ADVERTISEMENT

ಗ್ರೀನ್‌ಲ್ಯಾಂಡ್ to ಕ್ಯೂಬಾ: ವೆನೆಜುವೆಲಾ ಆಯ್ತು, ಟ್ರಂಪ್ ಕಣ್ಣು ಇನ್ಯಾರ ಮೇಲೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2026, 11:04 IST
Last Updated 6 ಜನವರಿ 2026, 11:04 IST
<div class="paragraphs"><p>ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌</p></div>

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

   

ವೆನೆಜುವೆಲಾ ಅಧ್ಯಕ್ಷ ನಿಕೋಲಸ್‌ ಮಡೂರೊ ವಿರುದ್ಧ 'ಮಾದಕವಸ್ತು ಭಯೋತ್ಪಾದನೆ'ಯ ಆರೋಪ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸೇನೆಯನ್ನು ಬಳಸಿ ಮಡೂರೊ ಅವರನ್ನು ಬಂಧಿಸುವ ಕಾರ್ಯಾಚರಣೆಯನ್ನೂ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ.

ರಾಜಧಾನಿ ಕರಾಕಸ್‌ ಮೇಲೆ ಆಕ್ರಮಣ ನಡೆಸಿ ಮಡೂರೊ ಹಾಗೂ ಅವರ ಪತ್ನಿಯನ್ನು ಬಂಧಿಸಿದ ಬೆನ್ನಲ್ಲೇ, ಇನ್ನು ವೆನೆಜುವೆಲಾವನ್ನು ಅಮೆರಿಕ ಮುನ್ನಡೆಸಲಿದೆ ಎಂದು ಘೋಷಿಸಿದ್ದರು. ಇದರೊಂದಿಗೆ, ಆ ದೇಶದಲ್ಲಿನ ಬೃಹತ್‌ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಿದೆ.

ADVERTISEMENT

ಇದು ಕೇವಲ ವೆನೆಜುವೆಲಾ ಮೇಲಷ್ಟೇ ಆದ ದಾಳಿಯಲ್ಲ. ಬಲ ಪ್ರದರ್ಶನ ಹಾಗೂ ಒತ್ತಡ ತಂತ್ರದ ಮೂಲಕ ಪ್ರಾದೇಶಿಕ ಶಕ್ತಿ ಸಮೀಕರಣಕ್ಕೆ ಹೊಸ ತಿರುವು ನೀಡುವ ಉದ್ದೇಶದ ಭಾಗವಾಗಿರಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

2024ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರಕ್ಕೇರಿರುವ ಟ್ರಂಪ್‌, ನೆರೆಯ ಗ್ರೀನ್‌ ಲ್ಯಾಂಡ್‌ ಹಾಗೂ ಕೆನಡಾ ಮೇಲೆ ನಿಯಂತ್ರಣ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ಬಹಿರಂಗವಾಗಿಯೇ ಸಾರಿದ್ದರು.

ಮಡೂರೊ ಸೆರೆಯ ಬೆನ್ನಲ್ಲೇ, ಇತರ ರಾಷ್ಟ್ರಗಳ ಸರ್ಕಾರಗಳಿಗೂ ಟ್ರಂಪ್‌ ಬೆದರಿಕೆಯ ಸಂದೇಶ ರವಾನಿಸಿದ್ದಾರೆ. ಕೊಲಂಬಿಯಾ ಅಧ್ಯಕ್ಷ ಮಾದಕವಸ್ತು ಸಾಗಣೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಟ್ರಂಪ್‌, ಕ್ಯೂಬಾ ಮತ್ತು ಮೆಕ್ಸಿಕೊ ವಿರುದ್ಧವೂ ಕ್ರಮದ ಸುಳಿವು ನೀಡಿದ್ದಾರೆ. ಗ್ರೀನ್‌ಲ್ಯಾಂಡ್‌ ಅಮೆರಿಕದ ನಿಯಂತ್ರಣಕ್ಕೆ ಒಳಪಡಬೇಕು ಎಂದು ಪುನರುಚ್ಚರಿಸಿದ್ದಾರೆ.

