ADVERTISEMENT

ಒಳನೋಟ | ಮದ್ಯ ತಯಾರಿಕಾ ಉದ್ಯಮ ‘ಬಂದಿ’

ನಾನಾ ತೆರಿಗೆ ಹಾಕಿ ಹಿಂಡುತ್ತಿರುವ ಸರ್ಕಾರ, ಸುಧಾರಣೆ ನಿರೀಕ್ಷೆಯಲ್ಲಿ ಉದ್ದಿಮೆದಾರರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 0:30 IST
Last Updated 28 ಸೆಪ್ಟೆಂಬರ್ 2025, 0:30 IST
<div class="paragraphs"><p>ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇರುವ ಅಮೃತ್‌ ಡಿಸ್ಟಿಲೆರೀಸ್‌ ಕಾರ್ಖಾನೆಯ ಬಾಟ್ಲಿಂಗ್ ಯೂನಿಟ್‌ನ ನೋಟ</p></div>

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇರುವ ಅಮೃತ್‌ ಡಿಸ್ಟಿಲೆರೀಸ್‌ ಕಾರ್ಖಾನೆಯ ಬಾಟ್ಲಿಂಗ್ ಯೂನಿಟ್‌ನ ನೋಟ

   

ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್‌ ಪಿ.ಎಸ್

ಬೆಂಗಳೂರು: ‘ಇತರ ಉದ್ಯಮಗಳಿಗಿಂತ ಭಿನ್ನ ಎಂಬಂತೆ ಮದ್ಯ ಉದ್ಯಮವನ್ನು ಬಿಂಬಿಸಲಾಗಿದೆ. ಸರ್ಕಾರವೂ ಈ ಉದ್ಯಮವನ್ನು ಪೂರ್ವಗ್ರಹದಿಂದಲೇ ನೋಡುತ್ತಿದ್ದು, ಕೇವಲ ಆದಾಯದ ಮೂಲವಾಗಿ ಪರಿಗಣಿಸುತ್ತಿದೆ. ಸರ್ಕಾರಿ ವ್ಯವಸ್ಥೆಯಂತೂ ಪರಿ ಪರಿಯಾಗಿ ಹಿಂಡಿ ಹಿಪ್ಪೆ ಮಾಡುತ್ತಿದೆ. ಒಂದು ರೀತಿಯಲ್ಲಿ ನಾವು ಅನಾಥ ಮಕ್ಕಳಂತೆ ಆಗಿದ್ದೇವೆ. ಹೊಡೆದರೆ ಹೊಡಿಸಿಕೊಳ್ಳಬೇಕು, ಬಡಿದರೆ ಬಡಿಸಿಕೊಳ್ಳಬೇಕು ಎಂಬಂತಾಗಿದೆ ನಮ್ಮ ಸ್ಥಿತಿ’ ಎಂಬುದು ಮದ್ಯ ತಯಾರಿಕೆ ಉದ್ಯಮಿಗಳ ಬೇಸರದ ನುಡಿಗಳು.

ADVERTISEMENT

‘ಸರ್ಕಾರ ಮತ್ತು ಆಡಳಿತ ವ್ಯವಸ್ಥೆಗೆ ನಾವು ಕಾಮಧೇನು ಇದ್ದಂತೆ. ಆದರೆ ನಮಗೆ ಹೆಜ್ಜೆ ಹೆಜ್ಜೆಗೂ ಸಂಕಷ್ಟ, ಸವಾಲು, ಸಮಸ್ಯೆಗಳು ಕಾಡುತ್ತಿವೆ. ನಾನಾ ಸಂಕೋಲೆಗಳಲ್ಲಿ ಸಿಲುಕಿ ನರಳುತ್ತಿ ದ್ದೇವೆ. ನಮ್ಮ ಕೈಕಾಲುಗಳನ್ನು ಕಟ್ಟಿ ಈಜಾಡಿ ಎಂದರೆ ಈಜುವುದಾದರೂ ಹೇಗೆ’ ಎಂಬುದು ಅವರ ಪ್ರಶ್ನೆ.

ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳ ಆದಾಯದ ಪ್ರಮುಖ ಮೂಲಗಳಲ್ಲಿ ಮದ್ಯವೂ ಒಂದು. ಹೀಗಾಗಿ ಸರ್ಕಾರಗಳು ಆದಾಯ ಹೆಚ್ಚಿಸಿಕೊಳ್ಳಲು ಸುಲಭವಾಗಿ ಮದ್ಯ ಉದ್ಯಮದ ಬುಟ್ಟಿಗೆ ಕೈಹಾಕುತ್ತವೆ. ಅಬಕಾರಿ ಸುಂಕ, ಹೆಚ್ಚುವರಿ ಅಬಕಾರಿ ಸುಂಕ, ಸನ್ನದು ಶುಲ್ಕ ಸೇರಿದಂತೆ ನಾನಾ ರೀತಿಯ ತೆರಿಗೆ, ಶುಲ್ಕಗಳನ್ನು ವಿಧಿಸಿ ಮತ್ತು ಅವುಗಳನ್ನು ಪರಿಷ್ಕರಿಸಿ ತನ್ನ ರಾಜಸ್ವ ಸಂಗ್ರಹವನ್ನು ಹೆಚ್ಚಿಸಿಕೊಂಡು ಬರುತ್ತಿದೆ. ಮದ್ಯದ ಮೇಲೆ ಅತ್ಯಧಿಕ ತೆರಿಗೆಯನ್ನು ವಿಧಿಸುತ್ತಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಒಂದು.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ 2024–25ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು ₹35,530 ಕೋಟಿ ಆದಾಯ ಸಂಗ್ರಹಿಸಿತ್ತು. ಅದರ ಹಿಂದಿನ ಸಾಲಿನಲ್ಲಿ ₹34,629 ಕೋಟಿ ಸಂಗ್ರಹವಾಗಿತ್ತು. ‘ಗ್ಯಾರಂಟಿ’ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಸನ್ನದು ಶುಲ್ಕವನ್ನು ಗಣನೀಯ ಪ್ರಮಾಣದಲ್ಲಿ ಏರಿಸಿದೆ ಎಂಬುದು ಜನರ ಅಭಿಪ್ರಾಯ. ಬಿಯರ್‌ ಮೇಲೆ 2023ರ ಜುಲೈನಿಂದ ಇಲ್ಲಿಯವರೆಗೆ ಸರ್ಕಾರ ಮೂರು ಬಾರಿ ತೆರಿಗೆ ಹೆಚ್ಚಿಸಿದೆ. ಅದಕ್ಕೂ ಮೊದಲು ಪ್ರತಿ ಲೀಟರ್‌ ಬಿಯರ್‌ಗೆ ಘೋಷಿತ ಬೆಲೆಯ (ಡಿ.ಪಿ) ಶೇ 175ರಷ್ಟು ಹೆಚ್ಚುವರಿ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಅದೀಗ ಶೇ 205ಕ್ಕೆ ಏರಿದೆ!

