ADVERTISEMENT

Explainer: 1960ರ ಸಿಂಧೂ ಜಲ ಒಪ್ಪಂದ ಅಮಾನತು; ಪಾಕ್ ಮೇಲೆ ಪರಿಣಾಮ ಏನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಏಪ್ರಿಲ್ 2025, 10:39 IST
Last Updated 24 ಏಪ್ರಿಲ್ 2025, 10:39 IST
<div class="paragraphs"><p>ಸಿಂಧೂ ನದಿ</p></div>

ಸಿಂಧೂ ನದಿ

   

(ಐಸ್ಟೋಕ್ ಸಂಗ್ರಹ ಚಿತ್ರ)

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಪಾಕಿಸ್ತಾನದ ಜೊತೆಗಿನ ಐತಿಹಾಸಿಕ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಅಮಾನತುಗೊಳಿಸಲು ನಿರ್ಧರಿಸಿದೆ.

ADVERTISEMENT

ಆ ಮೂಲಕ ಪಾಕಿಸ್ತಾನಕ್ಕೆ ಜಲಾಘಾತ ನೀಡಿದೆ. 1960ರಲ್ಲಿ ಮಾಡಿಕೊಂಡ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತಿನಲ್ಲಿ ಇರಿಸಲಾಗಿದೆ. ಭಾರತ- ಪಾಕಿಸ್ತಾನದ ನಡುವೆ ಹಲವು ಬಾರಿ ಸಂಘರ್ಷ ಉಂಟಾಗಿದ್ದರೂ ಈ ಒಪ್ಪಂದವನ್ನು ಅಮಾನತು ಮಾಡಿದ್ದ ನಿದರ್ಶನ ಇರಲಿಲ್ಲ.

ಏನಿದು ಸಿಂಧೂ ಜಲ ಒಪ್ಪಂದ...

ಸಿಂಧೂ ಜಲಾನಯನದ ವ್ಯಾಪ್ತಿಗೆ ಸೇರಿದ ನದಿಗಳು ಹಿಮಾಲಯದಲ್ಲಿ ಹುಟ್ಟಿ ಭಾರತ ಭೂಪ್ರದೇಶದಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೇಲಂ, ಚಿನಾಬ್, ರಾವಿ, ಬಿಯಾಸ್, ಸತ್ಲೇಜ್ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆರು ದಶಕಗಳ ಹಿಂದೆ ಒಪ್ಪಂದ ಏರ್ಪಟ್ಟಿತ್ತು.

ಸಿಂಧೂ ನದಿ ನೀರಿನ ಒಪ್ಪಂದ ಪ್ರಕಾರ ನದಿಯ ಒಡೆತನ ಪಾಕಿಸ್ತಾನಕ್ಕೆ ಸೇರಿದ್ದರೂ ಅದರ ಮೇಲೆ ಭಾರತದ ಸಿಂಹಪಾಲಿದೆ. 1948ರಲ್ಲಿ ಭಾರತವು ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿತು. ಇದರಿಂದಾಗಿ ಪಾಕಿಸ್ತಾನವು ವಿಶ್ವಸಂಸ್ಥೆಯ ಮೊರೆ ಹೋಯಿತು. ಇದರಿಂದಾಗಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ವಿವಾದ ಇತ್ಯರ್ಥಗೊಳಿಸಲು ವಿಶ್ವಸಂಸ್ಥೆ ಸೂಚಿಸಿತ್ತು. ಅನೇಕ ವರ್ಷಗಳ ಮಾತುಕತೆಯ ಬಳಿಕ 1960ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಸಿಂಧೂ ಜಲ ಒಪ್ಪಂದ ಸಾಕಾರಗೊಂಡಿತು. ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್, 1960ರ ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಒಪ್ಪಂದದ ಪ್ರಕಾರ ಭಾರತದಲ್ಲಿರುವ ಪೂರ್ವ ಭಾಗದ ಮೂರು ನದಿಗಳಾದ ಬಿಯಾಸ್, ರಾವಿ, ಸತ್ಲೇಜ್ ಮೇಲೆ ನಿಯಂತ್ರಣವನ್ನು ಹೊಂದಿದೆ. ಮತ್ತೊಂದೆಡೆ ಪಾಕಿಸ್ತಾನ ಪಶ್ಚಿಮದಲ್ಲಿ ಹರಿಯುವ ಸಿಂಧೂ, ಝೇಲಂ ಮತ್ತು ಚಿನಾಬ್‌ ನದಿಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಈ ನದಿಗಳ ಮೂಲ ಭಾರತದಲ್ಲಿ ಇರುವುದರಿಂದ ಇವುಗಳ ನೀರಿನ ಶೇ 20ರಷ್ಟನ್ನು ಭಾರತ ಬಳಸಬಹುದು. ಈ ನದಿಗಳಿಂದ ನೀರಾವರಿ ಹಾಗೂ ವಿದ್ಯುತ್ ಉತ್ಬಾದಿಸಲು ಭಾರತಕ್ಕೆ ಅವಕಾಶವಿದೆ.

