ADVERTISEMENT

ಆಳ–ಅಗಲ | ರಾಜಕೀಯ ಕಿಚ್ಚು ಹಚ್ಚಿದ ಹೇಮಾವತಿ ನೀರು

ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನಾಲೆಗೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್

ಕೆ.ಜೆ.ಮರಿಯಪ್ಪ
Published 6 ಜೂನ್ 2025, 23:30 IST
Last Updated 6 ಜೂನ್ 2025, 23:30 IST
ಗುಬ್ಬಿ ತಾಲ್ಲೂಕಿನ ಸುಂಕಾಪುರ ಗ್ರಾಮದ ಬಳಿ ಕಾಮಗಾರಿ
ಗುಬ್ಬಿ ತಾಲ್ಲೂಕಿನ ಸುಂಕಾಪುರ ಗ್ರಾಮದ ಬಳಿ ಕಾಮಗಾರಿ   
ಹೇಮಾವತಿ ನದಿ ನೀರು ಹಂಚಿಕೆ ವಿವಾದ ತುಮಕೂರು ಮತ್ತು ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಗಳಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ‘ಹಂಚಿಕೆ’ ರಾಜಕೀಯ ಸ್ವರೂಪ ಪಡೆದುಕೊಂಡ ನಂತರ ಹಲವು ಮಗ್ಗಲು ದಾಟಿ ಸಾಗುತ್ತಿದೆ. ನೀರು ಹರಿಸುವ ವಿಚಾರದಲ್ಲಿ ರಾಜಕಾರಣ ನುಸುಳುತ್ತಿದ್ದಂತೆಯೇ ಪ್ರತಿಷ್ಠೆ, ದ್ವೇಷದ ಕಿಚ್ಚು ಹೆಚ್ಚಾಗಿದೆ. ‘ನೀ ಕೊಡೆ, ನಾ ಬಿಡೆ’ ಎಂಬ ಪರಿಸ್ಥಿತಿ ತುಮಕೂರು ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ  ನಿರ್ಮಾಣವಾಗಿದೆ. ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾದ ವಿಚಾರ ಬೆಟ್ಟದಂತೆ ಎದ್ದು ನಿಂತಿದೆ.‌ ಸಣ್ಣ ಕಿಡಿಯು ಜ್ವಾಲೆಯ ರೂಪ ಪಡೆದುಕೊಂಡಿದ್ದು, ಅಣ್ಣ–ತಮ್ಮಂದಿರಂತೆ ಇದ್ದ ತುಮಕೂರಿನ ಅಕ್ಕಪಕ್ಕದ ತಾಲ್ಲೂಕುಗಳು ಮತ್ತು ಎರಡೂ ಜಿಲ್ಲೆಗಳ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಸಂಕಾಪುರ ಗ್ರಾಮದಿಂದ ಕುಣಿಗಲ್ ತಾಲ್ಲೂಕಿನ (34.5 ಕಿ.ಮೀ) ಹೇಮಾವತಿ ನಾಲೆಗೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (ಕೊಳವೆ ಮಾರ್ಗದಲ್ಲಿ ನೀರು ಹರಿಸುವ ಯೋಜನೆ) ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಇದು ವಿವಾದದ ಸ್ವರೂಪ ಪಡೆದಿದೆ. ಈವರೆಗೆ ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನಾಲೆ ಮೂಲಕ ನೀರು ಬಿಡುತ್ತಿದ್ದು, ಹಂಚಿಕೆಯಾದಷ್ಟು ಹರಿದು ಬರುತ್ತಿಲ್ಲ. ನೀರು ಕೊನೆಯ ಭಾಗಕ್ಕೆ ತಲುಪುತ್ತಲೇ ಇಲ್ಲ. ‘ನಮ್ಮ ಪಾಲನ್ನು ಜಿಲ್ಲೆಯ ಇತರ ಭಾಗದವರು ಕಬಳಿಸುತ್ತಿದ್ದಾರೆ. ಇದನ್ನು ತಪ್ಪಿಸಿ ನಮ್ಮದನ್ನು ನಾವು ಬಳಸಿಕೊಳ್ಳಬೇಕು’ ಎಂಬ ಕುಣಿಗಲ್‌ ತಾಲ್ಲೂಕಿನ ಜನರ ಒತ್ತಡದ ಕಾರಣಕ್ಕೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ರೂಪುಗೊಂಡಿದೆ. ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲಿದ್ದು, ಈವರೆಗೆ ಕೆಲವು ಮೀಟರ್‌ಗಳಷ್ಟೇ ಕೆಲಸ ನಡೆದಿದೆ.

