ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಬಹುತೇಕ ಕಡೆಗಳಲ್ಲಿ ಮುಂಗಾರು ಮಳೆ ಬಿರುಸು ಪಡೆದಿದೆ. ಸಮುದ್ರದಲ್ಲಿ ಅಲೆಗಳ ಉಬ್ಬರ ಹೆಚ್ಚಾಗಿದೆ. ಮಳೆಗಾಲದಲ್ಲಿ ಜೀವಕಳೆ ಪಡೆಯುವ ಜಲಪಾತಗಳು, ಉಕ್ಕಿ ಹರಿಯುವ ನದಿ ಹಳ್ಳ, ತೊರೆಗಳು, ಅಬ್ಬರಿಸುವ ಸಮುದ್ರವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು, ಪ್ರಕೃತಿಯನ್ನು ಆಸ್ವಾದಿಸುವುದಕ್ಕಾಗಿ ಬೆಟ್ಟ ಗುಡ್ಡಗಳನ್ನು ಹತ್ತುವುದಕ್ಕೆ ಚಾರಣಿಗರು ಬಯಸುವುದು ಸಾಮಾನ್ಯ. ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸುವ ಪ್ರವಾಸಿ ತಾಣಗಳ ಭೇಟಿಗೆ ಸ್ಥಳೀಯ ಆಡಳಿತಗಳು ನಿರ್ಬಂಧ ವಿಧಿಸುತ್ತವೆ. ದುಸ್ಸಾಹಸಕ್ಕೆ ಕೈ ಹಾಕದಂತೆ ಜನರಿಗೆ ಎಚ್ಚರಿಕೆಯನ್ನೂ ನೀಡುತ್ತವೆ. ಹಾಗಿದ್ದರೂ, ಆಡಳಿತದ ಕಣ್ತಪ್ಪಿಸಿ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವವರು ಇದ್ದಾರೆ. ಹಾಗೆ ಹೋಗಿ ದಿಢೀರ್ ಪ್ರವಾಹ, ಭೂಕುಸಿತದಂತಹ ನೈಸರ್ಗಿಕ ವಿಪತ್ತಿನ ಕಾರಣಕ್ಕೆ ಅಪಾಯಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸದ್ಯದ ಸ್ಥಿತಿ ಹೇಗಿದೆ? ಯಾವ ಪ್ರವಾಸಿ ತಾಣ ಅಪಾಯಕಾರಿ? ಮಳೆಗಾಲದಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತವೇ? ಪ್ರವಾಸ ಹೊರಟರೆ ವಹಿಸಬೇಕಾದ ಎಚ್ಚರಿಕೆಗಳೇನು? ತಜ್ಞರು ಏನು ಹೇಳುತ್ತಾರೆ? ವಿವರ ಇಲ್ಲಿದೆ
....
ಘಟನೆ 1: ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಮರವಂತೆ ಬೀಚ್‌ಗೆ ಗೋವಾ ಮತ್ತು ಬೆಂಗಳೂರಿನಿಂದ ಬಂದಿದ್ದ ಐವರು ಪ್ರವಾಸಿಗರು ಸಮುದ್ರ ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ಜೀವರಕ್ಷಕ ಸಿಬ್ಬಂದಿ ಮತ್ತು ಸಾರ್ವಜನಿಕರು ಸೇರಿ ಅವರನ್ನು ರಕ್ಷಣೆ ಮಾಡಿದ್ದರು
ಘಟನೆ 2: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನದುರ್ಗ ಮತ್ತು ಬಂಡಾಜೆ ಜಲಪಾತಕ್ಕೆ ಚಾರಣ ಹೋಗುವುದಕ್ಕಾಗಿ ಚಿತ್ರದುರ್ಗದಿಂದ ಬಂದಿದ್ದ 10 ವಿದ್ಯಾರ್ಥಿಗಳ ತಂಡವೊಂದು ಗೂಗಲ್ ಮ್ಯಾಪ್ ನಂಬಿ ಚಾರಣ ಹೊರಟು ಕಾಡಿನಲ್ಲಿ ದಾರಿ ತಪ್ಪಿತ್ತು. ಕೊನೆಗೆ ಪೊಲೀಸರು, ಅಗ್ನಿಶಾಮಕ, ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಬಸವಳಿದಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದರು
