ADVERTISEMENT

ಈ ಗಾನ ಕೋಗಿಲೆಗೆ ಸಾಟಿ ಇಲ್ಲ

ಸಿದ್ದಯ್ಯ ಹಿರೇಮಠ
Published 6 ಫೆಬ್ರುವರಿ 2022, 15:12 IST
Last Updated 6 ಫೆಬ್ರುವರಿ 2022, 15:12 IST
ಗಾನ ಕೋಗಿಲೆ ಲತಾ ಮಂಗೇಶ್ಕರ್
ಗಾನ ಕೋಗಿಲೆ ಲತಾ ಮಂಗೇಶ್ಕರ್    

ಭಾನುವಾರ ಬೆಳಿಗ್ಗೆ ನಮ್ಮನ್ನಗಲಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಗಾಯನಕ್ಕೆ ಬೇರೆ ಯಾರೂ‌ ಸಾಟಿಯಲ್ಲ. ಅವರಿಗೆ ಅವರೇ ಸಾಟಿ ಎಂಬಂತ ಸಾಧನೆಲತಾ ದೀದಿಯದು.

ರಾಜಶ್ರೀ ಪ್ರೋಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣಗೊಂಡ 'ಮೈನೆ ಪ್ಯಾರ್‌ ಕಿಯಾ' ಚಿತ್ರದ 'ದಿಲ್ ದೀವಾನಾ‌ ಬಿನ್ ಸಜನಾಕೆ ಮಾನೇನಾ... ಏ ಪಗಲಾ ಹೈ ಸಮಝಾನೇಸೆ ಸಮಝೇನಾ....' ಗೀತೆ ಲತಾ ಮಂಗೇಶ್ಕರ್ ಅವರ ಕೋಗಿಲೆಯ ಕಂಠಕ್ಕೆ ಸರಿಸಾಟಿ ಯಾರೂ ಅಲ್ಲ ಎಂಬುದಕ್ಕೆ ನಿದರ್ಶನ.

ಈ ಮೂಲಕ ಮೊದಲ ಚಿತ್ರ ನಿರ್ದೇಶಿಸಿದ ಸೂರಜ್ ಭಾರಜಾತ್ಯಾ ಹಾಗೂ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ‌ ಸಲ್ಮಾನ್ ಖಾನ್ ಅವರಿಗೆ ಖ್ಯಾತಿ ಬರಲು ಈ ಚಿತ್ರದ ಅಭೂತಪೂರ್ವ ಯಶಸ್ಸು ಕಾರಣ‌. ಚಿತ್ರದ ಯಶಸ್ಸಿಗೆ 'ಭಾರತದ ಕೋಗಿಲೆ' ಲತಾ ದೀದಿ ಅವರ ಸಿರಿಕಂಠವೂ ಅಷ್ಟೇ ಕಾರಣ.

ADVERTISEMENT

ಇದೇ ತಂಡದ ಸಂಗೀತಮಯ ಚಿತ್ರ 'ಹಮ್ ಆಪ್ ಕೇ ಹೈ ಕೌನ್'ನ ಯಶಸ್ಸಿಗೂ ಗುನುಗುನಿಸುವ‌ ಹಾಡುಗಳೇ ಕಾರಣವಾಯಿತು. ದೀದಿಯ ಸಿರಿಕಂಠದಲ್ಲಿ ಮೂಡಿ ಬಂದ ಬಹುತೇಕ ಹಾಡುಗಳೂ ಚಿತ್ರದ ಯಶಸ್ಸಿಗೆ ಮುನ್ನುಡಿ ಬರೆದಿದ್ದವು.

ತಮ್ಮ ಹಾಡುಗಾರಿಕೆಯಿಂದಾಗಿ ದೇಶದ ಅತ್ಯುನ್ನತ ಪ್ರಶಸ್ತಿಯಾದ 'ಭಾರತರತ್ನ'ಕ್ಕೂ ಪಾತ್ರರಾದ ಲತಾ ದೀದಿ, ಅಂಥ ಅನೇಕ ಪ್ರಶಸ್ತಿಗಳಿಗೇ ಮೆರುಗು ತಂದು ಕೊಟ್ಟ ಮೇರು ಗಾಯಕಿ ಎಂದರೆ ಅತಿಶಯೋಕ್ತಿಯೇನೂ ಅಲ್ಲ‌.

ಇವರು ಹಾಡಿದ ಸಾವಿರಾರು ಸುಮಧುರ ಗೀತೆಗಳನ್ನು ಮೆಲುಕು ಹಾಕದ ಸಂಗೀತ ಪ್ರೇಮಿಗಳೇ ಇಲ್ಲ ಎಂದರೂ ತಪ್ಪಲ್ಲ.

