ಪಾನ್‌ನ ವನ್ಯಜೀವಿ ಛಾಯಾಗ್ರಾಹಕ ಕೊಯೀ ನಗಿರಾ ಅವರು ಕ್ಲಿಕ್ಕಿಸಿರುವ ಚಿತ್ರ – ಕೃಪೆ: Kohei Nagira / Natural History Museum: Home - London
ಲಂಡನ್ ಮೂಲದ ‘ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ’ ಆಯೋಜಿಸಿರುವ ‘ವರ್ಷದ ವನ್ಯಜೀವಿ ಛಾಯಾಗ್ರಾಹಕ ನುವೀನ್ ಪೀಪಲ್ಸ್ ಚಾಯ್ಸ್ ಪ್ರಶಸ್ತಿ’ಗೆ ಅಂತಿಮ ಸುತ್ತಿನಲ್ಲಿರುವ 24 ಚಿತ್ರಗಳ ಪೈಕಿ ಆ ಒಂದು ಚಿತ್ರ ಪರಿಸರಾಸಕ್ತರ ನಿದ್ದೆಗೆಡಿಸಿದೆ. ಉಳಿವಿಗಾಗಿನ ಹೋರಾಟದ ಸಂದೇಶದ ಹಿಂದಿರುವ ಭಯಾನಕತೆಯನ್ನು ತೆರೆದಿಡುವ ಮೂಲಕ ಪ್ರಕೃತಿಯ ಒಡಲಲ್ಲಿ ಹುದುಗಿರುವ ವೈಚಿತ್ರ್ಯಗಳು, ಕೌತುಕಗಳ ಬಗ್ಗೆ ಬೆರಗು ಮೂಡುವಂತೆ ಮಾಡಿದೆ.
ಅಂತಹದ್ದೇನಿದೆ ಆ ಚಿತ್ರದಲ್ಲಿ...
ಸಾಮಾನ್ಯವಾಗಿ ವನದಂಗಳಲ್ಲಿ ನಡೆಯುವ ಕಾದಾಟಗಳಲ್ಲಿ ಪರಾಭವಗೊಳ್ಳುವ ‘ಜೀವ’ ಹೆಚ್ಚಿನ ಸಂದರ್ಭಗಳಲ್ಲಿ ಪಲಾಯನ ಮಾಡಿ ಪಾರಾಗುತ್ತದೆ. ಒಂದು ವೇಳೆ ಸತ್ತರೆ, ಮತ್ತೊಂದು ಜೀವಿಗೆ ಆಹಾರವಾಗುತ್ತದೆ. ಇಲ್ಲವೇ ಅಲ್ಲೇ ಮಣ್ಣಾಗುತ್ತದೆ. ಆದರೆ, ಜಪಾನ್‌ನ ವನ್ಯಜೀವಿ ಛಾಯಾಗ್ರಾಹಕ ಕೊಯೀ ನಗಿರಾ ಅವರು ಕ್ಲಿಕ್ಕಿಸಿರುವ ಚಿತ್ರ, ಬೇರೆಯದ್ದೇ ಕಥೆ ಹೇಳುತ್ತದೆ.