₹40,000 ಕೋಟಿ ಆದಾಯದ ಗುರಿ:

2025–26ನೇ ಸಾಲಿನಲ್ಲಿ ₹40,000 ಕೋಟಿ ಆದಾಯ ಸಂಗ್ರಹಿಸುವ ಗುರಿಯನ್ನು ಅಬಕಾರಿ ಇಲಾಖೆಗೆ ನಿಗದಿಪಡಿಸಲಾಗಿದೆ. ಅದಕ್ಕೆ ತಕ್ಕಂತೆ ಹೆಚ್ಚುವರಿ ಅಬಕಾರಿ ಸುಂಕ, ಸನ್ನದು ಶುಲ್ಕ ಮತ್ತು ಇತರ ಸುಂಕಗಳ ಸಂಗ್ರಹ ಹೆಚ್ಚಳದ ಮೂಲಕ ಈ ಗುರಿ ಸಾಧಿಸುವ ಯೋಜನೆ ಹೊಂದಿದೆ. ಈ ವರ್ಷದ ಆಗಸ್ಟ್‌ ಅಂತ್ಯದ ವೇಳೆಗೆ ₹16,359 ಕೋಟಿ ಸಂಗ್ರಹಿಸುವ ಮೂಲಕ ಶೇ 40ರಷ್ಟು ಪ್ರಗತಿಯನ್ನು ಇಲಾಖೆ ಸಾಧಿಸಿದೆ.

2024–25ನೇ ಸಾಲಿನಲ್ಲಿ ಮದ್ಯ ತಯಾರಿಕಾ ಘಟಕಗಳು, ಮದ್ಯ ಮಾರಾಟಗಾರರ ಸನ್ನದು ಮತ್ತು ಸನ್ನದು ನವೀಕರಣದಿಂದ ₹820 ಕೋಟಿಗೂ ಹೆಚ್ಚು ರಾಜಸ್ವ ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನ ನಿಗದಿತ ಗುರಿ ಮುಟ್ಟುವ ಉದ್ದೇಶದಿಂದ ಮದ್ಯ ತಯಾರಿಕಾ ಘಟಕಗಳು (ಐಎಂಎಲ್‌ ಘಟಕಗಳು, ಬ್ರುವರಿ, ವೈನರಿಗಳು, ಮೈಕ್ರೊ ಬ್ರುವರಿ, ಬಾಟ್ಲಿಂಗ್‌) ಮತ್ತು ಮದ್ಯ ಮಾರಾಟಗಾರರ (ಸಿ.ಎಲ್‌–1ರಿಂದ 17) ಸನ್ನದು ಮತ್ತು ಸನ್ನದು ನವೀಕರಣ ಶುಲ್ಕವನ್ನು ಶೇ 100ರಷ್ಟು ಹೆಚ್ಚಿಸಿ ಅಬಕಾರಿ ಇಲಾಖೆಯು ಮೇ 15ರಂದು ಕರಡು ಅಧಿಸೂಚನೆ ಹೊರಡಿಸಿತ್ತು. ಅದನ್ನು ಜುಲೈ 1ರಿಂದ ಜಾರಿಗೊಳಿಸಲು ನಿರ್ಧರಿಸಿತ್ತು. ಆದರೆ ಅದಕ್ಕೆ ಮದ್ಯ ಉದ್ಯಮಿಗಳು, ಮದ್ಯ ಮಾರಾಟಗಾರರಿಂದ ವ್ಯಾಪಕ ವಿರೋಧ ಮತ್ತು ಆಕ್ಷೇಪಣೆಗಳು ವ್ಯಕ್ತವಾದವು. ಇದೆಲ್ಲದರ ಪರಿಣಾಮ ಸರ್ಕಾರವು ಸನ್ನದು ಮತ್ತು ಸನ್ನದು ನವೀಕರಣ ಶುಲ್ಕವನ್ನು ಶೇ 100ರ ಬದಲಿಗೆ ಶೇ 50ರಷ್ಟು ಹೆಚ್ಚಿಸಿ ಜೂನ್‌ 23ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು, ಅದು ಜುಲೈ 1ರಿಂದ ಜಾರಿಗೆ ಬಂದಿದೆ.

‘ಉದ್ಯಮ ಸ್ನೇಹಿ ವಾತಾವರಣವಿಲ್ಲ’:

‘ರಾಜ್ಯದಲ್ಲಿ ಮದ್ಯ ತಯಾರಿಕೆಗೆ ಉದ್ಯಮ ಸ್ನೇಹಿ ವಾತಾವರಣ ಇಲ್ಲ. ಪ್ರತಿ ಹಂತದಲ್ಲೂ ಅಡಚಣೆಗಳಿವೆ. ಮದ್ಯ ಬೆಲೆ ನಿಗದಿ ಪಡಿಸುವ ವ್ಯವಸ್ಥೆಯೂ ಸರಿಯಿಲ್ಲ. ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಬೆಲೆ ನಿಗದಿ ಆಗುತ್ತಿಲ್ಲ. ಎಥೆನಾಲ್‌ ಅನ್ನು ಪೆಟ್ರೋಲ್‌ ಮತ್ತು ಡೀಸೆಲ್‌ಗೆ ಮಿಶ್ರಣ ಮಾಡಲು ಆರಂಭಿಸಿದ ಮೇಲೆ ‘ಸ್ಪಿರಿಟ್‌’ ಬೆಲೆ ಗಗನಕ್ಕೇರಿದೆ. ಅಂತೆಯೇ ಇತರ ಕಚ್ಚಾ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದೆ. ಹೀಗಾಗಿ ಮದ್ಯ ತಯಾರಿಕಾ ವೆಚ್ಚ ಸರಿದೂಗಿಸುವುದು ಕಷ್ಟವಾಗುತ್ತಿದೆ. ಅದರ ಜತೆಗೆ ಸರ್ಕಾರ ಸನ್ನದು ಶುಲ್ಕ, ಸನ್ನದು ನವೀಕರಣ ಶುಲ್ಕ, ಹೆಚ್ಚುವರಿ ಅಬಕಾರಿ ತೆರಿಗೆಗಳನ್ನು ಭಾರಿ ಪ್ರಮಾಣದಲ್ಲಿ ಏರಿಸುವ ಮೂಲಕ ನಮಗೆ ಇನ್ನಷ್ಟು ಸಂಕಷ್ಟ ಮತ್ತು ಸವಾಲುಗಳನ್ನು ತಂದೊಡ್ಡುತ್ತಿದೆ’ ಎನ್ನುತ್ತಾರೆ ‘ದಿ ಕರ್ನಾಟಕ ಬ್ರುವರ್ಸ್‌ ಆ್ಯಂಡ್‌ ಡಿಸ್ಟಿಲ್ಲರ್ಸ್‌ ಅಸೋಸಿಯೇಷನ್‌’ನ (ಕೆಬಿಡಿಎ) ಅಧ್ಯಕ್ಷ ಅರುಣ್‌ ಕುಮಾರ್ ಪಾರಸ.

ರಾಜ್ಯದಲ್ಲಿ 32 ಐಎಂಎಲ್‌ ತಯಾರಿಕಾ ಘಟಕಗಳು, 13 ಬ್ರುವರಿಗಳು, 23 ವೈನರಿಗಳು ಮತ್ತು 75 ಮೈಕ್ರೊಬ್ರುವರಿಗಳು ಸೇರಿ ಒಟ್ಟು 143 ಮದ್ಯ ತಯಾರಿಕಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ವಾರ್ಷಿಕ ವಹಿವಾಟು ಇರುವುದೇ ಅಂದಾಜು ₹ 6,000 ಕೋಟಿ. ಆದರೆ ಇವುಗಳ ಉತ್ಪನ್ನದಿಂದ ಸರ್ಕಾರ ಕಳೆದ ವರ್ಷ ₹35,530 ಕೋಟಿ ಆದಾಯ ಸಂಗ್ರಹಿಸಿತ್ತು. ಈ ವರ್ಷ ₹ 40,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಹೀಗೆ ಸರ್ಕಾರಕ್ಕೆ ಪ್ರತಿ ವರ್ಷ ಹೆಚ್ಚು ಆದಾಯ ನೀಡುತ್ತಿರುವ ಉದ್ಯಮಕ್ಕೆ ಉದ್ಯಮ ಸ್ನೇಹಿ ವಾತಾವರಣ, ಅನುಕೂಲಗಳನ್ನು ಮಾಡಿಕೊಡಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ ಹಾಗೆ ಆಗಿಲ್ಲ ಎಂದು ಕೆಬಿಡಿಎ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ವಿಷಾಧಿಸುತ್ತಾರೆ.

