ADVERTISEMENT

ಆಳ–ಅಗಲ | ವಿದೇಶಿ ಸಿನಿಮಾ ಮೇಲೆ ಅಮೆರಿಕ ತೆರಿಗೆ: ಭಾರತೀಯ ಚಿತ್ರೋದ್ಯಮಕ್ಕೆ ಕಂಟಕ?

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 23:30 IST
Last Updated 30 ಸೆಪ್ಟೆಂಬರ್ 2025, 23:30 IST
ಬಾಹುಬಲಿ
ಬಾಹುಬಲಿ   
‘ಮಗುವಿನ ಕೈಯಿಂದ ಕ್ಯಾಂಡಿ ಕಸಿದುಕೊಳ್ಳುವಂತೆ, ಸಿನಿಮಾ ಉದ್ಯಮವನ್ನು ಇತರ ದೇಶಗಳು ಅಮೆರಿಕದಿಂದ ಕಸಿದುಕೊಂಡಿವೆ...’

ಈ ಮಾತನ್ನು ಹೇಳಿದವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅಮೆರಿಕದಿಂದ ಹೊರಗೆ ತಯಾರಾಗುವ ಚಿತ್ರಗಳಿಗೆ ಶೇ 100ರಷ್ಟು ಸುಂಕ ವಿಧಿಸುವ ಬಗ್ಗೆ ಘೋಷಿಸುವ ಸಂದರ್ಭದಲ್ಲಿ ಅವರು ಪರಿಸ್ಥಿತಿಯನ್ನು ವಿಶ್ಲೇಷಿಸಿರುವ ಪರಿ ಇದು. 

