ADVERTISEMENT

ಆಳ–ಅಗಲ: ವಿಶ್ವಕಪ್‌ ಚೆಸ್‌ ಮುಕುಟಕ್ಕೆ ಪೈಪೋಟಿ

ಭಾರತದ ಆಟಗಾರನಿಗೆ ಒಲಿಯುವುದೇ ಪಟ್ಟ?

ನಾಗೇಶ್ ಶೆಣೈ ಪಿ.
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
   
ಪ್ರತಿಷ್ಠಿತ ಚೆಸ್‌ ವಿಶ್ವಕಪ್‌ ನವೆಂಬರ್‌ ಒಂದರಿಂದ ಗೋವಾದಲ್ಲಿ ನಡೆಯಲಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಉದಯಿಸಿರುವ ಭಾರತದ ಆಟಗಾರರಿಗೆ ಈ ಟೂರ್ನಿ ಮಹತ್ವದ್ದು. ಇಲ್ಲಿ ಮೊದಲ ಮೂರರಲ್ಲಿ ಸ್ಥಾನ ಪಡೆದರೆ, ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಅವಕಾಶ ಪಡೆಯಬಹುದು. ವಿಶ್ವ ಚಾಂಪಿಯನ್‌ಷಿಪ್‌ಗೆ ಸವಾಲು ಹಾಕುವ ಆಟಗಾರರನ್ನು ನಿರ್ಧರಿಸುವ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆಯಲು ಇಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

23 ವರ್ಷಗಳ ಬಳಿಕ ಭಾರತವು ವಿಶ್ವಕಪ್ ಚೆಸ್‌ನ ಆತಿಥ್ಯ ವಹಿಸುತ್ತಿದೆ. ‘ಭಾರತವು ಪ್ರಾಚೀನ ಚೆಸ್‌ನ ತವರಷ್ಟೇ ಅಲ್ಲ; ಆಧುನಿಕ ಚೆಸ್‌ನ ಜಾಗತಿಕ ಪವರ್‌ಹೌಸ್‌. ಈ ಕ್ರೀಡೆಯಲ್ಲಿ ಭಾರತವು ಜಾಗತಿಕ ಚೆಸ್‌ ಹಂದರದ ಕೇಂದ್ರಸ್ತಂಭವಾಗಿರುವುದರಿಂದ ಈ ವಿಶ್ವಕಪ್‌ ಇಲ್ಲೇ ನಡೆಯುತ್ತಿದೆ’ ಎಂದು ವಿಶ್ವ ಚೆಸ್‌ ಫೆಡರೇಷನ್‌ನ (ಫಿಡೆ) ಅಧ್ಯಕ್ಷ ಅರ್ಕಾಡಿ ದ್ವೊರಕೊವಿಚ್‌ ಅವರು ಫಿಡೆ ವೆಬ್‌ಸೈಟ್‌ನಲ್ಲಿ ಬಣ್ಣಿಸಿದ್ದಾರೆ.

ಕ್ರಿಕೆಟ್‌, ಹಾಕಿ, ಫುಟ್‌ಬಾಲ್‌ ಮೊದಲಾದ ಕ್ರೀಡೆಗಳಲ್ಲಿ ವಿಶ್ವಕಪ್‌ ಮಹೋನ್ನತವಾದ ಟೂರ್ನಿ. ಚೆಸ್‌ನಲ್ಲಿ ಮಾತ್ರ, ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಕ್ಯಾಂಡಿಡೇಟ್ಸ್‌ ಟೂರ್ನಿಗಳ ನಂತರದ ಸ್ಥಾನವನ್ನು ವಿಶ್ವಕಪ್‌ ಪಡೆದಿದೆ. ಆದರೆ ಇದರ ಮಹತ್ವ ಕಡಿಮೆಯಾಗುವುದಿಲ್ಲ. ಏಕೆಂದರೆ ಈ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಪಡೆದವರು ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆಯುತ್ತಾರೆ.