ತೆರಿಗೆ, ಹೆಚ್ಚವರಿ ತೆರಿಗೆಯದ್ದೇ ಸಿಂಹಪಾಲು:

ಮದ್ಯದ ಮಾರಾಟ ದರ (ಎಂಆರ್‌ಪಿ) ನಿಗದಿಪಡಿಸುವ ಅಧಿಕಾರ ಇರುವುದು ಸರ್ಕಾರದ ಬಳಿ. ಉದ್ದಿಮೆದಾರರ ಮೂಲ ಘೋಷಿತ ದರದ (ಡಿ.ಪಿ) ಮೇಲೆ ಸರ್ಕಾರ ಅಬಕಾರಿ ಸುಂಕ (ಪ್ರತಿ ಬಲ್ಕ್‌ ಲೀಟರ್‌ಗೆ ₹ 50), ಹೆಚ್ಚುವರಿ ಅಬಕಾರಿ ಸುಂಕ, ಮಾರಾಟಗಾರರ ಮಾರ್ಜಿನ್‌ (ಶೇ 10), ಕರ್ನಾಟಕ ರಾಜ್ಯ ಪಾನೀಯ ನಿಗಮದ (ಕೆಎಸ್‌ಬಿಸಿಎಲ್‌) ಕಮಿಷನ್‌ (ಶೇ 0.5) ಸೇರಿಸಿ ಎಂಆರ್‌ಪಿ ನಿಗದಿಪಡಿಸುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಮದ್ಯವು ಗ್ರಾಹಕರ ಕೈಗೆ ಬರುವಷ್ಟರಲ್ಲಿ ತುಟ್ಟಿ ಆಗುತ್ತಿದೆ.

ರಾಜ್ಯದಲ್ಲಿ ತಿಂಗಳಿಗೆ ಸರಾಸರಿ 60 ಲಕ್ಷ ಬಾಕ್ಸ್‌ನಷ್ಟು ಮದ್ಯ ಮಾರಾಟವಾಗುತ್ತಿದೆ. ಇವುಗಳಿಗೆ, ವಿಭಿನ್ನ 16 ಸ್ಲ್ಯಾಬ್‌ಗಳ ಅಡಿಯಲ್ಲಿ ಅಬಕಾರಿ ಇಲಾಖೆ ದರದ ಮಿತಿಯನ್ನು ನಿಗದಿಪಡಿಸಿ, ಅದಕ್ಕೆ ತಕ್ಕಂತೆ ಹೆಚ್ಚುವರಿ ತೆರಿಗೆಯನ್ನು ವಿಧಿಸುತ್ತಿದೆ. ಉದ್ದಿಮೆದಾರರು ಘೋಷಿಸಿಕೊಳ್ಳುವ ಮೂಲ ದರದಲ್ಲಿ ಏರಿಳಿತವಾದರೆ, ಅವರ ಉತ್ಪನ್ನಗಳ ಸ್ಲ್ಯಾಬ್‌ಗಳಲ್ಲೂ ಏರಿಳಿತವಾಗುತ್ತದೆ.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇರುವ ಅಮೃತ್‌ ಡಿಸ್ಟಿಲೆರೀಸ್‌ ಕಾರ್ಖಾನೆಯ ಭಟ್ಟಿ ಇಳಿಸುವ ವ್ಯವಸ್ಥೆಯ ನೋಟ

ಈ ಪೈಕಿ 2ನೇ ಸ್ಲ್ಯಾಬ್‌ನ ವ್ಯಾಪ್ತಿಗೆ ಬರುವ ಮದ್ಯವೇ ಸುಮಾರು 35 ಲಕ್ಷ ಬಾಕ್ಸ್‌ನಷ್ಟು ಮಾರಾಟವಾಗುತ್ತಿದೆ. ಈ ಸ್ಲ್ಯಾಬ್‌ನ ದರಪಟ್ಟಿಯನ್ನು ಗಮನಿಸುವುದಾದರೆ, ಡಿಸ್ಟಿಲರಿಗಳು 90 ಎಂ.ಎಲ್‌ ಬಾಟಲಿಗಳ ಮದ್ಯದ ಒಂದು ಪೆಟ್ಟಿಗೆಗೆ (ಒಟ್ಟು 8.64 ಲೀಟರ್‌) ₹520 ದರವನ್ನು ಘೋಷಿಸಿಕೊಂಡರೆ, ಅದಕ್ಕೆ ₹432 ಅಬಕಾರಿ ಸುಂಕ (ಇ.ಡಿ), ₹3,170 ಹೆಚ್ಚುವರಿ ಅಬಕಾರಿ ಸುಂಕ (ಪ್ರತಿ ಬಲ್ಕ್‌ ಲೀಟರ್‌ಗೆ ₹ 367), ಕೆಎಸ್‌ಬಿಸಿಎಲ್‌ ಕಮಿಷನ್‌ ₹20.61, ಮಾರಾಟಗಾರರ ಮಾರ್ಜಿನ್‌ ₹414.35 ಸೇರಿ 96 ಬಾಟಲಿಗಳ ಮದ್ಯದ ಪೆಟ್ಟಿಗೆಯು ಅಂತಿಮವಾಗಿ ಗ್ರಾಹಕರ ಕೈಗೆ ಸೇರುವ ಹೊತ್ತಿಗೆ ಬೆಲೆ ₹4,799.76 ಆಗಿರುತ್ತದೆ. ಅಂದರೆ ಪ್ರತಿ 90 ಎಂ.ಎಲ್ ಬಾಟಲಿ ಮದ್ಯಕ್ಕೆ ಸುಮಾರು ₹50 ದರ ನಿಗದಿಯಾಗುತ್ತದೆ. ಇಲ್ಲಿ ಮದ್ಯದ ಉದ್ಯಮಿಗಳು ಇಡೀ ಪೆಟ್ಟಿಗೆಗೆ ಅನ್ವಯವಾಗುವಂತೆ ಮೂಲ ದರ ಘೋಷಿಸಿಕೊಂಡರೆ, ಸರ್ಕಾರ ಇ.ಡಿ ಮತ್ತು ಎ.ಇ.ಡಿಯನ್ನು ಪ್ರತಿ ಬಲ್ಕ್ ಲೀಟರ್‌ಗೆ ಅನ್ವಯವಾಗುವಂತೆ ವಿಧಿಸುತ್ತದೆ.

ಅಂದರೆ, ಇಲ್ಲಿ ಸರ್ಕಾರ ಮಾಡುವ ಖರ್ಚು ಅತ್ಯಲ್ಪ. ಆದರೆ ಅದಕ್ಕೆ ಬರುವ ಆದಾಯ ಹಿಮಾಲಯದಷ್ಟು. ಉದ್ದಿಮೆದಾರರದ್ದು ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ. ಘಟಕ ಸ್ಥಾಪನೆಗೆ ಬಂಡವಾಳ ಹೂಡಿ, ಜಾಗ ಖರೀದಿಸಿ ಅಥವಾ ಗುತ್ತಿಗೆಗೆ ಪಡೆದು, ಕಟ್ಟಡ ನಿರ್ಮಿಸಿ, ಮೂಲ ಸೌಕರ್ಯ ಕಲ್ಪಿಸಿ, ಕಚ್ಚಾ ಪದಾರ್ಥಗಳು, ಕಾರ್ಮಿಕರ ವೇತನ, ಸಾರಿಗೆ, ಇಂಧನ, ವಿದ್ಯುತ್‌ ವೆಚ್ಚ ಭರಿಸಿ, ನಿಯಮಗಳಿಗೆ ಅನ್ವಯವಾಗಿ, ಸರ್ಕಾರದ ನಿಗಾದಡಿಯೇ ಮದ್ಯ ತಯಾರಿಸ ಲಾಗುತ್ತದೆ. ಆದರೆ ಈ ಉದ್ದಿಮೆದಾರರಿಗೆ ಸಿಗುವುದು ಮಾತ್ರ ಅತ್ಯಲ್ಪ ಆದಾಯ ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ.

