ADVERTISEMENT

ಆಳ ಅಗಲ | ಕತ್ತಲಿನ ‘ಮಾಯಾಲೋಕ’; ದಾರಿ ತಪ್ಪಿದ ಸುರಕ್ಷಾ ವ್ಯವಸ್ಥೆ

ಸಾಣಾಪುರ, ಆನೆಗೊಂದಿ: ನಿರ್ಜನ, ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರ ಮೋಜು

ಪ್ರಮೋದ
ಎಂ.ಜಿ.ಬಾಲಕೃಷ್ಣ
Published 10 ಮಾರ್ಚ್ 2025, 23:30 IST
Last Updated 10 ಮಾರ್ಚ್ 2025, 23:30 IST
<div class="paragraphs"><p>ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಣಾಪುರ ಭಾಗದ ವಿಹಂಗಮ ನೋಟ</p></div>

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಣಾಪುರ ಭಾಗದ ವಿಹಂಗಮ ನೋಟ

   
ಪಾರಂಪರಿಕ ತಾಣ ಹಂಪಿಯಿಂದ 26 ಕಿ.ಮೀ ದೂರದಲ್ಲಿರುವ ಕೊಪ್ಪಳದ ಸಾಣಾಪುರದಲ್ಲಿ ಇಸ್ರೇಲ್‌ ಪ್ರವಾಸಿ ಮಹಿಳೆ, ಹೋಂ ಸ್ಟೇ ಒಡತಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಒಡಿಶಾ ವ್ಯಕ್ತಿಯ ಕೊಲೆ ಪ್ರಕರಣ ಪ್ರವಾಸಿಗರನ್ನು ಆತಂಕಕ್ಕೆ ದೂಡಿದೆ. ಹಂಪಿ ಮತ್ತು ಸಾಣಾಪುರ ಪ್ರದೇಶಗಳನ್ನು ತುಂಗಭದ್ರಾ ನದಿ ವಿಭಜಿಸುತ್ತದೆ. ಬಲದಂಡೆಯಲ್ಲಿರುವ ಹಂಪಿಗೆ ಹೋಲಿಸಿದರೆ, ಎಡದಂಡೆಯಲ್ಲಿರುವ ಸಾಣಾಪುರ, ವಿರೂಪಾಪುರ ಗಡ್ಡೆ ಪ್ರದೇಶಗಳು ಪ್ರವಾಸಿಗರಿಗೆ ಮೋಜು ಮಸ್ತಿಯ ತಾಣಗಳಾಗಿವೆ. ಭದ್ರತೆಯ ಕೊರತೆಯೂ ಇರುವ ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ.

ದೇಶ ಹಾಗೂ ವಿದೇಶದ ಪ್ರವಾಸಿಗರಿಗೆ ಕೊಪ್ಪಳ ಜಿಲ್ಲೆ ಎಂದಾಕ್ಷಣ ಮೊದಲು ನೆನಪಾಗುವುದು ಗಂಗಾವತಿ ತಾಲ್ಲೂಕಿನ ಸಾಣಾಪುರ ಹಾಗೂ ಸುತ್ತಲಿನ ತುಂಗಭದ್ರಾ ನದಿ ಪಾತ್ರಗಳ ಭಾಗ. ಅಂಜನಾದ್ರಿ ಬೆಟ್ಟ, ರಾಮಾಯಣದ ಐತಿಹ್ಯ ವಿರುವ ಪಂಪಾ ಸರೋವರ, ಕಿಷ್ಕಿಂಧೆ, ಬೆಟ್ಟದ ಮೇಲಿರುವ ಬಾಲಾಂಜನೇಯ ದೇವಸ್ಥಾನ, ಗಿರಿಧಾಮಗಳ ರೀತಿ ಸೆಳೆಯುವ ಪ್ರಕೃತಿ ಪ್ರವಾಸಿಗರನ್ನು ಮಂತ್ರಮುಗ್ಧ ರನ್ನಾಗಿಸುತ್ತವೆ. ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ಈ ಸುಂದರ ಪರಿಸರವೇ ಸಾಣಾಪುರದ ಹೆಸರಿಗೆ ಕಪ್ಪುಮಸಿ ಬಳಿಯುತ್ತಿದೆ.