ಘಟನೆ 3: ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಾಗ ಜಲಾಶಯದ ಕೆಳಭಾಗದ ಸೇತುವೆಯ ಮೇಲೆ ನೀರು ಹರಿಯುತ್ತದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರವಾಸಿಗರೊಬ್ಬರು ಇಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿದ್ದರು
ಘಟನೆ 4: ಇದು 2019ರಲ್ಲಿ ನಡೆದ ಘಟನೆ. ಭಾರಿ ಮಳೆಯಾಗುತ್ತಿದ್ದ ಆಗಸ್ಟ್ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಲ್ಲತ್ತಿಗಿರಿ ಜಲಪಾತದ ಅಂಗಣದಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಸುಮಾರು 35 ಪ್ರವಾಸಿಗರು ತೆರಳಿದ್ದರು. ಮಳೆಯಿಂದಾಗಿ ಮೈದುಂಬಿದ್ದ ಜಲಪಾತವು ಏಕಾಏಕಿ ರೌದ್ರಾವತಾರ ತಾಳಿ ಭೋರ್ಗರೆಯಲು ಆರಂಭಿಸಿತು. ದೇವಾಲಯದಲ್ಲಿದ್ದ ಪ್ರವಾಸಿಗರು ಅಪಾಯದಲ್ಲಿ ಸಿಲುಕಿದರು. ಸತತ ಪ್ರಯತ್ನದ ನಂತರ ಸ್ಥಳೀಯರು ಅವರನ್ನು ರಕ್ಷಿಸಿದರು.
– ಇವು ಕೆಲವು ನಿರ್ದರ್ಶನಗಳಷ್ಟೆ. ರಾಜ್ಯದಾದ್ಯಂತ ನಡೆದ ಇಂತಹ ಹಲವು ಘಟನೆಗಳನ್ನು ಪಟ್ಟಿ ಮಾಡಬಹುದು.
ಈ ಅಂಕಿ ಅಂಶಗಳನ್ನು ಗಮನಿಸಿ: ಕಾವೇರಿ ನದಿ ಹರಿಯುವ ಹಾದಿಯಲ್ಲಿ ಬರುವ ಮಂಡ್ಯ ಜಿಲ್ಲೆಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ‘ಬಲಮುರಿ’ ಮತ್ತು ಮಳವಳ್ಳಿ ತಾಲ್ಲೂಕಿನ ‘ಮುತ್ತತ್ತಿ’ ಪ್ರವಾಸಿ ತಾಣಗಳು ಮಳೆಗಾಲದಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತವೆ. ಆದರೆ, ಇತ್ತೀಚೆಗೆ ಇವು ‘ಸಾವಿನ ವಲಯ’ಗಳಾಗಿ ಅಪಾಯದ ಕರೆಗಂಟೆ ಬಾರಿಸುತ್ತಿವೆ. ಆರು ವರ್ಷಗಳಲ್ಲಿ ಬಲಮುರಿಯಲ್ಲಿ 32 ಮಂದಿ ಮತ್ತು ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ 30 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಯುವಜನರೇ ಹೆಚ್ಚಿದ್ದಾರೆ.
ಮಳೆಗಾಲದಲ್ಲಿ ಪ್ರವಾಸಿ ತಾಣಗಳಲ್ಲಿ ಅಪಾಯವನ್ನೂ ಲೆಕ್ಕಿಸಿದೆ ಪ್ರವಾಸಿಗರು ಮಾಡುವ ದುಸ್ಸಾಹಸವು ಅವರನ್ನು ಅಪಾಯಕ್ಕೆ ಸಿಲುಕಿಸುತ್ತಿವೆ. ಮೊಬೈಲ್ ಯುಗದಲ್ಲಿ ಯುವಜನರ ನಡುವೆ ಜನಪ್ರಿಯವಾಗಿರುವ ಸೆಲ್ಫಿ ತೆಗೆಯುವ, ರೀಲ್ಸ್ ಮಾಡುವ ಹುಚ್ಚು ಹಲವು ಸಂದರ್ಭಗಳಲ್ಲಿ ಅವರ ಜೀವವನ್ನು ಬಲಿ ತೆಗೆದುಕೊಳ್ಳುತ್ತಿದೆ.
