ADVERTISEMENT

ಅಮೆರಿಕದಲ್ಲಿ ಆಂತರಿಕ ಸಂಘರ್ಷ: ಲಾಸ್‌ ಏಂಜಲೀಸ್ ಕುದಿಯುತ್ತಿದೆ ಏಕೆ..?

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 12:46 IST
Last Updated 11 ಜೂನ್ 2025, 12:46 IST
<div class="paragraphs"><p>ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ</p></div>

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ

   

ರಾಯಿಟರ್ಸ್ ಚಿತ್ರ

Los Angeles protests: ಅಮೆರಿಕದ ವಲಸೆ ನೀತಿ ವಿರೋಧಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿರುವುದು ಹಿಂಸಾತ್ಮಕ ತಿರುವು ಪಡೆದ ಪರಿಣಾಮ, ಅಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.

ಅಮೆರಿಕದ ಬದಲಾದ ವಲಸೆ ನೀತಿ ವಿರೋಧಿಸಿ ಲಾಸ್ ಏಂಜಲೀಸ್‌ನ ಬೀದಿಗಿಳಿದು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು, ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ. ಜನರ ಆಕ್ರೋಶ ಹತ್ತಿಕ್ಕಲು ಎರಡು ಸಾವಿರ ಸೈನಿಕರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಯೋಜಿಸಿದ್ದಾರೆ. ತನ್ನ ಅನುಮತಿ ಕೇಳದೆ ಸೇನೆ ನಿಯೋಜಿಸಿದ್ದಕ್ಕೆ ಕ್ಯಾಲಿಫೋರ್ನಿಯಾದ ಗವರ್ನರ್‌ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದಾರೆ. 

ADVERTISEMENT

ಅಮೆರಿಕದ ಇಷ್ಟೂ ಬೆಳವಣಿಗೆಗಳು ಅಲ್ಲಿನ ಆಂತರಿಕ ಸಂಘರ್ಷಕ್ಕೆ ಕನ್ನಡಿ ಹಿಡಿದಿವೆ. ಡೊನಾಲ್ಡ್‌ ಟ್ರಂಪ್ ಅವರು 2ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ದಿನದಿಂದಲೂ ಭಿನ್ನವಾದ ಆದೇಶಗಳ ಮೂಲಕವೇ ಅಮೆರಿಕ ಹಾಗೂ ಜಗತ್ತಿನ ಹಲವು ರಾಷ್ಟ್ರಗಳ ಜನರ ಆತಂಕಕ್ಕೆ ಮೂಡಿಸಿದ್ದಾರೆ. ಪ್ರತಿಸುಂಕ ಹೇರಿಕೆ, ಅಕ್ರಮವಾಗಿ ನೆಲೆಸಿದವರನ್ನು ಅವರ ದೇಶಗಳಿಗೆ ಗಡೀಪಾರು ಮಾಡುವ ಕ್ರಮ, ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ದಾಖಲಾತಿಗೆ ನಿರ್ಬಂಧ ಹೀಗೆ ಹಲವು ಆದೇಶಗಳ ಮೂಲಕ ಟ್ರಂಪ್‌ ಸುದ್ದಿಯಾಗುತ್ತಲೇ ಇದ್ದಾರೆ. ವಲಸೆ ನೀತಿ ವಿರೋಧಿಸಿದವರ ಮೇಲೆ ಪ್ರಹಾರಕ್ಕೆ ಮುಂದಾಗಿರುವುದು ಅಮೆರಿಕದಲ್ಲಿನ ಹೊಸ ಬೆಳವಣಿಗೆ. 

ಪ್ರತಿಭಟನೆ ಆರಂಭವಾಗಿದ್ದು ಹೇಗೆ?

ಫ್ಯಾಷನ್‌ ಕ್ಷೇತ್ರಕ್ಕಾಗಿಯೇ ಲಾಸ್ ಏಂಜಲೀಸ್ ಜಗತ್ತಿಗೆ ಚಿರಪರಿಚಿತ. ಇಲ್ಲಿನ ಎರಡು ಹೋಮ್ ಡಿಪೋಗಳು, ಡೋನಟ್‌ ಮಳಿಗೆ ಮತ್ತು ವಸ್ತ್ರಗಳ ದಾಸ್ತಾನು ಕೇಂದ್ರದ ಮೇಲೆ ವಲಸೆ ಮತ್ತು ಕಸ್ಸಮ್ಸ್‌ ಜಾರಿ ಇಲಾಖೆಯ ಅಧಿಕಾರಿಗಳು ಹಠಾತ್ತನೆ ದಾಳಿ ನಡೆಸಿದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಶುಕ್ರವಾರ ಆರಂಭವಾದ ಈ ದಾಳಿಯಲ್ಲಿ ನಕಲಿ ದಾಖಲೆ ಬಳಸಿ ಅಮೆರಿಕದಲ್ಲಿ ನೆಲೆಸಿ ದುಡಿಯುತ್ತಿದ್ದವರನ್ನು ಗುರಿಯಾಗಿಸಿತ್ತು. ಅಧಿಕಾರಿಗಳು ದಾಳಿ ಆರಂಭಿಸುತ್ತಿದ್ದಂತೆ ಜನರು ಗುಂಪುಗುಂಪಾಗಿ ಸೇರಲಾರಂಭಿಸಿದರು. ಅಧಿಕಾರಿಗಳ ವಾಹನಗಳನ್ನು ತಡೆದು, ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