ಹೆಣ್ಣು ಜಿಂಕೆಯನ್ನು ಒಲಿಸಿಕೊಳ್ಳುವುದಕ್ಕಾಗಿಯೋ, ಬಲ ಪ್ರದರ್ಶನಕ್ಕಾಗಿಯೋ ಎರಡು ಸಿಕಾ ಜಿಂಕೆಗಳು ಕಾದಾಟಕ್ಕೆ ಇಳಿದಿವೆ. ಆ ವೇಳೆ, ಎರಡರ ಕೋಡುಗಳು ಒಂದಕ್ಕೊಂದು ಬೆಸೆದುಕೊಂಡಿವೆ. ನಿತ್ರಾಣಗೊಂಡ ಒಂದು ಜಿಂಕೆ ಬಿಡಿಸಿಕೊಂಡು ಓಡಲಾಗದೆ, ಸಿಲುಕಿಕೊಂಡಿದೆ. ಸ್ವಲ್ಪ ಹೊತ್ತಿಗೆ ಅದರ ಪ್ರಾಣವೂ ಹೋಗಿದೆ. ಆದರೂ, ಕೋಡುಗಳು ಬೇರ್ಪಟ್ಟಿಲ್ಲ. ಹೀಗಾಗಿ, ಮತ್ತೊಂದು ಜಿಂಕೆ ಹೋರಾಟದಲ್ಲಿ ಗೆದ್ದರೂ ಗರ್ವದಿಂದ ತಲೆ ಎತ್ತಲಾಗದ ಪರಿಸ್ಥಿತಿಯಲ್ಲಿ ಪರಿತಪಿಸಿದೆ. ಸಾಕಷ್ಟು ದಿನಗಳವರೆಗೆ ಹೀಗೆಯೇ ಮುಂದುವರಿದಿದೆ. ಗೆದ್ದದ್ದು ಹೋಗಬೇಕಾದಲ್ಲಿಗೆಲ್ಲ ಹೆಣ ಎಳೆದುಕೊಂಡೇ ಅಲೆದಿದೆ. ಕುಸ್ತಿ ಮಾಡಿದ ತಪ್ಪಿಗೆ ಆ ಸ್ಥಿತಿಯಲ್ಲೇ ಹೊಟ್ಟೆ ಪಾಡನ್ನೂ ನೋಡಿಕೊಂಡಿದೆ.
ಕೊನೆಗೊಂದು ದಿನ ಶವ ಕೊಳೆತು, ದೇಹ ಹರಿದು ರುಂಡ, ಮುಂಡ ಬೇರ್ಪಟ್ಟಿವೆ. ಆದರೆ, ಆಗಲೂ ಕೋಡುಗಳು ಬಿಡಿಸಿಕೊಳ್ಳದ ಕಾರಣ ಸೋತಿದ್ದರ ರುಂಡ ಗೆದ್ದದ್ದರ ಬುರುಡೆಯ ಮೇಲೆ ಕ್ರೌರ್ಯದ ಪ್ರತಿರೂಪವಾಗಿ ಕಿರೀಟದಂತೆ ಕೂತಿದೆ. ವೈರಿಯೇ ಆದರೂ, ಅದನ್ನು ಬಿಟ್ಟು ಬದುಕಲಾರದೆ ತಲೆಯ ಮೇಲೆ ಹೊತ್ತು ಮೆರೆಸುವಂತೆ ತಿರುಗುತ್ತಿದೆ ಬದುಕಿರುವುದು.
ಹೀಗಾಗಿ, ಬ್ರಹ್ಮನ ಅಹಂಕಾರ ಇಳಿಸಲು ಹೋಗಿ, ಈಶ್ವರನೇ ಸಂಕಷ್ಟಕ್ಕೆ ಸಿಲುಕಿದ ‘ಬ್ರಹ್ಮ ಕಪಾಲ’ ಕಥೆಯಂತಾಗಿದೆ ಬದುಕಿರುವ ಜಿಂಕೆಯದರು.
ಅಂತಹದೊಂದು ಸಂದರ್ಭದಲ್ಲಿ ಫೋಟೊ ಕ್ಲಿಕ್ಕಿಸಿದ್ದಾರೆ ನಗಿರಾ.