2002ರಲ್ಲಿ ಹೈದರಾಬಾದ್‌ ವಿಶ್ವಕಪ್‌ನ ಆತಿಥ್ಯ ವಹಿಸಿದ್ದಾಗ ಭಾರತ ಚೆಸ್‌ನಲ್ಲಿ ದೊಡ್ಡ ಶಕ್ತಿಯಾಗಿರಲಿಲ್ಲ. ಅದರ ಮಾದರಿಯೂ ಬೇರೆಯಿತ್ತು. ವಿಶ್ವನಾಥನ್ ಆನಂದ್ ಅವರಷ್ಟೇ ದಿಗ್ಗಜರಾಗಿ ಬೆಳೆದಿದ್ದರು. ಈಗ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ದ್ವೊರಕೊವಿಚ್‌ ಅವರೇ ಉಲ್ಲೇಖಿಸಿರುವಂತೆ ಭಾರತ ಈಗ ಚೆಸ್‌ನ ದೈತ್ಯಶಕ್ತಿ.

ADVERTISEMENT

ಭಾರತದ ಗುಕೇಶ್‌ ದೊಮ್ಮರಾಜು ಹಾಲಿ ವಿಶ್ವ ಚಾಂಪಿಯನ್‌. ಭಾರತದ ತಂಡಗಳು, ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ಹಂಗೆರಿಯ ಬುಡಾಪೆಸ್ಟ್‌ನಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಓಪನ್ ಮತ್ತು ಮಹಿಳಾ ವಿಭಾಗಗಳಲ್ಲಿ  ಚಿನ್ನದ ಪದಕಗಳನ್ನು ಗೆದ್ದುಕೊಂಡಿವೆ. ಜುಲೈನಲ್ಲಷ್ಟೇ ಜಾರ್ಜಿಯಾದ ಬಟುಮಿಯಲ್ಲಿ  ನಡೆದ ಮಹಿಳಾ ವಿಶ್ವಕಪ್‌ನಲ್ಲಿ 19 ವರ್ಷ ವಯಸ್ಸಿನ ಪ್ರತಿಭಾನ್ವಿತೆ ದಿವ್ಯಾ ದೇಶಮುಖ್‌ ಚಾಂಪಿಯನ್ ಆಗಿದ್ದರು. ಫೈನಲ್‌ನಲ್ಲಿ ಅವರಿಗೆ ಸೋತ ಕೋನೇರು ಹಂಪಿ ಸಹ ಭಾರತದ ಅನುಭವಿಯೇ. ಇತ್ತೀಚೆಗಷ್ಟೇ ವೈಶಾಲಿ ರಮೇಶಬಾಬು ಅವರು ಫಿಡೆ ಮಹಿಳಾ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯನ್ನು ಸತತ ಎರಡನೇ ಬಾರಿಗೆ ಜಯಿಸಿ ದಾಖಲೆ ಬರೆದಿದ್ದಾರೆ.

