ADVERTISEMENT

ಆಳ ಅಗಲ | ಪಶ್ಚಿಮ ಘಟ್ಟ: ಅರ್ಧಕ್ಕೂ ಹೆಚ್ಚು ಭಾಗದಲ್ಲಿ ಭೂಕುಸಿತದ ಅ‍ಪಾಯ

ಶಿರೂರು ಗುಡ್ಡ ಕುಸಿತ: ಐಐಟಿ ಧಾರವಾಡದಿಂದ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆ ಸಲುವಾಗಿ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ್ದ ಪರಿಣಾಮ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು
ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆ ಸಲುವಾಗಿ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ್ದ ಪರಿಣಾಮ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು   
ಬೇಡ್ತಿ–ವರದಾ ನದಿ ಜೋಡಣೆ ಯೋಜನೆಗೆ ಒಂದು ಕಡೆ ರಾಜ್ಯ ಸರ್ಕಾರ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಮುಂದಾಗಿದ್ದರೆ, ಮತ್ತೊಂದು ಕಡೆ ಜನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಯೋಜನೆಯ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ವೇಳೆಯಲ್ಲೇ ಪ್ರಮುಖ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಶೇ 60ಕ್ಕೂ ಹೆಚ್ಚು ಭಾಗವು ಸಂಭವನೀಯ ಭೂಕುಸಿತದ ಪ್ರದೇಶವಾಗಿದ್ದು, ರಾಜ್ಯದಲ್ಲಿ ಘಟ್ಟವು ಹರಡಿರುವ ಏಳು ಜಿಲ್ಲೆಗಳಲ್ಲಿ ಭೂಕುಸಿತ ಸಾಧ್ಯತೆಗಳು ಇವೆ; ಈ ಪೈಕಿ ಅತಿ ಹೆಚ್ಚು ಭೂಕುಸಿತದ ಅಪಾಯ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದು ವರದಿ ಉಲ್ಲೇಖಿಸಿದೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟ ಉಳಿಸಿ ಎನ್ನುವ ಕೂಗು ತೀವ್ರವಾಗುವ ಹೊತ್ತಿನಲ್ಲಿ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಿವಿಲ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಲಯ್ ಪ್ರಾಮಾಣಿಕ್ ಅವರು ಪ್ರೊ.ಅಮರನಾಥ ಹೆಗಡೆ ಅವರ ಮಾರ್ಗದರ್ಶನದಲ್ಲಿ ನಡೆಸಿರುವ ಭೂಕುಸಿತಕ್ಕೆ ಸಂಬಂಧಿಸಿದ ಅಧ್ಯಯನ ವರದಿ ‘ಜಿಯೋಹಝಾರ್ಡಸ್ ಮೆಕ್ಯಾನಿಕ್ಸ್‌’ ಜರ್ನಲ್‌ನಲ್ಲಿ ಪ್ರಕಟವಾಗಿದೆ. 2024ರ ಜುಲೈನಲ್ಲಿ ಅಂಕೋಲಾದ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡಕುಸಿತವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಪಶ್ಚಿಮ ಘಟ್ಟದಲ್ಲಿ ಭೂಕುಸಿತ ಸಂಭವನೀಯತೆ ಬಗ್ಗೆ ಈ ಅಧ್ಯಯನವನ್ನು ನಡೆಸಲಾಗಿದ್ದು, ಘಟ್ಟದ ಅರ್ಧಕ್ಕೂ ಹೆಚ್ಚು ಭಾಗ ಭೂಕುಸಿತದ ಅಪಾಯ ಎದುರಿಸುತ್ತಿದೆ ಎಂದು ವರದಿ ಹೇಳಿದೆ.

ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಅಲ್ಲಿನ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದು, ಸಾಮಾಜಿಕ–ಆರ್ಥಿಕ ಬಿಕ್ಕಟ್ಟುಗಳನ್ನೂ ಸೃಷ್ಟಿಸುತ್ತಿವೆ. ಈ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಲು ಭೂಕುಸಿತದ ಬಗೆಗಿನ ಅಧ್ಯಯನ ಅಗತ್ಯ ಎಂದು ಪ್ರತಿಪಾದಿಸಿರುವ ಅಧ್ಯಯನಕಾರರು, ಉಪಗ್ರಹಗಳ ಚಿತ್ರಗಳು, ಈ ಹಿಂದಿನ ಭೂಕುಸಿತದ ದಾಖಲೆಗಳು, ಮಣ್ಣಿನ ರಚನೆ, ನೀರು ಇತ್ಯಾದಿ ಕುರಿತಂತೆ ದತ್ತಾಂಶ ಸಂಗ್ರಹಿಸಿ, ಅವುಗಳನ್ನು ವಿಶ್ಲೇಷಿಸಿ, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೂಕಂಪದ ಸಂಭವನೀಯತೆಯ ಪ್ರಮಾಣವನ್ನು ಲೆಕ್ಕ ಹಾಕಿದ್ದಾರೆ.

ವರದಿಯ ಪ್ರಕಾರ, ರಾಜ್ಯದಲ್ಲಿ ಹರಡಿರುವ ಪಶ್ಚಿಮ ಘಟ್ಟದ ಶೇ 60.7ರಷ್ಟು ಭಾಗವು ಸಂಭವನೀಯ ಭೂಕುಸಿತದ ಪ್ರದೇಶವಾಗಿದ್ದು, ಈ ಪೈಕಿ ಉತ್ತರಕನ್ನಡ ಜಿಲ್ಲೆಯ ಅತಿಹೆಚ್ಚು ಭೂಪ್ರದೇಶ (ಶೇ 30ರಷ್ಟು) ಭೂಕುಸಿತದ ಸಂಭಾವ್ಯತೆ ಹೊಂದಿದೆ. ನಂತರದ ಸ್ಥಾನಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ , ಹಾಸನ ಮತ್ತು ಉಡುಪಿ ಜಿಲ್ಲೆಗಳಿವೆ.

ADVERTISEMENT

ಅಧ್ಯಯನ ಏಕೆ?: ಪಶ್ಚಿಮ ಘಟ್ಟಗಳು ಜೀವವೈವಿಧ್ಯದ ಪ್ರಮುಖ ತಾಣಗಳಾಗಿವೆ. ಇಲ್ಲಿನ ಭೂಬಳಕೆಯ ಸ್ವರೂಪವು ತೀವ್ರಗತಿಯಲ್ಲಿ ಬದಲಾಗುತ್ತಿದೆ. ಈ ಪ್ರದೇಶದಲ್ಲಿ ಭೂಕುಸಿತದ ಪ್ರಕರಣಗಳು ಹೆಚ್ಚುತ್ತಿವೆ. 2024ರಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಭೂಕುಸಿತಗಳು ಸಂಭವಿಸಿವೆ. ವಯನಾಡ್‌ನಲ್ಲಿ ಗುಡ್ಡ ಕುಸಿದು ಹಲವು ಗ್ರಾಮಗಳು ಕೊಚ್ಚಿಕೊಂಡು ಹೋಗಿ, 250 ಮಂದಿ ಸಾವಿಗೀಡಾಗಿದ್ದರು. ಅಂಕೋಲಾದಲ್ಲಿ ನಡೆದ (ಶಿರೂರು) ಭೂಕುಸಿತವು ರಾಜ್ಯಕ್ಕೆ ಎಚ್ಚರಿಕೆಯ ಗಂಟೆಯಾಗಿತ್ತು. ಈ ದಿಸೆಯಲ್ಲಿ ಕೇಂದ್ರ ಸರ್ಕಾರವು ಭೂಕುಸಿತದ ಅಪಾಯ ಇರುವ 15 ರಾಜ್ಯಗಳನ್ನು ಗುರಿಯಾಗಿಸಿಕೊಂಡು, ರಾಷ್ಟ್ರೀಯ ಭೂಕುಸಿತ ಹಾನಿ ತಡೆ ಕಾರ್ಯಕ್ರಮ (ಎನ್‌ಎಲ್ಆರ್‌ಎಂಪಿ) ಜಾರಿ ಮಾಡಿತು. ಇವುಗಳಲ್ಲಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ನಾಲ್ಕು ರಾಜ್ಯಗಳು (ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು) ಸೇರಿವೆ. ಹಾನಿ ತಡೆಗೆ ಸೂಕ್ತ ಮೂಲಸೌಕರ್ಯ ಕಲ್ಪಿಸುವುದು, ಕ್ಷಿಪ್ರ ಮಾಹಿತಿ ಸಂಗ್ರಹ ಮತ್ತು ಸಿದ್ಧತೆಗಳನ್ನು ನಡೆಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಆದರೆ, ವಿಶ್ವಾಸಾರ್ಹವಾದ ಭೂಕುಸಿತದ ಸಂಭಾವ್ಯತೆಯ ನಕ್ಷೆಗಳು ಇಲ್ಲದಿರುವುದು ಈ ಯೋಜನೆಗೆ ಪ್ರಮುಖ ತೊಡಕಾಗಿತ್ತು. ಈ ಕೊರತೆಯನ್ನು ನೀಗುವುದು ಮತ್ತು ಪಶ್ಚಿಮ ಘಟ್ಟಗಳಲ್ಲಿ ಗುಡ್ಡ ಕುಸಿತದ ಹಾನಿ ತಡೆಯುವುದು ಅಧ್ಯಯನದ ಆಶಯವಾಗಿದೆ.

