ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಮೆಗಾಸ್ಟಾರ್ ಚಿರಂಜೀವಿ ಸ್ವೀಕರಿಸಿದರು.
ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಚಿತ್ರಗಳಲ್ಲಿ ಪ್ರದರ್ಶಿಸಿರುವ ನೃತ್ಯಗಳಿಗಾಗಿ ಭಾರತೀಯ ಚಲನಚಿತ್ರೋದ್ಯಮ ಅತ್ಯಂತ ‘ಕ್ರಿಯಾತ್ಮಕ ತಾರೆ‘ ಎಂದು ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದ್ದಾರೆ.
ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು, ‘ಈ ಕ್ಷಣ ಅವಿಸ್ಮರಣೀಯವಾಗಿದೆ. ನಾನು ಮಾಡಿದ ನೃತ್ಯಗಳಿಂದಾಗಿ ಗಿನ್ನಿಸ್ ವಿಶ್ವ ದಾಖಲೆಗೆ ಸೇರುತ್ತೇನೆಂದು ಎಂದಿಗೂ ಊಹಿಸಿರಲಿಲ್ಲ. ಇದು ನಿಜವಾಗಿಯೂ ನನ್ನನ್ನು ನಟನಾಗಿ ಮಾಡಿದೆ. ನೃತ್ಯವು ನನ್ನ ವೃತ್ತಿ ಜೀವನದುದ್ದಕ್ಕೂ ನನಗೆ ಉತ್ತಮ ಪ್ರಶಂಸೆ ತಂದುಕೊಟ್ಟಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
‘ನೃತ್ಯವು ನನ್ನ ವೃತ್ತಿ ಜೀವನದ ಭಾಗವಾಗಿದೆ. ಸಾವಿತ್ರಿಯಂತಹ ದಂತಕಥೆಯುಳ್ಳ ನಾಯಕಿಯರೊಂದಿಗೆ ಪರದೆ ಮೇಲೆ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ಅವರ ಜತೆ ಹೆಜ್ಜೆ ಹಾಕಿದ್ದು ಎಲ್ಲವನ್ನೂ ಸದಾ ನೆನಪಿಸಿಕೊಳ್ಳುತ್ತೇನೆ. ನನ್ನನ್ನು ನಟನಾಗಿ ಮಾಡುವಲ್ಲಿ ನಿರ್ದೇಶಕರು, ನಿರ್ಮಾಪಕರು, ನೃತ್ಯ ಸಂಯೋಜಕರ ಕೊಡುಗೆ ಅಪಾರವಾಗಿದೆ. ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ’ ಎಂದು ಚಿರಂಜೀವಿ ಹೇಳಿದ್ದಾರೆ.
ಚಿರಂಜೀವಿ ಅವರು 45 ವರ್ಷಗಳ ಸಿನಿ ಪ್ರಯಾಣದಲ್ಲಿ 156 ಚಿತ್ರಗಳಲ್ಲಿ ಅಭಿನಯಿಸಿದ್ದು, 537 ಹಾಡುಗಳಲ್ಲಿ 24,000 ಡಾನ್ಸ್ ಸ್ಟೆಪ್ಸ್ ಹಾಕಿದ್ದಾರೆ.
ಚಿರಂಜೀವಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ದಿನ (1978ರ ಸೆಪ್ಟೆಂಬರ್ 22) ಹಾಗೂ ಗಿನ್ನಿಸ್ ವಿಶ್ವ ದಾಖಲೆ ಪ್ರಶಸ್ತಿ ಲಭಿಸಿದ ದಿನ (ಸೆಪ್ಟೆಂಬರ್ 22ಕ್ಕೆ) ಎರಡೂ ಒಂದೇ ಆಗಿದೆ.
ಈ ಹಿಂದೆ 2006ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆ ಸಂಬಂಧ ತೆಲಂಗಾಣ ಸಿಎಂ ರೇವಂತ ರೆಡ್ಡಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ನಟ– ನಟಿಯರು ಚಿರಂಜೀವಿ ಅವರನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.