ದರಪಟ್ಟಿ ಪರಿಷ್ಕರಣೆಗೆ ಸಿಗದ ಸ್ಪಂದನೆ:

‘ನಮ್ಮ ಆದಾಯದಲ್ಲಿ ಸಿಂಹಪಾಲು ಸರ್ಕಾರಕ್ಕೆ ಸಿಗುತ್ತಿದ್ದರೂ, ಅದು ಉದ್ಯಮದ ಬಗ್ಗೆ ನಿರ್ಲಕ್ಷ್ಯ ಮುಂದುವರಿಸಿದೆ. ಮದ್ಯ ತಯಾರಕರು ತಮ್ಮ ಬ್ರ್ಯಾಂಡ್‌ನ ಪಾನೀಯಗಳಿಗೆ ಘೋಷಿಸಿಕೊಳ್ಳಬಹುದಾದ ದರಕ್ಕೆ (ಡಿ.ಪಿ) ಸಂಬಂಧಿಸಿದಂತೆ ಅಬಕಾರಿ ಇಲಾಖೆಯು 16 ‘ಸ್ಲ್ಯಾಬ್‌’ಗಳನ್ನು (ದರ ಪಟ್ಟಿ) ರೂಪಿಸಿದೆ. ಪ್ರತಿ ಸ್ಲ್ಯಾಬ್‌ನ ದರಪಟ್ಟಿಯನ್ನು ಪ್ರತಿ ವರ್ಷ ಕನಿಷ್ಠ ₹100ರಷ್ಟು ಪರಿಷ್ಕರಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. 2016–17ರಿಂದ ನಿರಂತರವಾಗಿ ಈ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಾ ಬಂದಿದ್ದೇವೆ, ಆದರೂ ಸ್ಪಂದನೆ ಸಿಗುತ್ತಿಲ್ಲ’ ಎಂದು ‘ಯುನಿಸ್ಟಿಲ್‌ ಆಲ್ಕೊಬ್ಲೆಂಡ್ಸ್‌ ಲಿಮಿಟೆಡ್‌ನ ನಿರ್ದೇಶಕರೂ ಆಗಿರುವ ಅರುಣ್‌ ಕುಮಾರ್‌ ಪಾರಸ ಬೇಸರ ವ್ಯಕ್ತಪಡಿಸುತ್ತಾರೆ.

‘ವರ್ಷದಿಂದ ವರ್ಷಕ್ಕೆ ಏರಿಕೆಯಾಗುವ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಪ್ರತಿ ವರ್ಷ ‘ದರ ಪಟ್ಟಿ’ಯನ್ನು ಪರಿಷ್ಕರಿಸಿದರೆ, ಉದ್ದಿಮೆದಾರರು ಉಳಿದುಕೊಳ್ಳುತ್ತಾರೆ. ಈಗಾಗಲೇ ಹಲವು ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕಿವೆ. ಈಗಲೂ ಸರ್ಕಾರ ಕೈಹಿಡಿಯದಿದ್ದರೆ ಎರಡು– ಮೂರು ವರ್ಷಗಳಲ್ಲಿ ಕೆಲ ಉದ್ದಿಮೆಗಳು ಬಾಗಿಲು ಮುಚ್ಚುತ್ತವೆ. ಅವುಗಳನ್ನು ಅವಲಂಬಿಸಿರುವವರು ಬೀದಿಗೆ ಬೀಳುತ್ತಾರೆ’ ಎಂದು ಜೆ.ಪಿ. ಡಿಸ್ಟಿಲರಿಸ್‌ ಕಂಪನಿಯ ಅಧ್ಯಕ್ಷರಾದ ಜೆ.ಪಿ.ಸುಧಾಕರ್‌ ನೋವಿನಿಂದ ಹೇಳುತ್ತಾರೆ.

ಗಗನಕ್ಕೇರುತ್ತಿರುವ ಕಚ್ಚಾ ಸಾಮಗ್ರಿ ಬೆಲೆ:

‘2016–17ರಲ್ಲಿ ಈ ಉದ್ಯಮದಿಂದ ಸರ್ಕಾರ ₹16,483 ಕೋಟಿ ರಾಜಸ್ವ ಸಂಗ್ರಹಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ 9 ವರ್ಷಗಳಲ್ಲಿ ಸ್ಪಿರಿಟ್‌ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಇತರ ಕಚ್ಚಾ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬಾಟ್ಲಿಂಗ್‌, ಕಾರ್ಟನ್‌ ಬಾಕ್ಸ್‌, ಟೇಪ್, ಗಮ್‌ ಸೇರಿದಂತೆ ಪ್ಯಾಕಿಂಗ್‌ ಪದಾರ್ಥಗಳು, ಕಾರ್ಮಿಕರ ವೇತನ, ವಿದ್ಯುತ್‌, ಇಂಧನ, ಸಾರಿಗೆ ವೆಚ್ಚ ಎಲ್ಲವೂ ಅತ್ಯಧಿಕವಾಗಿದೆ. ಅಲ್ಲದೆ ಸನ್ನದು ಶುಲ್ಕ ಸಹ ಹೆಚ್ಚಾಗಿದೆ. ಅದರಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ. ಈ 9ರಿಂದ 10 ವರ್ಷಗಳ ಅವಧಿಯಲ್ಲಿ ಸರ್ಕಾರ ತನ್ನ ಆದಾಯವನ್ನು ಎರಡು ಪಟ್ಟಿಗಿಂತಲೂ ಹೆಚ್ಚು ಮಾಡಿಕೊಂಡಿದೆ. ಆದರೆ ನಾವು ಉತ್ಪಾದನಾ ವೆಚ್ಚ ಸರಿದೂಗಿಸಲೇ ಪರದಾಡುತ್ತಿದ್ದೇವೆ’ ಎಂದು ಅವರು ವಿವರಿಸುತ್ತಾರೆ.