ಸುಂದರ ಪ್ರಕೃತಿ, ಜಲಪಾತ ಮುಂಗಾರು ಸಮಯದಲ್ಲಿ ಅಪಾಯಕಾರಿಯಾಗಬಹುದು. ಹಾಗಾಗಿ ಮಳೆಗಾಲದಲ್ಲಿ ಪ್ರವಾಸ, ಚಾರಣವನ್ನು ಕೈಗೊಳ್ಳುವ ಮುನ್ನ ಜನರು ಕರಾರುವಾಕ್ಕಾಗಿ ಯೋಜನೆ ರೂಪಿಸಬೇಕು. ವಿಪರೀತ ಎನ್ನುವಷ್ಟು ಮಳೆ ಇದ್ದರೆ ಪ್ರವಾಸ/ಚಾರಣದ ಯೋಜನೆಯನ್ನೇ ಕೈಬಿಡುವುದು ಸೂಕ್ತ. ಅಪಾಯಕಾರಿ ಸ್ಥಳಗಳನ್ನು ಭೇಟಿ ನೀಡುವುದಕ್ಕೆ ಆಯ್ಕೆ ಮಾಡಿಕೊಳ್ಳಲೇ ಬಾರದು. ಒಂದು ವೇಳೆ ತೆರಳಿದರೂ ಸ್ಥಳೀಯ ಆಡಳಿತ ನೀಡುವ ಎಚ್ಚರಿಕೆಯನ್ನು ಪಾಲಿಸಬೇಕು ಎಂಬ ಸಲಹೆಯನ್ನು ನೀಡುತ್ತಾರೆ ತಜ್ಞ ಪ್ರವಾಸಿಗರು, ಪ್ರವಾಸ ನಿರ್ವಾಹಕರು ಮತ್ತು ಪ್ರವಾಸ ಮಾರ್ಗದರ್ಶಕರು.
ಗರಿಷ್ಠ ಎಚ್ಚರಿಕೆ ಬೇಕು
ಜಲಪಾತ, ನದಿ, ತೊರೆ ಝರಿಗಳು ಮೈತುಂಬಿದ ಸಂದರ್ಭದಲ್ಲಿ ಅದರ ಹತ್ತಿರ ಹೋಗುವುದು ಯಾವಾಗಲೂ ಅಪಾಯಕಾರಿ. ಮಳೆಗಾಲದಲ್ಲಿ ಬಹಳಷ್ಟು ಜಲಪಾತಗಳ ಭೇಟಿಗೆ ಜಿಲ್ಲಾಡಳಿತಗಳು ನಿರ್ಬಂಧ ವಿಧಿಸುತ್ತವೆ. ಮಳೆಗಾಲದಲ್ಲಿ ದೊಡ್ಡ ಬೆಟ್ಟ ಗುಡ್ಡಗಳ ಚಾರಣವೂ ಸುರಕ್ಷಿತವಲ್ಲ. ಸಮುದ್ರಗಳು ಕೂಡ ಪ್ರಕ್ಷುಬ್ಧವಾಗಿರುವುದರಿಂದ ಬೀಚ್‌ಗಳಿಗೆ ಭೇಟಿ ನೀಡಿದರೂ, ನೀರಿಗೆ ಇಳಿಯಲೇಬಾರದು. ನಮಗೆ ಹೆಚ್ಚು ಪರಿಚಿತವಲ್ಲದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚಾರ ಮಾಡುವುದು ಅಪಾಯಕಾರಿ. ಜಲಪಾತ, ಅಣೆಕಟ್ಟು, ಕೆರೆ ನದಿ ಸೇರಿದಂತೆ ಇತರ ಜಲಮೂಲಗಳಿಗೆ ಭೇಟಿ ನೀಡಲು ಅನುಮತಿ ಇದ್ದರೂ ಜನರು ದೂರದಿಂದ ನಿಂತುಕೊಂಡು ಅದರ ಸೌಂದರ್ಯವನ್ನು ಸವಿಯಬೇಕು. ಅಪಾಯಕಾರಿ ಸ್ಥಳಗಳಿಗೆ ಮಳೆಗಾಲದಲ್ಲಿ ಪ್ರವಾಸ ಹೋಗುವ ಯೋಜನೆಯನ್ನೇ ಹಾಕಿಕೊಳ್ಳಬಾರದು ಎಂಬುದು ನನ್ನ ಸಲಹೆ
