
ನಟಿ ತೇಜಸ್ವಿನಿ–ವಿರಾಟ್
ಚಿತ್ರ: ಇನ್‌ಸ್ಟಾಗ್ರಾಂ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಿಕಾ’ ಧಾರಾವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತೇಜಸ್ವಿನಿ ಹಾಗೂ ನಾಯಕನಾಗಿ ನಟಿಸಿದ್ದ ವಿರಾಟ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆ.6ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ.
ನಟಿ ತೇಜಸ್ವಿನಿ–ವಿರಾಟ್
ನಟ ವಿರಾಟ್ ಮಾಂಗಲ್ಯ ಧಾರಣೆ ಮಾಡುತ್ತಿರುವ ಸುಂದರ ವಿಡಿಯೊವನ್ನು ನಟಿ ತೇಜಸ್ವಿನಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ನಾನು ದೇವರ ಮಗು ಎಂದು ನಂಬುತ್ತೇನೆ. ಏಕೆಂದರೆ ದೇವರು ನನಗೆ ಬೇಕಾದುದನ್ನು ಸರಿಯಾದ ಸಮಯದಲ್ಲಿ ಕೇಳದೆಯೇ ಕೊಟ್ಟಿದ್ದಾನೆ. ಅದಕ್ಕಾಗಿ ನಾನು ದೇವರಿಗೆ ಎಂದೆಂದಿಗೂ ಕೃತಜ್ಞಳಾಗಿದ್ದೇನೆ. ನನ್ನ ಜೀವನದ ಅತ್ಯಂತ ಸಂತೋಷದ ದಿನ 06/02/2026.. ನೀನೇ ನನ್ನ ಅತ್ಯುತ್ತಮ ನಿರ್ಧಾರ. ವಿರಾಟ್ ಈಗ ನನ್ನ ಗಂಡ’ ಎಂದು ಬರೆದುಕೊಂಡಿದ್ದಾರೆ.
ನಟಿ ತೇಜಸ್ವಿನಿ–ವಿರಾಟ್
ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ನಟ ವಿರಾಟ್ ಪ್ರೇಮ ನಿವೇದನೆ ಮಾಡುವುದು, ಕೈಗೆ ಉಂಗುರ ತೊಡಿಸುವ ಫೋಟೊಗಳನ್ನು ನಟಿ ತೇಜಸ್ವಿನಿ ಹಂಚಿಕೊಂಡಿದ್ದರು. ಜೊತೆಗೆ ‘ನಾವಿಬ್ಬರೂ ಸರಿಯಾದ ಸಮಯದಲ್ಲಿ ಭೇಟಿಯಾದೆವು. ನಾವು ಜೀವನ ಪರ್ಯಂತ ಒಟ್ಟಿಗೆ ಇರಲು ನಿರ್ಧರಿಸಿದ್ದೇವೆ. ಈಗ ಅಧಿಕೃತವಾಗಿ ಘೋಷಿಸುತ್ತಿದ್ದೇನೆ’ ಎಂದು ಅಡಿಬರಹ ಹಾಕಿದ್ದರು. ಈ ಮೂಲಕ ನಟ ವಿರಾಟ್ ಹಾಗೂ ತೇಜಸ್ವಿನಿ ತಮ್ಮ ಪ್ರೇಮ ಸಂಬಂಧದ ಬಗ್ಗೆ ಅಧಿಕೃತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ನಟಿ ತೇಜಸ್ವಿನಿ–ವಿರಾಟ್
ನಟಿ ತೇಜಸ್ವಿನಿ ಮೈಸೂರಿನವರು. ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹು ಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ನಟ ವಿರಾಟ್ ಅವರು ದಾವಣಗೆರೆ ಮೂಲದವರು. ಇವರ ತಾಯಿ ನಾಗವೇಣಿ ಅವರು ರಂಗಭೂಮಿ ಕಲಾವಿದೆ. ಬಣ್ಣದ ನಂಟು ಚಿಕ್ಕವಯಸ್ಸಿನಿಂದ ವಿರಾಟ್ಗೆ ಒಲಿದು ಬಂದಿದೆ. ‘ಸಂಘರ್ಷ’, ‘ರಾಧಿಕಾ’, ‘ನನ್ನ ದೇವ್ರು’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ತೇಜಸ್ವಿನಿ ಹಾಗೂ ವಿರಾಟ್ ‘ಸಂಘರ್ಷ’ ಧಾರಾವಾಹಿ ಮೂಲಕ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಮತ್ತೊಮ್ಮೆ ‘ರಾಧಿಕಾ’ ಧಾರಾವಾಹಿಯಲ್ಲಿ ಜೋಡಿಯಾಗಿ ಮಿಂಚಿದ್ದರು. ಈ ಇಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ಸದ್ಯ ತೇಜಸ್ವಿನಿ ಹಾಗೂ ವಿರಾಟ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.