ಮೊನ್ನೆಯಷ್ಟೇ ಹೊಸ ಎಚ್‌–1ಬಿ ವೀಸಾ ಅರ್ಜಿಗಳ ಮೇಲೆ ಒಂದು ಲಕ್ಷ ಡಾಲರ್ ಶುಲ್ಕ ಘೋಷಿಸಿ ಭಾರತದಲ್ಲಿ ತಲ್ಲಣ ಮೂಡಿಸಿದ್ದ ಟ್ರಂಪ್, ಈಗ ಜನರ ನೆಚ್ಚಿನ ಮನರಂಜನಾ ಮಾಧ್ಯಮವಾದ ಸಿನಿಮಾ ಮೇಲೂ ಕೆಂಗಣ್ಣು ಬೀರಿದ್ದಾರೆ. ಅಮೆರಿಕದ ಹೊರಗಿನ ಚಿತ್ರಗಳ ಮೇಲೆ ಶೇ 100ರಷ್ಟು ಸುಂಕ ಹೇರುವ ಅವರ ನಿರ್ಧಾರದಿಂದ ಭಾರತೀಯ ಚಿತ್ರರಂಗದ ಮೇಲೆ, ಮುಖ್ಯವಾಗಿ ಹಿಂದಿ ಮತ್ತು ತೆಲುಗು ಚಿತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಹೊರದೇಶಗಳಲ್ಲಿ ನಿರ್ಮಾಣವಾಗುವ ಇಂಗ್ಲಿಷ್ ಚಿತ್ರಗಳ ಮೇಲೂ ಇದು ಹೆಚ್ಚು ಪರಿಣಾಮ ಬೀರಲಿದೆ. ಶೇ 100ರಷ್ಟು ಸುಂಕ ಯಾವಾಗಿನಿಂದ ಜಾರಿಯಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವ್ಯಾಪಾರದ ದೃಷ್ಟಿಯಿಂದ ದೇಶದಲ್ಲಿ ಹಿಂದಿ ಮತ್ತು ತೆಲುಗು ಚಿತ್ರರಂಗಗಳು ಮುಂಚೂಣಿಯಲ್ಲಿದ್ದು, ಈ ಚಿತ್ರಗಳಿಗೆ ಅಮೆರಿಕದಲ್ಲಿಯೂ ದೊಡ್ಡ ಸಂಖ್ಯೆಯ ಪ್ರೇಕ್ಷಕರಿದ್ದಾರೆ. ಅಮೀರ್ ಖಾನ್, ಶಾರುಕ್‌ ಖಾನ್ ಸೇರಿದಂತೆ ಹಿಂದಿ ಚಿತ್ರರಂಗದ ಹಲವರು ಅಮೆರಿಕದಲ್ಲಿಯೂ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯೂ ಆಗಿರುವ ಪವನ್ ಕಲ್ಯಾಣ್ ನಟಿಸಿರುವ ‘ದೇ ಕಾಲ್ ಹಿಮ್ ಓಜಿ’ ತೆಲುಗು ಚಿತ್ರವು ಬಿಡುಗಡೆಯಾದ ಮೊದಲೆರಡು ದಿನದಲ್ಲೇ ವಿದೇಶಗಳಲ್ಲಿ ₹48 ಕೋಟಿ ಗಳಿಸಿತ್ತು. ಅದರಲ್ಲಿ ಅಮೆರಿಕದ ಪಾಲು ₹37 ಕೋಟಿ. ರಜನಿಕಾಂತ್ ಅವರ ‘ಕೂಲಿ’ ಚಿತ್ರವು 2 ಕೋಟಿ ಡಾಲರ್ (₹178 ಕೋಟಿ) ಗಳಿಸಿತ್ತು. ಈ ಪೈಕಿ ಶೇ 35ಕ್ಕಿಂತಲೂ ಹೆಚ್ಚಿನ ಪಾಲು ಅಮೆರಿಕದಿಂದಲೇ ಬಂದಿತ್ತು. ಈ ವರ್ಷದ ಬಾಲಿವುಡ್‌ನ ಅತಿ ಯಶಸ್ವಿ ಚಿತ್ರವಾದ ‘ಛಾವಾ’ ವಿದೇಶಗಳಿಂದ 1 ಕೋಟಿ  ಡಾಲರ್ (₹88.84 ಕೋಟಿ) ಗಳಿಕೆ ಮಾಡಿತ್ತು. ಅದರಲ್ಲಿ 64 ಲಕ್ಷ ಡಾಲರ್ (₹57 ಕೋಟಿ) ಅಮೆರಿಕ–ಕೆನಡಾದಿಂದಲೇ ಬಂದಿತ್ತು. ಭಾರತದ ಸ್ಟಾರ್‌ ನಟರ ಚಿತ್ರಗಳು, ದೊಡ್ಡ ಬಂಡವಾಳ, ಉತ್ತಮ ಕಥೆಯನ್ನು ಆಧರಿಸಿದ ಚಿತ್ರಗಳು ಕೂಡ ಹಾಕಿದ ಬಂಡವಾಳ ವಾಪಸ್ ಪಡೆಯಲು ಮತ್ತು ಲಾಭ ಕಾಣಲು ಅಮೆರಿಕದ ಮಾರುಕಟ್ಟೆಯನ್ನು ಅವಲಂಬಿಸಿವೆ.       

ADVERTISEMENT

ಭಾರತವೂ ಸೇರಿದಂತೆ ಅಮೆರಿಕದ ಹೊರಗೆ ನಿರ್ಮಾಣವಾಗಿರುವ ಚಿತ್ರಗಳನ್ನು ಅಲ್ಲಿ ಬಿಡುಗಡೆ ಮಾಡಬೇಕು ಎಂದರೆ, ಚಿತ್ರ ನಿರ್ಮಾಪಕರು, ಪ್ರದರ್ಶಕರು ಶೇ 100ರಷ್ಟು ಸುಂಕ ತೆರಬೇಕಾಗುತ್ತದೆ. ಇದರಿಂದ ಟಿಕೆಟ್ ಬೆಲೆ ದುಪ್ಪಟ್ಟಾಗುತ್ತದೆ. ಪರಿಣಾಮವಾಗಿ, ಪ್ರೇಕ್ಷಕರು ಸಿನಿಮಾದಿಂದ ದೂರ ಉಳಿಯಬಹುದು ಎನ್ನುವ ಆತಂಕ ಎದುರಾಗಿದೆ.

ಅಮೆರಿಕದ ಮಾರುಕಟ್ಟೆ ಏಕೆ ಮುಖ್ಯ?