ಪುಟ್ಟಹೊನ್ನೇಗೌಡ, ಬೆಂಗಳೂರಿನ ಚಾರಣ–ಸುತ್ತಾಟ ತಂಡದ ನಿರ್ವಾಹಕ
–––
ನೋಡಲು ಸುಂದರ, ಬಲು ಅಪಾಯಕರ
ಪಶ್ಚಿಮ ಘಟ್ಟ ಶ್ರೇಣಿಯ ಕಡಿದಾದ ಪ್ರದೇಶದಲ್ಲಿರುವ ಜಲಪಾತದಿಂದ ಸುಮಾರು 50 ಮೀ. ದೂರದವರೆಗೂ ನೀರು ಚಿಮ್ಮುತ್ತಿರುತ್ತದೆ. ಹಾಗಾಗಿ ಅಲ್ಲಿನ ಬಂಡೆಕಲ್ಲುಗಳು ಪಾಚಿಗಟ್ಟಿರುತ್ತವೆ. ಜಾರುವ ಬಂಡೆಕಲ್ಲುಗಳ ಮೇಲೆ ಕಾಲಿಡುವಾಗ ಬಹಳ ಎಚ್ಚರ ಬೇಕು. ಸ್ಥಳೀಯರಿಗೆ ಈ ಅಪಾಯದ ಅಂದಾಜು ಇರುತ್ತದೆ. ದೂರದ ಊರುಗಳಿಂದ ಬರುವ ಪ್ರವಾಸಿಗರು ಧುಮ್ಮಿಕ್ಕುವ ನೀರನ್ನು ಕಂಡಾಗ ಖುಷಿಯಿಂದ ಮೈಮರೆಯುತ್ತಾರೆ. ಅಪಾಯಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಂಡಾಜೆ, ಎರ್ಮಾಯಿ, ದಿಡುಪೆ– ಆನಡ್ಕ, ಕಲ್ಲುಗುಂಡಿ ಮೊದಲಾದ ಜಲಪಾತಗಳು, ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಕೂಡ್ಲು, ಒನಕೆ ಅಬ್ಬಿ ಜಲಪಾತಗಳು, ಕುಂದಾಪುರ ತಾಲ್ಲೂಕಿನ ಕೊಡಚಾದ್ರಿ ಬಳಿಯ ಆನೆ ಝರಿ, ಅರಸಿನಗುಂಡಿ, ಹಿಡ್ಲುಮನೆ ಜಲಪಾತಗಳು, ಕುದುರೆಮುಖ ಸಮೀಪದ ಬ್ರಹ್ಮರಗುಂಡಿ, ಹನುಮನ ಗುಂಡಿ ಮೊದಲಾದ ಜಲಪಾತಗಳಿಗೆ ಜೋರು ಮಳೆಯಾಗುವಾಗ ಭೇಟಿ ನೀಡುವುದು ಅಪಾಯಕರ. ಈ ಜಲಪಾತಗಳಿಗೆ ಸಾಗುವ ಕಾಡು ದಾರಿಯ ಜಾಡೂ ಅಷ್ಟೇ ಸವಾಲಿನದು
–ದಿನೇಶ್ ಹೊಳ್ಳ, ಚಾರಣಿಗ, ಮಂಗಳೂರು
––––––
ಅಪಾಯಕಾರಿ ಪ್ರವಾಸಿ ತಾಣಗಳು
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರವಾಸಿ ತಾಣಗಳು ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿವರ್ತನೆಯಾಗುತ್ತವೆ.
