ಕೃತಕ ಬುದ್ಧಿಮತ್ತೆ (AI) ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಟಿಸಿಎಸ್, ಮೈಕ್ರೊಸಾಫ್ಟ್, ಇನ್ಫೊಸಿಸ್ ಸೇರಿದ ಹಲವು ಐಟಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿದ್ದು, ತಂತ್ರಜ್ಞರಲ್ಲಿ ಆತಂಕ ಮೂಡಿಸಿದೆ. ಮುಂದೇನು ಎಂಬ ಪ್ರಶ್ನೆಗೆ ಐಟಿ ತಂತ್ರಜ್ಞರನ್ನು ಕಾಡುತ್ತಿದೆ.
ಬೆಂಗಳೂರು: 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ ಎಂದು ಕಳೆದ ಭಾನುವಾರ ಮಧ್ಯಾಹ್ನ ಟಿಸಿಎಸ್ ಸಿಡಿಸಿದ ಬಾಂಬ್, ಭಾರತದ ಇಡೀ ಐಟಿ ಕ್ಷೇತ್ರದ ನಿದ್ದೆಗೆಡಿಸಿತು. ಇಷ್ಟು ಮಾತ್ರವಲ್ಲ, ಕೃತಕ ಬುದ್ಧಿಮತ್ತೆ (AI) ಈ ಕ್ರಮಕ್ಕೆ ಕಾರಣ ಎಂಬ ಕಂಪನಿಯ ಹೇಳಿಕೆಯು ಬರುತ್ತಿರುವ ಹೊಸ ತಂತ್ರಜ್ಞಾನಕ್ಕೆ ಮುಖಾಮುಖಿಯಾಗುತ್ತಿರುವ ತಂತ್ರಜ್ಞರಲ್ಲಿ ಆತಂಕ ಮೂಡಿಸಿದೆ.
ಒಂದು ವಾರದ ಮುಂಚೆಯಷ್ಟೇ ಮೈಕ್ರೊಸಾಫ್ಟ್ 9 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಹೇಳಿತ್ತು. ಇನ್ಫೊಸಿಸ್ ಕೂಡಾ ಕಳೆದ ವರ್ಷದಂತೆ ಈವರ್ಷವೂ ಒಂದಷ್ಟು ನೌಕರರನ್ನು ವಜಾಗೊಳಿಸುವ ಸುಳಿವು ನೀಡಿದೆ. ಹೀಗೆ ಜಾಗತಿಕ ಮಟ್ಟದ ಹಲವು ಕಂಪನಿಗಳು ಈಗ ‘ನೌಕರರ ವಜಾ’ ಮಾತುಗಳನ್ನೇ ಆಡುತ್ತಿವೆ. ಇದು ನೌಕರ ವರ್ಗದ ತಲೆಯ ಮೇಲೆ ಬಂಡೆಯೇ ಬಿದ್ದಂತಾಗಿದೆ. ಉದ್ಯಮದಲ್ಲಿ ಆತಂಕ ಮನೆ ಮಾಡಿದೆ.
ಇದೇ ವರ್ಷದ ಆರಂಭದಿಂದ ಈವರೆಗೂ ಜಾಗತಿಕ ಮಟ್ಟದಲ್ಲಿ 170 ಟೆಕ್ ಕಂಪನಿಗಳು ನೌಕರರನ್ನು ವಜಾಗೊಳಿಸಿದ್ದು, ಇದರ ಪ್ರಮಾಣ 80 ಸಾವಿರ ಎಂದು ಎಂದು ಲೇಆಫ್ ಡಾಟ್ ಎಫ್‌ವೈಐ ವರದಿ ಮಾಡಿದೆ. 2024ರಲ್ಲಿ ಒಟ್ಟು ನೌಕರಿ ಕಡಿತ ಪ್ರಮಾಣ 1.52 ಲಕ್ಷ ಇತ್ತು, 2023ರಲ್ಲಿ ಇದು 2.64 ಲಕ್ಷ ಇತ್ತು.