ವಿಜಯನಗರ ಸಾಮ್ರಾಜ್ಯದ ವಿಶ್ವವಿಖ್ಯಾತ ಹಂಪಿ, ಕಮಲಾಪುರ, ಆನೆಗೊಂದಿ ಕಣ್ತುಂಬಿಕೊಂಡು ಬರುವ ದೇಶಿ ಹಾಗೂ ವಿದೇಶಿ ಪ್ರವಾಸಿಗರು ತಮ್ಮ ಮೋಜಿನ ಸಮಯ ಕಳೆಯಲು ಸಾಣಾಪುರ, ಬಸಾಪುರ ಹಾಗೂ ಸುತ್ತಮುತ್ತಲಿನ ತುಂಗಭದ್ರಾ ನದಿಯ ಸಮೀಪದ ಜಾಗ ಆಯ್ಕೆ ಮಾಡಿಕೊಳ್ಳುತ್ತಾರೆ.

ADVERTISEMENT

ಈ ಕಿಷ್ಕಿಂಧೆ ಪ್ರದೇಶ ಎಷ್ಟು ಸುಂದರವೋ, ಪ್ರಾಣಿಗಳ ಹಾವಳಿ ಕಾರಣಕ್ಕೆ ಅಷ್ಟೇ ಆತಂಕಕಾರಿ. ಹಾಗಿದ್ದರೂ ಹೊರರಾಜ್ಯ ಹಾಗೂ ವಿದೇಶದಿಂದ ಬರುವವರು ಸ್ಥಳೀಯವಾಗಿ ಎದುರಾಗಬಹುದಾದ ಅಪಾಯಗಳನ್ನೂ ಲೆಕ್ಕಿಸದೇ ಹಗಲಿರುಳು ಓಡಾಡುತ್ತಾರೆ. ಹೀಗೆ ಬರುವ ಪ್ರವಾಸಿಗರಲ್ಲಿ ಹಲವರ ಉದ್ದೇಶ ಐತಿಹಾಸಿಕ ತಾಣಗಳನ್ನು ನೋಡುವುದು ಮಾತ್ರ ಆಗಿರುವುದಿಲ್ಲ; ಅಲ್ಲಿನ ಕತ್ತಲಿನ ‘ಮಾಯಾಲೋಕ’ದಲ್ಲಿ ‘ತೇಲಾಡುವ’ ಹಂಬಲವೂ ಇರುತ್ತದೆ.

ಹೆಚ್ಚು ಹಣದ ಆಸೆಗೆ ವಿದೇಶಿಯರಿಗೆ ಸಿಗುವ ಕೆಂಪು ರತ್ನಗಂಬಳಿಯ ಸ್ವಾಗತ, ಮೋಜು ಮಸ್ತಿಯ ಸಂಭ್ರಮ, ನಶೆಯಲ್ಲಿ ತೇಲಾಡುವಂತೆ ಮಾಡುವ ಮದ್ಯದ ಯಥೇಚ್ಛ ಮಾರಾಟದಿಂದಾಗಿ ಈ ಭಾಗ ಪ್ರವಾಸಿಗರಿಗೆ ಸ್ವರ್ಗದಂತೆ ಕಾಣುತ್ತದೆ.