ಬಂಡಾಜೆ ಜಲಪಾತ: ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಿಂದ 25 ಕಿ.ಮೀ ದೂರದಲ್ಲಿ ಈ ಜಲಪಾತವಿದೆ. ಸೋಮಂತಡ್ಕ ಕಡಿರುದ್ಯಾವರ ಮಾರ್ಗವಾಗಿ ಈ ಜಲಪಾತ ತಲುಪಲು 10 ಕಿ.ಮೀ ಚಾರಣ ಮಾಡಬೇಕು. ಕೆಲವರು ಈ ಜಲಪಾತದ ಮೇಲ್ಭಾಗಕ್ಕೆ ಹತ್ತುವ ಸಾಹಸ ಮಾಡುತ್ತಾರೆ. ಜಾರು ಬಂಡೆ ಕಲ್ಲುಗಳಿಂದ ಕೂಡಿದ ಇದರ ತಳ ಭಾಗವೂ ಅಪಾಯಕಾರಿ. ಅನೇಕ ಪ್ರವಾಸಿಗರು ಜಾರಿ ಬಿದ್ದು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಸದ್ಯಕ್ಕೆ ಇಲ್ಲಿಗೆ ಪ್ರವೇಶ ನಿಷೇಧವಿದೆ
ಗಡಾಯಿಕಲ್ಲು: ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ಬೆಳ್ತಂಗಡಿಯಿಂದ 8 ಕಿಮೀ ದೂರದಲ್ಲಿದೆ. ಜಮಾಲಾಬಾದ್ ಹಾಗೂ ನರಸಿಂಹಗಡ ಎಂಬ ಹೆಸರೂ ಇದೆ. ಇದರ ಮೇಲೆ ಕೋಟೆ ಇದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ನಡ ಗ್ರಾಮದಲ್ಲಿರುವ ಈ ಬೆಟ್ಟವನ್ನು ಹತ್ತಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಇಲ್ಲಿ ಚಾರಣಕ್ಕೆ ಅವಕಾಶ. ಇದಕ್ಕೆ ಈ ಬೆಟ್ಟದ ತುದಿಯನ್ನು ತಲುಪಲು 2,800ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಬೇಕು. ಮಳೆಗಾಲದಲ್ಲಿ ಮೆಟ್ಟಿಲುಗಳಲ್ಲೇ ನೀರು ಹರಿಯುತ್ತದೆ. ಒದ್ದೆಯಾದರೆ ಜಾರುತ್ತವೆ. ಸದ್ಯ ಅರಣ್ಯ ಇಲಾಖೆ ಗಡಾಯಿಕಲ್ಲಿನ ಚಾರಣಕ್ಕೆ ನಿಷೇಧ ವಿಧಿಸಿದೆ.
ಸೋಮೇಶ್ವರದ ರುದ್ರಪಾದೆ: ಜಿಲ್ಲೆಯ ಸುಂದರ ಕಡಲ ಕಿನಾರೆಗಳ ಪೈಕಿ ಉಳ್ಳಾಲ ತಾಲ್ಲೂಕಿನ ಸೋಮೇಶ್ವರ ಕಿನಾರೆಯೂ ಒಂದು. ಇಲ್ಲಿ ಸೋಮೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಬೃಹತ್ ಕಲ್ಲು ಬಂಡೆಯ (ರುದ್ರಪಾದೆ) ಮೇಲೆ ನಿಂತು, ಬೋರ್ಗೆರೆಯುವ ಸಮುದ್ರವನ್ನು ಕಣ್ತುಂಬಿಕೊಳ್ಳಲು, ಸೂರ್ಯಾಸ್ತದ ಸೊಬಗನ್ನು ಸವಿಯಲು ಪ್ರವಾಸಿಗರು ಭೇಟಿ ನೀಡುತ್ತಾರೆ. ‘ರುದ್ರಪಾದೆ’ಯನ್ನು ಮಳೆಗಾಲದಲ್ಲಿ ಏರುವುದು ಅಪಾಯಕಾರಿ. ಪಾಚಿಗಟ್ಟಿದ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದು ಅನೇಕ ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಮಳೆಗಾಲದಲ್ಲಿ ‘ರುದ್ರಪಾದೆ’ಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ.
ಆಲೆಕಾನ್ ಜಲಪಾತ: ರುದ್ರ–ರಮಣೀಯ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪ ಇರುವ ಆಲೆಕಾನ್ ಜಲಪಾತ ನೋಡುಗರನ್ನು ಸಮ್ಮೋಹನಗೊಳಿಸಿದರೂ ಅಪಾಯದ ತಾಣ. ಈ ತಾಣದಲ್ಲಿ ಪ್ರವಾಸಿಗರು ಇಳಿಯಲು ಅವಕಾಶ ಇಲ್ಲ. ಆದರೂ, ರಸ್ತೆಯಲ್ಲಿ ಸಾಗುವ ಪ್ರವಾಸಿಗರು ದುಸ್ಸಾಹಸ ಮಾಡಿ ಅಪಾಯಕ್ಕೆ ಸಿಲುಕಿದ್ದಾರೆ. 10 ವರ್ಷಗಳಲ್ಲಿ ಐವರು ಪ್ರವಾಸಿಗರು ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಡೀ ಘಾಟಿಯಲ್ಲಿ ಪ್ರವಾಸಿಗರ ವಾಹನ ನಿಲುಗಡೆ ಮಾಡಿ ಜಲಪಾತಕ್ಕೆ ಇಳಿಯದಂತೆ ಪೊಲೀಸರು ನಿಗಾ ವಹಿಸುತ್ತಿದ್ದಾರೆ. ಅವರ ಕಣ್ತಪ್ಪಿಸಿ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಸಾಮಾನ್ಯವಾಗಿದೆ.