ಮತ್ತೊಬ್ಬ 'ಭಾರತರತ್ನ' ಭೂಪೇನ್ ಹಜಾರಿಕಾ ಅವರ ಸಂಗೀತ ನಿರ್ದೇಶನದಲ್ಲಿ ಹೊರ ಬಂದ 'ರುಡಾಲಿ' ಚಿತ್ರದ 'ದಿಲ್ ಹೂಂ ಹೂಂ ಕರೆ ಗಭರಾಯೆ' ಹಾಡಿಗೆ ಅವರ ಧ್ವನಿಯಂತೂ ಕಂಠದಿಂದಲ್ಲ ಬದಲಿಗೆ, ಎದೆಯಾಳದಿಂದ ಹೊರಬಂದಂಥದ್ದು.

ರಾಜಶ್ರೀ ಪ್ರೊಡಕ್ಷನ್ಸ್ ನ ಇನ್ನೊಂದು ಚಿತ್ರವಾದ 'ಸೌದಾಗರ್'ನಲ್ಲಿ ನಾಯಕಿ ನೂತನ್ ಅವರ ಮನೋಜ್ಞ ಅಭಿನಯದೊಂದಿಗೆ ಮೂಡಿಬಂದ 'ತೇರಾ ಮೇರಾ ಸಾಥ್ ರಹೆ' ಹಾಡಂತೂ ಎಷ್ಟು ಬಾರಿ ಕೇಳಿದರೂ‌ ಬೇಸರವೇ ಮೂಡುವುದಿಲ್ಲವೇನೋ‌ ಎಂಬಷ್ಟು ಮಾಧುರ್ಯಭರಿತ ಗೀತೆ.

ಅಮಿತಾಬ್ ಬಚನ್, ಜಯಪ್ರದಾ ಅಭಿನಯದ 'ಆಜ್ ಕಾ ಅರ್ಜುನ್' ಚಿತ್ರದ 'ಗೋರಿ ಹೈ ಕಲಾಂಯಾ, ತೂ ಲಾ ದೇ ಮುಝೆ ಹರಿ ಹರಿ ಚೂಡಿಯಾ... ಅಪನಾ ಬನಾಲೇ ಮುಝೆ ಬಾಲಮಾ' ಹಾಗೂ ಅಮಿತಾಬ್- ರೇಖಾ ಜೋಡಿ‌ ಮೋಡಿ ಮಾಡಿದ್ದ 'ಮಿಸ್ಟರ್ ನಟವರ್ ಲಾಲ್' ಚಿತ್ರದ 'ಪರದೇಸಿಯಾ ಎ ಸಚ್ ಹೈ ಪಿಯಾ ಸಬ್ ಕೆಹೆತೆ ಹೈ ತೂನೆ ಮುಝಕೋ ದಿಲ್ ದೇದಿಯಾ' ಹಾಡಿಗೂ ಸಾಮ್ಯತೆ ಇರುವುದು ಲತಾ‌ ಕಂಠದಿಂದಾಗಿ ಮಾತ್ರವಲ್ಲ. ಪಾತ್ರಗಳಿಗೆ ಜೀವ ಒದಗಿಸುವ ಅಭಿನೇತ್ರಿಯ ಭಾವನೆಗಳಿಗೆ ರೆಕ್ಕೆ ಮೂಡಿಸಲೆಂದೇ ಸ್ವತಃ ತಲ್ಲೀನರಾಗಿ ಹಾಡಿ ಪ್ರೇರೇಪಿಸಿದ್ದೇ ಕಾರಣ.

'ಲತಾ ದೀದಿ ಹಾಡಿದ‌ ಹಾಡಿಗೆ ಅಭಿನಯಿಸಲು ನಾನು‌ ಹೆಚ್ಚು ಶ್ರಮ ಪಡಬೇಕಾಗುತ್ತದೆ. ಮುಖಭಾವ‌ ವ್ಯಕ್ತಪಡಿಸಲು ಅವರ‌ ಧ್ವನಿಯನ್ನು ಅನುಕರಿಸುವುದು ಅನಿವಾರ್ಯವಾಗುತ್ತಿತ್ತು. ಹಾಗಾಗಿ, ಪಾತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಅವರ ಹಾಡುಗಾರಿಕೆ ನನ್ನನ್ನು ಪ್ರೇರೇಪಿಸುತ್ತಿತ್ತು' ಎಂದು ಹಿರಿಯ ನಟಿ ಮೀನಾಕುಮಾರಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇವರ ಅಭಿನಯದ ನಾಯಕಿ ಪ್ರಧಾನವಾದ 'ಪಾಕೀಜಾ' ಚಿತ್ರದಲ್ಲಿನ ಸುಮಧುರ ಹಾಡುಗಳಿಗೆ ಧ್ವನಿ ನೀಡಿದವರು ಲತಾ ದೀದಿ. ಚಲತೇ ಚಲತೇ ಯೂ ಹೀ‌ ಕೋಯಿ ಮಿಲಗಯಾ ಥಾ ಸಾರೆ ರಾಹ್ ಚಲತೇ ಚಲತೇ' ಎಂಬ ಹಾಡು ಎಲ್ಲರನ್ನೂ ಗುನುಗುವಂತೆ ಹುರಿದುಂಬಿಸಿದ ಹಾಡು.