‘ವಲಸೆ ಮತ್ತು ಕಸ್ಟಮ್ಸ್ ಜಾರಿ ಇಲಾಖೆಯ ಅಧಿಕಾರಿಗಳೇ ಪ್ಯಾರಾಮೌಂಟ್‌ ಬಿಟ್ಟು ತೊಲಗಿ. ನೀವು ಏನೆಂಬುದನ್ನು ನಾವು ನೋಡುತ್ತಿದ್ದೇವೆ’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೆಲವೇ ಗಂಟೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದರು. ಸರ್ಕಾರಿ ಕಚೇರಿಗಳು, ಜೈಲುಗಳ ಎದುರು ಜಮಾವಣೆಗೊಂಡರು. ಇದನ್ನು ಕಾನೂನು ಬಾಹಿರ ಎಂದು ಆರೋಪಿಸಿದ ಅಧಿಕಾರಿಗಳು ಪ್ರತಿಭಟನಾಕಾರರನ್ನು ಬಂಧಿಸಲು ಮುಂದಾದರು. ಸದ್ಯ ರಾತ್ರಿ ಕರ್ಫ್ಯೂವನ್ನು ಈ ಪ್ರದೇಶದಲ್ಲಿ ಹೇರಲಾಗಿದೆ. ಹಿಂಸಾಚಾರವೂ ಅಲ್ಲಲ್ಲಿ ನಡೆಯುತ್ತಲೂ ಇವೆ.

‘ಯಾವುದೇ ಪರಿಸ್ಥಿತಿಯನ್ನು ಅದನ್ನು ನಿರ್ವಹಿಸುವ ರೀತಿಯಲ್ಲಿ ನಿರ್ವಹಿಸದಿದ್ದಾಗ, ಇಂಥ ಆಘಾತಗಳು ಸಂಭವಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ’ ಎಂದು ಪ್ಯಾರಾಮೌಂಟ್ ಮೇಯರ್ ಪೆಗ್ಗಿ ಲೆಮನ್ಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈವರೆಗೂ ಎಷ್ಟು ಜನರನ್ನು ವಶಕ್ಕೆ ಪಡೆಯಲಾಗಿದೆ?

ಆಂತರಿಕ ಭದ್ರತಾ ಇಲಾಖೆಯ ಪ್ರಕಾರ ಈವರೆಗೂ 118 ವಲಸಿಗರನ್ನು ಬಂಧಿಸಲಾಗಿದೆ. ದಾಳಿ ನಡೆಸಿದ ಶುಕ್ರವಾರವೇ 44 ಜನರನ್ನು ವಶಕ್ಕೆ ಪಡೆಯಲಾಗಿತ್ತು. ಬಂಧಿತರಲ್ಲಿ ಐವರು ಅಪರಾಧಿ ಸಂಘಟನೆಗಳಿಗೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಂಟು ಅಮೆರಿಕನ್ನರನ್ನೂ ಬಂಧಿಸಲಾಗಿದೆ. ವಶದಲ್ಲಿರುವ ಕಾನೂನು ಸಂಘರ್ಷಕ್ಕೆ ಒಳಪಟ್ಟವರನ್ನು ಬಿಡುಗಡೆ ಮಾಡಲಾಗಿದೆ.

ಪ್ರತಿಭಟನೆಯ ಸಂದರ್ಭದಲ್ಲಿ ಸೇವಾ ನೌಕರರ ಅಂತರರಾಷ್ಟ್ರೀಯ ಒಕ್ಕೂಟದ ಪ್ರಾದೇಶಿಕ ಅಧ್ಯಕ್ಷ ಡೇವಿಡ್‌ ಹ್ಯೂರ್ಟಾ ಅವರನ್ನು ಬಂಧಿಸಲಾಗಿದೆ. ಇವರನ್ನು ಮೆಟ್ರೊಪಾಲಿಟನ್‌ ಬಂಧನ ಕೇಂದ್ರದಲ್ಲಿಡಲಾಗಿದೆ. 

