ADVERTISEMENT

H1B Visa: 5 ಸಾವಿರ ಅರ್ಜಿಗಳಿಗೆ ಬೇಕು ₹44 ಶತಕೋಟಿ; ಸ್ಥಳೀಯ ನೇಮಕಾತಿ ಹೆಚ್ಚಳ

ಪಿಟಿಐ
Published 23 ಸೆಪ್ಟೆಂಬರ್ 2025, 7:35 IST
Last Updated 23 ಸೆಪ್ಟೆಂಬರ್ 2025, 7:35 IST
<div class="paragraphs"><p>ಐಸ್ಟಾಕ್ ಚಿತ್ರ</p></div>
   

ಐಸ್ಟಾಕ್ ಚಿತ್ರ

ಎಚ್‌1 ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿರುವುದರಿಂದ ಕಂಪನಿಗಳು ಪರಿಣಿತರನ್ನು ತಮ್ಮಲ್ಲಿಗೆ ಕರೆಯಿಸಿಕೊಳ್ಳುವ ಬದಲು, ಕೆಲಸವನ್ನೇ ವರ್ಗಾಯಿಸುವ ಅಥವಾ ಸ್ಥಳೀಯ ನೆಮಕಾತಿ ಹೆಚ್ಚಿಸುವ ಸಾಧ್ಯತೆಗಳೇ ಹೆಚ್ಚು...

ನವದೆಹಲಿ: ಎಚ್‌1 ಬಿ ವೀಸಾದ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿರುವುದರಿಂದ ಐದು ಸಾವಿರ ಅರ್ಜಿಗಳಿಗೆ 50 ಕೋಟಿ ಅಮೆರಿಕನ್ ಡಾಲರ್ (₹44 ಶತಕೋಟಿ) ಶುಲ್ಕವನ್ನು ಭರಿಸಬೇಕು ಎಂಬುದು ಲೆಕ್ಕಾಚಾರ. ಅಮೆರಿಕದ ಈ ಕ್ರಮದಿಂದಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು ಐಟಿ ಪರಿಣಿತರನ್ನು ತಮ್ಮಲ್ಲಿಗೆ ಕರೆಯಿಸಿಕೊಳ್ಳುವ ಬದಲು, ಅಲ್ಲಿಗೇ ಕೆಲಸವನ್ನು ವರ್ಗಾಯಿಸುವ ಅಥವಾ ಸ್ಥಳೀಯ ನೆಮಕಾತಿ ಹೆಚ್ಚಿಸಿಕೊಳ್ಳುವ ಕ್ರಮಕ್ಕೆ ಮುಂದಾಗುವ ಸಾಧ್ಯತೆಗಳೇ ಹೆಚ್ಚು ಎಂದು ಮೋತಿಲಾಲ್ ಓಸ್ವಾಲ್‌ ಹಣಕಾಸು ಸೇವೆಗಳನ್ನು ನೀಡುವ ಕಂಪನಿ ಅಭಿಪ್ರಾಯಪಟ್ಟಿದೆ.

ಪ್ರತಿ ವೀಸಾಗೆ 1 ಲಕ್ಷ ಡಾಲರ್‌ ಶುಲ್ಕದ ಕ್ರಮ 2027ರಿಂದ ಜಾರಿಗೆ ಬರಲಿದೆ. ಆರ್ಥಿಕ ವರ್ಷ 2026ರ ವೀಸಾ ಅರ್ಜಿ ಸಲ್ಲಿಸುವಿಕೆ ಈಗಾಗಲೇ ಕೊನೆಗೊಂಡಿದೆ. 

ADVERTISEMENT

‘2027ಕ್ಕೆ ಒಂದು ಐಟಿ ಕಂಪನಿಯು ಎಚ್‌1ಬಿ ವೀಸಾಗಾಗಿ 5 ಸಾವಿರ ಅರ್ಜಿಗಳನ್ನು ಸಲ್ಲಿಸಿದರೆ 50 ಕೋಟಿ ಅಮೆರಿಕನ್ ಡಾಲರ್ (5000X1,00,000) ವಾರ್ಷಿಕ ಶುಲ್ಕ ಭರಿಸಬೇಕು. ಇದನ್ನು ಗಮನಿಸಿದರೆ ಭಾರತೀಯ ಐಟಿ ಕಂಪನಿಗಳು ಎಚ್‌1ಬಿಗೆ ಅರ್ಜಿ ಸಲ್ಲಿಸುವುದನ್ನೇ ನಿಲ್ಲಿಸುವ ಸಾಧ್ಯತೆಗಳಿವೆ. ಬದಲಿಗೆ ಸಾಗರೋತ್ತರ ವಿಸ್ತರಣೆ ಉತ್ತೇಜಿಸುವ ಅಥವಾ ಸ್ಥಳೀಯ ನೇಮಕಾತಿ ಹೆಚ್ಚಿಸುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು’ ಎಂದಿದೆ.

