
ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಧನುಷ್ ಅವರಿಗೆ ಬಾಂಬ್ ಬೆದರಿಕೆಯ ಇ– ಮೇಲ್‌ಗಳು ಬಂದಿವೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ತೇನಾಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಜನಿಕಾಂತ್ ಹಾಗೂ ಧನುಷ್ ಅವರಿಗೆ ಸಂಬಂಧಿಸಿದ ಮನೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆಯ ಇ– ಮೇಲ್‌ಗಳು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಂದಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೋಮವಾರ (ಅ.27) ಬೆಳಿಗ್ಗೆ 8.30ರ ಸುಮಾರಿಗೆ ರಜನಿಕಾಂತ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಇ–ಮೇಲ್ ಪೊಲೀಸರಿಗೆ ಬಂದಿದೆ. ಪೊಲೀಸರು ಬಾಂಬ್ ನಿಷ್ಕ್ರಿಯ ತಂಡದೊಂದಿಗೆ ರಜನಿಕಾಂತ್ ಮನೆಗೆ ತೆರಳಿದಾಗ ಅವರು ಶೋಧಕಾರ್ಯಾಚರಣೆ ಅಗತ್ಯವಿಲ್ಲ ಎಂದು ನಿರಾಕರಿಸಿದರು. ಮತ್ತೆ ಸಂಜೆ 6.30ರ ಸುಮಾರಿಗೆ 2ನೇ ಬಾಂಬ್ ಬೆದರಿಕೆ ಪತ್ರ ಬಂದಿದೆ. ಆಗಲೂ ರಜನಿಕಾಂತ್ ಭದ್ರತಾ ಸಿಬ್ಬಂದಿ ತಪಾಸಣೆಯನ್ನು ನಿರಾಕರಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅದೇ ದಿನ ನಟ ಧನುಷ್ ಅವರ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಪತ್ರ ಬಂದಿದೆ. ಅವರು ಸಹ ಶೋಧಕಾರ್ಯಾಚರಣೆ ನಿರಾಕರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರಮುಖ ವ್ಯಕ್ತಿಗಳಿಗೆ ಇದೇ ರೀತಿಯ ಬೆದರಿಕೆ ಇ–ಮೇಲ್‌ಗಳು ಬರುತ್ತಿದ್ದು, ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.