ADVERTISEMENT

ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ಯೋಜನೆಗಳ ಹೆಸರಿನಲ್ಲಿ ಪ್ರಾಕೃತಿಕ ಸಂಪತ್ತು ನಾಶ, ಆರಂಭವಾದ ಆಂದೋಲನ

ರಾಹುಲ ಬೆಳಗಲಿ
ಗಣಪತಿ ಹೆಗಡೆ
Published 10 ಜನವರಿ 2026, 23:30 IST
Last Updated 10 ಜನವರಿ 2026, 23:30 IST
<div class="paragraphs"><p>ಪಶ್ಚಿಮ ಘಟ್ಟದ ವಿಹಂಗಮ ನೋಟ</p></div>

ಪಶ್ಚಿಮ ಘಟ್ಟದ ವಿಹಂಗಮ ನೋಟ

   

ಕಾರವಾರ: ‘ಸಮುದ್ರಕ್ಕೆ ಸೇರುವ ನೀರು ಪೋಲು ಎಂಬ ವಾದವನ್ನು ಮುಂದಿಟ್ಟು ನದಿ ತಿರುವು ಯೋಜನೆಗೆ ಮುಂದಾಗುತ್ತಿರುವ ಸರ್ಕಾರಕ್ಕೆ ಪಶ್ಚಿಮ ಘಟ್ಟ ನಾಶವಾದರೆ ಪರಿಸರದ ಜೊತೆಗೆ ಸಂಸ್ಕೃತಿಯೂ ಅವನತಿ ಆಗಬಹುದು ಎಂಬ ಕಲ್ಪನೆ ಇಲ್ಲವೆ?. ಹಿಮಾಲಯ ಶ್ರೇಣಿಗಳಿಗಿಂತಲೂ ಮುಂಚೆಯೇ ಉಗಮವಾದ ಪಶ್ಚಿಮ ಘಟ್ಟ ಲಕ್ಷಾಂತರ ವರ್ಷಗಳಿಂದ ಜಗತ್ತಿನ ಪರಿಸರ ಸಮತೋಲನ ಕಾಯ್ದುಕೊಂಡಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಯೋಜನೆಗಳ ಮೂಲಕ ಅಪರೂಪದ ಪರಿಸರ ವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶವಾದರೂ ಏನು?’ ಎಂದು ಖಾರವಾಗಿ ಪ್ರಶ್ನಿಸುತ್ತಾರೆ ಕಡಲ ಜೀವಶಾಸ್ತ್ರಜ್ಞ ವಿ.ಎನ್.ನಾಯಕ.

‘ಆಳುವವರು ಪಶ್ಚಿಮ ಘಟ್ಟವನ್ನು ಪರಿಸರವನ್ನಾಗಿ ನೋಡುತ್ತಿಲ್ಲ. ಬದಲಾಗಿ ಆರ್ಥಿಕ ಸಂಪನ್ಮೂಲದ ಕೇಂದ್ರವಾಗಿ ಕಾಣುತ್ತಿದ್ದಾರೆ. ಇದೇ ಪರಿಸರದ ಅವನತಿಗೆ ಕಾರಣವಾಗುತ್ತಿದೆ’ ಎಂಬ ಆತಂಕ ಹೊರಹಾಕಿದರು. ಇದು ಕೇವಲ ಅವರೊಬ್ಬರ ಮಾತಲ್ಲ. ಅವರಂತೆ ಹಲವು ಪರಿಸರವಾದಿಗಳು, ಪರಿಸರ ಕಾರ್ಯಕರ್ತರು, ಅಷ್ಟೇ ಏಕೆ, ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರದೇಶಗಳ ಜನಸಾಮಾನ್ಯರೂ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಪಶ್ಚಿಮ ಘಟ್ಟವು ಅಕ್ಷರಶಃ ಅಪಾಯದಲ್ಲಿದೆ. ಯೋಜನೆ, ಅಭಿವೃದ್ಧಿ, ಪರಿವರ್ತನೆ, ಹಿತರಕ್ಷಣೆ ಎಂಬ ನೆಪಗಳನ್ನು ಒಡ್ಡಿ ಪಶ್ಚಿಮ ಘಟ್ಟದ ಪ್ರಾಕೃತಿಕ ಸಮೃದ್ಧಿಗೆ ಧಕ್ಕೆ ತರುವ ಯೋಜನೆಗಳ ಜಾರಿಗೆ ವ್ಯವಸ್ಥಿತ ಪ್ರಯತ್ನ ನಡೆದಿದೆ. ಘಟ್ಟದ ವ್ಯಾಪ್ತಿಯಲ್ಲಿರುವ ನಿವಾಸಿಗಳು ಸೇರಿ ಪರಿಸರವಾದಿಗಳ ತೀವ್ರ ಸ್ವರೂಪದ ಪ್ರತಿರೋಧವಿದ್ದರೂ, ‘ಯೋಜನೆಯ ರೂಪುರೇಷೆ ಸಿದ್ಧವಾಗಿದೆ. ಯಾರು ಅಡ್ಡಿಪಡಿಸಿದರೂ ಸರಿಯೇ, ಯೋಜನೆ ಅನುಷ್ಠಾನಗೊಳಿಸುತ್ತೇವೆ. ಕಾಮಗಾರಿ ನಡೆಸುತ್ತೇವೆ’ ಎಂಬ ಧೋರಣೆ ಪ್ರಬಲ ಆಗುತ್ತಿದೆ.