ಉತ್ಪಾದನಾ ವೆಚ್ಚವನ್ನು ಆಧರಿಸಿ, 2016–17ರಲ್ಲಿ 8.64 ಬಲ್ಕ್‌ ಲೀಟರ್‌ಗಳಷ್ಟು (ಪೆಟ್ಟಿಗೆ) ಮದ್ಯ ತಯಾರಿಕೆಗೆ (ಮೊದಲ ಸ್ಲ್ಯಾಬ್‌) ಸರಾಸರಿ ₹407 ತಗಲುತ್ತಿತ್ತು. ಆಗ ಪ್ರಮುಖ ಕಚ್ಚಾ ಪದಾರ್ಥವಾದ ಸ್ಪಿರಿಟ್‌ನ ಬೆಲೆ ಒಂದು ಬಲ್ಕ್‌ ಲೀಟರ್‌ಗೆ ₹49 ಇತ್ತು, ಅದೀಗ ₹70ಕ್ಕೆ ಏರಿದೆ. ಕಾರ್ಮಿಕರ ವೇತನ ಮೂರು ಪಟ್ಟು ಏರಿಕೆಯಾಗಿದೆ. ವಿದ್ಯುತ್‌ ಬೆಲೆ, ಇಂಧನ, ಸಾರಿಗೆ ವೆಚ್ಚ ಮತ್ತು ಇತರ ಸೇವೆಗಳಲ್ಲಿ ಹೆಚ್ಚಳವಾಗಿದೆ. ಇದೆಲ್ಲರ ಪರಿಣಾಮ ಒಂಬತ್ತು ವರ್ಷಗಳಲ್ಲಿ, ಅಂದರೆ 2024–25ರ ವೇಳೆಗೆ ಮದ್ಯದ ತಯಾರಿಕಾ ವೆಚ್ಚ ಸರಾಸರಿ ₹524ಕ್ಕೆ ಏರಿಕೆಯಾಗಿದೆ. ಅಂದರೆ ಒಂದು ಪೆಟ್ಟಿಗೆಗೆ
₹ 116ರಷ್ಟು ಏರಿಕೆ ಆದಂತಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಅದಕ್ಕೆ ತಕ್ಕಂತೆ ‘ದರ ಪಟ್ಟಿ’ಯ ಸ್ಲ್ಯಾಬ್‌ ಅನ್ನು ಪರಿಷ್ಕರಿಸುವ ಗೋಜಿಗೆ ಹೋಗಿಲ್ಲ. ಇದರ ಪರಿಣಾಮ ಪ್ರತಿ ವರ್ಷ ಉದ್ದಿಮೆಯ ಆದಾಯ ಇಳಿಕೆ ಯಾಗುತ್ತಿದ್ದು, ಉತ್ಪಾದನಾ ವೆಚ್ಚ ಸರಿದೂಗಿಸಲೂ ಕಷ್ಟವಾಗುತ್ತಿದೆ ಎಂದು ಅರುಣ್‌ ಕುಮಾರ್‌ ಅಂಕಿ ಅಂಶಗಳ ಸಹಿತ ಮಾಹಿತಿ ನೀಡುತ್ತಾರೆ.

‘ಮೂಗಿಗೆ ತುಪ್ಪ ಸವರಿದೆ’:

‘ಕೆಲ ತಿಂಗಳ ಹಿಂದೆಯಷ್ಟೇ ಸರ್ಕಾರ ನಮ್ಮ ಮೂಗಿಗೆ ತುಪ್ಪ ಸವರಿದೆ. ಈ ವರ್ಷದ ಮೇ 13ರಂದು 16 ಸ್ಲ್ಯಾಬ್‌ಗಳ ಪೈಕಿ ಮೊದಲ ನಾಲ್ಕು ಸ್ಲ್ಯಾಬ್‌ಗಳ ದರಪಟ್ಟಿಯಲ್ಲಿ ಕೇವಲ ₹20 ಹೆಚ್ಚಿಸಿ, ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದೆ. ಆದರೆ ಇದು ದಿನೇ ದಿನೇ ಏರುತ್ತಿರುವ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಇಲ್ಲ. ಅಲ್ಲದೆ ಉದ್ಯಮದ ಉಳಿವಿಗಾಗಲಿ ಅಥವಾ ಬೆಳವಣಿಗೆಗಾಗಲಿ ಸಮರ್ಪಕವಾಗಿಲ್ಲ. ಇದರಿಂದ ಉದ್ಯಮ ಸಂಕಷ್ಟ ನಿವಾರಣೆ ಆಗುವುದಿಲ್ಲ. ಹೀಗಾಗಿ ಇನ್ನೂ ₹50 ಆದಾರೂ ಹೆಚ್ಚಿಸಬೇಕು’ ಎಂದು ಉದ್ಯಮಿ ಸುಧಾಕರ್‌ ಮನವಿ ಮಾಡುತ್ತಾರೆ.

ಕಾನೂನು ಬಾಹಿರ ಮದ್ಯ ಮಾರಾಟವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ‘ಅಬಕಾರಿ ಭದ್ರತಾ ಚೀಟಿ’ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಆದರೆ ಈ ಚೀಟಿಗೆ ತಗಲುವ ವೆಚ್ಚವನ್ನು ಇಲಾಖೆಯು ಡಿಸ್ಟಿಲರಿಗಳ ಮೇಲೆಯೇ ಹಾಕುತ್ತಿದೆ. ಇದು ನಮ್ಮ ನಷ್ಟವನ್ನು ಹೆಚ್ಚಿಸುತ್ತಿದೆ. ಅದನ್ನು ತಪ್ಪಿಸಲು, ‘ಅಬಕಾರಿ ಭದ್ರತಾ ಚೀಟಿಯ’ ವೆಚ್ಚವನ್ನು ಮದ್ಯ ಪಾನೀಯಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ನಿಗದಿಪಡಿಸುವಾಗ ಇನ್‌ವಾಯ್ಸ್‌ನಲ್ಲಿ ಸೇರಿಸಿ ಎಂದು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿ ದ್ದೇವೆ. ಅದಕ್ಕೂ ಸರ್ಕಾರ ಒಪ್ಪುತ್ತಿಲ್ಲ’ ಎಂದು ಮದ್ಯ ಉದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಈ ಕಾರ್ಯಕ್ಕಾಗಿಯೇ ಪ್ರಸ್ತುತ ಪ್ರತಿ ಬಾಟಲಿಗೆ ಅಂದಾಜು 40 ಪೈಸೆ ಖರ್ಚು ಆಗುತ್ತಿದ್ದು, ಪೆಟ್ಟಿಗೆಗೆ ಸರಾಸರಿ ₹35 ವೆಚ್ಚ ಆಗುತ್ತಿದೆ. ಈ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ, ಪ್ರತ್ಯೇಕ ಕಾಂಪೊನೆಂಟ್‌ ಆಗಿ ಇನ್‌ವಾಯ್ಸ್‌ನಲ್ಲಿ ಸೇರಿಸಿದರೆ ಸ್ವಲ್ಪವಾದರೂ ಅನುಕೂಲವಾಗುತ್ತದೆ ಎನ್ನುತ್ತಾರೆ ಅವರು.

‘ನಮ್ಮ ಹಲವು ವರ್ಷಗಳ ಈ ಬೇಡಿಕೆಗೆ ಸ್ಪಂದಿಸಿದ್ದ ಸರ್ಕಾರ 2023ರ ಮೇ 22ರಂದು ಅದಕ್ಕೆ ಪೂರಕವಾಗಿ ಆದೇಶವನ್ನೂ ಹೊರಡಿಸಿತ್ತು. ಆದರೆ ಒಂದೇ ತಿಂಗಳಲ್ಲಿ (2023ರ ಜೂನ್‌ 24) ಆ ಆದೇಶವನ್ನು ಹಿಂಪಡೆದು ಉಲ್ಟಾ ಹೊಡೆಯಿತು’ ಎಂದು ಬೇಸರ ವ್ಯಕ್ತಪಡಿಸುವ ಅವರು, ‘ಸರ್ಕಾರ ಈ ವಿಷಯವನ್ನು ಮರು ಪರಿಶೀಲಿಸಬೇಕು’ ಎಂದು ಮನವಿ ಮಾಡುತ್ತಾರೆ.