ಆ ಚಿತ್ರ, ‘ಬಲವಿದ್ದರಷ್ಟೇ ಬದುಕು’ ಎಂಬ ಸಂದೇಶ ಸಾರುತ್ತಿದೆಯಾದರೂ, ಗೆದ್ದಿದ್ದ ಜಿಂಕೆಯ ಕಣ್ಣುಗಳಲ್ಲಿನ ನಿರ್ಭಾವುಕತೆಯು ವೈರಾಗ್ಯ ಹುಟ್ಟಿಸುವಂತಿದೆ. ‘ಕೋಪದಲ್ಲಿ ಮಾಡಿಕೊಳ್ಳುವ ಎಡವಟ್ಟುಗಳು ಬದುಕಿನುದ್ದಕ್ಕೂ ಕಾಡಬಲ್ಲವು. ಪಶ್ಚಾತಾಪದ ನೋವು ಮನಸ್ಸನ್ನು ಕೊನೆವರೆಗೂ ಘಾಸಿಗೊಳಿಸಬಹುದು. ಉಳಿವಿಗಾಗಿನ ಹೋರಾಟ ನಿರಂತರ’ ಎಂಬಿತ್ಯಾದಿ ಎಚ್ಚರಿಕೆಗಳನ್ನೂ ನೀಡುತ್ತಿದೆ.
ಚಿತ್ರಕೃಪೆ: Kohei Nagira / Natural History Museum: Home - London
60,000 ಚಿತ್ರಗಳಲ್ಲಿ ಆಯ್ಕೆಯಾದವು ನೂರಷ್ಟೇ
ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ನುವೀನ್ ಪೀಪಲ್ಸ್ ಚಾಯ್ಸ್ ಪ್ರಶಸ್ತಿಗೆ ಒಟ್ಟು 60,000 ಚಿತ್ರಗಳು ನೋಂದಣಿಯಾಗಿದ್ದವು. ಅವುಗಳಲ್ಲಿ 100 ಅತ್ಯುತ್ತಮ ಚಿತ್ರಗಳನ್ನಷ್ಟೇ ತೀರ್ಪುಗಾರರು ಪ್ರದರ್ಶನಕ್ಕೆ ಪರಿಗಣಿಸಿದ್ದರು. ಇದೀಗ, ಆ ಲಿಸ್ಟ್‌ನಲ್ಲಿಯೂ ಶ್ರೇಷ್ಠವೆನಿಸಿದ 24 ಮಾತ್ರ ಅಂತಿಮ ಸುತ್ತು ತಲುಪಿವೆ.
ಇದೀಗ, ಕಣದಲ್ಲಿರುವ ಯಾವ ಚಿತ್ರದ ಒಡೆಯನಿಗೆ ಪ್ರಶಸ್ತಿ ಸಿಗಬೇಕು ಎಂಬುದನ್ನು ನೀವೂ ನಿರ್ಧರಿಸಬಹುದು. ಅದಕ್ಕಾಗಿ ಆನ್‌ಲೈನ್ ಮೂಲಕ ವೋಟ್ ಮಾಡಬೇಕು. 2026ರ ಮಾರ್ಚ್ 26ರ ವರೆಗೆ ಮ್ಯೂಸಿಯಂ ವೆಬ್‌ಸೈಟ್‌ನಲ್ಲಿ ವೋಟಿಂಗ್‌ಗೆ ಅವಕಾಶವಿದೆ.
ಅಂತಿಮ ಸುತ್ತಿನಲ್ಲಿರುವ ಇತರ ಚಿತ್ರಗಳು
ಚಿತ್ರಕೃಪೆ: Chris Gug / Natural History Museum: Home - London
ಚಿತ್ರಕೃಪೆ: Josef Stefan / Natural History Museum: Home - London
ಚಿತ್ರಕೃಪೆ: Lalith Ekanayake / Natural History Museum: Home - London
ಚಿತ್ರಕೃಪೆ: Lance van de Vyver / Natural History Museum: Home - London
ಕೊನೇ ನೋಟ
ಸ್ವಾಲ್ಬರ್ಡ್ ದ್ವೀಪಸಮೂಹದ ಕರಾವಳಿಯಲ್ಲಿ ನಿಮಾ ಸಾರಿಖಾನಿ ತೆಗೆದ ಚಿತ್ರವಿದು. ಬೇಟೆಯಾಡಲು ವಿಫಲವಾಗಿ ಹಿಂದಿರುಗುತ್ತಿದ್ದ ಹಿಮಕರಡಿಯೊಂದಿಗೆ ಹಿಂತಿರುಗುತ್ತಿದ್ದ ಅದರ ಮರಿ ಕ್ಯಾಮೆರಾದತ್ತ ನೋಡಿದ್ದು ಹೀಗೆ.
