ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಸ್ವರ್ಣ ಮಹೋತ್ಸವದಲ್ಲಿ ಖ್ಯಾತ ಗಾಯಕ ಅನೂಪ್ ಶಂಕರ್ ಅವರು ಹಾಡಿದ ಕನ್ನಡ ಗೀತೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ವರ್ಣ ಮಹೋತ್ಸವ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅನೂಪ್ ಶಂಕರ್ ಅವರು ರಾಹುಲ್ ದ್ರಾವಿಡ್ ಅವರಿಗೆ ‘ತೆಲುಗು, ತಮಿಳು, ಹಿಂದಿ,ಕನ್ನಡ. ನೀವು ಯಾವ ಭಾಷೆಯ ಹಾಡನ್ನು ಕೇಳಲು ಇಷ್ಟ ಪಡುತ್ತೀರಾ' ಎಂದು ಕೇಳುತ್ತಾರೆ. ಆ ಸಂದರ್ಭದಲ್ಲಿ ರಾಹುಲ್ ಅವರು ಕನ್ನಡ ಹಾಡಿಗೆ ಆದ್ಯತೆ ನೀಡಿದ್ದಾರೆ.
ಅದರಂತೆಯೇ, ಅನೂಪ್ ಶಂಕರ್ ಅವರು ‘ಗೀತಾ’ ಚಿತ್ರದ 'ಜೊತೆ ಜೊತೆಯಲಿ' ಹಾಡು ಹಾಡಿದ್ದಾರೆ. ಇವರ ಗಾಯನಕ್ಕೆ ರಾಹುಲ್ ದ್ರಾವಿಡ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮಹೋತ್ಸವದ ಸುಂದರ ಕ್ಷಣಗಳನ್ನು ಹಂಚಿಕೊಂಡ ಅನೂಪ್ ಶಂಕರ್, ‘ಚಿನ್ನಸ್ವಾಮಿ ಕ್ರೀಡಾಂಗಣದ ಸ್ವರ್ಣ ಮಹೋತ್ಸವ ಸಂದರ್ಭದಲ್ಲಿ ನಾನು ಹಾಡಿದ 'ಜೊತೆ ಜೊತೆಯಲಿ' ಗೀತೆಗೆ ದೊರೆತ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ' ಎಂದಿದ್ದಾರೆ.
'ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್. ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಶಾಂತಾ ರಂಗಸ್ವಾಮಿ ಹಾಗೂ ಸುಜಿತ್ ಸೋಮಸುಂದರ್ ಅವರ ಸಮ್ಮುಖದಲ್ಲಿ ಹಾಡುವುದು ನನಗೆ ಪದಗಳಲ್ಲಿ ವಿವರಿಸಲಾಗದ ಕ್ಷಣವಾಗಿತ್ತು' ಎಂದು ಹೇಳಿಕೊಂಡಿದ್ದಾರೆ.
‘ಈ ಅಮರ ಗೀತೆಯನ್ನು ಕರ್ನಾಟಕಕ್ಕೆ ಉಡುಗೊರೆಯಾಗಿ ನೀಡಿದ ದಿಗ್ಗಜರಾದ ಇಳಯರಾಜ, ಉದಯ ಶಂಕರ್, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ ಮತ್ತು ಶಂಕರ್‌ನಾಗ್ ಅವರ ಅಪ್ರತಿಮ ಕಲೆ ಸದಾ ನಮ್ಮ ಹೃದಯಗಳಲ್ಲಿ ಜೀವಂತವಾಗಿರಲಿದೆ. ಕರ್ನಾಟಕದ ಮಹಿಮೆ ಮತ್ತು ಕನ್ನಡದ ಕೀರ್ತಿ ಸದಾಕಾಲ ಬೆಳಗಲಿ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.