ಗೋಕಾಕ ಜಲಪಾತ: ಸದ್ಯ ನಿರ್ಬಂಧ
ಗೋಕಾಕ ಜಲಪಾತ ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಯಿಂದ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಇಲ್ಲಿ ಮಳೆಗಾಲದಲ್ಲಿ 186 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಜಲಪಾತದ ಸೊಬಗು ಸವಿಯಲು ಬರುತ್ತಿದ್ದ ಪೈಕಿ ಹಲವು ಯುವಕ–ಯುವತಿಯರು ಅಪಾಯ ಲೆಕ್ಕಿಸದೆ ಜಲಪಾತದ ಅಂಚಿಗೆ ಹೋಗಿ ನಿಲ್ಲುತ್ತಿದ್ದರು. ಬೃಹತ್ ಬಂಡೆಗಳ ಕಂದಕಕ್ಕೆ ಇಳಿದು ಫೋಟೊ ಮತ್ತು ಸೆಲ್ಫಿ ತೆಗೆಯುವ ಸಾಹಸ ಮಾಡುತ್ತಿದ್ದರು. ಇಂಥ ಸಾಹಸದ ವೇಳೆ, ಕೆಲವು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಹಾಗಾಗಿ ಗೋಕಾಕ ಜಲಪಾತದ ಅಪಾಯಕಾರಿ ಸ್ಥಳಗಳಲ್ಲಿ ಈಗ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ. ಬ್ರಿಟಿಷ್ ಕಾಲದಲ್ಲಿ ನಿರ್ಮಿಸಿದ್ದ ತೂಗುಸೇತುವೆ ಹಳೆಯದಾದ ಕಾರಣ, ಅದರ ಮೇಲೆ ಸಂಚಾರ ನಿಷೇಧಿಸಲಾಗಿದೆ.
ನುಸುಳುವಿಕೆ ನಿರಾತಂಕ: ಖಾನಾಪುರ ತಾಲ್ಲೂಕಿನಲ್ಲಿ 12 ಜಲಪಾತಗಳಿವೆ. ಅದರಲ್ಲೂ ಭೀಮಗಡ ಅಭಯಾರಣ್ಯದಲ್ಲಿನ ಐದು ಜಲಪಾತಗಳು ಪ್ರವಾಸಿಗರ ಮೆಚ್ಚಿನ ತಾಣಗಳಾಗಿವೆ. ಪ್ರವೇಶ ನಿಷೇಧವಿದ್ದರೂ, ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ನಿರಾತಂಕವಾಗಿ ನುಸುಳುತ್ತಾರೆ. ಇದರೊಂದಿಗೆ ದಟ್ಟ ಅರಣ್ಯದಲ್ಲಿ ಜೀಪು ಮತ್ತಿತರ ವಾಹನ ತರುವುದು, ಡ್ರೋನ್ ಹಾರಿಸುವುದು, ಬೆಂಕಿ ಹಚ್ಚಿ ಅಡುಗೆ ಮಾಡುವುದು ನಡೆದೇ ಇದೆ. ಇದರಿಂದ ವನ್ಯಜೀವಿಗಳಿಗೆ ಕುತ್ತು ಬರುತ್ತಿದ್ದು, ಪರಿಸರವಾದಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.