‘ಹೊಸ ಎಚ್‌1ಬಿ ರದ್ದುಪಡಿಸಿದಲ್ಲಿ ಆನ್‌ಸೈಟ್‌ ಆದಾಯ ಇಳಿಮುಖವಾಗಿ, ವೆಚ್ಚ ಹೆಚ್ಚಳವಾಗಲಿದೆ. ಇದರಿಂದ ಕಾರ್ಯಾಚರಣೆಯ ಲಾಭಾಂಶದಲ್ಲಿ ಸುಧಾರಣೆಯಾಗಲಿದೆ. ಏಕೆಂದರೆ ಆಫ್‌ಶೋರ್ ಕೆಲಸಗಳು ರಚನಾತ್ಮಕವಾಗಿ ಹೆಚ್ಚು ಲಾಭದಾಯಕವಾಗಿರುತ್ತದೆ. ಮಧ್ಯಮ ಅವಧಿಯಲ್ಲಿ ಪ್ರತಿ ಷೇರಿನ ಗಳಿಕೆಯ ಮೇಲೆ ನಿವ್ವಳ ಪರಿಣಾಮ ತಟಸ್ಥವಾಗಿರಬಹುದು. ಆದಾಗ್ಯೂ ಉನ್ನತ ಮಟ್ಟದ ಬೆಳವಣಿಗೆ ಮಂದ ಗತಿಯಲ್ಲಿ ಸಾಗಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯರಿಗೆ ಆದ್ಯತೆ ನೀಡಲು ಮುಂದಾಗಿರುವ ದೊಡ್ಡ ಐಟಿ ಕಂಪನಿಗಳು

'ಈ ಎಲ್ಲಾ ಅಪಾಯಗಳ ಹಿನ್ನೆಲೆಯಲ್ಲಿ ಅಮೆರಿಕದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಗಳಿವೆ. ಕಳೆದ ಒಂದು ದಶಕದಲ್ಲಿ ಎಚ್‌1ಬಿ ವೀಸಾ ಮೇಲಿನ ಅವಲಂಬನೆಯನ್ನು ಐಟಿ ಮಾರಾಟಗಾರರು ಕಡಿಮೆ ಮಾಡಿದ್ದಾರೆ. ಅಮೆರಿಕದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುತ್ತಿರುವುದರಿಂದ ಮತ್ತು ಸ್ಥಳೀಯವಾಗಿ ನೇಮಕಾತಿ ಪ್ರಕ್ರಿಯೆಗೆ ಒಲವು ತೋರಿದ ಪರಿಣಾಮ ಶೇ 20ರಷ್ಟು ಉದ್ಯೋಗಿಗಳು ಸದ್ಯ ಆನ್‌ಸೈಟ್‌ನಲ್ಲಿ ಉದ್ಯೋಗ ಪಡೆದಿದ್ದಾರೆ. ಶೇ 20ರಿಂದ 30ರಷ್ಟು ಉದ್ಯೋಗಿಗಳ ಬಳಿ ಮಾತ್ರ ಎಚ್‌1ಬಿ ವೀಸಾ ಇದೆ’ ಎಂದಿದ್ದಾರೆ.

ಎಚ್‌1ಬಿ ವೀಸಾವನ್ನು ‘ಇಂಡಿಯಾ ಐಟಿ’ ವೀಸಾ ಎಂದೇ ಬಿಂಬಿಸಲಾಗಿದೆ. ಪ್ರಾಯೋಗಿಕವಾಗಿ ನೋಡುವುದಾದರೆ ದೊಡ್ಡ ಕಂಪನಿಗಳಾದ ಗೂಗಲ್, ಅಮೆಜಾನ್, ಮೈಕ್ರೊಸಾಫ್ಟ್, ಮೆಟಾ ಮತ್ತಿತರ ಕಂಪನಿಗಳು ಭಾರತೀಯ ಐಟಿಗಿಂತ ಹೊಸ ಅರ್ಜಿಗಳನ್ನು ಆಹ್ವಾನಿಸುತ್ತಿರುವುದೇ ಹೆಚ್ಚು.