ಸ್ವಲ್ಪ ಹೊತ್ತಿಗೆ ಅದರ ತಾಯಿ ತೀರದಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿತ್ತು. ಅದರ ಪಕ್ಕದಲ್ಲೇ ಇದ್ದ ಈ ಮರಿ, ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದುದ್ದರಿಂದ ಪೊಲೀಸರು ಗುಂಡಿಕ್ಕಿದರು ಎಂದು ವರದಿಯಾಗಿದೆ. ಹಾಗಾಗಿ, ಇದು ಆ ಮರಿಯ ಕೊನೇ ಚಿತ್ರ.
ಚಿತ್ರಕೃಪೆ: Nima Sarikhani / Natural History Museum: Home - London
ಚಿತ್ರಕೃಪೆ: Dvir Barkay / Natural History Museum: Home - London
ಕಗ್ಗತ್ತಲ ರಾತ್ರಿ
ಅಗಲವಾದ ಕಪ್ಪು ಪಟ್ಟೆಗಳನ್ನುಳ್ಳ T12 ಹೆಸರಿನ ಅಪರೂಪದ ಹುಲಿ ಭಾರತದ ಒಡಿಶಾದ ಸಿಮಿಲಿಪಾಲ್ ಅಭಯಾರಣ್ಯದಲ್ಲಿ ಕಾಳ ರಾತ್ರಿಯ ವೇಳೆ ಓಡಾಡುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಇದನ್ನು ಹೆಕ್ಕಿದವರು ಪ್ರಸೇನ್‌ಜೀತ್ ಯಾದವ್.
ಅಪರೂಪದ ಆನುವಂಶಿಕ ಸ್ಥಿತಿಯಿಂದಾಗಿ, ಮುಖ್ಯವಾಗಿ ಬೆಂಗಾಲ್ ಟೈಗರ್‌ಗಳಲ್ಲಿ ಅಗಲವಾದ ಕಪ್ಪು ಪಟ್ಟಿಗಳು ಕಂಡು ಬರುತ್ತವೆ. ಇದೇ ಕಾರಣಕ್ಕೆ ಕೆಲವೊಮ್ಮೆ ಹುಲಿಗಳು ಸಂಪೂರ್ಣ ಕಪ್ಪು ಬಣ್ಣದಲ್ಲಿಯೂ ಕಾಣುವ ಸಾಧ್ಯತೆ ಇರುತ್ತದೆ.
ಈ ಭಾಗದಲ್ಲಿ ಕೆಲವೇ ವರ್ಷಗಳ ಹಿಂದೆ ಇದೇ ರೀತಿಯ ಗರಿಷ್ಠ ಏಳು ಹುಲಿಗಳು ಉಳಿದಿದ್ದವು. ಅದಲ್ಲಿ T12 ಮಾತ್ರವೇ ಗಂಡು ಹುಲಿ. ಸದ್ಯ, ಹಲವು ಮರಿಗಳಿಗೆ ಇದು ತಂದೆಯಾಗಿರುವ ಸಾಧ್ಯತೆ ಇದೆ.
T12 ಅನ್ನು ಕ್ಯಾಮೆರಾ ಕಣ್ಣಲ್ಲಿ ಹಿಡಿದಿಡುವ ಸಲುವಾಗಿ ಯಾದವ್ ಅವರು ಸಾಕಷ್ಟು ದಿನಗಳವರೆಗೆ ಅಭಯಾರಣ್ಯದಲ್ಲಿ ಅಲೆದಾಡಿದ್ದರು. ಸಿಮಿಲಿಪಾಲ್‌ನ ಕಗ್ಗತ್ತಲಿನಲ್ಲಿ ಸೆರೆಯಾಗಿರುವ ಈ ಹುಲಿಯನ್ನು ಬದುಕಿನ ಭರವಸೆಯ ಸಂಕೇತವೆಂಬಂತೆ ವ್ಯಾಖ್ಯಾನಿಸಲಾಗಿದೆ.