‌‘ಸರ್ಕಾರದ ಹಸ್ತಕ್ಷೇಪ ಕಡಿಮೆಯಾಗಲಿ’:

ಸರ್ಕಾರ ಮುಖ್ಯವಾಗಿ ‘ಸ್ಪಿರಿಟ್‌’ ದುರುಪಯೋಗ ಆಗದಂತೆ ಎಚ್ಚರವಹಿಸಬೇಕು ಹಾಗೂ ಮದ್ಯದ ಗುಣಮಟ್ಟದ ಮೇಲೆ ನಿಗಾವಹಿಸಬೇಕು. ಜತೆಗೆ ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಎಂಬುದು ಕೆಬಿಡಿಎಯ ಪ್ರಮುಖ ಬೇಡಿಕೆಯಾಗಿದೆ.

‘ಎಲ್ಲದರಲ್ಲೂ ಸರ್ಕಾರ ಮೂಗು ತೂರಿಸುತ್ತಿರುವುದರಿಂದ ಮದ್ಯ ಉದ್ಯಮ ನರಳುತ್ತಿದೆ. ಇತರ ಉದ್ಯಮಗಳಿಗೆ ಇರುವಂತೆ ಇದಕ್ಕೆ ಸ್ವಾತಂತ್ರ್ಯ, ಸ್ವಾಯತ್ತೆ ಏನೂ ನೀಡಿಲ್ಲ. ಘಟಕದಲ್ಲಿ ಸಣ್ಣ ರಿಪೇರಿ ಕೆಲಸ, ಮಾರ್ಪಾಡು, ಹೊಸ ಉಪಕರಣಗಳ ಖರೀದಿ, ಹೆಚ್ಚುವರಿ ಬಾಟ್ಲಿಂಗ್‌ ಮಾಡಬೇಕು ಎಂದರೂ ಸರ್ಕಾರದ ಅನುಮತಿ ಪಡೆಯಬೇಕು. ಅಷ್ಟೇ ಏಕೆ ಘಟಕದಲ್ಲಿ ಮಳೆ ನೀರು ಸೋರುತ್ತಿದ್ದರೆ ಅದನ್ನು ಸರಿಪಡಿಸುವುದಕ್ಕೂ ಮತ್ತು ಸುಣ್ಣ– ಬಣ್ಣ ಬಳಿಸುವುದಕ್ಕೂ ಇಲಾಖೆ ಒಪ್ಪಿಗೆ ಪಡೆಯಬೇಕು. ಇದಕ್ಕೆಲ್ಲ ಫೈಲ್‌ ಹಿಡಿದು ತಿಂಗಳುಗಟ್ಟಲೆ ಸರ್ಕಾರಿ ಕಚೇರಿಯ ಮೆಟ್ಟಿಲುಗಳನ್ನು ಹತ್ತಬೇಕು. ಈ ವೇಳೆ ಸಾಕಷ್ಟು ಖರ್ಚು ಸಹ ಆಗುತ್ತದೆ. ವ್ಯವಸ್ಥೆ ಹೀಗಿದ್ದರೆ ಅದನ್ನು ಉದ್ಯಮ ಸ್ನೇಹಿ ಎನ್ನಲು ಆಗುತ್ತದೆಯೇ’ ಎಂದು ಪಾರಸ ಮತ್ತು ಸುಧಾಕರ್‌ ಪ್ರಶ್ನಿಸುತ್ತಾರೆ.

ಇನ್ನು ಸನ್ನದು ನವೀಕರಣ ಸೇರಿದಂತೆ ಕೆಲ ಪ್ರಕ್ರಿಯೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸಣ್ಣ ಪ್ರಮಾಣದ ಸುಧಾರಣೆ ಆಗಿದೆ. ಪ್ರತಿ ವರ್ಷ ನವೀಕರಣದ ಪ್ರಕ್ರಿಯೆ ಪೂರೈಸುವ ಬದಲಿಗೆ ಐದು ವರ್ಷಕ್ಕೊಮ್ಮೆ ನವೀಕರಿಸಲು ಅನುಮತಿ ನೀಡಿರುವುದು ಸ್ವಾಗತಾರ್ಹ. ಇದರ ಜತೆಗೆ ಇನ್ನಷ್ಟು ಸುಧಾರಣೆಗಳೂ ಆಗಬೇಕಿವೆ ಎನ್ನುತ್ತಾರೆ ಅವರು.

ಅಲ್ಲದೆ ಪ್ರತಿ ಮದ್ಯ ತಯಾರಿಕಾ ಘಟಕಕ್ಕೆ ಎರಡು ಕೀಲಿ ಕೈಗಳು ಇರುತ್ತವೆ. ಅದರಲ್ಲಿ ಒಂದು ಅಬಕಾರಿ ಇಲಾಖೆಯ ನಿಯೋಜಿತ ಅಧಿಕಾರಿ ಬಳಿ ಇದ್ದರೆ, ಇನ್ನೊಂದು ಉದ್ಯಮದವರ ಬಳಿ ಇರುತ್ತದೆ. ಅಂದರೆ ‘ಡಬ್ಬಲ್‌ ಲಾಕಿಂಗ್’ ವ್ಯವಸ್ಥೆಯಿದೆ. ಎಲ್ಲವೂ ಸರ್ಕಾರದ ಮೂಗಿನ ತುದಿಯಲ್ಲಿ, ಅದರ ನಿಯಂತ್ರಣ ಮತ್ತು ಕಣ್ಗಾವಲಿನಲ್ಲಿ ಪಾರದರ್ಶಕವಾಗಿ ನಡೆಯುತ್ತಿದೆ. ಆದರೂ ಸರ್ಕಾರಿ ವ್ಯವಸ್ಥೆ ಈ ಉದ್ಯಮವನ್ನು ಶಂಕೆಯಿಂದ ನೋಡುವುದನ್ನು ಬಿಟ್ಟಿಲ್ಲ ಎಂದು ಅವರು ಹೇಳುತ್ತಾರೆ.

ಉದ್ಯಮಕ್ಕೀಗ ಗುತ್ತಿಗೆಯೇ ಆಸರೆ:

ಕಚ್ಚಾ ಸಾಮಗ್ರಿಗಳ ದರ ಹೆಚ್ಚಳ, ತಯಾರಿಕಾ ವೆಚ್ಚದಲ್ಲಿ ಏರಿಕೆ ಮತ್ತು ಕಾಲಕಾಲಕ್ಕೆ ದರಪಟ್ಟಿ (ಸ್ಲ್ಯಾಬ್‌ಗಳಲ್ಲಿ) ಪರಿಷ್ಕರಣೆ ಆಗದಿರುವುದರಿಂದ ರಾಜ್ಯದ ಬಹುತೇಕ ಐಎಂಎಲ್‌ ತಯಾರಿಕಾ ಘಟಕಗಳು ಸಂಕಷ್ಟಕ್ಕೆ ಸಿಲುಕಿವೆ. ತಿಂಗಳಿಗೆ ತಮ್ಮ ಬ್ರ್ಯಾಂಡ್‌ಗಳ ಅಂದಾಜು 3 ಲಕ್ಷ ಪೆಟ್ಟಿಗೆಯಷ್ಟು ಮದ್ಯ ತಯಾರಿಸುತ್ತಿದ್ದ ಘಟಕಗಳು ಈಗ 15,000ದಿಂದ 20,000 ಪೆಟ್ಟಿಗೆಗೆ ಇಳಿದಿವೆ. ಹೀಗಾಗಿ ಹಲವು ಘಟಕಗಳು ‘ಕಾಂಟ್ರಾಕ್ಟ್‌ ಬಾಟ್ಲಿಂಗ್‌’ ವ್ಯವಸ್ಥೆ ಮಾಡಿಕೊಂಡಿವೆ. ಅಂದರೆ ಈ ಉದ್ಯಮದ ಘಟಕಗಳು ಪ್ರತಿಷ್ಠಿತ ಕಂಪನಿಗಳಿಗೆ ಅವರ ಬ್ರ್ಯಾಂಡ್‌ ಮದ್ಯಗಳ ‘ಬಾಟ್ಲಿಂಗ್‌’ ಕಾರ್ಯ ಸೇರಿದಂತೆ ಪೂರ್ಣ ಪ್ಯಾಕೇಜ್‌ ಪ್ರಕ್ರಿಯೆಯನ್ನು ಮಾಡಿಕೊಡುತ್ತಿವೆ ಎಂದು ಪಾರಸ ಹೇಳುತ್ತಾರೆ.