ಸದ್ಯ ಟಿಸಿಎಸ್ ಘೋಷಿಸಿರುವುದು ತನ್ನ ಒಟ್ಟು ನೌಕರ ವರ್ಗದ ಶೇ 2ರಷ್ಟು ಮಾತ್ರ. ಆದರೂ ಅದು ಸೃಷ್ಟಿಸಿರುವ ತಲ್ಲಣ ಅಷ್ಟಿಷ್ಟಲ್ಲ. ಇದರಲ್ಲಿ ಹಿರಿಯ ರ‍್ಯಾಂಕ್‌ನ ಅಧಿಕಾರಿಗಳೂ ಇದ್ದಾರೆ. ಕಳೆದ ಏಳು ತಿಂಗಳಲ್ಲಿ ಭಾರತೀಯ ಮೂಲದ ವಿವಿಧ ಕಂಪನಿಗಳು ನೌಕರರನ್ನು ವಜಾಗೊಳಿಸಿರುವುದೂ ವರದಿಯಾಗಿದೆ. ಕೆಲ ಸ್ಟಾರ್ಟ್‌ಅಪ್‌ಗಳೂ ಬಾಗಿಲು ಮುಚ್ಚಿವೆ. ಇವೆಲ್ಲದಕ್ಕೂ ಪ್ರಮುಖ ಕಾರಣ AI!
'ಕೃತಕ ಬುದ್ಧಿಮತ್ತೆಯನ್ನು ಕಂಪನಿಯಲ್ಲಿ ಹಂತ ಹಂತವಾಗಿ ಅಳವಡಿಸಿಕೊಳ್ಳುವುದು ಹಾಗೂ ಭವಿಷ್ಯದಲ್ಲಿ ಅಗತ್ಯವಿರುವ ಕೌಶಲಗಳನ್ನು ಮರುಮೌಲ್ಯಮಾಪನ ಮಾಡುವ ಕಾಲವಿದು’ ಎಂದು ಟೆಕ್‌ಮೆರಿಡಿಯನ್ ಕಂಪನಿಯ ಸಿಒಒ ಶಿವಕುಮಾರ್ ಎಸ್. ಅಕ್ಕಿ ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಈವರೆಗಿನ ಉದ್ಯೋಗ ಕಡಿತವನ್ನು ಗಮನಿಸಿದರೆ, 2000ದಿಂದ 2002ರವರೆಗೂ ಐಟಿ ಕ್ಷೇತ್ರದಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಅತಿಯಾದ ಹೂಡಿಕೆ ಕಂಪನಿಗಳಿಗೆ ನಷ್ಟವನ್ನುಂಟು ಮಾಡಿತ್ತು. ಇದರ ಪರಿಣಾಮ 8 ಲಕ್ಷ ನೌಕರರು ಕೆಲಸ ಕಳೆದುಕೊಂಡಿದ್ದರು.
2008–09ರಲ್ಲಿ ಸೃಷ್ಟಿಯಾಗಿದ್ದು ಹಣಕಾಸು ಸಂಸ್ಥೆಗಳ ನೌಕರರ ವಜಾ. ಆಗ ಈ ಕ್ಷೇತ್ರದ ಸುಮಾರು 1.3 ಲಕ್ಷ ನೌಕರರು ವಜಾಗೊಂಡಿದ್ದರು. 2020ರಿಂದ 22ರವರೆಗಿನ ಕೋವಿಡ್ ಸಮಯದಲ್ಲಿ ಸುಮಾರು 1.60 ಲಕ್ಷ ನೌಕರರು ಉದ್ಯೋಗ ಕಳೆದುಕೊಂಡಿದ್ದರು. ಇದೀಗ ಕೃತಕ ಬುದ್ಧಿಮತ್ತೆ (2022ರಿಂದ ಇಲ್ಲಿಯವರೆಗೆ) ತಂತ್ರಜ್ಞಾನದ ಪ್ರವೇಶದಿಂದ ಈವರೆಗೂ ಐದು ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಹಿಂದೆ ನಡೆದಿರುವ ಅಗತ್ಯಕ್ಕಿಂತ ಹೆಚ್ಚಿನ ನೇಮಕಾತಿ, ಹಣದುಬ್ಬರ ಮತ್ತು ಸ್ವಯಂ ಚಾಲಿತ ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ ನೌಕರರ ಸಂಖ್ಯೆ ಕಡಿತಕ್ಕೆ ಕಂಪನಿಗಳು ಮುಂದಾಗಿರುವುದೇ ಇದಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಮೊದಲು ಬೇಡಿಕೆ ಕುಸಿತವಾದಾಗ ಅಥವಾ ಹೆಚ್ಚುವರಿ ನೌಕರರು ಬೇಕಾಗಬಹುದು ಎಂಬ ಊಹೆಯಿಂದ ನೇಮಕಾತಿಗಳು ನಡೆಯುತ್ತಿದ್ದವು. ಆದರೆ 2022ರಿಂದ ಈಚೆಗೆ ಆಟೊಮೇಷನ್‌ಗಳು ಹೆಚ್ಚಾಗಿವೆ. ಕೃತಕ ಬುದ್ಧಿಮತ್ತೆ ಆಧಾರಿತ ಶಿಫ್ಟ್‌ಗಳು ಬಳಕೆಗೆ ಬಂದಿವೆ. ಹೀಗಾಗಿ ಮಧ್ಯ ವಯಸ್ಸಿನ ನೌಕರರು, ಹಿರಿಯ ಉದ್ಯೋಗಿಗಳು ಮತ್ತು ಒಂದೇ ತೆರನಾದ ಕೆಲಸಗಳೆಲ್ಲವನ್ನೂ ಯಂತ್ರಗಳು ಕಬಳಿಸಿವೆ. ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ ಐದು ಲಕ್ಷ ಜನರು ಕೆಲಸ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಹಳೇ ಮಾದರಿಯ ಆರ್ಥಿಕ ನೀತಿಯೇ ಇಂದಿನ ನೌಕರರ ವಜಾ ಕ್ರಮಕ್ಕೆ ಪ್ರಮುಖ ಕಾರಣ ಎಂದೆನ್ನಲಾಗಿದೆ. ಕೋವಿಡ್ ಸಂದರ್ಭದಲ್ಲಿ ಇ–ಕಾಮರ್ಸ್, ಕ್ಲೌಡ್ ಸೇವೆ, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಕೊಲಾಬರೇಷನ್ ಕ್ಷೇತ್ರದಲ್ಲಿ ಉದ್ಯೋಗ ಬೇಡಿಕೆಗಳು ಹೆಚ್ಚಾದವು. ಹೀಗಾಗಿ 2020ರಿಂದ 2022ರವರೆಗೆ ಹೆಚ್ಚಿನ ನೇಮಕಾತಿಗಳಾದವು. ಹೀಗಾಗಿ ಮೆಟಾ, ಗೂಗಲ್, ಅಮೆಜಾನ್ ಮತ್ತು ಮೈಕ್ರೊಸಾಫ್ಟ್‌ನಂತ ದೈತ್ಯ ಕಂಪನಿಗಳು ಕ್ಷಿಪ್ರ ಬೆಳವಣಿಗೆಯ ನಿರೀಕ್ಷೆಯಲ್ಲಿ ತನ್ನ ನೌಕರರ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಂಡವು.
ಆದರೆ 2022ರ ನಂತರದಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿಯೂ ಭಿನ್ನವಾಯಿತು. ಹಣದುಬ್ಬರವು ಕಂಪನಿಗಳ ನಿರೀಕ್ಷೆಯನ್ನು ತಲೆಕೆಳಗೆ ಮಾಡಿತು. ಗ್ರಾಹಕರು ಮತ್ತು ಸಂಸ್ಥೆಗಳು ದೊಡ್ಡ ಹೊರೆ ಹೊರಬೇಕಾಯಿತು. ಜಾಗತಿಕ ಪೂರಕ ಸರಪಳಿಯಲ್ಲಿ ಉಂಟಾದ ಸಮಸ್ಯೆ ಮತ್ತು ಜಾಗತಿಕ ರಾಜಕೀಯ ವಲಯದಲ್ಲಿನ ಸಂಘರ್ಷಗಳು ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಿದವು. ಇದರಿಂದ ತತ್ತರಿಸಿದ ಕಂಪನಿಗಳು ಹೆಚ್ಚುವರಿ ಬೆಳವಣಿಗೆಯ ಹಾದಿಯ ಬದಲು, ಸುಸ್ಥಿರ ಬೆಳವಣಿಗೆಯನ್ನು ಆಯ್ಕೆ ಮಾಡಿಕೊಂಡವು.