ಚಿತ್ರಕೃಪೆ: Prasenjeet Yadav / Natural History Museum: Home - London
ಚಿತ್ರಕೃಪೆ: Adam Oswell / Natural History Museum: Home - London
ಚಿತ್ರಕೃಪೆ: Cecile Gabillon / Natural History Museum: Home - London
ಅಗ್ಗಿಷ್ಟಿಕೆಯಲ್ಲಿ ಬೆಚ್ಚಗೆ
ಮಳೆಯಿಂದ ಆಶ್ರಯ ಪಡೆಯಲು ಅಗ್ಗಿಷ್ಟಿಕೆಯೊಳಗೆ ಹೊಕ್ಕಿದ್ದ ಕರಡಿಯ ಮೂತಿಯ ಮೇಲೊಂದು ಚಿಟ್ಟೆ ಕುಳಿತಿರುವ ಚಿತ್ರವನ್ನು, ಥೈಲ್ಯಾಂಡ್‌ನ ಕೇಂಗ್ ಕ್ರಾಚನ್ ರಾಷ್ಟ್ರೀಯ ಉದ್ಯಾನವನದಲ್ಲಿ ಮೊಗೆನ್ಸ್ ಟ್ರೋಲ್ ಸರೆ ಹಿಡಿದಿದ್ದಾರೆ.
ಅಗ್ಗಿಷ್ಟಿಕೆಯ ಮೇಲೆ ‘ವಿಕಸನ’ವೆಂದು ಬರೆದಿರುವುದನ್ನು ಮೊಗೆನ್ಸ್ ವಿಭಿನ್ನವಾಗಿ ಅರ್ಥೈಸಿದ್ದಾರೆ. ಇದು ನಿಜಕ್ಕೂ ‘ವಿಕಸನ’ವೇ. ಮನುಷ್ಯರು ವನ್ಯಜೀವಿಗಳ ಆವಾಸಸ್ಥಾನಗಳನ್ನು ಅತಿಕ್ರಮಿಸುತ್ತಿರುವುದಕ್ಕೆ ಕರಡಿ ನೀಡಿರುವ ಅವಕಾಶವಾದಿ ಪ್ರತಿಕ್ರಿಯೆ ಇದಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ಚಿತ್ರಕೃಪೆ: Mogens Trolle / Natural History Museum: Home - London
ಚಿತ್ರಕೃಪೆ: Daniela Anger / Natural History Museum: Home - London
ಚಿತ್ರಕೃಪೆ: Dustin Chen / Natural History Museum: Home - London
ಕರಡಿ ಕುಣಿತ
ಬೆಳಕಿನೆದುರು ನೆರಳಿನಂತೆ ಕಾಣುವ ಎರಡು ಕರಡಿ ಮರಿಗಳು ಆಡುತ್ತಿರುವುದು, ಕುಣಿಯುತ್ತಿರುವಂತೆ ಕಾಣುತ್ತಿದೆ. ಕೆನಡಾದ ಜಾಸ್ಪರ್ ರಾಷ್ಟ್ರೀಯ ಉದ್ಯಾನವನದಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾದರೂ, ಮರಿಗಳಷ್ಟೇ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಏಕೆಂದರೆ, ಕರಡಿಗಳು ತಮ್ಮ ಮರಿಗಳನ್ನು ಅಷ್ಟು ಜತನದಿಂದ ಕಾಯುತ್ತವೆ.