ಮತ್ತೊಂದೆಡೆ ಐಟಿ ವರ್ತಕರು ಸ್ಥಳೀಕರಣ ಮತ್ತು ಉಪಗುತ್ತಿಗೆಯ ಮಾದರಿಗಳನ್ನು ಈಗಾಗಲೇ ಸಜ್ಜುಗೊಳಿಸಿಕೊಂಡಿದ್ದಾರೆ. ಅದನ್ನು ಸಮರ್ಪಕವಾಗಿ ಜಾರಿಗೊಳಿಸಲು ಪೂರಕ ಸಿದ್ಧತೆಯನ್ನೂ ನಡೆಸಿದ್ದಾರೆ.

ಅಮೆರಿಕ ಸರ್ಕಾರ ನೀಡಿರುವ ಸ್ಪಷ್ಟನೆ ಏನು?

‘ಎಚ್‌1ಬಿ ವೀಸಾ ಶುಲ್ಕ ಹೆಚ್ಚಳದ ಕ್ರಮವು ಪ್ರಸ್ತುತ ವೀಸಾ ಹೊಂದಿರುವವರ ಮೇಲೆ ಪರಿಣಾಮ ಬೀರದು. ಹೊಸ ಅರ್ಜಿಗಳಿಗೆ ಮಾತ್ರ ಒಂದು ಬಾರಿ ಶುಲ್ಕ ಅನ್ವಯಿಸುತ್ತದೆ ಎಂಬ ಅಮೆರಿಕದ ಸ್ಪಷ್ಟನೆಯು ಸದ್ಯ ಉಂಟಾಗಿರುವ ಗೊಂದಲವನ್ನು ತಕ್ಷಣ ನಿವಾರಿಸಿದೆ. ಜತೆಗೆ ಅಮೆರಿಕದ ಹೊರಗಿರುವವರಿಗೆ ತಮ್ಮ ವ್ಯವಹಾರವನ್ನು ಮುಂದುವರಿಸಲು ಮತ್ತು ಎಚ್‌1ಬಿ ವೀಸಾ ಕುರಿತು ಅನಿಶ್ಚಿತತೆಯನ್ನು ದೂರಗೊಳಿಸಲು ನೆರವಾಗಿದೆ’ ಎಂದು ನಾಸ್‌ಕಾಂ ಹೇಳಿಕೆ ನೀಡಿದೆ.

'ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮತ್ತು ಭಾರತೀಯ ಮೂಲದ ಕಂಪನಿಗಳು ಎಚ್‌1ಬಿ ವೀಸಾಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಿವೆ ಮತ್ತು ಸ್ಥಳೀಯ ನೇಮಕಾತಿಗಳನ್ನು ಹೆಚ್ಚಿಸುತ್ತಿವೆ. ಹೀಗಾಗಿ ಅಮೆರಿಕದ ಸದ್ಯದ ಕ್ರಮವು ಈ ವಲಯದ ಮೇಲೆ ಅಷ್ಟಾಗಿ ಪರಿಣಾಮ ಬೀರದು’ ಎಂದಿದೆ.

‘ಆದಾಗ್ಯೂ, 2026ರ ನಂತರದಲ್ಲಿ ಕಂಪನಿಗಳು ಸ್ಥಳೀಯವಾಗಿ ಕೌಶಲ ತರಬೇತಿಯನ್ನು ಹೆಚ್ಚಿಸಲು ಸಾಕಷ್ಟು ಕಾಲಾವಕಾಶ ಇದೆ. ಇದರಿಂದ ಅಮೆರಿಕದಲ್ಲೇ ಸ್ಥಳೀಯರ ನೇಮಕಾತಿಗೆ ಒತ್ತು ಸಿಗುವ ಸಾಧ್ಯತೆ ಇದೆ’ ಎಂದು ನಾಸ್‌ಕಾಂ ಹೇಳಿದೆ.

ಯಾವೆಲ್ಲಾ ಕಂಪನಿಗಳ ಬಳಿ ಎಷ್ಟು ಎಚ್‌1ಬಿ ವೀಸಾ?

