ಚಿತ್ರ ಕೃಪೆ: ಎಕ್ಸ್ ಖಾತೆ– @yrf
ಮುಂಬೈ: ಅಯಾನ್ ಮುಖರ್ಜಿ ನಿರ್ದೇಶನದ ಬಾಲಿವುಡ್ ನಟ ಹೃತಿಕ್ ರೋಷನ್, ಜೂನಿಯರ್ ಎನ್‌ಟಿಆರ್ ಅಭಿನಯದ 'ವಾರ್ 2' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ.
ಆಗಸ್ಟ್ 14ರಂದು ಬಿಡುಗಡೆಯಾಗಿದ್ದ 'ವಾರ್ 2' ಸಿನಿಮಾವು ದೇಶಿಯ ಬಾಕ್ಸ್ ಆಫೀಸ್‌ನಲ್ಲಿ ₹200 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ವರದಿಯಾಗಿದೆ.
ಟ್ರೇಡ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, 'ವಾರ್ 2' ಮೊದಲ ದಿನವೇ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ₹52 ಕೋಟಿ ಗಳಿಸಿತ್ತು. ಮರುದಿನ ₹57.35 ಕೋಟಿ ಗಳಿಸಿತ್ತು, ಇದುವರೆಗೆ ಸುಮಾರು ₹208 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ.
ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ನಟ ಜೂನಿಯರ್ ಎನ್‌ಟಿಆರ್, ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
2019ರಲ್ಲಿ ಹೃತಿಕ್ ರೋಷನ್ ಅಭಿನಯದ ‘ವಾರ್’ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿತ್ತು. ಇದರ ಮುಂದುವರಿದ ಭಾಗವೇ ವಾರ್–2.
ಸಿದ್ಧಾರ್ಥ್ ಆನಂದ್ ನಿರ್ದೇಶನದ 'ವಾರ್' ಚಿತ್ರವು ವಿಶ್ವದಾದ್ಯಂತ ₹471 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. 2019ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಇದಾಗಿತ್ತು.
ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಆಗಿ ಗಮನ ಸೆಳೆದಿದ್ದಾರೆ. ಇಲ್ಲಿಯವರೆಗೂ ನಾಯಕನಾಗಿ ಕಾಣಿಸಿಕೊಂಡಿದ್ದ ಎನ್‌ಟಿಆರ್, ಮೊದಲ ಸಲ ಖಡಕ್ ಖಳ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾ ಏಜೆಂಟ್ ಪಾತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ ಅವರಿಗೆ ಜೋಡಿಯಾಗಿದ್ದಾರೆ.
ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.