ಪ್ರಸ್ತುತ ರಾಜ್ಯದ 32 ಐಎಂಎಲ್‌ ತಯಾರಿಕಾ ಘಟಕಗಳ ಪೈಕಿ 10 ಘಟಕಗಳು ಗುತ್ತಿಗೆ ಕಾರ್ಯವನ್ನೇ ಪ್ರಮುಖವಾಗಿ ಅವಲಂಬಿಸಿವೆ. ರಾಜ್ಯದ ಮದ್ಯ ತಯಾರಿಕಾ ಘಟಕಗಳಲ್ಲಿ ಸುಮಾರು 15,000 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ಉದ್ಯಮವನ್ನು ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಈ ಉದ್ಯಮಕ್ಕೆ ಇರುವ ಸಂಕಷ್ಟ ಪರಿಸ್ಥಿತಿ ಮುಂದುವರಿದರೆ ಅವು ಮುಚ್ಚುವ ಸ್ಥಿತಿ ಬರುತ್ತದೆ. ಅವುಗಳ ಅವಲಂಬಿತರು ಬೀದಿಗೆ ಬೀಳುವುದನ್ನು ತಪ್ಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎನ್ನುತ್ತಾರೆ ಶಿವಲಿಂಗಯ್ಯ.

ಅಬಕಾರಿ ಇಲಾಖೆಯಲ್ಲಿ ಡಿಜಿಟಲ್‌ ವ್ಯವಸ್ಥೆ ಜಾರಿಗೆ ತಂದಿದ್ದು, 5 ವರ್ಷಗಳಿಗೆ ಒಮ್ಮೆ ಆನ್‌ಲೈನ್‌ ಮೂಲಕ ಸನ್ನದು ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಆಡಳಿತ ಸುಧಾರಣಾ ಆಯೋಗ ನೀಡಿದ ಶಿಫಾರಸುಗಳನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ
ಆರ್‌.ಬಿ.ತಿಮ್ಮಾಪುರ, ಅಬಕಾರಿ ಸಚಿವ

ಆದಾಯ: ಐಎಂಎಲ್ ಕೊಡುಗೆಯೇ ಹೆಚ್ಚು

ಮದ್ಯ ಉದ್ಯಮದಿಂದ ರಾಜ್ಯ ಸರ್ಕಾರ 1967–68ರಲ್ಲಿ ₹ 7.11 ಕೋಟಿ ರಾಜಸ್ವ ಸಂಗ್ರಹಿಸಿತ್ತು. ಇದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2007ರ ಜುಲೈ 1ರಿಂದ ರಾಜ್ಯದಲ್ಲಿ ಸಾರಾಯಿ ನಿಷೇಧ ಜಾರಿಗೊಳಿಸಲಾಯಿತು. ಆದರೆ ಆ ಬಳಿಕವೇನು ಇದರ ರಾಜಸ್ವ ಸಂಗ್ರಹ ತಗ್ಗಲಿಲ್ಲ. ಅದರ ಹಿಂದಿನ ವರ್ಷವಾದ 2006–07ರಲ್ಲಿ ಸರ್ಕಾರ ಮದ್ಯ ಉದ್ಯಮದಿಂದ ₹ 4,529 ಕೋಟಿ ಆದಾಯ ಸಂಗ್ರಹಿಸಿತ್ತು. ಅದರಲ್ಲಿ ಸಾರಾಯಿಯ ಪಾಲೇ ₹ 2,063 ಕೋಟಿ ಆಗಿತ್ತು. ಅಂದರೆ ಶೇ 45ಕ್ಕೂ ಹೆಚ್ಚು ಆದಾಯ ಸಾರಾಯಿಯಿಂದ ಬಂದಿತ್ತು. ಆಗ ದೇಶೀಯ ಮದ್ಯದಿಂದ (ಐಎಂಎಲ್‌) ₹ 1,886.19 ಕೋಟಿ ಮತ್ತು ಬಿಯರ್‌ನಿಂದ 342.49 ಕೋಟಿ ಸಂಗ್ರಹವಾಗಿತ್ತು.

ಸಾರಾಯಿ ನಿಷೇಧದ ತರುವಾಯ ಐಎಂಎಲ್‌ ಕೊಡುಗೆ ಗಣನೀಯವಾಗಿ ಹೆಚ್ಚುತ್ತಾ ಹೋಗಿದೆ. 2010–11ನೇ ಸಾಲಿನಲ್ಲಿ ಒಟ್ಟು ಸಂಗ್ರಹವಾಗಿದ್ದ ₹ 8,345 ಕೋಟಿ ಆದಾಯದಲ್ಲಿ ಐಎಂಎಲ್‌ನಿಂದ ₹ 6,357 ಕೋಟಿ, ಬಿಯರ್‌ನಿಂದ ₹ 719 ಕೋಟಿ ಸಂಗ್ರಹವಾಗಿತ್ತು. 2020–21ರಲ್ಲಿನ ₹ 23,332 ಕೋಟಿ ಆದಾಯದಲ್ಲಿ ₹ 20,217 ಕೋಟಿ ಐಎಂಎಲ್‌ನಿಂದ, ₹ 2,438 ಕೋಟಿ ಬಿಯರ್‌ನಿಂದ ಸಂಗ್ರಹವಾಗಿತ್ತು. 2023–24ರಲ್ಲಿ ಸಂಗ್ರಹವಾಗಿದ್ದ ₹ 34,628 ಕೋಟಿ ಆದಾಯದಲ್ಲಿ ಐಎಂಎಲ್‌ ಕೊಡುಗೆ ₹ 28,093 ಕೋಟಿಯಾಗಿದ್ದರೆ, ಬಿಯರ್‌ನ ಕೊಡುಗೆ ₹ 5,702 ಕೋಟಿ ಆಗಿತ್ತು ಎನ್ನುತ್ತವೆ ಅಬಕಾರಿ ಇಲಾಖೆಯ ಅಂಕಿ ಅಂಶಗಳು. ಅಂದರೆ ರಾಜಸ್ವ ಸಂಗ್ರಹದಲ್ಲಿ ಐಎಂಎಲ್‌, ಬಿಯರ್ ಪಾಲು ಶೇ 85ರಿಂದ ಶೇ 90ರಷ್ಟಿದೆ. ಉಳಿದದ್ದು ಸನ್ನದು ಶುಲ್ಕ, ದಂಡ ವಸೂಲಿಯಿಂದ ಸಂಗ್ರಹಿಸಲಾಗುತ್ತಿದೆ.