ಭಾರತದ ಚಿತ್ರಗಳಿಗೆ ವಿದೇಶಗಳ ಪೈಕಿ ಅಮೆರಿಕ, ಕೆನಡಾ, ಉತ್ತರ ಅಮೆರಿಕ ದೊಡ್ಡ ಮಾರುಕಟ್ಟೆಯಾಗಿದ್ದು, ಜಾಗತಿಕ ಗಳಿಕೆಯಲ್ಲಿ ಹೆಚ್ಚಿನ ಪಾಲು ತಂದುಕೊಡುತ್ತಿವೆ. 2000 ಇಸವಿಯವರೆಗೂ ಭಾರತದ ಚಿತ್ರಗಳು ಅಮೆರಿಕ, ಇಂಗ್ಲೆಂಡ್ ಮತ್ತು ಗಲ್ಫ್‌ ರಾಷ್ಟ್ರಗಳನ್ನೇ ಹೆಚ್ಚಾಗಿ ಅವಲಂಬಿಸಿತ್ತು. ನಂತರ ಹಲವು ದೇಶಗಳಲ್ಲಿ ಮಾರುಕಟ್ಟೆ ಸೃಷ್ಟಿಯಾದರೂ ಭಾರತದ ಚಿತ್ರಗಳಿಗೆ ಇಂದಿಗೂ ಅಮೆರಿಕ ದೊಡ್ಡ ಮಾರುಕಟ್ಟೆಯಾಗಿಯೇ ಉಳಿದಿದೆ. ಒಂದು ಅಂದಾಜಿನಂತೆ, ಭಾರತೀಯ ಚಿತ್ರಗಳು ವಿದೇಶಗಳಿಂದ ಗಳಿಸುತ್ತಿರುವ ಮೊತ್ತದಲ್ಲಿ ಅಮೆರಿಕದಿಂದಲೇ
ಶೇ 40ರಷ್ಟು ಸಂಗ್ರಹವಾಗುತ್ತಿದೆ. ಅಮೆರಿಕದಲ್ಲಿರುವ ಭಾರತೀಯರು ಹಿಂದಿ, ತೆಲುಗು, ತಮಿಳು, ಮಲಯಾಳ, ಪಂಜಾಬಿ ಹಾಗೂ ಬಂಗಾಳಿ ಸಿನಿಮಾಗಳನ್ನು ನೋಡಲು ಪ್ರತಿವರ್ಷ 10 ಕೋಟಿ ಡಾಲರ್‌ವರೆಗೆ (₹888 ಕೋಟಿ) ವೆಚ್ಚ ಮಾಡುತ್ತಿದ್ದಾರೆ ಎಂದು ಭಾರತದ ನಿರ್ಮಾಪಕರ ಕೂಟವು ಅಂದಾಜಿಸಿದೆ.   

ಟಿಕೆಟ್‌ ದರ ದುಪ್ಪಟ್ಟು

ಟ್ರಂಪ್‌ ಆಡಳಿತದ ನಿರ್ಧಾರದಿಂದ ಅಮೆರಿಕದಲ್ಲಿ ಭಾರತೀಯರ ಚಲನಚಿತ್ರಗಳ ಟಿಕೆಟ್‌ ದರ ದುಪ್ಪಟ್ಟು ಆಗಲಿದೆ ಎಂದು ಸಿನಿಮಾ ಕ್ಷೇತ್ರದಲ್ಲಿ ತೊಡಗಿರುವವರು ಅಂದಾಜಿಸಿದ್ದಾರೆ. 