ಇದರ ನಡುವೆ ಅಮೆರಿಕದಲ್ಲಿ ಫೆಡರಲ್ ರಿಸರ್ವ್ ನಾಲ್ಕು ದಶಕಗಳ ಹಿಂದಿನ ‘ನೀತಿ ದರ’ವನ್ನು ಶೂನ್ಯದಿಂದ ಶೇ 5.25ಕ್ಕೆ ಹೆಚ್ಚಳ ಮಾಡಿದ್ದು ಅಲ್ಲಿನ ಗ್ರಾಹಕ ವಲಯದ ಬೆಲೆ ಏರಿಕೆಗೆ ಕಾರಣವಾಯಿತು. ಇವೆಲ್ಲವೂ ಉದ್ಯಮ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿತು.
ಇದೇ ಅವಧಿಯಲ್ಲಿ ಕೃತಕ ಬುದ್ಧಿಮತ್ತೆಯೂ ತನ್ನ ಮೇಧಸಂಪತ್ತು ಹಾಗೂ ಕೌಶಲವನ್ನು ಹೆಚ್ಚಿಸಿಕೊಂಡಿತ್ತು. ಇದರ ಪರಿಣಾಮ ಆ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸಿದ ಬಹಳಷ್ಟು ಎಂಜಿನಿಯರ್‌ಗಳೇ ಭೀತಿ ಎದುರಿಸುವಂತಾಯಿತು. ‘ತಾನು ತಯಾರಿಸುವ ಶೇ 30ರಷ್ಟು ಕೋಡ್‌ಗಳು ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸಿದ್ದು’ ಎಂಬ ಮೈಕ್ರೊಸಾಫ್ಟ್‌ನ ಇತ್ತೀಚಿನ ಹೇಳಿಕೆ ಇದಕ್ಕೆ ಪುಷ್ಟಿ ನೀಡುವಂತಿದೆ.
ಮಾನವ ಸಂಪನ್ಮೂಲ ವಿಭಾಗ ನಿರ್ವಹಿಸುವ ನೌಕರರ ದಾಖಲೆಗಳು, ಗ್ರಾಹಕರ ಇ–ಮೇಲ್‌ಗಳು, ಕಾಲ್ ಸೆಂಟರ್ ನೌಕರರು ನಿರ್ವಹಿಸುವ ಕೆಲಸ ಹೀಗೆ ಹಲವರ ಉದ್ಯೋಗಗಳನ್ನು ಕೃತಕ ಬುದ್ಧಿಮತ್ತೆಯು ಕಡಿಮೆ ಸಮಯದಲ್ಲಿ ನಿರ್ವಹಿಸುವಂತಾಗಿ ಬೆಳೆದು ನಿಂತಿದೆ. ಈ ಹಿಂದೆ ನೌಕರಿ ಕಡಿತವು ಮಾರುಕಟ್ಟೆ ವಿಭಾಗದಲ್ಲೋ ಅಥವಾ ಈಗಷ್ಟೇ ಸೇರಿರುವ ಇಂಟರ್ನಿಗಳಿಗೆ ಮಾರಕವಾಗಿತ್ತು. ಆದರೆ ಕಾಲ ಸರಿದಂತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೊಂಡಂತೆ, ಕೋಡ್ ಬರೆಯುವವರು ಅಥವಾ ಮ್ಯಾನೇಜರ್‌ಗಳ ನೌಕರಿಗೇ ಕುತ್ತು ಬಂದಿದೆ. ಅಮೆರಿಕದಲ್ಲಿ ಸದ್ಯ ಇತರ ಉದ್ಯೋಗದಲ್ಲಿರುವವರಿಗೆ ಹೋಲಿಸಿದರೆ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಉದ್ಯೋಗ ಕಡಿತ ಮೂರುಪಟ್ಟು ಎಂದರೆ ಕೃತಕ ಬುದ್ಧಿಮತ್ತೆಯ ಕರಾಮತ್ತನ್ನು ಊಹಿಸಬಹುದು.