ವಿಜಯನಗರ ಸಾಮ್ರಾಜ್ಯದ ಇತಿಹಾಸ ತಿಳಿದುಕೊಳ್ಳುವ ಉಮೇದಿಯಿಂದ ಇಲ್ಲಿಗೆ ಬಂದರೂ ಕತ್ತಲಾಗುತ್ತಿದ್ದಂತೆಯೇ ತೆರೆದುಕೊಳ್ಳುವ ಮೋಜಿನ ಲೋಕ ಪ್ರವಾಸಿಗರನ್ನು ಸೆಳೆಯುತ್ತದೆ. ಸ್ಥಳೀಯ ವ್ಯಾಪಾರಿಗಳಿಗೆ ದೇಶಿ ‍ಪ್ರವಾಸಿಗರಿಗಿಂತ ಭರಪೂರವಾಗಿ ಹಣ ಖರ್ಚು ಮಾಡುವ ವಿದೇಶಿ ಪ್ರವಾಸಿಗರು ಬಂದರೆ ಹೆಚ್ಚು ಖುಷಿ. ಸಾಣಾಪುರ, ಆನೆಗೊಂದಿ ಭಾಗದ ಪ್ರವಾಸಿ ತಾಣಗಳ ನಿರ್ಜನ ಮತ್ತು ಅಪಾಯದ ಪ್ರದೇಶಗಳಲ್ಲಿ ಪ್ರವಾಸಿಗರ ಹುಚ್ಚಾಟ ಹೆಚ್ಚಾಗುತ್ತಿದೆ. ಸುಲಭವಾಗಿ ಬೈಕ್‌ಗಳು ಬಾಡಿಗೆಗೆ ಸಿಗುವುದರಿಂದ ವಿದೇಶಿಗರು ಬೈಕ್‌ ಪಡೆದು ಹಂಪಿ, ಆನೆಗೊಂದಿ, ಪಂಪಾ ಸರೋವರ, ಸಾಣಾಪುರ, ಅಂಜನಾದ್ರಿ ಹೀಗೆ ಅನೇಕ ತಾಣಗಳಲ್ಲಿ ಓಡಾಡುತ್ತಾರೆ.

ಪೊಲೀಸರು, ಸ್ಥಳೀಯ ಆಡಳಿತದ ಕಣ್ಣು ತಪ್ಪಿಸಿ ಮೋಜು, ಗಾಂಜಾ ಸೇವನೆಯಂತಹ ಅಕ್ರಮ ಚಟುವಟಿಕೆಗಳಲ್ಲಿ ಪ್ರವಾಸಿಗರು ತೊಡಗಿಕೊಳ್ಳುತ್ತಾರೆ. ಅಪಾಯ ಅರಿಯದೇ ಕಲ್ಲು ಬಂಡೆ, ನೀರಿನ ಪ್ರದೇಶಗಳಲ್ಲಿ ಸೆಲ್ಫಿ, ರೀಲ್ಸ್, ಕ್ಲಿಪ್ ಜಂಪಿಂಗ್, ಈಜು, ನಿರ್ಜನ ಪ್ರದೇಶದಲ್ಲಿ ಚಾರಣ, ಸಂಗೀತ ಕಾರ್ಯಕ್ರಮ, ನೈಟ್ ಪಾರ್ಟಿಗಳಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಹೋಂ ಸ್ಟೇ, ರೆಸಾರ್ಟ್‌ಗಳನ್ನು ನಿರ್ವಹಿಸುವವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರವಾಸಿಗರನ್ನು ಹುರಿದುಂಬಿಸುತ್ತಾರೆ.

ಕೆಲ ಸ್ಥಳೀಯರು ಕಡಿಮೆ ಮೊತ್ತಕ್ಕೆ, ಉಪಾಹಾರ, ವಸತಿ ವ್ಯವಸ್ಥೆ ಮಾಡುವುದರ ಜತೆಗೆ ಅಚ್ಚರಿಯ ಪ್ರದೇಶಗಳನ್ನು ತೋರಿಸುವುದಾಗಿ ಪ್ರವಾಸಿಗರ ಮನವೊಲಿಸುತ್ತಾರೆ.

ಹೋಂ ಸ್ಟೇ ಎಂದು ಹೆಸರು ಹೇಳುತ್ತಾರೆಯಾದರೂ ಮನೆಯಲ್ಲಿಯೇ ಐದಾರು ಬೆಡ್‌ಗಳನ್ನು ಹಾಕಿ ಅದನ್ನೇ ಪ್ರವಾಸಿಗರಿಗೆ ನೀಡಿ ಹಣ ಸಂಪಾದಿಸುತ್ತಾರೆ.

ಭದ್ರತೆ ಹೆಚ್ಚಿಸಲು ಆಗ್ರಹ

ಸಾಣಾಪುರದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣವು ಈ ಭಾಗದಲ್ಲಿ ಪೊಲೀಸ್‌ ಭದ್ರತೆಯನ್ನು ಇನ್ನಷ್ಟು ಹಚ್ಚಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದೆ.