ಅಮೆರಿಕದಲ್ಲಿ ಬಿಡುಗಡೆಯಾಗುವ ತೆಲುಗು, ಹಿಂದಿ ಭಾಷೆಯ ದೊಡ್ಡ ಬಜೆಟ್‌ನ ಸಿನಿಮಾಗಳ ಪ್ರದರ್ಶನದ ಟಿಕೆಟ್‌ ದರ ಸಾಮಾನ್ಯವಾಗಿ 15ರಿಂದ 20 ಡಾಲರ್‌ವರೆಗೆ ಇರುತ್ತದೆ. ಶೇ 100ರಷ್ಟು ಸುಂಕ ವಿಧಿಸಿದರೆ ಅದು 30ರಿಂದ 40 ಡಾಲರ್‌ವರೆಗೆ ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಇಷ್ಟು ದರ ನೀಡಿ ಸಿನಿಮಾ ನೋಡಲು ಜನರು ಚಿತ್ರಮಂದಿರಗಳಿಗೆ ಬಾರದೇ ಇರಬಹುದು. ಹೀಗಾದಾಗ, ಚಿತ್ರಗಳ ಹಂಚಿಕೆದಾರರು, ನಿರ್ಮಾಪಕರು ಹೆಚ್ಚಿನ ನಷ್ಟ ಅನುಭವಿಸಲಿದ್ದಾರೆ ಎಂಬ ಕಳವಳವೂ ವ್ಯಕ್ತವಾಗಿದೆ. 

ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ಚಿತ್ರಗಳಿಗೂ ಶೇ 100ರಷ್ಟು ಸುಂಕ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ. 

ಟಾಲಿವುಡ್‌ಗೆ ಹೊಡೆತ?

ಅಮೆರಿಕದಲ್ಲಿರುವ ಭಾರತೀಯರಲ್ಲಿ ತೆಲುಗರ ಸಂಖ್ಯೆ ಗಣನೀಯವಾಗಿದೆ (ಸುಮಾರು 12 ಲಕ್ಷ). ತೆಲುಗು ಚಿತ್ರಗಳಿಗೆ ಅಮೆರಿಕ ದೊಡ್ಡ ಮಾರುಕಟ್ಟೆಯಾಗಿದೆ. ಹಿಂದಿ ಚಿತ್ರಗಳಿಗೆ ಸಮನಾಗಿ, ಹೊಸ ತೆಲುಗು ಚಿತ್ರಗಳು ಅಮೆರಿಕದಲ್ಲಿ 300–400 ಪ್ರದರ್ಶನಗಳನ್ನು ಕಾಣುತ್ತವೆ. ಕೆಲವು ಚಿತ್ರಗಳು ಭಾರತಕ್ಕಿಂತಲೂ ಅಮೆರಿಕದಲ್ಲಿಯೇ ಹೆಚ್ಚು ಗಳಿಕೆ ಮಾಡಿದ ಉದಾಹರಣೆಗಳಿವೆ.

ಎಫ್‌ಐಸಿಸಿಐ–ಫ್ರೇಮ್ಸ್ ಮತ್ತು ಕೆಪಿಎಂಜಿಯ ‘ಇಂಡಿಯನ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿ’ ವರದಿಯ ಪ್ರಕಾರ, ತೆಲುಗು ಚಿತ್ರಗಳ ವಿದೇಶಿ ಗಳಿಕೆಯ ಪೈಕಿ ಶೇ 85ರಷ್ಟು ಅಮೆರಿಕದಿಂದಲೇ ಬರುತ್ತಿದ್ದು, ಚಿತ್ರದ ಒಟ್ಟು ಗಳಿಕೆಯಲ್ಲಿ ಅದರ ಪಾಲು ಶೇ 5–10ರಷ್ಟು ಇರುತ್ತದೆ.       

ತೆಲುಗಿನ ‘ಕಲ್ಕಿ 2898 ಎಡಿ‘, ‘ಆರ್‌ಆರ್‌ಆರ್‌’, ‘ಪುಷ್ಪ 2’, ‘ಆ್ಯನಿಮಲ್’ ಚಿತ್ರಗಳು ಅಮೆರಿಕದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ಕಂಡು, 15–19 ಮಿಲಿಯನ್ ಡಾಲರ್‌ವರೆಗೆ ಗಳಿಸಿದ್ದವು. ‘ಬಾಹುಬಲಿ 2’ ಅಮೆರಿಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರ ಎನ್ನುವ ದಾಖಲೆಯನ್ನೇ ನಿರ್ಮಿಸಿದೆ. 