ಭಾರತ-ಪಾಕಿಸ್ತಾನ ನಡುವೆ 1965, 1971 ಹಾಗೂ 1999ರ ಯುದ್ಧದ ಸಂದರ್ಭದಲ್ಲೂ ಈ ಒಪ್ಪಂದದ ಅಸ್ತಿತ್ವವನ್ನು ಉಳಿಸಿಕೊಳ್ಳಲಾಯಿತು.

ಪಾಕಿಸ್ತಾನದ ಮೇಲೆ ಉಂಟಾಗುವ ಪರಿಣಾಮವೇನು?

ಸಿಂಧೂ ಹಾಗೂ ಅದರ ಉಪನದಿಗಳ ನೀರು ಪಾಕಿಸ್ತಾನದ ಕೃಷಿಗೆ ವಿಶೇಷವಾಗಿಯೂ ಪಂಜಾಬ್ ಹಾಗೂ ಸಿಂಧ್ ಪ್ರಾಂತ್ಯಗಳ ಪಾಲಿಗೆ ನಿರ್ಣಾಯಕವೆನಿಸಿವೆ. ಸಿಂಧೂ ಜಲಾನಯನ ಪ್ರದೇಶವು ವಾರ್ಷಿಕವಾಗಿ 154.3 ಮಿಲಿಯನ್ ಎಕರೆ ಅಡಿ ನೀರನ್ನು ಪೂರೈಸುತ್ತದೆ. ಇದಕ್ಕೆ ಯಾವುದೇ ಅಡಚಣೆ ಉಂಟಾದ್ದಲ್ಲಿ ಅಲ್ಲಿನ ಕೃಷಿ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರಲಿವೆ.

ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವುದು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಅತ್ಯುತ್ತಮ ನಿರ್ಧಾರವಾಗಿದೆ. ಇದರಿಂದ ಪಾಕಿಸ್ತಾನದ ಆರ್ಥಿಕತೆಯ ಮೇಲೂ ನೇರ ಪರಿಣಾಮ ಬೀರಲಿದೆ. ಪಾಕಿಸ್ತಾನದ ಒಟ್ಟಾರೆ ಜಿಡಿಪಿ ಬೆಳವಣಿಗೆ ಮೇಲೂ ಭಾರಿ ಹೊಡೆತ ಉಂಟಾಗಲಿದೆ ಎಂದು ವಿಶ್ಲೇಷಣೆಗಳು ಹೇಳಿವೆ.

ಇಲ್ಲಿ ಗಮನನಿಸಬೇಕಾದ ಅಂಶವೆಂದರೆ, ಭಾರತದ ಈ ಕಠಿಣ ನಿರ್ಧಾರದಿಂದ ಪಾಕಿಸ್ತಾನಕ್ಕೆ ಹೊಡೆತ ಬೀಳಲಿದೆ. ಏಕೆಂದರೆ ಪಾಕಿಸ್ತಾನಕ್ಕೆ ತನ್ನ ದೇಶದಲ್ಲಿ ಹುಟ್ಟಿ ಹರಿಯುವ ಪ್ರಮುಖ ನದಿಗಳಿಲ್ಲ. ಭಾರತದಲ್ಲಿ ಹುಟ್ಟಿ ಭಾರತದ ಮುಖಾಂತರ ಹರಿದುಬರುವ ನದಿಗಳ ಜಲ ಸಂಪನ್ಮೂಲವನ್ನು ಅವಲಂಬಿಸಿವೆ.

ಅಲ್ಲಿನ ಕೃಷಿ, ಕೈಗಾರಿಕೆ, ಮೀನುಗಾರಿಕೆ, ಜಲವಿದ್ಯುತ್, ಕುಡಿಯುವ ನೀರಿನ ಮೂಲ ಹೀಗೆ ಭಾರತದಿಂದ ಹರಿದುಬರುವ ನೀರನ್ನೇ ಅವಲಂಬಿಸಿವೆ. ಇದುವೆ ಪಾಕ್‌ನ ಆರ್ಥಿಕತೆಯ ಬೆನ್ನಲುಬು ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.