ಸಾಣಾಪುರ ಹಾಗೂ ಪ್ರಮುಖ ರಸ್ತೆಗಳಲ್ಲಿ ‌ಮಾತ್ರ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಸುತ್ತಲೂ ಇರುವ ದೇವಸ್ಥಾನ, ಹೋಟೆಲ್‌‌ಗಳ ಬಳಿ‌ ಕ್ಯಾಮೆರಾ ಇವೆ. ಆದರೆ, ಪ್ರವಾಸಿಗರು ಹೆಚ್ಚಾಗಿ ತೆರಳುವ ತುಂಗಭದ್ರಾ ನದಿ ಪಾತ್ರದ ದಾರಿಯಲ್ಲಿ ಕ್ಯಾಮೆರಾ ಇಲ್ಲ. ಪೊಲೀಸರ ಓಡಾಟವೂ ಕಡಿಮೆ. ಘಟನೆ ನಡೆದಾಗ ಮಾತ್ರ ಹೆಚ್ಚು ನಿಗಾ ವಹಿಸುತ್ತಾರೆ.

ಪ್ರವಾಸಿಗರ ರಕ್ಷಣೆಗಾಗಿ 2008ರಲ್ಲಿ ‌ಬಿಜೆಪಿ ನೇತೃತ್ವದ ಸರ್ಕಾರವು ಹಂಪಿಯಲ್ಲಿ ಪೊಲೀಸ್‌ ಉಪವಿಭಾಗಾಧಿಕಾರಿ ಕಚೇರಿ ತೆರೆದು ಡಿವೈಎಸ್‌ಪಿ ಮಟ್ಟದ ಅಧಿಕಾರಿಯನ್ನು ನೇಮಿಸಿತ್ತು. 32 ಪೊಲೀಸ್‌ ತಂಡಗಳನ್ನು ರಚಿಸಿ ಅವರಿಗೆ ದ್ವಿಚಕ್ರ ವಾಹನವನ್ನು ನೀಡಿ ಹಂಪಿ ಹಾಗೂ ಆನೆಗೊಂದಿ ಭಾಗದಲ್ಲಿ ಅವರನ್ನು ನಿಯೋಜಿಸಿ ಹಂಪಿ, ಆನೆಗೊಂದಿಗೆ ಭೇಟಿ ನೀಡುವ ಪ್ರವಾಸಿಗರ ರಕ್ಷಣೆಗೆ ಕ್ರಮ ವಹಿಸಲಾಗಿತ್ತು. ಈಗ ಈ ವ್ಯವಸ್ಥೆ ಇಲ್ಲ. ಅದನ್ನು ಮರು ಸ್ಥಾಪಿಸಬೇಕು ಎಂಬ ಒತ್ತಾಯ ಈ ಭಾಗದ ಜನರದ್ದು.

ನಿರ್ಜನ, ಅಪಾಯಕಾರಿ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರೇ ಆರೋಪ ಮಾಡುತ್ತಾರೆ. ಆದರೆ, ಪೊಲೀಸರ ಗಮನಕ್ಕೆ ಬೆರಳೆಣಿಕೆಯ ಪ್ರಕರಣಗಳು ಮಾತ್ರ ಬರುತ್ತಿವೆ. 

ಗಾಂಜಾ ಸೇವನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2023ರಲ್ಲಿ 10 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 12 ದೂರುಗಳು ದಾಖಲಾಗಿವೆ.