ಗ್ರೀನ್‌ಲ್ಯಾಂಡ್‌ನಲ್ಲಿ ಆತಂಕದ ಕಾರ್ಮೋಡ

ಯುಎಸ್‌ ಭದ್ರತಾ ಸಲಹೆಗಾರ ಸ್ಟೀಫನ್‌ ಮಿಲ್ಲರ್‌ ಅವರ ಪತ್ನಿ ಕೇಟೀ ಮಿಲ್ಲರ್‌ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌, ಗ್ರೀನ್‌ಲ್ಯಾಂಡ್‌ನಲ್ಲಿ ಆತಂಕದ ಕಾರ್ಮೋಡ ಆವರಿಸುವಂತೆ ಮಾಡಿದೆ. ಗ್ರೀನ್‌ಲ್ಯಾಂಡ್‌ ಭೂಪಟವನ್ನು ಅಮೆರಿಕದ ಧ್ವಜ ಆವರಿಸಿರುವ ಚಿತ್ರವನ್ನು ಹಂಚಿಕೊಂಡಿರುವ ಕೇಟೀ, 'ಶೀಘ್ರದಲ್ಲೇ' ಎಂಬ ಒಕ್ಕಣೆ ಹಾಕಿದ್ದಾರೆ.

ಈ ಪೋಸ್ಟ್‌ ಅನ್ನು 'ಅಗೌರವ' ಎಂದು ಗ್ರೀನ್‌ಲ್ಯಾಂಡ್‌ ಪ್ರಧಾನಿ ಜೆನ್ಸ್‌–ಫ್ರೆಡೆರಿಕ್‌ ನೀಲ್ಸೆನ್‌ ಟೀಕಿಸಿದ್ದಾರೆ.

'ಜನರು ಹಾಗೂ ದೇಶಗಳ ನಡುವಿನ ಸಂಬಂಧವು ಪರಸ್ಪರ ಗೌರವ ಸಂಕೇತ ಹಾಗೂ ಅಂತರರಾಷ್ಟ್ರೀಯ ಕಾನೂನಿನ ನೆಲೆಯಲ್ಲಿ ನಿರ್ಮಾಣಗೊಳ್ಳುತ್ತವೆಯೇ ಹೊರತು, ಮತ್ತೊಬ್ಬರ ಹಕ್ಕುಗಳನ್ನು ಉಪೇಕ್ಷಿಸುವುದರಿಂದ ಅಲ್ಲ' ಎಂದು ಎಕ್ಸ್‌ನಲ್ಲಿ ಕುಟುಕಿದ್ದಾರೆ. ಮುಂದುವರಿದು, 'ಇದಕ್ಕಾಗಿ ಆತಂಕ ಪಡಬೇಕಾಗಿಲ್ಲ. ನಮ್ಮ ದೇಶವು ಮಾರಾಟಕ್ಕಿಲ್ಲ. ನಮ್ಮ ದೇಶದ ಭವಿಷ್ಯವನ್ನು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ನಿರ್ಧರಿಸಲಾರವು' ಎಂದು ಜನರಿಗೆ ಕರೆ ನೀಡಿದ್ದಾರೆ.

ಕೇಟೀ ಪೋಸ್ಟ್‌ಗೆ ಗ್ರೀನ್‌ಲ್ಯಾಂಡ್‌ ಹಾಗೂ ಡೆನ್ಮಾರ್ಕ್‌ನಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಅಮೆರಿಕದ ಮಿತ್ರ ರಾಷ್ಟ್ರವಾಗಿ ತನ್ನ ಪ್ರಾದೇಶಿಕ ಸಮಗ್ರತೆಗೆ ಪೂರ್ಣ ಗೌರವವನ್ನು ಡೆನ್ಮಾರ್ಕ್‌ ನಿರೀಕ್ಷಿಸುತ್ತದೆ ಎಂದು ವಾಷಿಂಗ್ಟನ್‌ನಲ್ಲಿರುವ ಡೆನ್ಮಾರ್ಕ್‌ ರಾಯಭಾರಿ ಜೆಸ್ಪರ್‌ ಮೊಲ್ಲರ್‌ ಸೊರೆನ್ಸೆನ್‌ ಹೇಳಿದ್ದಾರೆ.

ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸನ್ ಅವರು, ಈ ರೀತಿ ಬೆದರಿಕೆ ಒಡ್ಡುವುದನ್ನು ಟ್ರಂಪ್‌ ನಿಲ್ಲಿಸಬೇಕು ಎಂದಿದ್ದಾರೆ. 'ಅಮೆರಿಕವು ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳುವುದೇ ಅರ್ಥಹೀನ' ಎಂದೂ ಕುಟುಕಿದ್ದಾರೆ.

'ಡ್ಯಾನಿಶ್ ಸಾಮ್ರಾಜ್ಯದ ಪ್ರಾಂತ್ಯವನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು ಅಮೆರಿಕಕ್ಕೆ ಇಲ್ಲ' ಎಂಬ ತೀಕ್ಷ್ಣ ಸಂದೇಶ ರವಾನಿಸಿದ್ದಾರೆ.

ಆದರೆ, 'ಏರ್‌ಫೋರ್ಸ್‌ ಒನ್‌'ನಲ್ಲಿ ಮಾತನಾಡಿರುವ ಟ್ರಂಪ್‌, 'ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಮಗೆ ಗ್ರೀನ್‌ಲ್ಯಾಂಡ್‌ ಬೇಕಾಗಿದೆ. ಅದನ್ನು ಡೆನ್ಮಾರ್ಕ್‌ ಸರಿಯಾಗಿ ನಿರ್ವಹಿಸುತ್ತಿಲ್ಲ' ಎಂದಿದ್ದಾರೆ.

'ದಿ ಅಟ್ಲಾಂಟಿಕ್'ಗೆ ನೀಡಿರುವ ಸಂದರ್ಶನದಲ್ಲಿ, 'ನಮಗೆ ಗ್ರೀನ್‌ಲ್ಯಾಂಡ್ ಖಂಡಿತವಾಗಿಯೂ ಬೇಕು. ದೇಶದ ರಕ್ಷಣಾ ಉದ್ದೇಶಕ್ಕಾಗಿ  ಅದರ ಅಗತ್ಯವಿದೆ' ಎಂದು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

ಕೊಲಂಬಿಯಾ, ಕ್ಯೂಬಾ ಹಾಗೂ ಮೆಕ್ಸಿಕೊಗೆ ಬೆದರಿಕೆ

ಕೊಲಂಬಿಯಾ ಅಧ್ಯಕ್ಷರಿಗೂ ಮಡೂರೊ ಪರಿಸ್ಥಿತಿ ಎದುರಾಗಬಹುದು ಎಂದು ಟ್ರಂಪ್‌ ಎಚ್ಚರಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ 'ಜಾಗರೂಕರಾಗಿರಬೇಕು' ಎಂದಿದ್ದಾರೆ.

'ಕೊಕೇನ್‌ ತಯಾರಿಸಿ, ಅಮೆರಿಕಕ್ಕೆ ಕಳುಹಿಸುತ್ತಿರುವ ಪೆಟ್ರೋ, ಎಚ್ಚರಿಕೆಯಿಂದ ಇರಲೇಬೇಕು' ಎಂದು ಒತ್ತಿ ಹೇಳಿದ್ದಾರೆ.

ವೆನೆಜುವೆಲಾ ಮೇಲಿನ ದಾಳಿಯನ್ನು ಪೆಟ್ರೋ ಖಂಡಿಸಿದ್ದರು. ಇದು, ಲ್ಯಾಟಿನ್‌ ಅಮೆರಿಕದ ಸಾರ್ವಭೌಮತ್ವದ ಮೇಲೆ ನಡೆದ ದಾಳಿ ಎಂದು ಹೇಳಿದ್ದರು.