ಎಚ್ಚರ ತಪ್ಪಿದರೆ ಅಪಾಯ: ಬಳ್ಳಾರಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಸಂಡೂರು. ‘ಸಿ ಸಂಡೂರು’ ಪಾಯಿಂಟ್ ಅತ್ಯಂತ ಜನಪ್ರಿಯ. ಇಲ್ಲಿ ಸೆಲ್ಫಿ ತೆಗೆಯಲು ಹೋಗಿ ಹಲವರು ಕಾಲು ಜಾರಿ ಬಿದ್ದಿದ್ದಾರೆ. ಇದೇ ಸಂಡೂರಿನ ದಟ್ಟ ಅರಣ್ಯದ ಮಧ್ಯದಲ್ಲಿ ಬರುವ, ಅಂಕಮ್ಮನಾಳ್ ಗ್ರಾಮದ ‘ದುಮುಕು’ ಜಲಪಾತ ನೋಡಲೂ ಪ್ರವಾಸಿಗರು ತೆರಳುತ್ತಾರೆ. ದುರ್ಗಮ ಹಾದಿಯಲ್ಲಿ ನಡೆದೇ ಇಲ್ಲಿಗೆ ತಲುಪಬೇಕು. ಒಂದು ವೇಳೆ ದಾರಿ ತಪ್ಪಿದರೆ ಕಾಡಿನಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ. ಸಂಡೂರಿನ ಆಕರ್ಷಕ ತಾಣ ನಾರಿಹಳ್ಳ ಜಲಾಶಯವು ಭೀಮತೀರ್ಥ ಸಮೀಪದ ‘ವ್ಯೂ ಪಾಯಿಂಟ್’ವೊಂದರಿಂದ ವಿಹಂಗಮವಾಗಿ ಕಾಣುತ್ತದೆ. ಈ ಜಾಗ ತಲುಪಲು ದುರ್ಗಮ ಹಾದಿಯಲ್ಲೇ ಹೋಗಬೇಕು. ಈ ಹಾದಿಯಲ್ಲೂ ಎಚ್ಚರದಿಂದ ಇರಬೇಕಾಗುತ್ತದೆ. ಇಲ್ಲವಾದರೆ, ಕಾಲು ಜಾರಿ ಅವಘಡ ಖಚಿತ.
ಜಲಪಾತ ವೀಕ್ಷಣೆಗಿಲ್ಲ ಅವಕಾಶ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸೃಷ್ಟಿಯಾಗುವ ನೂರಾರು ಜಲಪಾತಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಹೆಚ್ಚು. ಈ ಬಾರಿ ಮಳೆಗಾಲದ ಆರಂಭದಲ್ಲೇ ಹಲವು ಕಡೆಗಳಲ್ಲಿ ಭೂಕುಸಿತ ನಡೆದಿರುವುದರಿಂದ ಜಲಪಾತಗಳು, ಅರಣ್ಯದ ನಡುವೆ ಇರುವ ಯಾಣದಂತಹ ಪ್ರವಾಸಿ ತಾಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ನಿರ್ಬಂಧದ ವಿಷಯ ಅರಿಯದೆ ಅಂಕೋಲಾದ ವಿಭೂತಿ ಜಲಪಾತ, ಕುಮಟಾದ ಯಾಣ, ಯಲ್ಲಾಪುರದ ಮಾಗೋಡು ಜಲಪಾತ ವೀಕ್ಷಣೆಗೆ ಪ್ರವಾಸಿಗರು ಬರುತ್ತಿದ್ದಾರೆ. ಹೀಗೆ ಬಂದವರನ್ನು ಗ್ರಾಮ ಅರಣ್ಯ ಸಮಿತಿಯ ಸದಸ್ಯರು ತಡೆದು ವಾಪಸ್ ಕಳಿಸುತ್ತಿದ್ದಾರೆ.
ಸೆಲ್ಫಿ ಗೀಳು: ಪ್ರಾಣಕ್ಕೆ ಕುತ್ತು
ಉಡುಪಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಹಲವು ಬೀಚ್‌ಗಳಿದ್ದರೂ ಮಲ್ಪೆ ಮತ್ತು ತ್ರಾಸಿ ಮರವಂತೆ ಬೀಚ್‌ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕೆಲವು ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿ ಹುಚ್ಚಾಟ ಮೆರೆಯುತ್ತಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಪ್ರಮುಖ ಬೀಚ್‌ಗಳಲ್ಲಿ ತಡೆಬೇಲಿ ಹಾಕಲಾಗುತ್ತದೆ. ಆದರೂ ತಡೆಬೇಲಿ ಇಲ್ಲದ ಕಡೆಗಳಲ್ಲಿ ಪ್ರವಾಸಿಗರು ನೀರಿಗಿಳಿಯುವ ಪ್ರಯತ್ನ ಮಾಡುತ್ತಾರೆ; ಕಡಲ್ಕೊರೆತ ತಡೆಯಲು ಹಾಕಿರುವ ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆಯುವ ಸಾಹಸಕ್ಕೆ ಇಳಿಯುತ್ತಾರೆ. ಮಲ್ಪೆ ಬೀಚ್‌ನ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮದುವೆಯ ಫೋಟೊಶೂಟ್‌ಗಾಗಿ ಬರುವವರು ಕೂಡ ಮಲ್ಪೆ ಬೀಚ್‌ನಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಫೋಟೊ ತೆಗೆಸಿಕೊಳ್ಳುತ್ತಾರೆ.