ಕತ್ತಲು ಆವರಿಸಿರುವ ರಸ್ತೆಯಲ್ಲಿ ಹೆಡ್‌ಲೈಟ್ ಉರಿಸುತ್ತಾ ಬರುತ್ತಿದ್ದ ಕಾರಿನೆದುರು ಆಡುತ್ತಿರುವ ಮರಿಗಳ ಈ ಚಿತ್ರವನ್ನು ಜಗತ್ತಿನೆದುರು ತಂದವರು ವಿಲ್ ನಿಕೋಲ್ಸ್.
ಚಿತ್ರಕೃಪೆ: Will Nicholls / Natural History Museum: Home - London
ಚಿತ್ರಕೃಪೆ: Peter Lindel / Natural History Museum: Home - London
ಬದುಕೆಷ್ಟು ಕ್ಷಣಿಕ
Cuckoo ಹಕ್ಕಿಯು ಸಿಕಾಡಾ ಕೀಟವನ್ನು ಹಿಡಿದು ತಿನ್ನುತ್ತಿರುವ ಚಿತ್ರವನ್ನು ಲಿಯರ್ ಬರ್ಮನ್ ಕ್ಲಿಕ್ಕಿಸಿದ್ದಾರೆ. ತೀಕ್ಷ್ಣ ದೃಷ್ಟಿಯುಳ್ಳ ಇವು, ಮೌನವಾಗಿದ್ದುಕೊಂಡು ಹೊಂಚುಹಾಕಿ ಕ್ಷಣಾರ್ಧದಲ್ಲೇ ದಾಳಿ ಮಾಡುತ್ತವೆ.
ಕೀಟವನ್ನು ಹಿಡಿದಿರುವ ಹಕ್ಕಿಯು ಗರಿಗಳು, ಬಿಸಿಲಿನಿಂದ ಹೊಳೆಯುತ್ತಿರುವುದು ಆಕರ್ಷಕವಾಗಿ ಕಾಣುತ್ತದೆ. ಆದರೆ, ಕೀಟವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಬದುಕೆಷ್ಟು ಕ್ಷಣಿಕ ಎನಿಸುತ್ತದೆ.
ಚಿತ್ರಕೃಪೆ: Lior Berman / Natural History Museum: Home - London
ಚಿತ್ರಕೃಪೆ: Joseph Ferraro / Natural History Museum: Home - London
ಚಿತ್ರಕೃಪೆ: Charles Davis / Natural History Museum: Home - London
ಮಿಲನಕ್ಕೂ ಮುನ್ನ...
ದಷ್ಟಪುಷ್ಟವಾಗಿ ಬೆಳೆದ ಹೆಣ್ಣು ತೊಗಟೆ ಜೇಡದ ಹೊಟ್ಟೆಯ ಮೇಲೆ ಕುಳಿತ ಪುಟ್ಟ ಗಂಡು ಜೇಡವು, ಮಿಲನಕ್ಕೆ ಸಜ್ಜಾಗುತ್ತಿದ್ದ ಹೊತ್ತಲ್ಲಿ, ಆರ್ಥರ್ ಥಾಮಸ್‌ಜೆಕ್ ಫೋಟೊ ತೆಗೆದಿದ್ದಾರೆ. ಥೈಲ್ಯಾಂಡ್‌ನ ಫುಕೆಟ್‌ನ ಖಾವೊ ಫ್ರಾ ಥೇಯೊ ಪ್ರದೇಶದಲ್ಲಿ ಈ ಅಗಲ ತಲೆಯ ಜೇಡಗಳು ಕಂಡು ಬಂದಿವೆ.
ಈ ಜೇಡಗಳು ಮರದ ತೊಗಟೆಯ ಮೇಲೆ ಕುಳಿತರೆ ಕಂಡು ಹಿಡಿಯಲು ತೀಕ್ಷ್ಣ ದೃಷ್ಟಿ ಬೇಕಾದೀತು. ಈ ಪ್ರಭೇದದ ಜೇಡಗಳಲ್ಲಿ ಗಂಡಿಗಿಂತ ಹೆಣ್ಣು ಏನಿಲ್ಲವೆಂದರೂ ಮೂರ್ನಾಲ್ಕು ಪಟ್ಟು ದೊಡ್ಡದಾಗಿರುತ್ತದೆ.