ಸಿಲಿಕಾನ್ ಕಣಿವೆಯಲ್ಲಿ ‘ಉದ್ಯೋಗ ಕಡಿತ’ ಎಂಬುದನ್ನು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ. ಪ್ರತಿಬಾರಿ ಉದ್ಯೋಗ ಕಡಿತ ಮಾಡಿದಾಗಲೂ ಕಂಪನಿಯ ಮುಖ್ಯಸ್ಥರು ಆಘಾತ ವ್ಯಕ್ತಪಡಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಇದಕ್ಕೆ ಇಂದೇ ಕೊನೆ ಎಂದೇನೂ ಅಲ್ಲ.
‘15 ಸಾವಿರ ಉದ್ಯೋಗ ಕಡಿತವು ಯಶಸ್ಸಿನ ರಹಸ್ಯ. ಕೃತಕ ಬುದ್ಧಿಮತ್ತೆಯು ಮುಖ್ಯ ಭೂಮಿಕೆಗೆ ಬಂದಿದ್ದರಿಂದ ಚುರುಕುತನ ಮತ್ತು ನಾವೀನ್ಯತೆಯು ಹೊಸ ಯೋಜನೆ ಮತ್ತು ಭದ್ರತೆ ಹಾಗೂ ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ’ ಎಂದು ಮೈಕ್ರೊಸಾಫ್ಟ್ ಅಧ್ಯಕ್ಷ ಸತ್ಯಾ ನಾದೆಲ್ಲಾ ಹೇಳಿದ್ದರು.
ಮೆಟಾದ ಮಾರ್ಕ್ ಝುಕರ್‌ಬರ್ಗ್ ಅವರು 2024ರಲ್ಲಿ 3,600 ನೌಕರರನ್ನು ವಜಾಗೊಳಿಸಿದ ಸಂದರ್ಭದಲ್ಲಿ, ‘ಇದು ಧಕ್ಷತೆಯ ವರ್ಷ. ಸಂಸ್ಥೆಯ ಆರೋಗ್ಯ ಹೆಚ್ಚು ಸುಸ್ಥಿತಿಯಲ್ಲಿರಬೇಕೆಂದರೆ ಮತ್ತು ಹೆಚ್ಚು ಕಾರ್ಯಕ್ಷಮತೆಯಿಂದ ಕೂಡಿರಬೇಕೆಂದರೆ ಇದು ಅನಿವಾರ್ಯ’ ಎಂದಿದ್ದರು.
‘ಹೆಚ್ಚಿನ ನೌಕರರನ್ನು ನೇಮಿಸಿಕೊಳ್ಳಲಾಗಿತ್ತು. 2023ರ ಮಾರ್ಚ್‌ನಿಂದ 2024ರ ಮಾರ್ಚ್‌ವರೆಗೆ 10 ಸಾವಿರ ನೌಕರರನ್ನು ವಜಾಗೊಳಿಸಲಾಗಿದೆ’ ಎಂದು ಆಲ್ಫಬೆಟ್ ಕಂಪನಿಯ ಅಧ್ಯಕ್ಷ ಸುಂದರ್ ಪಿಚೈ ಹೇಳಿದ್ದಾರೆ.
‘ಟ್ವಿಟರ್‌ನಿಂದ ಎಕ್ಸ್‌ಗೆ ರೂಪಾಂತರಗೊಳ್ಳಬೇಕೆಂದರೆ ಉದ್ಯೊಗ ಕಡಿತ ಅನಿವಾರ್ಯ. ಉದ್ಯೋಗಿಗಳು ಕಠಿಣ ಪರಿಶ್ರಮದಿಂದ ದುಡಿದರೆ ಮಾತ್ರ ಕಂಪನಿಯ ಏಳಿಗೆ ಸಾಧ್ಯ’ ಎಂದು 2022ರಲ್ಲಿ ಇಲಾನ್ ಮಸ್ಕ್ ಹೇಳಿದ್ದರು. ಆ ಸಂದರ್ಭದಲ್ಲಿ ಅವರು ಶೇ 80ರಷ್ಟು ನೌಕರರನ್ನು ವಜಾಗೊಳಿಸುವ ಕ್ರಮ ಕೈಗೊಂಡಿದ್ದರು.