ಹೋಂ ಸ್ಟೇಗಳಿಗೆ ಅನುಮತಿಯೇ ಇಲ್ಲ

ಕೊಪ್ಪಳ ಜಿಲ್ಲೆಯಲ್ಲಿ ಸಾಣಾಪುರ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಹಲವು ಹೋಂ ಸ್ಟೇಗಳು ಇವೆ. ಆದರೆ ಬಹಳಷ್ಟು ಕಡೆ ಅವುಗಳ ಮುಂದೆ ನಾಮಫಲಕವನ್ನೇ ಹಾಕಿಲ್ಲ. ಹೇಗೋ ಸಂಪರ್ಕ ಸಾಧಿಸಿ ಅಲ್ಲಿಗೆ ಬರುವ ವಿದೇಶಿಯರು ಉಳಿದುಕೊಂಡು ತಮ್ಮ ದೇಶದವರು ಮತ್ತಷ್ಟು ಜನ ಬಂದರೆ ಅವರು ಅಲ್ಲಿಯೇ ಉಳಿದುಕೊಳ್ಳಲು ಶಿಫಾರಸು ಮಾಡುತ್ತಾರೆ. ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋಂ ಸ್ಟೇಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿಯೇ ಇಲ್ಲ ಎನ್ನುವ ಅಚ್ಚರಿಯ ಅಂಶವೂ ಬೆಳಕಿಗೆ ಬಂದಿದೆ. ಸಾಣಾಪುರದಲ್ಲಿ ಪ್ರವಾಸಿಗರ ಮೇಲೆ ಗಲಾಟೆ ನಡೆದ ಬಳಿಕ ಪರಿಶೀಲನೆ ನಡೆಸಿದ ಅಧಿಕಾರಿಗಳೇ ದಂಗಾಗಿದ್ದರು. ಹೊರ ರಾಜ್ಯಗಳಿಂದ ಬರುವ ಉದ್ಯಮಿಗಳು/ವ್ಯಾಪಾರಿಗಳು ಸಾಣಾಪುರ, ಆನೆಗೊಂದಿ ಭಾಗದಲ್ಲಿ ಭೂಮಿ ಲೀಸ್‌ಗೆ ಪಡೆದು ರೆಸಾರ್ಟ್, ಹೋಂ ಸ್ಟೇ ಆರಂಭಿಸುತ್ತಾರೆ. ಸಾಣಾಪುರ ಹಾಗೂ ವಿರೂಪಾಪುರ ಗಡ್ಡೆ ಭಾಗದಲ್ಲಿದ್ದ ಅಕ್ರಮ ರೆಸಾರ್ಟ್‌ಗಳನ್ನು ಐದು ವರ್ಷಗಳ ಹಿಂದೆ ತೆರವು ಗೊಳಿಸಲಾಗಿತ್ತು. ಈಗ ಮತ್ತೆ ಅಕ್ರಮ ರೆಸಾರ್ಟ್ ತಲೆಎತ್ತಿವೆ.

ಆನೆಗೊಂದಿ, ಸಾಣಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ದೂರು ಬಂದಾಗ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಚಟುವಟಿಕೆ ಗಮನಕ್ಕೆ ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೂ ತಿಳಿಸಲಾಗಿದೆ. ಪ್ರವಾಸಿ ಸ್ಥಳಗಳಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ
-ಡಾ.ರಾಮ್ ಎಲ್. ಅರಸಿದ್ದಿ, ಕೊಪ್ಪಳ ಎಸ್‌ಪಿ

ಹಂಪಿಯಲ್ಲೂ ಹೆಚ್ಚಬೇಕಿದೆ ಭದ್ರತೆ

ಪ್ರವಾಸಿ ತಾಣವಾಗಿರುವ ವಿಜಯನಗರ ಜಿಲ್ಲೆಯ ಹಂಪಿಗೆ ಸಮೀಪದ ಸಾಣಾಪುರದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣವು ಹಂಪಿಯಲ್ಲಿ ಪ್ರವಾಸಿಗರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಾಣಾಪುರ, ಆನೆಗೊಂದಿ ನೆರೆಯ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ವ್ಯಾಪ್ತಿಗೆ ಬರುತ್ತವೆ. ಹಂಪಿಗೆ ಭೇಟಿ ನೀಡುವ ಪ್ರವಾಸಿಗರೇ ಅಲ್ಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಾರೆ. ಆ ಭಾಗದಲ್ಲಿ ನಡೆದಿರುವ ಕೃತ್ಯವು ಈಗ ಹಂಪಿಗೂ ತಳಕುಹಾಕಿಕೊಂಡಿದೆ. ಆದರೆ, ಹಂಪಿ ಸ್ಮಾರಕ ಪ್ರದೇಶದಲ್ಲಿ 20 ವರ್ಷಗಳಿಂದ ಗಂಭೀರ ಅಪರಾಧ ಕೃತ್ಯಗಳು ನಡೆದಿಲ್ಲ ಎಂದು ಹೇಳುತ್ತಾರೆ ಪೊಲೀಸರು.