ಭಾರತಕ್ಕೆ ಮಹತ್ವದ್ದು

ದಿವ್ಯಾ ದೇಶಮುಖ್, ಕೋನೇರು ಹಂಪಿ, ವೈಶಾಲಿ ಆರ್‌. – ಈ ಮೂವರೂ 2026ರ ಮಹಿಳಾ  ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಆದರೆ ಕ್ಯಾಂಡಿಡೇಟ್ಸ್‌ ಓಪನ್ ವಿಭಾಗದಲ್ಲಿ ಭಾರತದ ಆಟಗಾರರಲ್ಲಿ ಪ್ರಜ್ಞಾನಂದ ಅವರಿಗಷ್ಟೇ ಅವಕಾಶ ದಟ್ಟವಾಗಿದೆ. ಉಳಿದವರಿಗೆ ಸ್ಥಾನ ಪಡೆಯಲು ಗೋವಾದ ವಿಶ್ವಕಪ್ ಸುವರ್ಣಾವಕಾಶ ಒದಗಿಸಿದೆ. ಭಾರತ ಆತಿಥೇಯ ದೇಶವಾಗಿದ್ದು, ಅರ್ಜುನ್ ಇರಿಗೇಶಿ ಜೊತೆ ವಿದಿತ್ ಎಸ್‌.ಗುಜರಾತಿ, ನಿಹಾಲ್ ಸರೀನ್, ರೋನಕ್ ಸಾಧ್ವಾನಿ, ಪಾ.ಇನಿಯನ್ ಸೇರಿ 24 ಮಂದಿ ಕಣದಲ್ಲಿದ್ದಾರೆ. ದಿವ್ಯಾ ದೇಶಮುಖ್ ಈ ಟೂರ್ನಿಯಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದು ಆಡುತ್ತಿದ್ದಾರೆ. 206 ಮಂದಿಯ ಕಣದಲ್ಲಿ ಅವರೊಬ್ಬರೇ ಮಹಿಳೆ. ಚೀನಾದ ತಾರೆಯರಾದ ಜು ವೆಂಜುನ್ (ಹಾಲಿ ಮಹಿಳಾ ವಿಶ್ವ ಚಾಂಪಿಯನ್‌) ಮತ್ತು ಹೌ ಇಫಾನ್ ಅವರನ್ನು ಆಹ್ವಾನಿಸಿದರೂ ಅವರು ಆಡಲು ನಿರಾಕರಿಸಿದ್ದರಿಂದ ದಿವ್ಯಾಗೆ ಅವಕಾಶವಾಗಿದೆ.

ಭಾರತದ ಅರ್ಜುನ್ ಇರಿಗೇಶಿ ಅವರಿಗೆ ಈ ಟೂರ್ನಿ ಮಹತ್ವದ್ದು. ಭಾರತದ ಅಗ್ರಮಾನ್ಯ ಹಾಗೂ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅವರಿಗೆ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯಲು ಈ ಟೂರ್ನಿ ಬಹುಶಃ ಕೊನೆಯ ಅವಕಾಶ. ಈ ಹಿಂದಿನ (ಬಾಕು) ವಿಶ್ವಕಪ್‌ನಲ್ಲಿ ತೆಲಂಗಾಣದ ವಾರಂಗಲ್‌ನ ಗ್ರ್ಯಾಂಡ್‌ಮಾಸ್ಟರ್‌ ತಮ್ಮ ಸ್ನೇಹಿತ ಪ್ರಜ್ಞಾನಂದ ಅವರಿಗೆ ಕ್ವಾರ್ಟರ್‌ಫೈನಲ್‌ನಲ್ಲಿ ಮಣಿದಿದ್ದರು.