ಮತ್ತೊಂದೆಡೆ ವಜಾಗೊಂಡ ನೌಕರರು ತಮ್ಮ ನೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಉದಾಹರಣೆಗಳೂ ಸಾಕಷ್ಟಿವೆ.
ಕೃತಕ ಬುದ್ಧಿಮತ್ತೆ ಒಂದೆಡೆ ಉದ್ಯೋಗ ಕಡಿತಕ್ಕೆ ಕಾರಣವಾಗುತ್ತಿದ್ದರೆ, ಮತ್ತೊಂದೆಡೆ ಪ್ರತಿಭಾನ್ವೇಷಣೆಗೂ ಕಾರಣವಾಗುತ್ತಿದೆ. ಮೆಟಾ, ಗೂಗಲ್ ಹಾಗೂ ಓಪನ್‌ಎಐನಂತ ಕಂಪನಿಗಳು ವರ್ಷಕ್ಕೆ 10 ಕೋಟಿ ಅಮೆರಿಕನ್ ಡಾಲರ್‌ಗೂ ಮೀರಿದ ವಾರ್ಷಿಕ ಪರಿಹಾರ ಪ್ಯಾಕೇಜ್ ನೀಡಿ ಎಐ ತಂತ್ರಜ್ಞರನ್ನು ನೇಮಿಸಿಕೊಳ್ಳುತ್ತಿದೆ. ಹೀಗಾಗಿ ಎಐ ತಂತ್ರಜ್ಞರಿಗೆ ಈಗ ಹಾಲಿವುಡ್ ನಟ, ನಟಿಯರಿಗಿಂತಲೂ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ ಎಂದು ಬಣ್ಣಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರವು 2030ರ ಹೊತ್ತಿಗೆ 4 ಟ್ರಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ. ಅದಕ್ಕೆ ಪೂರಕವಾಗಿ ಉದ್ಯೋಗಗಳೂ ಸೃಜಿಸಲಿವೆ ಎಂದೆನ್ನಲಾಗಿದೆ.
ಐಟಿ ಕ್ಷೇತ್ರದ ಬೊಜ್ಜನ್ನು ಈ ಹಿಂದಿನ ಆರ್ಥಿಕ ಹಿಂಜರಿಕೆ ಕರಗಿಸಿದ್ದರೆ, ಇಂದಿನ ಪರಿಸ್ಥಿತಿಯು ಈ ಉದ್ಯಮಕ್ಕೊಂದು ರೂಪ ನೀಡಿದೆ. ಒಂದೇ ರೀತಿಯ ದಿನನಿತ್ಯದ ಕೆಲಸಗಳನ್ನು ಯಾವೆಲ್ಲಾ ಕಂಪನಿಗಳು ಕೈಬಿಟ್ಟಿವೆಯೋ ಅವೆಲ್ಲವೂ ಹಾಗೂ ಯಂತ್ರಗಳಿಂದ ನಿರ್ವಹಿಸಲಾಗದ ಕೆಲಸಗಳು ಇಂದು ಕ್ಷೇತ್ರದಲ್ಲಿ ಉಳಿದಿವೆ. ಹಾಗೆಯೇ ಯಾರು ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನಗಳ ಕಲಿಕೆಯೊಂದಿಗೆ ಸಾಗುತ್ತಿದ್ದಾರೋ ಅವರೆಲ್ಲರೂ ಉದ್ಯೋಗಗಳನ್ನು ಉಳಸಿಕೊಂಡು ಹೊಸ ಬೆಳವಣಿಗೆಯತ್ತ ಸಾಗುತ್ತಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.