ADVERTISEMENT

‘ಬಿಗ್ ಬಾಸ್’ ಗೆದ್ದ ಹನುಮಂತ; ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ ಎಂದ ನೆಟ್ಟಿಗರು

​ಪ್ರಜಾವಾಣಿ ವಾರ್ತೆ
Published 27 ಜನವರಿ 2025, 5:51 IST
Last Updated 27 ಜನವರಿ 2025, 5:51 IST
<div class="paragraphs"><p>ಹನುಮಂತ ಲಮಾಣಿ</p></div>

ಹನುಮಂತ ಲಮಾಣಿ

   

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್-11ರ ಗ್ರ್ಯಾಂಡ್‌ ಫಿನಾಲೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಿಲ್ಲೂರು ಬಡ್ನಿ ಗ್ರಾಮದ ನಿವಾಸಿ ಹನುಮಂತ ಲಮಾಣಿ ಗೆದ್ದು ಬೀಗಿದ್ದಾರೆ. ಇದರೊಂದಿಗೆ ಬಿಗ್‌ ಬಾಸ್‌ ಟ್ರೋಫಿ ಯಾರ ಮುಡಿಗೇರಲಿದೆ ಎಂಬ ಕುತೂಲಹಕ್ಕೆ ಭಾನುವಾರ ರಾತ್ರಿ ತೆರೆ ಬಿದ್ದಿದೆ.

ತ್ರಿವಿಕ್ರಮ್ ಅವರು ಮೊದಲ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದರೆ, ರಜತ್ ಕಿಶನ್ ಎರಡನೇ ರನ್ನರ್‌ ಅಪ್‌ ಆಗಿದ್ದಾರೆ. ಉಳಿದಂತೆ ಮೋಕ್ಷಿತಾ ಪೈ, ಉಗ್ರಂ ಮಂಜು ಮತ್ತು ಭವ್ಯ ಗೌಡ ಅವರು ಕ್ರಮೇಣ‌‌ ಮೂರು, ನಾಲ್ಕು, ಐದನೇ ರನ್ನರ್‌ ಅಪ್‌ ಆಗಿದ್ದಾರೆ.

ADVERTISEMENT

ತ್ರಿವಿಕ್ರಮ್ ಮತ್ತು ಹನುಮಂತನ ನಡುವೆ ಪೈಪೋಟಿ ಜೋರಾಗಿತ್ತು. ಅಂತಿಮ ಸುತ್ತಿನಲ್ಲಿ ನಿರೂಪಕರಾದ ನಟ ಸುದೀಪ್ ಅವರು ಹನುಮಂತ ಅವರ ಕೈ ಎತ್ತಿ ಹಿಡಿಯುವ ಮೂಲಕ ಗೆಲುವು ಘೋಷಿಸಿದ್ದಾರೆ.

ಆನ್‌ಲೈನ್ ಮತದಾನದ ಮೂಲಕ ವೀಕ್ಷಕರಿಂದ 5.23 ಕೋಟಿ ಮತಗಳನ್ನು ಪಡೆದಿದ್ದ ಹನುಮಂತ, ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ಅತ್ಯಧಿಕ ಮತ ಪಡೆದ ಸ್ಪರ್ಧಿ ಎಂಬ ದಾಖಲೆ ಬರೆದಿದ್ದಾರೆ.

ಈ ಬಾರಿ ಬಿಗ್‌ ಬಾಸ್‌ ಸೀಸನ್ 11ರ ಗೆಲುವು ಹನುಮಂತ ಅವರದ್ದೇ ಆಗುತ್ತದೆ ಎಂದು ಸಾಕಷ್ಟು ಜನ ಭಾವಿಸಿದ್ದರು. ಅದರಂತೆಯೇ ಹನುಮಂತ ಅವರ ಗೆಲುವು ಘೋಷಣೆಯಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಬಹುತೇಕರು ‘ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ’, ‘ಗೆದ್ದೇ ಗೆಲ್ಲುವೆ ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ’, ಕರುನಾಡ ಜನತೆಯ ಆಯ್ಕೆಯಿಂದ ಬಿಗ್‌ ಬಾಸ್‌ನ ಕಿರೀಟ ಮುಡಿಗೇರಿಸಿಕೊಂಡ ಉತ್ತರ ಕರ್ನಾಟಕದ ಹುಲಿ ‘ಹನುಮಂತ’, ‘ನಿಮ್ಮ ವ್ಯಕ್ತಿತ್ವಕ್ಕೆ ಸಲ್ಲಲೇಬೇಕಾದ ಗೆಲುವು... ಹಾವೇರಿ ಹಮ್ಮೀರ ನಮ್ಮ ಹನುಮಂತ’ ಎಂಬಿತ್ಯಾದಿ ಪೋಸ್ಟ್‌ಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

‘ಒಬ್ಬ ದಲಿತ ಹುಡುಗ ಬಿಗ್‌ ಬಾಸ್‌ ಸೀಸನ್‌–11ರ ವಿನ್ನರ್ ಆಗಿದ್ದಕ್ಕೆ ತುಂಬಾ ಖುಷಿಯಾಯ್ತು’ ಎಂದು ಸನಾ ಉಲ್ಲಾ ಎಂಬುವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.