ವಿಶ್ವ ಚಾಂಪಿಯನ್ ಆಟಗಾರನಿಗೆ ಸವಾಲು ಹಾಕುವ ಆಟಗಾರರನ್ನು ನಿರ್ಧರಿಸಲು ಕ್ಯಾಂಡಿಡೇಟ್ಸ್‌ ಟೂರ್ನಿ ನಡೆಯುತ್ತದೆ. ಇದರಲ್ಲಿ ಎಂಟು ಮಂದಿಗಷ್ಟೇ ಆಡುವ ಅವಕಾಶ ಇರುತ್ತದೆ.  ಫ್ಯಾಬಿಯಾನೊ ಕರುವಾನ (ಅಮೆರಿಕ) 2024ರ ಸರ್ಕೀಟ್‌ ಪಾಯಿಂಟ್ ಮೂಲಕ ಈಗಾಗಲೇ ಅರ್ಹತೆ ಪಡೆದಿದ್ದಾರೆ. ನೆದರ್ಲೆಂಡ್ಸ್‌ನ ಅನಿಶ್ ಗಿರಿ ಮತ್ತು ಜರ್ಮನಿಯ ಮಥಾಯಸ್‌ ಬ್ಲೂಬಮ್ ಅವರೂ 2025ರ ಫಿಡೆ ಗ್ರ್ಯಾಂಡ್‌ಸ್ವಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದು ಅರ್ಹತೆ ಗಳಿಸಿದ್ದಾರೆ. 2025ರ ಫಿಡೆ ಸರ್ಕೀಟ್‌ನಲ್ಲಿ ಅತ್ಯಧಿಕ ಪಾಯಿಂಟ್ಸ್ ಹೊಂದಿರುವ ಪ್ರಜ್ಞಾನಂದ ಅವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವ ಸಾಧ್ಯತೆ ಉಜ್ವಲವಾಗಿದೆ. ಅಮೆರಿಕದ ಹಿಕಾರು ನಕಾಮುರಾ ರೇಟಿಂಗ್ ಆಧಾರದಲ್ಲಿ ಸ್ಥಾನ ಪಡೆಯವ ಸಾಧ್ಯತೆ ದಟ್ಟವಾಗಿದೆ. ಉಳಿದ ಮೂರು ಸ್ಥಾನಗಳಿಗೆ ಪೈಪೋಟಿಯಿದ್ದು, ಅವುಗಳು ಈ ವಿಶ್ವಕಪ್‌ನಲ್ಲಿ ನಿರ್ಧಾರವಾಗಲಿವೆ.

ಗೆಲುವಿನ ಅವಕಾಶ ಯಾರಿಗೆ?

ಭಾರತದ ಆಟಗಾರರು ಮೊದಲ ಮೂರು ಶ್ರೇಯಾಂಕ ಪಡೆದಿದ್ದಾರೆ. ವಿಶ್ವ ಚಾಂಪಿಯನ್ ಆಗಿ ಗುಕೇಶ್‌  ಅಗ್ರ ಶ್ರೇಯಾಂಕ, ಅರ್ಜುನ್ ಇರಿಗೇಶಿ ಎರಡನೇ ಶ್ರೇಯಾಂಕ ಪಡೆದಿದ್ದಾರೆ. ಪ್ರಜ್ಞಾನಂದ, ನೆದರ್ಲೆಂಡ್ಸ್‌ನ ಅನಿಶ್‌ ಗಿರಿ, ಅಮೆರಿಕದ ವೆಸ್ಲಿ ಸೊ, ಜರ್ಮನಿಯ ವಿನ್ಸೆಂಟ್ ಕೀಮರ್‌, ಚೀನಾದ ವೀ ಯಿ, ಉಜ್ಬೇಕಿಸ್ತಾನದ ನದಿರ್ಬೆಕ್‌ ಅಬ್ದುಸತ್ತಾರೋವ್, ಅಜರ್‌ಬೈಜಾನ್‌ನ ಶಕ್ರಿಯಾರ್ ಮೆಮದ್ಯರೋವ್‌  ಮೂರರಿಂದ ಹತ್ತರವರೆಗಿನ ಶ್ರೇಯಾಂಕ ಗಳಿಸಿದ್ದಾರೆ.