‘ಹಂಪಿ ಸ್ಮಾರಕ ಪ್ರದೇಶದಲ್ಲಿ ಮದ್ಯ, ಮಾಂಸ ಮಾರಾಟಕ್ಕೆ ಈಗ ನಿರ್ಬಂಧವಿದೆ. ಬಹಳ ಹಿಂದೆ ಹಂಪಿಯಲ್ಲೂ ಗಾಂಜಾ ಮಾರಾಟ, ರೇವ್‌ ಪಾರ್ಟಿಯಂತಹ ಪ್ರಕರಣಗಳು ನಡೆಯುತ್ತಿದ್ದವು. ವಿದೇಶಿಯರೂ ಸೇರಿದಂತೆ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದರು. ಆದರೆ, ಸ್ಥಳೀಯ ಜನರೇ ಇದರ ವಿರುದ್ಧ ಆಂದೋಲನವನ್ನು ಹುಟ್ಟುಹಾಕಿ ಮದ್ಯ, ಡ್ರಗ್ಸ್‌ ಅಕ್ರಮ ಚಟುವಟಿಕೆಗಳನ್ನು ಬಂದ್‌ ಮಾಡಿಸಿದರು’ ಎಂದು ಹೇಳುತ್ತಾರೆ ಇಲ್ಲಿನ ಪ್ರವಾಸಿ ಮಾರ್ಗದರ್ಶಿಗಳು. 

ಈಗಲೂ ಅಲ್ಲಲ್ಲಿ ಕದ್ದುಮುಚ್ಚಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುತ್ತವೆ. ಆದರೆ, ಮೊದಲಿನಷ್ಟು ಇಲ್ಲ ಎಂಬುದು ಅವರ ಹೇಳಿಕೆ. 

2023ರಲ್ಲಿ ಹಂಪಿಯ ಪುರಂದರ ಮಂಟಪದಲ್ಲಿ ವಿದೇಶಿ ಪ್ರವಾಸಿಗರು ಸಿಗರೇಟ್‌, ಮದ್ಯಸೇವನೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ನಂತರ ಪೊಲೀಸ್‌ ಮತ್ತು ಪುರಾತತ್ವ ಇಲಾಖೆಗಳು ಪ್ರಮುಖ ಸ್ಥಳಗಳಲ್ಲಿ ಅತ್ಯಾಧುನಿಕ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೆ ಕ್ರಮ ವಹಿಸಿದ್ದವು.   

ಹಂಪಿಯ ಕಲ್ಲು ಬಂಡೆಗಳನ್ನು ಕರಡಿ, ಚಿರತೆಗಳು ಆವಾಸವನ್ನಾಗಿ ಮಾಡಿಕೊಂಡಿದ್ದು, ಸಂಜೆಯ ನಂತರ ಸ್ಮಾರಕ ಪ್ರದೇಶದಲ್ಲಿ ಇವುಗಳ ಓಡಾಟ ಹೆಚ್ಚಿರುತ್ತದೆ. ಹಾಗಾಗಿ, ಸಂಜೆಯ ನಂತರ ಈ ಭಾಗದಲ್ಲಿ ಸ್ಥಳೀಯರು, ಪ್ರವಾಸಿಗರ ಓಡಾಟ ಕಡಿಮೆ ಇರುತ್ತದೆ.  

ಅನಧಿಕೃತ ಹೋಂ ಸ್ಟೇ: ಹಂಪಿ ಠಾಣಾ ವ್ಯಾಪ್ತಿಯಲ್ಲಿ 140ರಷ್ಟು ಹೋಂ ಸ್ಟೇ ಮತ್ತು 20 ರೆಸಾರ್ಟ್‌ಗಳಿವೆ. ಆದರೆ, ಹೋಂ ಸ್ಟೇಗಳ ಪೈಕಿ ಬಹುತೇಕ ಅನಧಿಕೃತ. ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಅಧಿಕೃತ ಹೋಂ ಸ್ಟೇ ಇರುವುದು ಒಂದೇ ಒಂದು; ಅದು ಹೊಸಪೇಟೆಯಲ್ಲಿದೆ.