ಚಿತ್ರಕೃಪೆ: Artur Tomaszek / Natural History Museum: Home - London
ಚಿತ್ರಕೃಪೆ: Ponlawat Thaipinnarong / Natural History Museum: Home - London
ಚಿತ್ರಕೃಪೆ: Francesco Russo / Natural History Museum: Home - London
ಕೊಳದ ಕಮಲದಂತಹ ಪ್ಲೆಮಿಂಗೊ ಹಿಂಡು
ಕೈಗಾರಿಕೆಗೆ ವಿದ್ಯುತ್ ಪೂರೈಸುವ ಎರಡು ಲೈನ್‌ಗಳಿಗೆ ಅಡ್ಡಲಾಗಿ ಕೆಳಗೆ ಹರಿಯುತ್ತಿರುವ ಸಣ್ಣ ಕೊಳದಲ್ಲಿ ಪ್ಲೆಮಿಂಗೊ ಹಕ್ಕಿಗಳ ಗುಂಪು ಹೊಟ್ಟೆ ಹೊರೆಯುವ ಕಾಯಕದಲ್ಲಿ ತೊಡಗಿವೆ. ಅದೇ ಹೊತ್ತಲ್ಲಿ ಮತ್ತೆರಡು ಹಕ್ಕಿಗಳು, ವಿದ್ಯುತ್ ಪೈನ್‌ಗೂ ಎತ್ತರದಲ್ಲಿ ಹಾರುತ್ತಿರುವ ಚಿತ್ರವನ್ನು ಅಲೆಕ್ಸಾಂಡ್ರೆ ಬ್ರಿಸ್ಸನ್ ಸೆರೆಹಿಡಿದಿದ್ದಾರೆ.
ಕೊಳದಲ್ಲಿ ಅರಳಿದ ಕಮಲದ ರಾಶಿಯಂತೆ ಕಾಣುವ ಈ ದೃಶ್ಯ ಸೆರೆಯಾದದ್ದು ನಮೀಬಿಯಾದ ವಾಲ್ವಿಸ್ ಬೇ ಪಕ್ಷಿಧಾಮದಲ್ಲಿ.
ಚಿತ್ರಕೃಪೆ: Alexandre Brisson / Natural History Museum: Home - London
ಚಿತ್ರಕೃಪೆ: Christopher Paetkau / Natural History Museum: Home - London
ಮುತ್ತಿನ ಗೊಂಚಲು
ಉದ್ದ ಕಾಲಿನ ಜೇಡಗಳು ಎನ್ನಲಾಗುವ ಸೆಲ್ಲಾರ್ ಸ್ಪೈಡರ್, ಮೊಟ್ಟೆಗಳ ಗೊಂಚಲನ್ನು ಬಾಯಲ್ಲಿ ಹಿಡಿದಿಟ್ಟುಕೊಂಡಿರುವ ಚಿತ್ರವನ್ನು ಥಾಮಸ್ ಹಂಟ್ ಅವರು, ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ತಮ್ಮ ನಿವಾಸದಲ್ಲೇ ಕ್ಲಿಕ್ಕಿಸಿದ್ದಾರೆ.
ಮೊಟ್ಟೆಗಳು ಮುತ್ತಿನ ಗೊಂಚಲಿನಂತೆ ಕಾಣುತ್ತಿವೆ. ತಾಯಿ ಜೇಡವು ಮೊಟ್ಟೆಗಳನ್ನು ಮೂರರಿಂದ ನಾಲ್ಕು ವಾರ, ಕಾಪಿಟ್ಟ ಬಳಿಕ ಮರಿಗಳು ಹೊರಬರುತ್ತವೆ.
ಚಿತ್ರಕೃಪೆ: Thomas Hunt / Natural History Museum: Home - London
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.