ಮುಂದಿನ 30 ದಿನಗಳವರೆಗೂ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಕ್ಯಾಲಿಫೋರ್ನಿಯಾ ಪ್ರತಿನಿಧಿ ನನೆಟ್ಟೆ ಬರ್ರಾಗ್ಯಾನ್‌ ಎಚ್ಚರಿಸಿದ್ದಾರೆ.

ಲಾಸ್ ಏಂಜಲೀಸ್‌ನಲ್ಲಿನ ಪ್ರತಿಭಟನೆ

ಸೇನೆ ನಿಯೋಜಿಸಿದ್ದು ಏಕೆ?

ಲಾಸ್ ಏಂಜಲೀಸ್‌ನಲ್ಲಿ ಹಿಂಸಾಚಾರ ರೂಪ ಪಡೆದ ಪ್ರತಿಭಟನೆಗೆ ಸರ್ಕಾರವೇ ಕಾರಣವೆಂದು ಗವರ್ನರ್‌ ನ್ಯೂಸಮ್‌ ಮತ್ತು ಮೇಯರ್‌ ಕ್ಯಾರೆನ್‌ ಬಾಸ್‌ ಆರೋಪಿಸಿದ್ದಾರೆ. ಆದರೆ ಇದನ್ನು ತಿರಸ್ಕರಿಸಿರುವ ಅಧ್ಯಕ್ಷ ಟ್ರಂಪ್, ‘ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೇನೆಯ ನಿಯೋಜನೆ ಅತ್ಯಗತ್ಯವಾಗಿತ್ತು’ ಎಂದಿದ್ದಾರೆ.

ಈ ಕುರಿತು ತಮ್ಮದೇ ಸಾಮಾಜಿಕ ಮಾಧ್ಯಮ ಟ್ರುತ್‌ನಲ್ಲಿ ವಿಷಯ ಹಂಚಿಕೊಂಡಿರುವ ಟ್ರಂಪ್, ‘ಗವರ್ನರ್‌ ಮತ್ತು ಮೇಯರ್‌ ಇಬ್ಬರೂ ತಮ್ಮ ಕೆಲಸ ಮಾಡಲು ಅಸಮರ್ಥರಾದರೆ, ಸಮಸ್ಯೆ ಪರಿಹರಿಸಲು ಸರ್ಕಾರವೇ ಮಧ್ಯಪ್ರವೇಶಿಸಬೇಕಾಗುತ್ತದೆ. ದಂಗೆಕೋರರು ಮತ್ತು ಲೂಟಿಕೋರರನ್ನು ಇದೇ ರೀತಿಯಲ್ಲಿ ನಿಯಂತ್ರಿಸಬೇಕು’ ಎಂದಿದ್ದಾರೆ.

ಕ್ಯಾಲಿಫೋರ್ನಿಯಾದ ನಾಯಕರ ಪ್ರತಿಕ್ರಿಯೆ ಏನು?

ಲಾಸ್‌ ಏಂಜಲೀಸ್‌ನಲ್ಲಿ ಸರ್ಕಾರವು ಉದ್ದೇಶಪೂರ್ವಕವಾಗಿಯೇ ಹಿಂಸಾಚಾರ ಆರಂಭಿಸಿದೆ. ಇದು ಇನ್ನಷ್ಟು ಗಂಭೀರ ಸ್ವರೂಪ ತೆಗೆದುಕೊಳ್ಳುವ ಅಪಾಯವಿದೆ. ಜತೆಗೆ ಸಾರ್ವಜನಿಕರ ವಿಶ್ವಾಸವನ್ನೂ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಸೇನಾ ಕಾರ್ಯಾಚರಣೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಗವರ್ನರ್‌ ನ್ಯೂಸಮ್‌ ಅವರು ರಕ್ಷಣಾ ಕಾರ್ಯದರ್ಶಿಯನ್ನು ಕೋರಿದ್ದಾರೆ.

‘ಹೋಮ್ ಡಿಪೊ ಮತ್ತು ಕರ್ತವ್ಯ ಸ್ಥಳಗಳ ಮೇಲೆ ದಾಳಿ ನಡೆಸಿ ಪಾಲಕರು ಮತ್ತು ಮಕ್ಕಳನ್ನು ದೂರ ಮಾಡಿದ್ದೀರಿ. ಜನರಲ್ಲಿ ಭೀತಿ ಮೂಡಿಸಿದ್ದೀರಿ’ ಎಂದು ಮೇಯರ್‌ ಕ್ಯಾರೆನ್‌ ಬಾಸ್‌ ಆರೋಪಿಸಿದ್ದಾರೆ.