ಸ್ಮಾರಕ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡ ಆರೋಪದ ಕಾರಣಕ್ಕಾಗಿ ಕೋರ್ಟ್ ಆದೇಶದಂತೆ ಹಲವು ಹೋಂಸ್ಟೇಗಳನ್ನು ತೆರವು ಮಾಡಿದ್ದು ಬಿಟ್ಟರೆ ಇತರ ಹೋಂ ಸ್ಟೇಗಳನ್ನು ತೆರವು ಮಾಡುವ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿಲ್ಲ.  

ಭದ್ರತೆಗೆ ಆಗ್ರಹ: ‘ಸ್ಮಾರಕಗಳು ಇರುವ ಪ್ರದೇಶಗಳಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಲಾಗಿದ್ದರೂ ಹಲವು ಪ್ರದೇಶಗಳ ವೀಕ್ಷಣೆಗೆ ಪ್ರವಾಸಿಗರು ನಡೆದುಕೊಂಡೇ ಹೋಗಬೇಕು. ಈ ದಾರಿ ನಿರ್ಜನವಾಗಿರುತ್ತವೆ. ಪ್ರವಾಸಿಗರು ಗುಂಪಾಗಿ ಅಷ್ಟೇ ಹೋಗಬಹುದು. ಒಬ್ಬಿಬ್ಬರಾಗಿ, ವಿಶೇಷವಾಗಿ ಮಹಿಳೆಯರಿಗೆ ಹೋಗಲು ಸಾಧ್ಯವಾಗದ ಸ್ಥಿತಿ ಇದೆ. ಅಂತಹ ಪ್ರದೇಶದಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸಬೇಕು’ ಎಂದು ಆಗ್ರಹಿಸುತ್ತಾರೆ ಸ್ಥಳೀಯರು. 

ಹಂಪಿ ಪರಿಸರದಲ್ಲಿ ಪ್ರವಾಸಿಗರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಗಮನ ಹರಿಸಲಾಗಿದೆ. ಹೋಂ ಸ್ಟೇ, ರೆಸಾರ್ಟ್‌  ಮಾಲೀಕರ ಸಭೆ ನಡೆಸಲಾಗಿದೆ. 8 ಚೀತಾ ವಾಹನಗಳು 24 ಗಂಟೆ ಗಸ್ತು ತಿರುಗುತ್ತಿವೆ.
-ಶ್ರೀಹರಿಬಾಬು ಬಿ.ಎಲ್‌., ವಿಜಯನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಒಳಪಟ್ಟ ಹಂಪಿ ಸುತ್ತಮುತ್ತಲಿನ ಸ್ಮಾರಕಗಳ ಬಳಿ ಪ್ರವಾಸಿಗರಿಗೆ ಯಾವುದೇ ಭಯ ಇಲ್ಲ. ನಮ್ಮ ಇಲಾಖೆಯಿಂದ 85 ಭದ್ರತಾ ಸಿಬ್ಬಂದಿ ಕಣ್ಣಿನ ಮೇಲೆ ಕಣ್ಣಿಟ್ಟು ಸ್ಮಾರಕಗಳ ಜತೆಗೆ ಪ್ರವಾಸಿಗರ ಮೇಲೆ ನಿಗಾ ಇಟ್ಟು ಕಾಯುತ್ತಿದ್ದಾರೆ. 120ರಷ್ಟು ಕಾರ್ಮಿಕರು ಅಗತ್ಯದ ಕೆಲಸ ಮಾಡುತ್ತಿದ್ದಾರೆ. ಪ್ರವಾಸಿಗರು, ಸ್ಮಾರಕಗಳ ರಕ್ಷಣೆಗೆ ಸುಮಾರು 200 ಮಂದಿ ನಮ್ಮ ಇಲಾಖೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಮಗೆ ಅಭದ್ರತೆಯ ಭಾವನೆ ಇದೆ ಎಂದು ಇದುವರೆಗೆ ಒಬ್ಬನೇ ಒಬ್ಬ ವಿದೇಶಿ ಪ್ರವಾಸಿ ನಮ್ಮ ಬಳಿ ದೂರು ನೀಡಿಲ್ಲ.
-ನಿಹಿಲ್ ದಾಸ್‌, ಸೂಪರಿಂಟೆಂಡೆಂಟ್‌, ಎಎಸ್‌ಐ ಹಂಪಿ ವೃತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.