರೇ ಹೇಳಿಕೊಂಡಿದ್ದಾರೆ.
‘ಪುಷ್ಪ–2’ ಚಿತ್ರದ ಯಶಸ್ಸು ದೇಶದ ಸಿನಿಮಾ ರಂಗಕ್ಕೆ ಸಾಕಷ್ಟು ಪ್ರಾಮುಖ್ಯತೆ ತಂದುಕೊಟ್ಟಿದೆ ಎಂದು ಮಲಯಾಳದ ಸೂಪರ್ ಸ್ಟಾರ್ ಮೋಹನ್‌ಲಾಲ್ ಅಭಿಪ್ರಾಯಪಟ್ಟಿದ್ದಾರೆ.
‘ಮನರಂಜನೆಯ ಜತೆಗೆ, ಯಶಸ್ಸನ್ನು ತರುವುದು ಸುಲಭದ ಮಾತಲ್ಲ. ಸಾಕಷ್ಟು ತಾಳ್ಮೆ ಹಾಗೂ ಹಲವು ಸಂಗತಿಗಳನ್ನು ಅದು ಒಳಗೊಂಡಿರುತ್ತದೆ. ಹೀಗಾಗಿ ಯಾರಿಗೂ ತಿಳಿಯದ ಮಾಂತ್ರಿಕ ಸೂತ್ರವದು. ಪುಷ್ಪ ದಂತ ಸಿನಿಮಾಗಳು ದೇಶದ ಸಿನಿ ರಂಗದ ಗಾಲಿಯನ್ನೇ ಮುಂದಕ್ಕೆ ತಿರುಗಿಸುವಷ್ಟು ಸಾಮರ್ಥ್ಯ ಹೊಂದಿವೆ’ ಎಂದಿದ್ದಾರೆ.
ಪುಷ್ಪ–2ರಂತೆಯೇ ನಾಗ್ ಅಶ್ವಿನ್ ಅವರ ಅಮಾನುಷ ಸಿನಿಮಾ ಕಲ್ಪನೆಯ ಹಾಗೂ ಮಹಾಭಾರತ ಕಥೆ ಆಧಾರಿತ ‘ಕಲ್ಕಿ’ ಕೂಡಾ ಇದೇ ವರ್ಷ ಬಿಡುಗಡೆಗೊಂಡು, ಹಿಂದಿ ಭಾಷೆಯಲ್ಲಿ ₹290 ಕೋಟಿ ಗಳಿಸಿದೆ. ತೆಲುಗು ನಟ ಪ್ರಭಾಸ್ ಮುಖ್ಯ ಭೂಮಿಕೆಯ ಹಾಗೂ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಈ ಚಿತ್ರವೂ ಪ್ರೇಕ್ಷಕರನ್ನು ಗೆಲ್ಲಿಸಿದರು.
2023ರಲ್ಲಿ ಪಠಾಣ್ ಹಾಗೂ ಜವಾನ್ ಚಿತ್ರಗಳು ತಲಾ ₹1 ಸಾವಿರ ಕೋಟಿ ಗಳಿಕೆ ಮೂಲಕ ಬಾಲಿವುಡ್‌ನಲ್ಲಿ ಒಂದಷ್ಟು ಭರವಸೆ ಮೂಡಿಸಿದ್ದವು. ಇದರೊಂದಿಗೆ ಸನ್ನಿ ದೇವಲ್ ಅವರ ‘ಗದರ್–2‘ ಹಾಗೂ ರಣಬೀರ್ ಕಪೂರ್ ಅವರ ‘ಅನಿಮಲ್‘ ಚಿತ್ರವನ್ನೂ ಬಹಳಷ್ಟು ಜನ ವೀಕ್ಷಿಸಿದ್ದರು.