ತನ್ನ ನಾಗರಿಕರ ಬಂಧನಕ್ಕೆ ಭಾರತದ ಪ್ರತಿಕ್ರಿಯೆ..?

ಅಮೆರಿಕದಲ್ಲಿನ ಸದ್ಯದ ಬೆಳವಣಿಗೆಯಲ್ಲಿ ಭಾರತೀಯರೂ ಸಿಲುಕಿದ್ದಾರೆ. ಅಮೆರಿಕದ ನ್ಯೂವಾರ್ಕ್‌ ವಿಮಾನ ನಿಲ್ದಾಣದಲ್ಲಿ ಭಾರತೀಯ ಯುವಕನಿಗೆ ಕೈಕೋಳ ಹಾಕಿ ನೆಲದ ಮೇಲೆ ಉರುಳಿಸಿ ಅಪರಾಧಿಯಂತೆ ನಡೆಸಿಕೊಂಡ ಘಟನೆಯನ್ನು ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಖಂಡಿಸಿವೆ. ಭಾರತ ಮೌನ ವಹಿಸಿರುವುದೇಕೆ ಎಂದೂ ಪ್ರಶ್ನಿಸಿವೆ.

ಅಮೆರಿಕದಲ್ಲಿನ ಬೆಳವಣಿಗೆಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಭಾರತದಲ್ಲಿನ ಅಮೆರಿಕ ರಾಯಭಾರಿ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ದೇಶದ ವಲಸೆ ನೀತಿಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ವಿಸಾ ಇಲ್ಲದೆ ಅಕ್ರಮವಾಗಿ ದೇಶ ಪ್ರವೇಶಿಸುವುದನ್ನು ಅಮೆರಿಕ ಸಹಿಸುವುದಿಲ್ಲ’ ಎಂದಿದ್ದರು.

ಇದರ ಬೆನ್ನಲ್ಲೇ ಅಮೆರಿಕದ ನ್ಯೂವಾರ್ಕ್‌ ವಿಮಾನ ನಿಲ್ದಾಣದಲ್ಲಿ ಭಾರತೀಯ ಯುವಕನಿಗೆ ಕೈಕೋಳ ಹಾಕಿ ನೆಲದ ಮೇಲೆ ಉರುಳಿಸಿ ಅಪರಾಧಿಯಂತೆ ನಡೆಸಿಕೊಂಡ ಘಟನೆ ಸಂಬಂಧ ವಿವರಣೆ ನೀಡುವಂತೆ ಅಮೆರಿಕಕ್ಕೆ ಭಾರತ ಸರ್ಕಾರ ಕೇಳಿದೆ ಎಂದು ವರದಿಯಾಗಿದೆ.

ಭಾರತೀಯ ಯುವಕನಿಗೆ ಕೈಕೋಳ ಹಾಕಿ ನೆಲದ ಮೇಲೆ ಉರುಳಿಸಿದ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

ಹರಿಯಾಣ ಮೂಲದ ಯುವಕ ವೀಸಾ ಇಲ್ಲದೆ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದಾನೆ. ನ್ಯಾಯಾಲಯದ ಆದೇಶದ ಪ್ರಕಾರವೇ ಆತನನ್ನು ಭಾರತಕ್ಕೆ ಗಡೀಪಾರು ಮಾಡಲಾಗುತ್ತಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ.

ಈ ಪ್ರಕರಣ ಸಂಬಂಧ ವಿದೇಶಾಂಗ ಸಚಿವಾಲಯವು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಪ್ರಕರಣದ ವಿವರಗಳನ್ನು ಖಚಿತಪಡಿಸಿಕೊಳ್ಳಲು ಅಮೆರಿಕದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದೂ ಮೂಲಗಳು ವಿವರಿಸಿವೆ.

ಭಾರತೀಯ ಯುವಕನಿಗೆ ಕೈಕೋಳ ಹಾಕಿದ ಘಟನೆಯನ್ನು ಭಾರತ ಮೂಲದ ಅಮೆರಿಕನ್ ಕುನಾಲ್ ಜೈನ್ ವಿಡಿಯೊ ಮಾಡಿದ್ದರು. ಅಪರಾಧಿಯಂತೆ ನಡೆಸಿಕೊಳ್ಳುವ ಘಟನೆ ಇದಾಗಿದ್ದು, ‘ಸಹಾಯಕ ಮತ್ತು ಹೃದಯ ವಿದ್ರಾವಕ’ ಎಂದು ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.