ಸುರಕ್ಷತೆಗಿಲ್ಲ ಆದ್ಯತೆ
ಪ್ರವಾಸಿ ತಾಣಗಳಿಗೆ ಹೆಸರಾಗಿರುವ ಕೊಡಗು ಜಿಲ್ಲೆಯ ಚೇಲಾವರ ಜಲಪಾತ ಸೇರಿದಂತೆ ಬಹುತೇಕ ಜಲಪಾತ ಪ್ರದೇಶಗಳಲ್ಲಿ ಸುರಕ್ಷತೆ ಇಲ್ಲ. ಚೇಲಾವರದಲ್ಲಿ ಹಲವು ಮಂದಿ ಮೃತಪಟ್ಟಿದ್ದಾರೆ. ಇರ್ಪು ಜಲಾಶಯದಲ್ಲಿ ಪ್ರವೇಶದ್ವಾರದಲ್ಲಿ ಮಾತ್ರ ಭದ್ರತೆ ಇದೆ. ಪ್ರವಾಸಿಗರು ಬಂಡೆಗಳ ಮೇಲೆ ನಿಂತು ಅಪಾಯಕಾರಿ ಸ್ಥಳದಲ್ಲಿ ಫೋಟೊ, ವಿಡಿಯೊ ತೆಗೆದುಕೊಳ್ಳುತ್ತಾರೆ. ಮಾಂದಲ್ ಪಟ್ಟಿಗೆ ಹೋಗುವ ರಸ್ತೆ ಅಪಾಯಕಾರಿಯಾಗಿದೆ. ವಾಹನ ಚಾಲನೆ ಕಡುಕಷ್ಟ. ಕೋಟೆ ಅಬ್ಬಿ ಫಾಲ್ಸ್, ಅಬ್ಬಿಫಾಲ್ಸ್‌ನಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಇಲ್ಲ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿಯ ಪಾತ್ರದಲ್ಲಿ ಈಜಲು ಮೋಜು ಮಾಡಲು ಹೋಗಿ ಹಾಗೂ ಭರಚುಕ್ಕಿ ಜಲಪಾತದ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗರು ಬಲಿಯಾಗುತ್ತಿದ್ದಾರೆ. 2022ರಿಂದ 2025ರ ಮೇವರೆಗೂ 28 ಮಂದಿ ಜೀವ ಕಳೆದುಕೊಂಡಿದ್ದಾರೆ. ಜಲಪಾತ ವೀಕ್ಷಣೆ ಮಾಡಿದ ಬಳಿಕ ಬರುವ ಮಾರ್ಗಮಧ್ಯೆ ಇರುವ ದರ್ಗಾ, ಶಿವನಸಮುದ್ರ, ವೆಸ್ಲಿ ಸೇತುವೆ ಹಾಗೂ ಸಮೂಹ ದೇವಾಲಯಗಳ ಸುತ್ತಮುತ್ತ ಹರಿಯುವ ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ ಬಲಿಯಾಗುತ್ತಿದ್ದಾರೆ. ಈ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ ಸಮರ್ಪಕವಾಗಿಲ್ಲ.
ಹಾಸನಜಿಲ್ಲೆ ಮೂಕನಮನೆ ಜಲಪಾತ ಸ್ಥಳ ಭೇಟಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ದೂರದಿಂದಲೇ ವೀಕ್ಷಿಸಬೇಕು. ಕಡಿಮೆ ನೀರಿದ್ದಾಗ ಜಲಪಾತದ ತಳಭಾಗಕ್ಕೆ ತೆರಳಲು ಅವಕಾಶ ನೀಡಲಾಗುತ್ತದೆ.
ಮಾಹಿತಿ: ವಿವಿಧ ಬ್ಯೂರೊಗಳಿಂದ
ಗೋಕಾಕ ಜಲಪಾತದಲ್ಲಿ ಫೋಟೊ ತೆಗೆಸಿಕೊಳ್ಳಲು ಇತ್ತೀಚೆಗೆ ಅಪಾಯಕಾರಿ ಕಂದರಕ್ಕೆ ಇಳಿದಿದ್ದ ಯುವಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.