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅವೈಜ್ಞಾನಿಕವಾದ ಅಭಿವೃದ್ಧಿ ಯೋಜನೆಗಳು, ಪ್ರಕೃತಿಯ ಸಮತೋಲನವನ್ನು ಹಾಳುಮಾಡುವಂತಹ ಯೋಜನೆಗಳನ್ನು ಕೈಗೊಳ್ಳುವುದು ಭೂಕುಸಿತದ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ಹಿಂದಿನಿಂದಲೂ ಹಲವು ತಜ್ಞರು ಹೇಳುತ್ತಲೇ ಬಂದಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಬೇಡ್ತಿ –ವರದಾ ನದಿ ಜೋಡಣೆ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದ್ದು, ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಇವುಗಳ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಹೋರಾಟವೇ ನಡೆಯುತ್ತಿದೆ. ವಯನಾಡ್‌ನಲ್ಲಿ ಆದ ಗುಡ್ಡ ಕುಸಿತ, ಶಿರೂರು ಗುಡ್ಡ ಕುಸಿತದಂಥ ಪ್ರಕರಣಗಳು ಮತ್ತು ತಜ್ಞರ ಅಧ್ಯಯನ ವರದಿಗಳು ಭೂಕುಸಿತದ ಘೋರ ಪರಿಣಾಮಗಳನ್ನು ಜನರ ಮುಂದಿಟ್ಟಿದ್ದು, ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎನ್ನುವ ಒತ್ತಾಯ ವ್ಯಕ್ತವಾಗಿದೆ.

ಅಧ್ಯಯನ ಹೇಳಿದ್ದೇನು?

* ತೀವ್ರ ಮಳೆ, ಇಳಿಜಾರಿನ ಭೂಪ್ರದೇಶ, ಮಣ್ಣಿನ ಗುಣಲಕ್ಷಣಗಳು ಭೂಕುಸಿತಕ್ಕೆ ಪ್ರಮುಖ ಕಾರಣಗಳು

* ವಾರ್ಷಿಕವಾಗಿ 300 ಸೆಂ.ಮೀಗಿಂತಲೂ ಹೆಚ್ಚು ಮಳೆಯಾಗುವುದು

* ಈ ಭಾಗದಲ್ಲಿ ಜೇಡಿ, ಮರಳು ಮಿಶ್ರಿತ ಮಣ್ಣು ಹೆಚ್ಚಾಗಿದೆ

* ಅಧ್ಯಯನ ನಡೆಸಲಾದ ಪ್ರದೇಶದಲ್ಲಿ ಭೂಮಿಯು 28 ಡಿಗ್ರಿಗಿಂತಲೂ ಹೆಚ್ಚು ಇಳಿಜಾರು ಹೊಂದಿದೆ.ಅಂಕೋಲಾದಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶ 31 ಡಿಗ್ರಿಯಷ್ಟು ಇಳಿಜಾರಾಗಿತ್ತು. ಅಲ್ಲಿ ವಾರ್ಷಿಕವಾಗಿ 300 ಸೆಂ.ಮೀಗಿಂತಲೂ ಹೆಚ್ಚು ಮಳೆಯಾಗುತ್ತದೆ. ಪಕ್ಕದಲ್ಲೇ ರಸ್ತೆ ಮತ್ತು ನದಿ ಇರುವುದರಿಂದ ಭೂಕುಸಿತದ ಅಪಾಯ ಹೆಚ್ಚಾಗಿತ್ತು

* ಗುಡ್ಡ ಕತ್ತರಿಸುವಿಕೆ, ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆಯುತ್ತಿದ್ದ ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳು ಕೂಡ ಅಂಕೋಲಾ ಗುಡ್ಡ ಕುಸಿತಕ್ಕೆ ಕಾರಣವಾಗಿರುವ ಸಾಧ್ಯತೆ ಹೆಚ್ಚಿದೆ

ಅಂಕೋಲಾದಲ್ಲಿ ಏನು ನಡೆದಿತ್ತು?