ದಸರಾದಿಂದ ಆರಂಭವಾಗಿ ದೀಪಾವಳಿ, ಸಂಕ್ರಾಂತಿ, ಯುಗಾದಿ ಹಬ್ಬಗಳ ಸಮಯದಲ್ಲಿ ತೆಲುಗು ಚಿತ್ರಗಳನ್ನು ಬಿಡುಗಡೆ ಮಾಡುವ ಪರಿಪಾಠ ಇದೆ. ಈ ಬಾರಿಯೂ ಹಬ್ಬದ ಋತುವಿನಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸುತ್ತಿದ್ದಾರೆ. ಮಹೇಶ್ ಬಾಬು ಅವರಿಗಾಗಿ ರಾಜಮೌಳಿ ನಿರ್ದೇಶಿಸುತ್ತಿರುವ ಚಿತ್ರವೂ ಸೇರಿದಂತೆ ಹಲವು ದೊಡ್ಡ ಬಜೆಟ್‌ನ, ಸ್ಟಾರ್ ಚಿತ್ರಗಳ ನಿರ್ಮಾಪಕರು ಅಮೆರಿಕದ ಮಾರುಕಟ್ಟೆಯನ್ನೇ ಮುಖ್ಯವಾಗಿ ನೆಚ್ಚಿಕೊಂಡಿದ್ದಾರೆ. ಆದರೆ, ಈಗ ಟ್ರಂಪ್ ಅವರು ಸುಂಕ ಹೇರುವ ಘೋಷಣೆ ಮಾಡಿರುವುದು ತೆಲುಗು ಚಿತ್ರರಂಗದಲ್ಲಿ ಆತಂಕ ಮೂಡಿಸಿದೆ.

ಹಾಲಿವುಡ್‌ಗೂ ಪೆಟ್ಟು?

ಅಮೆರಿಕದಲ್ಲಿ ತಯಾರಾಗುವ ಹಾಲಿವುಡ್‌ ಸಿನಿಮಾಗಳು, ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯನ್ನು ಹೊಂದಿವೆ. ಅಮೆರಿಕದ ಸುಂಕಕ್ಕೆ ಪ್ರತಿಯಾಗಿ ಭಾರತ, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳು ಹೆಚ್ಚು ಸುಂಕ ವಿಧಿಸಿದರೆ ಹಾಲಿವುಡ್‌ ನಿರ್ಮಾಪಕರು, ವಿತರಕರಿಗೂ ಹೊರೆಯಾಗಲಿದೆ. ಟಿಕೆಟ್‌ ದರ ಹೆಚ್ಚಾಗಿ, ಸಿನಿಮಾ ಪ್ರಿಯರು ಚಿತ್ರಮಂದಿರಗಳತ್ತ ಸುಳಿಯದಿದ್ದರೆ ಸಿನಿಮಾ ಗಳಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. 

ಹಾಲಿವುಡ್‌ ಚಿತ್ರಗಳ ನಿರ್ಮಾಣದಲ್ಲಿ ವಿಎಫ್‌ಎಕ್ಸ್‌ ಸೇರಿದಂತೆ ಇನ್ನಿತರ ತಂತ್ರಜ್ಞಾನ ಆಧಾರಿತ ಕೆಲಸಗಳು ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತವೆ. ಚಿತ್ರೀಕರಣಕ್ಕಾಗಿ ನಿರ್ಮಾಪಕರು ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್‌ನಂತಹ ದೇಶಗಳನ್ನು ಅವಲಂಬಿಸಿದ್ದಾರೆ. ‌ಅಲ್ಲಿ ದೊಡ್ಡ ಬಜೆಟ್‌ ಸಿನಿಮಾಗಳಿಗೆ ತೆರಿಗೆ ವಿನಾಯಿತಿಗಳಿವೆ. ಇದಲ್ಲದೇ, ಅಮೆರಿಕದ ಚಿತ್ರ ನಿರ್ಮಾಣದಲ್ಲಿ ಏಷ್ಯಾ, ಯುರೋಪ್‌ ಸೇರಿದಂತೆ ವಿವಿಧ ಭಾಗಗಳ ನಿರ್ಮಾಪಕರು, ವಿತರಕರು ಪಾಲುದಾರಿಕೆಯನ್ನೂ ಹೊಂದಿರುತ್ತಾರೆ. ಇವು ವಿದೇಶಿ ಚಿತ್ರಗಳೋ, ಸ್ವದೇಶಿ ಚಿತ್ರಗಳೋ ಎಂದು ನಿರ್ಧರಿಸುವುದೇ ಕಷ್ಟವಾಗಬಹುದು.