ಆದರೆ ಪೈಪೋಟಿ ಗುಕೇಶ್‌, ಅರ್ಜುನ್‌, ಪ್ರಜ್ಞಾನಂದ, ವೆಸ್ಲಿ ಸೊ, ಅನಿಶ್‌ ಗಿರಿ, ವಿನ್ಸೆಂಟ್ ಕೀಮರ್ ನಡುವೆಯೇ ನಡೆಯಬಹುದೆನ್ನುವ ವಿಶ್ಲೇಷಣೆಗಳಿವೆ. ಯುರೋಪಿಯನ್ ಕ್ಲಬ್ ಕಪ್‌ನಲ್ಲಿ ಗುಕೇಶ್‌ 1927ರ ಲೈವ್‌ ರೇಟಿಂಗ್‌ ಸಾಧನೆ ತೋರಿ ಮೊದಲ ಬೋರ್ಡ್‌ ಚಿನ್ನದ ಪದಕ ಪಡೆದಿದ್ದು, ಇಲ್ಲಿ ವಿಶ್ವಾಸದಿಂದ ಸಜ್ಜಾಗಿದ್ದಾರೆ. ಈ ವರ್ಷ ಕೆಲವು ಫಿಡೆ ಟೂರ್ನಿಗಳಲ್ಲಿ ಗೆದ್ದಿರುವ ಪ್ರಜ್ಞಾನಂದ ಅವರೂ ತವರಿನಲ್ಲಿ ಉತ್ತಮ ಸಾಧನೆಯ ಆಶಾವಾದ ಹೊಂದಿದ್ದಾರೆ. ಸಮರ್‌ಖಂಡದಲ್ಲಿ ಹೋದ ತಿಂಗಳು ಫಿಡೆ ಗ್ರ್ಯಾಂಡ್‌ಸ್ವಿಸ್‌ ಟೂರ್ನಿ ಗೆದ್ದಿರುವ ಅನಿಶ್ ಗಿರಿ ಅವರೂ ಆತ್ಮವಿಶ್ವಾಸದಲ್ಲಿದ್ದಾರೆ. ಚೆನ್ನೈ ಓಪನ್ ಗೆದ್ದಿರುವ ಜರ್ಮನಿಯ ಅಗ್ರ ಆಟಗಾರ ಹ್ಯಾನ್ಸ್‌ ನೀಮನ್ ಅವರನ್ನೂ ನಿರ್ಲಕ್ಷಿಸುವಂತಿಲ್ಲ. 

ಹೀಗಿರುತ್ತದೆ ವಿಶ್ವಕಪ್‌ ಮಾದರಿ..

25 ವರ್ಷಗಳ ಹಿಂದೆ ಮೊದಲ ವಿಶ್ವಕಪ್ ನಡೆಯಿತು. ಇದು 13ನೇ ವಿಶ್ವಕಪ್. ಉತ್ತರ ಗೋವಾದ ವಿಲಾಸಿ ‘ರೆಸಾರ್ಟ್‌ ರಿಯೊ’ದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಸುಮಾರು 80 ರಾಷ್ಟ್ರಗಳ 206 ಆಟಗಾರರು ಪಾಲ್ಗೊಳ್ಳುತ್ತಾರೆ. ನವೆಂಬರ್ 1ರಂದು ಮೊದಲ ಸುತ್ತು ಆರಂಭ. ನವೆಂಬರ್ 27ರಂದು ಮುಕ್ತಾಯಗೊಳ್ಳಲಿದೆ.

ಈ ಟೂರ್ನಿಯು ನಾಕೌಟ್‌ ಮಾದರಿಯಲ್ಲಿ ನಡೆಯುತ್ತದೆ. ಪ್ರತಿಯೊಂದು ಪಂದ್ಯ ಎರಡು ದಿನ ನಡೆಯುತ್ತದೆ. ಮೊದಲ ಎರಡು ದಿನ ಕ್ಲಾಸಿಕಲ್‌ ಮಾದರಿಯ ಆಟಗಳು ನಡೆಯುತ್ತವೆ. ಎರಡು ಆಟಗಳ ನಂತರವೂ ಸ್ಕೋರ್ ಸಮನಾಗಿದ್ದಲ್ಲಿ (1–1), ಆಟಗಾರರು ಮೂರನೇ ದಿನ ಬಂದು ಕಾಲಮಿತಿಯ ವೇಗದ ಆಟಗಳನ್ನು ಆಡಬೇಕಾಗುತ್ತದೆ. ಇದರಲ್ಲಿ ವಿಜೇತರ ನಿರ್ಧಾರವಾಗುತ್ತದೆ.

ಮೊದಲ ಸುತ್ತಿನಲ್ಲಿ ಅಗ್ರ 50ರಲ್ಲಿರುವ ಆಟಗಾರರಿಗೆ ಬೈ ನೀಡಲಾಗಿದೆ. 