2024ರ ಜುಲೈ 16ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಗುಡ್ಡ ಕುಸಿದು 11 ಜನರು ಮೃತಪಟ್ಟಿದ್ದರು. ಹೆದ್ದಾರಿ ಬದಿಯಲ್ಲಿದ್ದ ಹೋಟೆಲ್‌ ಹಾಗೂ ಸಮೀಪದಲ್ಲೇ ನಿಂತಿದ್ದ ಲಾರಿಯೊಂದು ಮಣ್ಣಿನೊಂದಿಗೆ ಕೊಚ್ಚಿಕೊಂಡು ಹೋಗಿ ಪಕ್ಕದಲ್ಲೇ ಹರಿಯುತ್ತಿದ್ದ ಗಂಗಾವಳಿ ನದಿ ಪಾಲಾಗಿದ್ದವು.

ನಮ್ಮ ಅಧ್ಯಯನದಿಂದ ಕೆಲವು ಮಹತ್ವದ ಸಂಗತಿಗಳು ತಿಳಿದು ಬಂದಿವೆ. ಈ ವಿವರಗಳು ಭವಿಷ್ಯದಲ್ಲಿ ಭೂಕುಸಿತ ತಡೆಗೆ ನೆರವಾಗಲಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಬೀಳುವ, ಜೇಡಿ ಮಿಶ್ರಿತ ಮಣ್ಣು ಹೊಂದಿರುವ ಮತ್ತು ಇಳಿಜಾರಾಗಿರುವ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಾಗ ಹೆಚ್ಚು ಜಾಗರೂಕವಾಗಿದ್ದರೆ, ಗುಡ್ಡಕುಸಿತದಂತಹ ದುರಂತಗಳನ್ನು ತಡೆಯಬಹುದು.
–ಪ್ರೊ.ಅಮರನಾಥ ಹೆಗಡೆ, ಪ್ರಾಧ್ಯಾಪಕ, ಐಐಟಿ ಧಾರವಾಡ
ಶಿರೂರು ಗುಡ್ಡ ಕುಸಿತ ಮಾನವ ನಿರ್ಮಿತ ದುರಂತ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯ ಪರಿಣಾಮ ಅದು. ಆ ಘಟನೆಯನ್ನು ಆಧರಿಸಿಕೊಂಡು ಈ ಅಧ್ಯಯನ ನಡೆಸಲಾಗಿದೆ. ಈಗ ಲಭ್ಯವಿರುವ ದತ್ತಾಂಶಗಳನ್ನೇ ಇಲ್ಲಿ ವಿಶ್ಲೇಷಿಸಲಾಗಿದೆ. ದಿಢೀರ್‌ ಆಗಿ ಭಾರಿ ಪ್ರಮಾಣದಲ್ಲಿ ಮಳೆಯಾದಾಗ, ಜೇಡಿಮಣ್ಣಿರುವ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚು. ಪಶ್ಚಿಮ ಘಟ್ಟದ ವಿವಿಧ ಜಿಲ್ಲೆಗಳಲ್ಲಿ ಭೂಕುಸಿತದ ಅಪಾಯ ಇರುವ ಸ್ಥಳಗಳ ಬಗ್ಗೆ ಭೂ ವೈಜ್ಞಾನಿಕ ಅಧ್ಯಯನ ನಡೆಸಬೇಕಾದ ಅಗತ್ಯವಿದೆ. ಭೂಕುಸಿತದಂತಹ ದುರಂತಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವ ನೀಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ.
–ಎಚ್‌.ಎಸ್‌.ಎಂ. ಪ್ರಕಾಶ್‌, ನಿವೃತ್ತ ಉಪಮಹಾನಿರ್ದೇಶಕ, ಜಿಎಸ್‌ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.