ಜತೆಗೆ, ಅಮೆರಿಕದ ನಿರ್ಧಾರಕ್ಕೆ ಪ್ರತಿಯಾಗಿ ಇತರ ದೇಶಗಳು ತೆರಿಗೆ/ಸುಂಕ ಹೆಚ್ಚಿಸಿದರೆ ಚಿತ್ರ ನಿರ್ಮಾಣದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

ಕನ್ನಡ ಚಿತ್ರಗಳಿ‌‌ಗೂ ಮಾರುಕಟ್ಟೆ

ಹಿಂದಿ, ತೆಲುಗು, ತಮಿಳು, ಮಲಯಾಳ ಮಾತ್ರವಲ್ಲ ಕನ್ನಡದ ಚಿತ್ರಗಳಿಗೂ ಅಮೆರಿಕದಲ್ಲಿ ಮಾರುಕಟ್ಟೆ ಇದೆ. ಕ್ಯಾಲಿಫೋರ್ನಿಯಾ, ಟೆಕ್ಸಾಸ್‌, ನ್ಯೂಜೆರ್ಸಿ, ನ್ಯೂಯಾರ್ಕ್‌ನಂತಹ ನಗರಗಳಲ್ಲಿ ಚಿತ್ರಮಂದಿರಗಳಿಗೆ ತೆರಳಿಯೇ ಕನ್ನಡ ಚಿತ್ರ ವೀಕ್ಷಿಸುವವರು ಅಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕನ್ನಡಿಗರು ಮಾತ್ರವಲ್ಲ, ವಿವಿಧ ರಾಜ್ಯಗಳ ಸಿನಿಮಾ ಪ್ರೇಮಿಗಳೂ ಕನ್ನಡ ಚಿತ್ರಗಳನ್ನು ನೋಡುತ್ತಾರೆ. ಹಿಂದೆ ಅಮೆರಿಕದಲ್ಲಿ ತೆರೆಕಾಣುತ್ತಿದ್ದ ಕನ್ನಡ ಚಿತ್ರಗಳ ಸಂಖ್ಯೆ ಕಡಿಮೆ ಇತ್ತು. ಆದರೆ, ಇತ್ತೀಚೆಗೆ ದೊಡ್ಡ ಬಜೆಟ್‌ನ ಚಿತ್ರಗಳು ಅಲ್ಲಿನ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿವೆ. 

‘ಕೆಜಿಎಫ್‌’, ‘ಕಾಂತಾರ’, ‘ಚಾರ್ಲಿ 777’, ‘ವಿಕ್ರಾಂತ್‌ ರೋಣ’, ‘ರಂಗಿತರಂಗ’ ಮುಂತಾದ ಚಿತ್ರಗಳನ್ನು ಅಲ್ಲಿನ ಪ್ರೇಕ್ಷಕರು ಇಷ್ಟಪಟ್ಟಿದ್ದರು. ‘ಕೆಜಿಎಫ್‌ ಚಾಪ್ಟರ್‌–2’, ‘ಕಾಂತಾರ’ ಚಿತ್ರಗಳು ಅಮೆರಿಕದ ಬಾಕ್ಸ್‌ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನೂ ಕಂಡಿದ್ದವು. ‘ಕಾಂತಾರ ಅಧ್ಯಾಯ–1’ ಚಿತ್ರ ಕೂಡ ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜುಗೊಂಡಿದೆ. 100ಕ್ಕೂ ಹೆಚ್ಚು ನಗರಗಳ ಚಿತ್ರಮಂದಿರಗಳಲ್ಲಿ ಕನ್ನಡ, ತೆಲುಗು, ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ.

ಆರ್‌ಆರ್‌ಆರ್‌
ಕಲ್ಕಿ
ಛಾವಾ
ದಂಗಲ್‌
ಕಾಂತಾರ
01-10-2025 Ala agala Film tax Stats

ಆಧಾರ: ಪಿಟಿಐ, ರಾಯಿಟರ್ಸ್‌, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.