'ಲೇಕಿನ್' ಚಿತ್ರದ 'ಸುನಿಯೋ ಜಿ ಅರ್ಜ್ ಮಾರಿಯೋ' ಗೀತೆಯೂ‌ ಲತಾ ಅವರ ಹಾಡುಗಾರಿಕೆಯನ್ನೇ ಒರೆಗೆ‌ ಹಚ್ಚಿದ ಮತ್ತೊಂದು ಹಾಡು. ಇದೇ ಚಿತ್ರದಲ್ಲಿನ 'ಯಾರಾ ಸಿಲಿ ಸಿಲಿ ಬಿರಹಾ ಕೆ ರಾತ್ ಕಾ‌ ಜಲನಾ' ಗೀತೆ ಮರೆಯಲಾರದ ಹಾಡುಗಳ ಸಾಲಿಗೆ ಸೇರಿಯಾಗಿದೆ. ಅವರ ಏಕೈಕ ಸೋದರ ಹೃದಯನಾಥ ಮಂಗೇಶ್ಕರ್ ಈ ಚಿತ್ರದ ಸಂಗೀತ ನಿರ್ದೇಶಕ. ಲತಾ ಹಾಡಿದ ಅನೇಕ ಸುಮಧುರ ಗೀತೆಗಳನ್ನು ರಚಿಸಿದ್ದ ಗುಲ್ಜಾರ್ ಈ ಗೀತೆಯನ್ನೂ ರಚಿಸಿದ್ದರು.

ಬಾಲಿವುಡ್ ನ ಜನಪ್ರಿಯ ಗಾಯಕರಾದ ಮುಕೇಶ್, ಮಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತಿತರರೊಂದಿಗೆ ಲತಾ ಹಾಡಿದ ಯುಗಳ ಗೀತೆಗಳ ಮೋಡಿ ಕೇಳುಗರಿಗೆ ಗುಂಗು ಹಿಡಿಸಿದ್ದನ್ನು ಇಂದಿಗೂ ಅನೇಕರು ಮೆಲುಕು ಹಾಕುತ್ತಾರೆ. ಭಾರತೀಯ ಚಿತ್ರರಂಗದ ಆರಂಭದ ದಿನಗಳಿಂದಲೂ ಹಿನ್ನೆಲೆ ಗಾಯಕಿಯಾಗಿ ಹಲವಾರು ಹಾಡುಗಳಿಗೆ‌ ಜೀವ ತುಂಬಿದ ಲತಾ ವಯಸ್ಸಿನಲ್ಲಿ ತನಗಿಂತ ಚಿಕ್ಕವರಾದ ನಿತಿನ್‌ ಮುಕೇಶ್ (ಗಾಯಕ ಮುಕೇಶ್ ಪುತ್ರ) ಸುರೇಶ ವಾಡ್ಕರ್, ಅಮಿತ್ ಕುಮಾರ್ (ಕಿಶೋರ್ ಕುಮಾರ್ ಪುತ್ರ), ಕುಮಾರ್ ಸಾನು, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತಿತರರೊಂದಿಗೆ‌ ಹಾಡಿ ಅವರನ್ನೂ ಪ್ರೋತ್ಸಾಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

'ಸಿಲ್ ಸಿಲಾ', 'ಕಭಿ ಕಭಿ', 'ಆಂಧೀ', 'ಅಭಿಮಾನ್' ಹೀಗೆ 70ರ ದಶಕದ ಅನೇಕ ಚಿತ್ರಗಳ ಯಶಸ್ಸಿನ ಹಿಂದೆ ಲತಾ ಅವರ‌ ಮಧುರ‌ ಕಂಠದ‌ ಕೊಡುಗೆ ಇತ್ತು.