ವಿದೇಶಿ ಮದ್ಯದ ಹೊಡೆತ

ಬ್ರಿಟನ್‌ ಸೇರಿದಂತೆ ಯುರೋಪಿನಿಂದ ವಿಸ್ಕಿ, ಜಿನ್‌ ಭಾರತ ಪ್ರವೇಶಿಸುವುದು ಇನ್ನು ಮುಂದೆ ಸುಲಭವಾಗಲಿದೆ. ಬ್ರಿಟನ್‌ ಜತೆ ಭಾರತ ಮುಕ್ತ ಒಪ್ಪಂದ ಮಾಡಿಕೊಂಡಿರುವುದೇ ಇದಕ್ಕೆ ಕಾರಣ. ಇದರ ಪರಿಣಾಮ ಸ್ಕಾಟ್‌ಲ್ಯಾಂಡ್‌ನ ವಿಸ್ಕಿ, ಜಿನ್‌ ಅಗ್ಗವಾಗಲಿವೆ. ಭಾರತ– ಬ್ರಿಟನ್‌ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ, ಭಾರತವು ಬ್ರಿಟನ್ನಿನ ವಿಸ್ಕಿ ಮತ್ತು ಜಿನ್‌ ಮೇಲಿನ ಸುಂಕವನ್ನು ಈಗಿರುವ ಶೇ 150ರ ಬದಲು ಶೇ 75ಕ್ಕೆ ತಗ್ಗಿಸಲಿದೆ. ಒಪ್ಪಂದದ ಹತ್ತನೆಯ ವರ್ಷದಲ್ಲಿ ಈ ಸುಂಕದ ಪ್ರಮಾಣವು ಶೇ 40ಕ್ಕೆ ಇಳಿಕೆ ಆಗಲಿದೆ.

ಹೀಗಾದರೆ ಬ್ರಿಟನ್‌ನಿಂದ ಬರುವ ಭಾರತದಲ್ಲಿ ಹೆಸರುವಾಸಿಯಾದ ಜಾನಿವಾಕರ್‌, ಗ್ಲೆನ್‌ ಹೆಸರಿನಿಂದ ಆರಂಭವಾಗುವ ಸ್ಕ್ಯಾಚ್‌ ವಿಸ್ಕಿ, ರಮ್‌, ಜಿಮ್‌, ಬಿಯರ್‌ ಎಲ್ಲದರ ದರವೂ ಕ್ರಮೇಣ ಕಡಿಮೆಯಾಗಲಿದೆ. ಇದು ಸ್ವಂತ ಮನೆಯವರನ್ನು ಉಪವಾಸಕ್ಕೆ ಸಿಲುಕಿಸಿ, ಪಕ್ಕದ ಮನೆಯವರಿಗೆ ಮೃಷ್ಟಾನ್ನ ನೀಡಿದಂತೆ ಆಗುತ್ತದೆ ಎನ್ನುತ್ತಾರೆ ಅಮೃತ್‌ ಡಿಸ್ಟಿಲರೀಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ರಕ್ಷಿತ್‌ ಜಗದಾಳೆ.

‘ಇದು ಭಾರತದ ಐಎಂಎಲ್‌ ಉದ್ಯಮಕ್ಕಂತೂ ಭಾರಿ ಹೊಡೆತ ಕೊಡಲಿದೆ. ದೇಶೀಯ ಮದ್ಯದ ಬೆಲೆಗೆ ಸಮವಾಗಿ ಅಥವಾ ಕೊಂಚ ಏರಿಳಿತದ ಬೆಲೆಯಲ್ಲಿ ವಿದೇಶಿ ಮದ್ಯ ಗ್ರಾಹಕರಿಗೆ ದೊರೆತರೆ, ಸಹಜವಾಗಿ ಅವರು ವಿದೇಶಿ ಮದ್ಯದತ್ತಲೇ ಆಕರ್ಷಿತರಾಗುತ್ತಾರೆ. ಕ್ರಮೇಣ ನಮ್ಮ ಉದ್ಯಮಗಳನ್ನು ಬಂದ್‌ ಮಾಡಬೇಕಾಗುತ್ತದೆ. ಹೀಗಾಗಿ ಸರ್ಕಾರ ದೇಶೀಯ ಮದ್ಯ ಉದ್ಯಮ ಕ್ಷೇತ್ರದ ಹಿತಕಾಯಲು ಅಗತ್ಯ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಅವರು.

ಏನೇನು ಆಗಬೇಕು?

ರಾಜ್ಯದಲ್ಲಿ ಮದ್ಯ ಉದ್ಯಮದ ಉಳಿವಿಗೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಈ ಉದ್ದಿಮೆದಾರರು ಸರ್ಕಾರವನ್ನು ಕೋರಿದ್ದಾರೆ. ಅವು ಕೆಳಕಂಡಂತಿವೆ.

*ಪ್ರಸ್ತುತ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬಾಟ್ಲಿಂಗ್‌ ಆಪರೇಷನ್‌ಗೆ ಅವಕಾಶವಿದೆ. ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ಮದ್ಯವನ್ನು ಹೊರಗೆ ರವಾನಿಸಲು ಅವಕಾಶವಿದೆ. ಹೆಚ್ಚುವರಿ ಅವಧಿಯಲ್ಲಿ ಮದ್ಯ ತಯಾರಿಸಬೇಕು ಎಂದರೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಈ ವ್ಯವಸ್ಥೆಯ ಬದಲಿಗೆ ದಿನದ 24 ಗಂಟೆಯೂ ಘಟಕಗಳು ಕಾರ್ಯ ನಿರ್ವಹಿಸಲು ಅವಕಾಶ ದೊರೆಯಬೇಕು.

*ಪ್ರತಿ ವರ್ಷ ಬೆಲೆ ಏರಿಕೆಗೆ ತಕ್ಕಂತೆ ಮದ್ಯದ ಸ್ಲ್ಯಾಬ್‌ಗಳಲ್ಲಿನ ದರಪಟ್ಟಿಯನ್ನು ಪರಿಷ್ಕರಿಸಬೇಕು.

*ಸನ್ನದು ಮತ್ತು ಸನ್ನದು ನವೀಕರಣ ಶುಲ್ಕವನ್ನು ಇಲಾಖೆಯು ಆದಾಯದ ಮೂಲ ಎಂದು ಪರಿಗಣಿಸಬಾರದು. ಅದನ್ನು ಪದೇ ಪದೇ ಪರಿಷ್ಕರಿಸಬಾರದು.

*ಮದ್ಯವನ್ನು ಸಾಗಿಸುವಾಗ ಅಪಘಾತ ಸಂಭವಿಸಿ ಮದ್ಯ ಸೋರಿಕೆ ಅಥವಾ ನಾಶವಾದರೆ ಉದ್ದಿಮೆದಾರರಿಗೆ ಪೂರ್ಣ ನಷ್ಟವಾಗುತ್ತದೆ. ಮದ್ಯ ನಾಶವಾದ ಸಂದರ್ಭದಲ್ಲಿ ಹೆಚ್ಚುವರಿ ಅಬಕಾರಿ ಸುಂಕವನ್ನಾದರೂ ಉದ್ದಿಮೆದಾರರಿಗೆ ಹಿಂದಿರುಗಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು.

*ಮೈಕ್ರೊ ಬ್ರುವರಿಯಲ್ಲಿ ವಾರ್ಷಿಕ ಉತ್ಪಾದನೆಯಾಗುವ ಶೇ 50ರಷ್ಟು ಮದ್ಯಕ್ಕೆ ಮಾತ್ರ ಅಬಕಾರಿ ಮತ್ತು ಹೆಚ್ಚುವರಿ ಅಬಕಾರಿ ತೆರಿಗೆ ವಿಧಿಸಲಾಗುತ್ತಿದೆ. ಉಳಿದ ಮದ್ಯಕ್ಕೆ ತೆರಿಗೆ ವಿಧಿಸದೆ, ವಿನಾಯಿತಿ ನೀಡಲಾಗುತ್ತಿದೆ. ಆದರೆ ಅದೇ ರೀತಿಯ ವಿನಾಯಿತಿ ಐಎಂಎಲ್‌ ಮದ್ಯ ತಯಾರಕರಿಗೂ ವಿಸ್ತರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.