‘2024ರ ಬಾಲಿವುಡ್ ಪಾಲಿಗೆ ಕೆಟ್ಟ ವರ್ಷ ಎಂದು ಹೇಳಲಾರೆ. ಆದರೆ 2023ಕ್ಕೆ ಹೋಲಿಸಿದಲ್ಲಿ ಅದು ನಿಜವಿರಬಹುದು. ಏಕೆಂದರೆ ಕಳೆದ ಸಾಲಿನ ನಾಲ್ಕು ಚಿತ್ರಗಳು ತಲಾ ₹400 ಕೋಟಿ ಗಳಿಸಿದ್ದವು. ಆದರೆ ಈ ವರ್ಷ ಸ್ತ್ರೀ–2 ಮತ್ತು ಪುಷ್ಪ–2 ಚಿತ್ರಗಳು ಮಾತ್ರ ಯಶಸ್ಸು ಕಂಡ ಸಿನಿಮಾಗಳು ಎಂದೆನಿಸಿಕೊಂಡಿವೆ. ಬಾಕ್ಸ್ ಆಫೀಸ್ ಎನ್ನುವುದು ಊಹೆಗೂ ಮೀರಿದ ಲೆಕ್ಕಾಚಾರ. ಆದರೆ ಇವೆಲ್ಲವೂ ಪಾಠಗಳೂ ಹೌದು. ಪ್ಯಾನ್ ಇಂಡಿಯಾ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾಗಳನ್ನು ಮಾಡಬೇಕಿದೆ. 2025ರಲ್ಲಿ ಎಲ್ಲಾ ಸೋಲುಗಳನ್ನೂ ಮೀರಿ ಬಾಲಿವುಡ್ ಚಿಮ್ಮಿ ನಿಲ್ಲಲಿದೆ ಎಂಬ ನಿರೀಕ್ಷೆ ಇದೆ’ ಎಂದು ವಿಶ್ಲೇಷಕ ತರನ್ ಆದರ್ಶ್ ಹೇಳಿದ್ದಾರೆ.
ಮೀರಜ್ ಎಂಟರ್‌ಟೈನ್ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಶರ್ಮಾ ಪ್ರತಿಕ್ರಿಯಿಸಿ, ‘2024 ವಿನಾಶಕಾರಿ ವರ್ಷವಾಗಿತ್ತು. 2023ಕ್ಕೆ ಹೋಲಿಸಿದಲ್ಲಿ ಶೇ 30ರಷ್ಟು ವಹಿವಾಟು ತಗ್ಗಿದೆ. ಪಠಾಣ್, ಗದರ್–2, ಜವಾನ್, ಅನಿಮಲ್, ಡುಂಕಿ, ಫಕ್ರೇ ಹಾಗೂ ಡ್ರೀಂ ಗರ್ಲ್ 2 ಸಿನಿಮಾಗಳು ಕಳೆದ ವರ್ಷ ಯಶಸ್ಸು ತಂದುಕೊಟ್ಟಿದ್ದವು. 2024ರಲ್ಲಿ ಸ್ತ್ರೀ–2, ಭೂಲ್‌ಭುಲಯ್ಯ–3, ಸಿಂಗಮ್, ಲಾಪತಾ ಲೇಡೀಸ್ ಹಾಗೂ ಶೈತಾನ್ ಚಿತ್ರಗಳು ಗೆದ್ದಿವೆ ಎಂದು ಹೇಳಬಹುದು. ಆದರೆ ಗಳಿಕೆಯಲ್ಲಿ ಇವುಗಳು 2023ರ ಸಿನಿಮಾಗಳಿಗೆ ಹೋಲಿಕೆ ಮಾಡಲಾಗದು’ ಎಂದಿದ್ದಾರೆ.
2024ರಲ್ಲಿ ಹಾರಾರ್–ಹಾಸ್ಯ ಸಿನಿಮಾಗಳನ್ನು ಪ್ರೇಕ್ಷಕರು ಮೆಚ್ಚಿದ್ದು ಹೆಚ್ಚು. ಸ್ತ್ರೀ–2, ಭೂಲ್ ಭುಲಯ್ಯ–3 ಹಾಗೂ ಮುಂಜ್ಯಾ ಚಿತ್ರಗಳು ಇದನ್ನು ಸಾಬೀತು ಮಾಡಿವೆ. 2023ರಲ್ಲಿ ಪಠಾಣ್ ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಅವರೇ 2024ರಲ್ಲಿ ಫೈಟರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಅವರಂಥ ದೊಡ್ಡ ತಾರಾಬಳಗವಿದ್ದರೂ ಗಳಿಕೆಯಲ್ಲಿ ಹಿಂದೆ ಬಿದ್ದಿತು. ಅದ್ಭುತ ಆ್ಯಕ್ಷನ್ ದೃಶ್ಯಗಳಿದ್ದರೂ, ₹250 ಕೋಟಿ ಗಳಿಕೆ ಕಂಡಿತು.
ರೋಹಿತ್ ಶೆಟ್ಟಿ ನಿರ್ದೇಶನದ ಅಜಯ್ ದೇವಗನ್ ನಟನೆಯ ‘ಸಿಂಗಮ್ ಅಗೈನ್’ ಚಿತ್ರವೂ ₹247 ಕೋಟಿ ಗಳಿಸಿತು. ಆದರೆ ನಿರೀಕ್ಷೆ ತಲುಪುವಲ್ಲಿ ವಿಫಲವಾಯಿತು. ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಗೊಂಡ ಭೂಲ್ ಭುಲಯ್ಯ–3 ಚಿತ್ರ ಬಿಡುಗಡೆಯ ಮೊದಲ ದಿನ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದರೆ ಚಿತ್ರಮಂದಿರಗಳಲ್ಲಿ ಎರಡು ವಾರವಷ್ಟೇ ಪ್ರದರ್ಶನ ಕಂಡಿತು.