ಭಾರತೀಯ ಚಿತ್ರರಂಗದ ಧೀಮಂತ ನಿರ್ದೇಶಕ ರಾಜ್‌ಕಪೂರ್ ಅವರ ಬಹುತೇಕ ಚಿತ್ರಗಳಲ್ಲಿ ಲತಾ‌ ಧ್ವನಿ ಇಲ್ಲದೇ ಹಾಡುಗಳೇ ಇರುವುದಿಲ್ಲ ಎಂಬ ಸ್ಥಿತಿ ಇತ್ತು. 'ರಾಮ್ ತೇರಿ ಗಂಗಾ‌ ಮೈಲಿ' ಚಿತ್ರದ ಎಲ್ಲ ಸುಮಧುರ ಗೀತೆಗಳೂ ಲತಾ ಹಾಡುಗಾರಿಕೆಯಿಂದಲೇ ಜನಪ್ರಿಯವಾಗಿ, ಆ ಚಿತ್ರವೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಹಾಯಕವಾಯಿತು.

'ಹಾಥ್ ಕೀ ಸಫಾಯಿ' ಚಿತ್ರದ 'ವಾದಾ ಕರಲೇ ಸಾಜನಾ ತೇರೆ ಬಿನ್ ಮೈನಾ ರಹೂ ಮೇರೆ ಬಿನ್ ತು ನ ರಹೆ ಹೋ ಕೇ ಜುದಾ ಏ ವಾದಾ ರಹಾ' ಹಾಗೂ 'ರಾಮ್ ತೇರಿ ಗಂಗಾ ಮೈಲಿ' ಚಿತ್ರದ 'ಸುನ್‌ ಸಾಯ್ಬಾ ಸುನ್ ಪ್ಯಾರ್‌ ಕಿ ಧುನ್' ಹಾಡುಗಳು ಪ್ರತಿಯೊಬ್ಬರೂ ಗುನುಗುನಿಸಿದ ಗೀತೆಗಳಲ್ಲಿ ಪ್ರಮುಖವಾದಂಥವು.

ಗೀತ ರಚನಾಕಾರರಾದಗುಲ್ಷನ್‌ ಬಾವ್ರಾ, ರವೀಂದ್ರ ಜೈನ್, ಸಾಹಿರ್‌ ಲುಧಿಯಾನ್ವಿ, ಕೈಫಿ ಅಜ್ಮಿ, ಮಜರೂಹ್ ಸುಲ್ತಾನ್ ಪುರಿ, ಜಾನಿಸಾರ್ ಅಖ್ತರ್, ಆನಂದ್ ಬಕ್ಷಿ, ಸಂಗೀತ ನಿರ್ದೇಶಕರಾದ ಶಂಕರ್- ಜೈಕಿಷನ್, ಲಕ್ಷ್ಮಿಕಾಂತ್ ಪ್ಯಾರೇಲಾಲ್, ಕಲ್ಯಾಣ್ ಜಿ- ಆನಂದ್ ಜಿ, ಸಲೀಲ್ ಚೌಧರಿ, ರಾಮ್- ಲಕ್ಷ್ಮಣ್, ರವೀಂದ್ರ ಜೈನ್, ಅನು ಮಲಿಕ್, ಜತಿನ್- ಲಲಿತ್, ಉತ್ತಮ್ ಸಿಂಗ್, ಖಯ್ಯಾಂ, ಸಚಿನ್ ದೇವ್‌ ಬರ್ಮನ್, ರಾಹುಲ್ ದೇವ್ ಬರ್ಮನ್, ನದೀಮ್- ಶ್ರವಣ್, ರಾಜೇಶ್ ರೋಷನ್ ಮತ್ತಿತರರು ಲತಾ ಹಾಡುಗಾರಿಕೆಯಿಂದ ಜನಪ್ರಿಯವಾದ ಅನೇಕ ಗೀತೆಗಳಿಂದಾಗಿ ಸಂಗೀತ‌ ಪ್ರೇಮಿಗಳ ನಿತ್ಯ ಸ್ಮರಣೆಗೆ ಒಳಗಾಗುತ್ತಿದ್ದಾರೆ.

ಯಶ್ ಛೋಪ್ರಾ ನಿರ್ಮಿಸಿದ 'ಮೊಹಬ್ಬತೇ' ಚಿತ್ರದ 'ಹಮ್ ಕೋ ಹಮೀಸೇ‌ ಚುರಾಲೋ ದಿಲ್ ಮೇ ಕಹೀ ತುಮ್ ಚುಪಾಲೋ ಹಮ್ ಅಕೇಲೆ ಹೋನ ಜಾಯೆ ದೂರ್ ತುಮ್ ಸೇ ಹೋನ ಜಾಯೆ ಪಾಸ್ ಆವೋ ಗಲೇ ಸೇ ಲಗಾಲೋ' ತರಹದ ಸಾವಿರಾರು ಹಾಡುಗಳ ಮೂಲಕ ಲತಾ ಮಂಗೇಶ್ಕರ್ ಸದಾ ಜೀವಂತವಾಗಿಯೇ ಇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.