‘ಸ್ಥಳೀಯರಲ್ಲಿ ಕೌಶಲ ಹೆಚ್ಚಳಕ್ಕೆ ಅಮೆರಿಕವು 1 ಶತಕೋಟಿ ಡಾಲರ್‌ ಖರ್ಚು ಮಾಡುತ್ತಿದೆ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಅಮೆರಿಕನ್ನರು ಹೆಚ್ಚು ನೌಕರಿಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ದತ್ತಾಂಶಗಳ ಪ್ರಕಾರ, ಭಾರತೀಯ ಮತ್ತು ಭಾರತ ಕೇಂದ್ರಿತ ಕಂಪನಿಗಳು ಎಚ್‌1ಬಿ ವೀಸಾ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಿವೆ. 2015ರಲ್ಲಿ 14,792 ಇದ್ದ ಎಚ್‌1ಬಿ ವೀಸಾ 2024ರಲ್ಲಿ 10,162ಕ್ಕೆ ಕುಸಿದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಮೂಲದ ವೃತ್ತಿಪರರು ಹೆಚ್ಚಿನ ಪ್ರಮಾಣದ H-1B ವೀಸಾ ಹೊಂದಿದ್ದಾರೆ. ಇದರ ಪ್ರಮಾಣ ಶೇ 70ಕ್ಕಿಂತ ಹೆಚ್ಚು’ ಎಂದು ತಜ್ಞರು ಅಂದಾಜಿಸಿದ್ದಾರೆ.

USCIS ಅಂತರ್ಜಾಲ ತಾಣದಲ್ಲಿ ದಾಖಲಾರುವ ಮಾಹಿತಿಯಂತೆ, 2025ರಲ್ಲಿ ಅಮೆಜಾನ್ ಅತ್ಯಧಿಕ (10,044) ಎಚ್‌1ಬಿ ವೀಸಾ ಪಡೆದಿದೆ. ಟಾಪ್‌ 10 ಪಟ್ಟಿಯಲ್ಲಿ ಟಿಸಿಎಸ್‌ (5,505), ಮೈಕ್ರೊಸಾಪ್ಟ್‌ (5,189), ಮೆಟಾ, (5,123), ಆ್ಯಪಲ್‌ (4,202), ಗೂಗಲ್‌ (4,181), ಕಾಗ್ನಿಜೆಂಟ್‌ (2,493), ಜೆಪಿ ಮಾರ್ಗನ್‌ ಚೇಸ್‌ (2,440), ವಾಲ್‌ಮಾರ್ಟ್‌ (2,390) ಮತ್ತು ಡೆಲಾಯ್ಟ್‌ ಕನ್ಸಲ್ಟಿಂಗ್ (2,353) ಅಗ್ರಸ್ಥಾನದಲ್ಲಿವೆ. ಟಾಪ್‌ 20ರ ಪಟ್ಟಿಯಲ್ಲಿ ಇನ್ಫೊಸಿಸ್‌ (2004), ಎಲ್‌ಟಿಐಮೈಂಡ್‌ಟ್ರೀ (1870) ಮತ್ತು ಎಚ್‌ಸಿಎಲ್‌ (1728) ವೀಸಾಗಳನ್ನು ಹೊಂದಿವೆ.

ಪ್ರತಿ ವರ್ಷ 65 ಸಾವಿರ ಇಂಥ ವೀಸಾಗಳನ್ನು ವಿತರಿಸಲು ಸಂಸತ್ತು ಅನುಮೋದಿಸಿದೆ. ಇದರೊಂದಿಗೆ ಹೆಚ್ಚುವರಿಯಾಗಿ 20 ಸಾವಿರ ವೀಸಾ ಮೀಸಲಿಡಲಾಗಿದೆ. ಈ ಹೆಚ್ಚುವರಿ ವೀಸಾ ಅಮೆರಿಕದಲ್ಲಿ ಉನ್ನತ ಪದವಿ ಪಡೆದವರಿಗಾಗಿ ಮಾತ್ರ ಇದೆ.

ಹಾಲಿ ಎಚ್‌1ಬಿ ವೀಸಾ ಶುಲ್ಕವೆಷ್ಟು?