ನಿರೀಕ್ಷೆ ಹೊಂದಿದ್ದ ಕೆಲ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸೋತವು. ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಯೋಧ, ಅಕ್ಷಯ್ ಕುಮಾರ್ ನಟನೆಯ ‘ಬಡೇ ಮಿಯಾ, ಚೋಟೆ ಮಿಯಾ’, ಅಜಯ್ ದೇವಗನ್ ಅವರ ‘ಮೈದಾನ್’, ಆರ್ಯನ್ ಅವರ ‘ಚಂದು ಚಾಂಪಿಯನ್’ ಹಾಗೂ ಆಲಿಯಾ ಭಟ್ ಅವರ ‘ಜಿಗ್ರಾ’ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲಿಲ್ಲ.
ಮಧ್ಯಮ ಬಜೆಟ್‌ನ ಶೈತಾನ್, ಮುಂಜ್ಯಾ ಹಾಗೂ ಕ್ರ್ಯೂ ಚಿತ್ರಗಳು ತಕ್ಕಮಟ್ಟಿಗೆ ಗಳಿಕೆ ಕಂಡಿವೆ. ಕರೀನಾ ಕಪೂರ್ ಖಾನ್, ಟಬು ಮತ್ತು ಕೀರ್ತಿ ಸನೋನ್ ನಟನೆಯ ಕ್ರ್ಯೂ ಚಿತ್ರವು ₹89 ಕೋಟಿ ಗಳಿಸಿತು. ಅಜಯ್ ದೇವಗನ್ ಹಾಗೂ ಆರ್. ಮಾಧವನ್ ನಟನೆಯ ಶೈತಾನ್ ಚಿತ್ರವು ₹148 ಕೋಟಿ ಗಳಿಸಿದೆ.
ಇದರ ನಡುವೆಯೇ ಪ್ರದರ್ಶಕರು ಹಿಂದಿನ ಕೆಲ ಚಿತ್ರಗಳನ್ನು ರಿ ರಿಲೀಸ್ ಮೂಲಕ ಹೊಸ ಪ್ರಯತ್ನಕ್ಕೆ ಕೈಹಾಕಿದರು. ಕರಣ್ ಅರ್ಜುನ್, ಕಲ್ ಹೊ ನಾ ಹೋ, ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಚಕ್ ದೇ ಇಂಡಿಯಾ, ಗ್ಯಾಂಗ್ಸ್ ಆಫ್ ವಸೇಪುರ್, ಮೈನೇ ಪ್ಯಾರ್ ಕಿಯಾ, ರೆಹನಾ ಹೇ ತೆರೆ ದಿಲ್ ಮೇ, ರಾಕ್‌ಸ್ಟಾರ್, ಜಬ್ ವಿ ಮೆಟ್, ಯೇ ಜವಾನಿ ಹೇ ದಿವಾನಿ ಚಿತ್ರಗಳೂ ದೊಡ್ಡ ಪರದೆಯಲ್ಲಿ ಮತ್ತೊಮ್ಮೆ ಬಿಡುಗಡೆಯಾಗುವ ಭಾಗ್ಯ ಕಂಡವು.
ಬಾಲಿವುಡ್‌ನ ಕಳಪೆ ಪ್ರದರ್ಶನ ಕುರಿತು ಕೆಲ ದಿನಗಳ ಹಿಂದೆ ನಟ ಮನೋಜ್ ಬಾಜಪೇಯಿ ಪ್ರತಿಕ್ರಿಯಿಸಿ, ‘ಚಿತ್ರ ತಯಾರಕರು ಭಿನ್ನವಾಗಿ ಆಲೋಚಿಸಬೇಕಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ಪ್ರಕಾರ ಇದು ಮಂಥನ. ಆದರೆ ಭವಿಷ್ಯದಲ್ಲಿ ಬಾಲಿವುಡ್ ತನ್ನ ಯಶಸ್ಸಿನ ಹಳಿಗೆ ಮರಳಲಿದೆ ಎಂಬ ವಿಶ್ವಾಸವಿದೆ. ಸದ್ಯದ ಪರಿಸ್ಥಿತಿ ಸಮಸ್ಯೆಯಂತೂ ಅಲ್ಲ. ಏಕೆಂದರೆ ಕ್ರಿಯಾಶೀಲ ವ್ಯಕ್ತಿಗಳು ಹೊಸ ಹಾದಿಯನ್ನು ಖಂಡಿತವಾಗಿಯೂ ಕಂಡುಕೊಳ್ಳುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.