ADVERTISEMENT

ಹಿಂದಿ ರಾಷ್ಟ್ರ ಭಾಷೆ ಹೇಳಿಕೆ: ಅಜಯ್ ದೇವಗನ್‌ಗೆ ಸೋನು ನಿಗಮ್ ಉತ್ತರ ಹೀಗಿದೆ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2022, 9:43 IST
Last Updated 3 ಮೇ 2022, 9:43 IST
   

‘ಹಿಂದಿ ರಾಷ್ಟ್ರ ಭಾಷೆ’ ಎಂದು ನಟ ಅಜಯ್ ದೇವಗನ್ ನೀಡಿರುವ ಹೇಳಿಕೆ, ಅದಕ್ಕೆ ನಟ ಸುದೀಪ್‌ ಕೊಟ್ಟ ಉತ್ತರ ಇತ್ತೀಚೆಗೆ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಗಾಯಕ ಸೋನು ನಿಗಮ್ ಕೂಡ ‘ಹಿಂದಿ’ ಹೆಸರಿನಲ್ಲಿ ಜನರಲ್ಲಿ ಒಡಕು ಮೂಡಿಸುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಪತ್ರಕರ್ತ ಸುಶಾಂತ್ ಮೆಹ್ತಾ ಅವರು ಇತ್ತೀಚೆಗೆ ನಡೆಸಿಕೊಟ್ಟ ಕಾರ್ಯಕ್ರಮವೊಂದರಲ್ಲಿ ‘ಹಿಂದಿ ರಾಷ್ಟ್ರ ಭಾಷೆ’ ಹೇಳಿಕೆ ಕುರಿತು ಸೋನು ನಿಗಮ್ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ನಿಗಮ್ ಅವರು ಕೊಟ್ಟ ಉತ್ತರದ ವಿಡಿಯೊ ತುಣುಕನ್ನು ಸುಶಾಂತ್ ಮೆಹ್ತಾ ಟ್ವೀಟ್ ಮಾಡಿದ್ದಾರೆ.

ಸೋನು ನಿಗಮ್ ಹೇಳಿದ್ದು...

‘ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹೆಚ್ಚು ಜನ ಮಾತನಾಡುವ ಭಾಷೆ ಅದಾಗಿರಬಹುದು. ಆದರೆ, ರಾಷ್ಟ್ರ ಭಾಷೆಯಲ್ಲ. ತಮಿಳು ವಿಶ್ವದ ಅತಿ ಹಳೆಯ ಭಾಷೆ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಳೆಯ ಭಾಷೆ ಯಾವುದು ಎಂಬ ವಿಚಾರದಲ್ಲಿ ಕೆಲವರು ಸಂಸ್ಕೃತ ಎಂದರೆ, ಇನ್ನು ಕೆಲವರು ತಮಿಳು ಎನ್ನುತ್ತಾರೆ. ಚರ್ಚೆ ಮಾಡಬೇಕಾದ ಅನೇಕ ವಿಷಯಗಳಿವೆ. ಬೇರೆ ದೇಶಗಳಿಂದಲೇ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಈ ಚರ್ಚೆ ಅಗತ್ಯವಿದೆಯೇ?

ಪಂಜಾಬ್‌ನವರು ಪಂಜಾಬಿ ಮಾತನಾಡಲಿ, ತಮಿಳರು ತಮಿಳು ಮಾತನಾಡಲಿ. ಅವರಿಗೆ ಇಂಗ್ಲಿಷ್ ಅನುಕೂಲವಾಗುತ್ತದೆ ಎಂದಾದರೆ ಆ ಭಾಷೆಯಲ್ಲೇ ಮಾತನಾಡಲಿ. ನ್ಯಾಯಾಲಯಗಳಲ್ಲಿ ಆದೇಶವನ್ನು ಇಂಗ್ಲಿಷ್‌ನಲ್ಲೇ ನೀಡಲಾಗುತ್ತಿದೆ. ಇದೇನಿದು, ನಾವು ಹಿಂದಿ ಮಾತನಾಡಬೇಕು ಎನ್ನುವುದು?

ಇಂಗ್ಲಿಷ್‌ ಕೂಡ ಈಗ ನಮ್ಮ ದೇಶದ ಸಂಸ್ಕೃತಿಯಾಗಿಬಿಟ್ಟಿದೆ. ದೇಶದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಈಗಾಗಲೇ ಚರ್ಚೆಯಾಗುತ್ತಿದೆ. ದೇಶದಲ್ಲಿ ಇನ್ನಷ್ಟು ಒಡಕು ಮೂಡಿಸದಿರೋಣ’ ಎಂದು ಸೋನು ನಿಗಮ್ ಹೇಳಿರುವುದು ವಿಡಿಯೊದಲ್ಲಿದೆ.

ಅಜಯ್ ದೇವಗನ್ ಹೇಳಿಕೆಗೆ ಸುದೀಪ್, ಸೋನು ಸೂದ್ ಸೇರಿದಂತೆ ಅನೇಕ ನಟ, ನಟಿಯರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಚರ್ಚೆಯು ರಾಜಕೀಯ ಆಯಾಮವನ್ನೂ ಪಡೆದಿತ್ತು. ಈ ಮಧ್ಯೆ, ಅಜಯ್ ದೇವಗನ್ ಹೇಳಿಕೆಯನ್ನು ನಟಿ ಕಂಗನಾ ರನೌತ್‌ ಸಮರ್ಥಿಸಿದ್ದರು. ಜತೆಗೆ, ನಮಗೆ ಸಂಸ್ಕೃತ ಏಕೆ ರಾಷ್ಟ್ರೀಯ ಭಾಷೆಯಾಗಿಲ್ಲ? ನಮ್ಮ ಶಾಲೆಗಳಲ್ಲಿ ಸಂಸ್ಕೃತವನ್ನು ಏಕೆ ಕಡ್ಡಾಯವಾಗಿ ಕಲಿಸುವುದಿಲ್ಲ?’ ಎಂದು ಪ್ರಶ್ನಿಸಿದ್ದರು. ಇದೂ ಕೂಡ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.