ADVERTISEMENT

ಸಂಜಯ್‌ ರಾವುತ್‌ ವ್ಯಂಗ್ಯಕ್ಕೆ ಸೋನು ಸೂದ್‌ ಖಡಕ್‌ ಉತ್ತರ

ವಲಸೆ ಕಾರ್ಮಿಕರಿಗೆ ನೀಡಿದ ನೆರವಿನ ಬಗ್ಗೆ ವ್ಯಂಗ್ಯವಾಡಿದ್ದ ಶಿವಸೇನೆ ನಾಯಕ ಸಂಜಯ್‌ ರಾವುತ್‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 7:16 IST
Last Updated 8 ಜೂನ್ 2020, 7:16 IST
ಸೋನು ಸೂದ್‌
ಸೋನು ಸೂದ್‌   

ಮುಂಬೈ: ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರಿಗೆ ತಮ್ಮ ರಾಜ್ಯಕ್ಕೆ ಮರಳಲು ಸಹಾಯ ಮಾಡಿದ್ದನ್ನು ಕುಹಕವಾಡಿದ ಶಿವಸೇನಾ ಪಕ್ಷದ ನಾಯಕ ಸಂಜಯ್‌ ರಾವುತ್‌ ವ್ಯಂಗ್ಯಕ್ಕೆ ಸೋನು ಸೂದ್‌ ಟ್ವಿಟ್ಟರ್‌ನಲ್ಲಿ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್‌ನಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲಿ ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡುವ ತನ್ನ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.

‘ವಲಸೆ ಹೊರಟ ನನ್ನ ಅಣ್ಣ, ತಮ್ಮಂದಿರು ಹಾಗೂ ಸಹೋದರಿಯರ ಜೊತೆಗಿನ ಪಯಣ ವಿಶೇಷವಾದದ್ದು. ಇದು ನಾನು ಹೃದಯದಿಂದ ಮಾಡಿದ ಕೆಲಸ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾರೆಲ್ಲ ನನ್ನನ್ನು ಸಹಾಯಕ್ಕಾಗಿ ಸಂಪರ್ಕಿಸಲು ಪ್ರಯತ್ನಿಸಿದ್ದರೋ, ಅವರನ್ನು ಅವರ ಕುಟುಂಬದ ಜೊತೆ ಸೇರಿಸಲು ನಾನು ನನ್ನ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಇದನ್ನು ಇನ್ನೂ ಮುಂದುವರಿಸುತ್ತೇನೆ’ ಎಂದು ಸೋನು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಮುಂದುವರಿದು‌, ‘ಈ ಕಾರ್ಯದಲ್ಲಿ ನನಗೆ ಸಹಾಯ ಮಾಡಿದ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನನ್ನ ಕೆಲಸವನ್ನು ಪ್ರೋತ್ಸಾಹಿಸಿದ ದೇಶದ ಎಲ್ಲ ಜನರಿಗೂ ನಾನು ಋಣಿ. ಜೈಹಿಂದ್‌’ ಎಂದು ಬರೆದುಕೊಂಡಿದ್ದಾರೆ.

ಲಾಕ್‌ಡೌನ್‌ ವೇಳೆ ಮುಂಬೈನಲ್ಲಿ ಸಿಲುಕಿದ್ದ ದೇಶದ ಬೇರೆ ಬೇರೆ ಭಾಗಗಳ ವಲಸೆ ಕಾರ್ಮಿಕರಿಗೆ ಸ್ವಗ್ರಾಮಗಳಿಗೆ ಮರಳಲು ಸೂದ್‌ ಬಸ್‌ ವ್ಯವಸ್ಥೆ ಮಾಡಿದ್ದರು. ಅವರ ಈ ಕೆಲಸ ಲಕ್ಷಾಂತರ ಜನರ ಮನಗೆದ್ದಿತ್ತು. ಈಚೆಗೆ ಮುಂಬೈನಿಂದ, ಉತ್ತರಾಖಂಡದ ಡೆಹ್ರಾಡೂನ್‌ಗೆ 173 ವಲಸೆ ಕಾರ್ಮಿಕರನ್ನು ಕಳುಹಿಸಲು ಸೂದ್‌ ಏರ್‌ಏಷ್ಯಾ ವಿಮಾನ ವ್ಯವಸ್ಥೆ ಮಾಡಿದ್ದರು.

ಸೂದ್‌ ಅವರ ಈ ಕಾರ್ಯಕ್ಕೆ ಶಿವಸೇನಾ ಪಕ್ಷದ ನಾಯಕ ಸಂಜಯ್‌ ರಾವುತ್‌, ತಮ್ಮ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ‘ಸೋನು ಸೂದ್‌ ಹೆಸರಿನ ಮಹಾತ್ಮ ಏಕಾಏಕಿ ಅವತರಿಸಿದ್ದಾರೆ. ಇವರು ಮುಂಬೈನ ಸೆಲೆಬ್ರಿಟಿ ಮ್ಯಾನೇಜರ್‌ ಆಗುವ ಸಾಧ್ಯತೆಗಳಿವೆ’ ಎಂದು ಕುಹಕವಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.