ಆದರೆ, ಟ್ರಂಪ್‌, 'ಕೊಲಂಬಿಯಾ ಪರಿಸ್ಥಿತಿ ಹದಗೆಟ್ಟಿದೆ. ಅದನ್ನು ಕೊಕೇನ್‌ ತಯಾರಿಸುವ ವ್ಯಕ್ತಿಯೊಬ್ಬರು ಮುನ್ನಡೆಸುತ್ತಿದ್ದಾರೆ. ಹೆಚ್ಚು ಸಮಯ ಹಾಗೆಯೇ ಮುಂದುವರಿಯುವುದಿಲ್ಲ' ಎಂದು ಹೇಳಿದ್ದಾರೆ. ಆ ಮೂಲಕ, ಕ್ಯೂಬಾ ಸರ್ಕಾರವನ್ನೂ ಪತನಗೊಳಿಸುವ ಸುಳಿವು ನೀಡಿದ್ದಾರೆ.

ಅಮೆರಿಕದ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೂ ಇಂತಹದ್ದೇ ಹೇಳಿಕೆ ನೀಡಿದ್ದಾರೆ. 'ಮಡೂರೊಗೆ ಬೆಂಬಲ ನೀಡುತ್ತಿದ್ದ ಕ್ಯೂಬಾ ಸರ್ಕಾರವನ್ನು ನಾವು ಮೆಚ್ಚುವುದಿಲ್ಲ ಎಂಬುದು ರಹಸ್ಯವೇನಲ್ಲ' ಎಂದು ಎನ್‌ಬಿಸಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಹೆಚ್ಚುತ್ತಿದೆ ಕಳವಳ

ವೆನೆಜುವೆಲಾ ಕಾರ್ಯಾಚರಣೆ ಬೆನ್ನಲ್ಲೇ, ಅಮೆರಿಕ ನೀಡುತ್ತಿರುವ ಹೇಳಿಕೆಗಳು ನೆರೆಯ ರಾಷ್ಟ್ರಗಳಲ್ಲಿ ಕಳವಳ ಹೆಚ್ಚಿಸಿವೆ. ಫ್ರಾನ್ಸ್‌ ವಿದೇಶಾಂಗ ಸಚಿವಾಲಯವು ಡೆನ್ಮಾರ್ಕ್‌ಗೆ ಬೆಂಬಲ ಘೋಷಿಸಿದ್ದು, 'ಬಲ ಪ್ರಯೋಗದ ಮೂಲಕ ಗಡಿ ಬದಲಿಸಲು ಸಾಧ್ಯವಿಲ್ಲ' ಎಂದಿದೆ.

ಫಿನ್‌ಲೆಂಡ್, ಸ್ವೀಡನ್‌ ಹಾಗೂ ನಾರ್ವೆ ನಾಯಕರೂ ಡೆನ್ಮಾರ್ಕ್‌ ಬೆನ್ನಿಗೆ ನಿಂತಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಮೆರಿಕದ ಪ್ರತಿಸ್ಪರ್ಧಿಯಾಗಿರುವ ಚೀನಾ, ಟ್ರಂಪ್‌ ಹೇಳಿಕೆಗಳಿಗೆ ತಿರುಗೇಟು ನೀಡಿದೆ.

ಗ್ರೀನ್‌ಲ್ಯಾಂಡ್‌ ತೀರದಲ್ಲಿ ರಷ್ಯಾ ಹಾಗೂ ಚೀನಾ ಉಪಸ್ಥಿತಿ ಇದೆ ಎಂದು ಟ್ರಂಪ್‌ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, 'ವೈಯಕ್ತಿಕ ಲಾಭಕ್ಕಾಗಿ ಚೀನಾದಿಂದ ಬೆದರಿಕೆ ಎಂಬ ನೆಪ ಮಾಡುವುದನ್ನು ನಿಲ್ಲಿಸಬೇಕು' ಎಂದು ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.