ಎಚ್‌1ಬಿ ವೀಸಾಗೆ ಹೊಸ ಅರ್ಜಿದಾರರಿಗೆ ಮಾತ್ರ 1 ಲಕ್ಷ ಅಮೆರಿಕನ್ ಡಾಲರ್‌ ಶುಲ್ಕ ಅನ್ವಯ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ವೀಸಾ ಅಥವಾ ನವೀಕರಣದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದ ನಂತರ ಭಾರತೀಯ ಐಟಿ ಉದ್ಯಮವು ನಿಟ್ಟುಸಿರು ಬಿಟ್ಟಿತು. ಎಚ್‌1ಬಿ ವೀಸಾ ಶುಲ್ಕವು ಉದ್ಯೋಗದಾತರ ಗಾತ್ರ ಮತ್ತು ಇತರ ವೆಚ್ಚಗಳನ್ನು ಅವಲಂಬಿಸಿದೆ. ಇದು 2 ಸಾವಿರ ಅಮೆರಿಕನ್ ಡಾಲರ್‌ನಿಂದ 5 ಸಾವಿರ ಡಾಲರ್‌ವರೆಗೂ ಇರುತ್ತದೆ.

‘ಈ ಏರಿಕೆಯು ಮುಂದಿನ ಅರ್ಜಿ ಸಲ್ಲಿಸುವ ಅವಧಿಗೆ ಅನ್ವಯಿಸುವುದರಿಂದ ಮುಂದಿನ 6ರಿಂದ 12 ತಿಂಗಳವರೆಗೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಹಿಂದಿನ ಲೆಕ್ಕಾಚಾರ ಮತ್ತು ವೆಚ್ಚ ಸೇರ್ಪಡೆಯನ್ನು ಉಲ್ಲೇಖಿಸಿ ನಿಯಮ ಮುಂದುವರಿದರೆ ಐಟಿ ಕಂಪನಿಗಳು ವ್ಯವಹಾರ ತಂತ್ರಗಳ ಮರುಮೌಲ್ಯಮಾಪನ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂದೇನು..?

‘ತಕ್ಷಣದ ಆಘಾತ ಸ್ವಲ್ಪ ಮಟ್ಟಿಗೆ ನಿಂತಿದೆ. ಇದು ಈ ಸದ್ಯಕ್ಕೆ ದೊಡ್ಡ ಪರಿಹಾರದಂತೆ ಗೋಚರವಾಗಿದೆ. ಆದರೆ ವಾಸ್ತವಕ್ಕೆ ಹೊಂದಿಕೊಳ್ಳಲು ಇದು ಹೆಚ್ಚಿನ ಸಮಯವನ್ನು ನೀಡುತ್ತಿದೆ’ ಎಂದು ಜೆಎಸ್‌ಎ ವಕೀಲರು ಮತ್ತು ಸಾಲಿಸಿಟರ್‌ಗಳು ಸಂಸ್ಥೆಯ ಪಾಲುದಾರ ಸಜೈ ಸಿಂಗ್ ಹೇಳಿದ್ದಾರೆ.

‘ಅಮೆರಿಕದ ಎಚ್‌1ಬಿ ವೀಸಾ ಹೊಸ ನೀತಿಯಿಂದ ಹಾಲಿ ವೀಸಾ ಹೊಂದಿರುವವರು ಅಮೆರಿಕದಿಂದ ಹೊರಹೋಗಲು ಮತ್ತು ಮರಳಿ ಬರಲು ಯಾವುದೇ ಅಡಚಣೆ ಇಲ್ಲ. ಇವರು ಶುಲ್ಕ ಪಾವತಿಸದೇ ಅಮೆರಿಕದಿಂದ ಭಾರತ ಅಥವಾ ಇನ್ಯಾವುದೇ ರಾಷ್ಟ್ರಗಳಿಗೆ ಹೋಗಿ, ಅಮೆರಿಕಕ್ಕೆ ಮರಳಬಹುದು. ಏಕೆಂದರೆ ಶುಲ್ಕವು ಮುಂದಿನ ಎಚ್‌1ಬಿ ಲಾಟರಿ ಚಕ್ರದಿಂದ ಅನ್ವಯ. ಆದಾಗ್ಯೂ, ಭಾರತದ ಐಟಿ ಕಂಪನಿಗಳು ಎಚ್‌1ಬಿ ವೀಸಾ ಮೇಲೆ ಅತಿಯಾಗಿ ಅವಲಂಬಿತವಾಗಿವೆ. ಅವುಗಳು ಈ ಶುಲ್ಕ ಏರಿಕೆಯ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚು. ಇದು ಅವರ ವ್ಯವಹಾರ ಮಾದರಿ ಮತ್ತು ಆದಾಯದ ಹರಿವಿನ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿವೆ. ಹೀಗಾಗಿ ವ್ಯವಹಾರ ತಂತ್ರಗಳ ಮರುಮೌಲ್ಯಮಾಪನದ ಅಗತ್ಯವಿದೆ’ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.