ಮೊದಲ ಎರಡು ವಿಶ್ವಕಪ್‌ಗೂ, ವಿಶ್ವ ಚಾಂಪಿಯನ್‌ಷಿಪ್‌ಗೂ ಸಂಬಂಧವಿರಲಿಲ್ಲ. ತಲಾ 24 ಆಟಗಾರರು ಕಣದಲ್ಲಿದ್ದ ಆ ಎರಡೂ ವಿಶ್ವಕಪ್‌ಗಳಲ್ಲಿ (2000 ಮತ್ತು 2002) ಭಾರತದ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿದ್ದರು. 2005 ರಿಂದ 2019ರವರೆಗಿನ ಅವಧಿಯಲ್ಲಿ ನಡೆದ ಎಂಟು ವಿಶ್ವಕಪ್‌ಗಳಲ್ಲಿ ತಲಾ 128 ಆಟಗಾರರು ಭಾಗವಹಿಸಿದ್ದರು. 2021 ರಿಂದ 206 ಆಟಗಾರರು ಭಾಗವಹಿಸುತ್ತಿದ್ದಾರೆ.  

2005 ರಿಂದ 2021ರವರೆಗೆ ನಡೆದ ಟೂರ್ನಿಗಳಲ್ಲಿ ಭಾರತದ ಆಟಗಾರರು ಮೊದಲ ನಾಲ್ಕರಲ್ಲಿ ಸ್ಥಾನ ಪಡೆದಿರಲಿಲ್ಲ ಎಂಬುದು ಗಮನಾರ್ಹ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ 2023ರ ವಿಶ್ವಕಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮ್ಯಾಗ್ನಸ್‌ ಕಾರ್ಲ್‌ಸನ್ ಮೊದಲ ಬಾರಿ ಚಾಂಪಿಯನ್‌ ಆಗಿದ್ದರು. ಅವರೆದುರು ಫೈನಲ್‌ನಲ್ಲಿ ಪ್ರಬಲ ಹೋರಾಟ ನೀಡಿದವರು ಭಾರತದ ಪ್ರಜ್ಞಾನಂದ. ಈ ಬಾರಿಯ ಟೂರ್ನಿಯು ಸುಮಾರು ₹17.50 ಕೋಟಿ ಬಹುಮಾನ ಮೊತ್ತ ಹೊಂದಿದೆ. ಇದರಲ್ಲಿ ಸುಮಾರು ₹1.6 ಕೋಟಿ ವಿಜೇತರ ಪಾಲಾಗಲಿದೆ. ₹75 ಲಕ್ಷ ರನ್ನರ್ ಅಪ್ ಆಟಗಾರನ ಜೇಬಿಗೆ ಸೇರಲಿದೆ.

ಆಡದಿರುವ ಪ್ರಮುಖರು...

2023ರ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದ ವಿಶ್ವದ ಅಗ್ರ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ದೀರ್ಘ ಮಾದರಿಯ ಆಟದತ್ತ ಒಲವಿಲ್ಲದ ಕಾರಣ ಇಲ್ಲಿ ಆಡುತ್ತಿಲ್ಲ. ಅಮೆರಿಕದ ಫ್ಯಾಬಿಯಾನೊ ಕರುವಾನಾ, ಹಿಕಾರು ನಕಾಮುರ, ಫ್ರಾನ್ಸ್‌ನ ಅಲಿರೇಜಾ ಫಿರೋಜ್, ಚೀನಾದ ಡಿಂಗ್‌ ಲಿರೆನ್‌, ಪೋಲೆಂಡ್‌ನ ಯಾನ್‌ ಕ್ರಿಸ್ಟೋಫ್‌ ಡೂಡ ಸಹ ಗೋವಾದ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ.

ಗುಕೇಶ್‌

ಅರ್ಜುನ್ ಇರಿಗೇಶಿ

ವಿದಿತ್ ಎಸ್‌.ಗುಜರಾತಿ

ಪ್ರಜ್ಞಾನಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.