ವಿರೋಧ ಏಕೆ?: ಕುಣಿಗಲ್ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ಗುಬ್ಬಿ, ತುರುವೇಕೆರೆ, ತುಮಕೂರು ಭಾಗದವರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಕೋಟ್ಯಂತರ ರೂಪಾಯಿ ಖರ್ಚುಮಾಡಿ ಆಧುನೀಕರಣ ಮಾಡಿರುವ ಹೇಮಾವತಿ ನಾಲೆ ಮೂಲಕವೇ ನೀರು ಹರಿಸಬೇಕು ಎನ್ನುತ್ತಿದ್ದಾರೆ. ಜಿಲ್ಲೆಯ ಇತರೆ ಭಾಗಗಳಿಗೂ ನಾಲೆ ಮೂಲಕವೇ ನೀರು ಬಿಡಲಾಗುತ್ತಿದೆ. ಕುಣಿಗಲ್ ಭಾಗಕ್ಕೂ ಇದೇ ನಿಯಮ ಪಾಲನೆಯಾಗಬೇಕು. ಒಂದು ವೇಳೆ ಪೈಪ್‌ಲೈನ್ ಮೂಲಕ ಹರಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಆ ಭಾಗಕ್ಕೆ ಹರಿದುಹೋಗುತ್ತದೆ. ಇತರೆ ಪ್ರದೇಶದವರಿಗೆ ಸಮಸ್ಯೆಯಾಗುತ್ತದೆ. ಜತೆಗೆ ನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾದರೆ ಉಳಿದ ಭಾಗಕ್ಕೆ ನೀರಿನ ಕೊರತೆಯಾಗುತ್ತದೆ. ಹಾಗಾಗಿ ಜಿಲ್ಲೆಯ ಎಲ್ಲೆಡೆ ಒಂದೇ ನಿಯಮ ಇರಬೇಕು. ಎಲ್ಲೆಡೆ ನಾಲೆ ಮೂಲಕವೇ ನೀರು ಬಿಡಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರೈತರು, ರಾಜಕಾರಣಿಗಳು ಹೋರಾಟಕ್ಕೆ ಇಳಿದಿದ್ದಾರೆ.

ಕುಣಿಗಲ್‌ ತಾಲ್ಲೂಕಿಗೆ ಪೈಪ್‌ಲೈನ್ ಮೂಲಕ ನೀರು ಹರಿದರೆ ಮುಂದಿನ ದಿನಗಳಲ್ಲಿ ಪಕ್ಕದ ಮಾಗಡಿ, ರಾಮನಗರ ಭಾಗಕ್ಕೂ ನೀರು ಒದಗಿಸುವುದು ಸುಲಭವಾಗುತ್ತದೆ. ಇದೇ ಉದ್ದೇಶ ಇಟ್ಟುಕೊಂಡು ಪೈಪ್‌ಲೈನ್ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ಗುಬ್ಬಿ, ತುರುವೇಕೆರೆ, ತುಮಕೂರು ಭಾಗದವರು ನೀರಿನ ತೀವ್ರ ಕೊರತೆ ಎದುರಿಸಬೇಕಾಗುತ್ತದೆ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಮಾತು ಬದಲು: ಆರಂಭದಲ್ಲಿ ಯೋಜನೆ ವಿರೋಧಿಸಿ ಕೆಡಿಪಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಈಗ ಮಾತು ಬದಲಿಸಿದ್ದಾರೆ. ‘ತಾಂತ್ರಿಕ ಸಮಿತಿ ವರದಿ ಆಧರಿಸಿ ಯೋಜನೆ ಜಾರಿ ಮಾಡಲಾಗುತ್ತಿದೆ’ ಎಂಬ ಸಮರ್ಥನೆ ನೀಡುತ್ತಿದ್ದಾರೆ. ಗುಬ್ಬಿಯ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಬಹಿರಂಗವಾಗಿ ಹೋರಾಟಕ್ಕೆ ಇಳಿಯದಿದ್ದರೂ ಯೋಜನೆ ವಿರೋಧಿಸಿದ್ದಾರೆ.

ತುಮಕೂರು ಭಾಗದ ಬಿಜೆಪಿ, ಜೆಡಿಎಸ್, ರೈತ ಸಂಘಟನೆಗಳು, ಮಠಾಧೀಶರು ಹಾಗೂ ರೈತರು ಒಟ್ಟಾಗಿ ಯೋಜನೆ ವಿರೋಧಿಸಿ ಹೋರಾಟಕ್ಕೆ ಇಳಿದಿದ್ದಾರೆ. ಕುಣಿಗಲ್ ಭಾಗದಲ್ಲೂ ಯೋಜನೆ ಜಾರಿಗೆ ಪಕ್ಷಾತೀತವಾಗಿ ಒತ್ತಾಯಿಸಲಾಗುತ್ತಿದೆ. ‘ನಮಗೆ ನೀರು ಕೊಡಿ, ಮಾಗಡಿಗೆ ನಾವು ನೀರು ಕೊಡುವುದಿಲ್ಲ’ ಎಂಬ ಮಾತುಗಳು ಕುಣಿಗಲ್ ತಾಲ್ಲೂಕಿನಿಂದ ಕೇಳಿಬರುತ್ತಿವೆ.

ತುಮಕೂರು ಹಾಗೂ ಕುಣಿಗಲ್ ಭಾಗದ ಜನಪ್ರತಿನಿಧಿಗಳು, ರೈತ ಸಂಘಟನೆಗಳು, ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ಪರಿಹಾರ ಸೂತ್ರವೊಂದನ್ನು ರೂಪಿಸಿದ್ದರೆ ವಿವಾದ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಯಾರಿಗೂ ಪ್ರತಿಷ್ಠೆಯ ಪ್ರಶ್ನೆಯೂ ಆಗುತ್ತಿರಲಿಲ್ಲ ಎನ್ನುವ ಮಾತುಗಳಿವೆ.

ರಾಜಕೀಯ ಮೇಲಾಟ

ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ರಾಜಕೀಯ ನಂಟು ಬೆಸೆದುಕೊಂಡಿರುವುದು ಸಮಸ್ಯೆಯನ್ನು ಜಟಿಲವಾಗಿಸಿದೆ. ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಬಂಧಿ ಡಾ.ಎಚ್.ಡಿ.ರಂಗನಾಥ್ ಕುಣಿಗಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ನಿರ್ಮಿಸಿ ನೀರು ತಂದರೆ ಮುಂದಿನ ಚುನಾವಣೆ ಹೊತ್ತಿಗೆ ‘ಕ್ಷೇತ್ರ ಗಟ್ಟಿ’ ಮಾಡಿಕೊಳ್ಳುವ ರಾಜಕೀಯ ಉದ್ದೇಶವೂ ಕೆಲಸ ಮಾಡಿದಂತೆ ಕಾಣುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಕುಣಿಗಲ್ ಭಾಗಕ್ಕೆ ನೀರು ಬಂದರೆ ಅಲ್ಲಿಂದ ಮಾಗಡಿ ರಾಮನಗರಕ್ಕೆ ತೆಗೆದುಕೊಂಡು ಹೋಗಲು ಯಾವುದೇ ಅಡ್ಡಿ ಇರುವುದಿಲ್ಲ. ನೀರಿನ ರಾಜಕಾರಣ ಮುಂದಿಟ್ಟುಕೊಂಡು ರಾಮನಗರ ಭಾಗದಲ್ಲಿ ಸುಲಭವಾಗಿ ರಾಜಕೀಯ ಕಡುವೈರಿ ಜೆಡಿಎಸ್ ಅನ್ನು ಮಣಿಸುವುದು ಸುಲಭವಾಗುತ್ತದೆ ಎಂಬ ಲೆಕ್ಕಾಚಾರಗಳೂ ಇವೆ ಎನ್ನಲಾಗಿದೆ.

ರಾಜಕೀಯ ಒಳಸುಳಿಗಳೇ ‘ಹಿನ್ನೆಲೆ–ಮುನ್ನೆಲೆ’ಯಲ್ಲಿ ಗೋಚರಿಸುತ್ತಿರುವುದು ವಿವಾದವನ್ನು ದೊಡ್ಡದು ಮಾಡಿದೆ. ಮತ್ತೊಂದೆಡೆ ಬಿಜೆಪಿ ನಾಯಕರೂ ಅದೇ ಮಾರ್ಗದಲ್ಲಿ ಸಾಗಿದಂತೆ ಕಾಣುತ್ತಿದೆ. ವಿವಾದ ತೀವ್ರ ಸ್ವರೂಪ ಪಡೆದುಕೊಂಡಷ್ಟೂ ಹೆಚ್ಚು ಲಾಭವಾಗುತ್ತದೆ. ಯೋಜನೆ ಜಾರಿಯಾದರೆ ನಮ್ಮ ವಿರೋಧ ಲೆಕ್ಕಿಸದೆ ನೀರು ತೆಗೆದುಕೊಂಡು ಹೋಗಿದ್ದಾರೆ ಎಂದು ಜನರಿಗೆ ಹೇಳುವುದು. ಯೋಜನೆ ಸ್ಥಗಿತಗೊಂಡರೆ ನಮ್ಮ ಹೋರಾಟದ ಫಲ ಎಂದು ಬಿಂಬಿಸಿಕೊಳ್ಳಲು ನೆರವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪಕ್ಷದ ಮುಖಂಡರಿದ್ದಾರೆ ಎನ್ನಲಾಗುತ್ತಿದೆ. 

ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರದಲ್ಲಿ ಒಪ್ಪಿಗೆ

2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕಾಂಗ್ರೆಸ್– ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲೇ ₹450 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಆಗ ಡಿ.ಕೆ.ಶಿವಕುಮಾರ್‌ ಅವರು ಜಲಸಂಪನ್ಮೂಲ ಸಚಿವರಾಗಿದ್ದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಯೋಜನೆ ರದ್ದುಪಡಿಸಿತ್ತು. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಕ್ಸ್‌‍ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಜಾರಿ ಮಾಡುವುದಾಗಿ ಡಿ.ಕೆ.ಶಿವಕುಮಾರ್ ಡಿ.ಕೆ.ಸುರೇಶ್ ಡಾ.ಎಚ್.ಡಿ.ರಂಗನಾಥ್ ಭರವಸೆ ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಯೋಜನೆಗೆ ಜೀವ ನೀಡಲಾಗಿದೆ.

ತುಮಕೂರು ಹೇಮಾವತಿ ನಾಲಾ ವಲಯ ಕಚೇರಿ ಎದುರು ‘ಸಂಯುಕ್ತ ಹೋರಾಟ– ಕರ್ನಾಟಕ’ ಸಂಘಟನೆ ನೇತೃತ್ವದಲ್ಲಿ ರೈತರ ಪ್ರತಿಭಟನೆ
ಗುಬ್ಬಿ ತಾಲ್ಲೂಕಿನ ಸುಂಕಾಪುರ ಗ್ರಾಮದ ಬಳಿ ನಾಲೆಗೆ ಮಣ್ಣು ಸುರಿದು ಪ್ರತಿಭಟನೆ
ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕೈಬಿಟ್ಟು ನಾಲೆ ಮೂಲಕ ನೀರು ಹರಿಸಲಿ. ಮೊದಲು ಕುಣಿಗಲ್ ಭಾಗಕ್ಕೆ ನೀರು ಹರಿಸಿದ ನಂತರ ಇತರೆ ಭಾಗಕ್ಕೆ ಕೊಡುವ ಬಗ್ಗೆ ನಿಯಮ ರೂಪಿಸಲಿ
–ಬಿ.ಸುರೇಶ್‌ ಗೌಡ, ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ
ತಮಗೆ ಬೇಕಾದವರನ್ನು ತಾಂತ್ರಿಕ ಸಮಿತಿಗೆ ನೇಮಿಸಿಕೊಂಡು ತಮಗೆ ಬೇಕಾದಂತೆ ವರದಿ ಬರೆಸಿಕೊಂಡಿದ್ದಾರೆ. ಈ ಯೋಜನೆಗೆ ನನ್ನ ವಿರೋಧವಿದೆ
–ಎಸ್.ಆರ್.ಶ್ರೀನಿವಾಸ್, ಗುಬ್ಬಿ ಕಾಂಗ್ರೆಸ್ ಶಾಸಕ
ನಮ್ಮ ಪಾಲಿನ ನೀರನ್ನು ನಾವು ಕೇಳುತ್ತಿದ್ದೇವೆ. ಪಕ್ಕದ ತಾಲ್ಲೂಕಿನವರಿಗೆ ಅನ್ಯಾಯ ಮಾಡಿ ಕಿತ್ತುಕೊಳ್ಳುತ್ತಿಲ್ಲ. ಕೆಲವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ
–ಡಾ. ಎಚ್.ಡಿ.ರಂಗನಾಥ್, ಕುಣಿಗಲ್ ಕಾಂಗ್ರೆಸ್ ಶಾಸಕ
ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈಗಿರುವ ನಾಲೆಯಲ್ಲೇ ಕುಣಿಗಲ್‌ಗೆ ನೀರು ಹರಿಸಬೇಕು. ಕಾಮಗಾರಿ ನಿಲ್ಲುವವರೆಗೂ ಹೋರಾಟ ಮುಂದುವರಿಯಲಿದೆ
–ಎ.ಗೋವಿಂದರಾಜು, ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.