2012ರಲ್ಲೇ ಯುನೆಸ್ಕೋ ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಸೇರಿದ ಪಶ್ಚಿಮ ಘಟ್ಟವು ರಾಜ್ಯ ಮತ್ತು ದೇಶದ ಪಾಲಿಗೆ ಹೆಮ್ಮೆಯ ಪ್ರದೇಶ. ಅದರ ಸಂರಕ್ಷಣೆ ಪ್ರಥಮ ಆದ್ಯತೆ ಆಗಬೇಕು. ಆದರೆ, ಯೋಜನೆಗಳ ಅಬ್ಬರಕ್ಕೆ ತನ್ನ ಸರ್ವಸ್ವವನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. 300ಕ್ಕೂ ಹೆಚ್ಚು ಅಪಾಯದ ಅಂಚಿನಲ್ಲಿ ಇರುವ ಸಸ್ಯ, ಪ್ರಾಣಿ ಪ್ರಭೇದಗಳಿಗೆ ಅಲ್ಲದೇ ಅರಣ್ಯ ಪ್ರದೇಶಕ್ಕೆ ಅಪಾರ ಹಾನಿ ಆಗಲಿದೆ. ಸ್ಥಳೀಯರ ಬದುಕು ಸಹ ಪ್ರಯಾಸವಾಗಲಿದೆ.

ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟವು (ಐಯುಸಿಎನ್) 2020ರಲ್ಲೇ ವರದಿಯೊಂದನ್ನು ಸಿದ್ಧಪಡಿಸಿ, ‘ಜನಸಂಖ್ಯೆ ವೃದ್ಧಿಯ ಜೊತೆಗೆ ಅತಿಯಾದ ನಗರೀಕರಣ, ವಿವಿಧ ಕಾಮಗಾರಿ ಮತ್ತು ಹವಾಮಾನ ವೈಪರೀತ್ಯದಿಂದ ಪಶ್ಚಿಮ ಘಟ್ಟದ ಅಸ್ತಿತ್ವಕ್ಕೆ ಧಕ್ಕೆ ಆಗಲಿದೆ’ ಎಂದು ಕಳವಳ ವ್ಯಕ್ತಪಡಿಸಿತ್ತು. ಈಗಾಗಲೇ ಶೇ 40ರಷ್ಟು ಮೂಲ ಅರಣ್ಯ ನಾಶವಾಗಿದೆ. ಸಂರಕ್ಷಿತ ಅರಣ್ಯವನ್ನು ಉಳಿಸಿಕೊಳ್ಳದಿದ್ದರೆ, ಒಟ್ಟಾರೆ ಜೀವ ಸಂಕುಲಕ್ಕೆ ಆಪತ್ತು ನಿಶ್ಚಿತ ಎಂದು ಹೇಳಿತ್ತು.

ಪರಿಸರ ನಾಶದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೀಗೆ ಕಳವಳ ವ್ಯಕ್ತವಾಗುತ್ತಿದ್ದರೂ ಅದು ಯಾವುದು ಕೂಡ ತಮಗೆ ಸಂಬಂಧವೇ ಇಲ್ಲ ಎಂಬಂತೆ ಪೈಪೋಟಿ ಏರ್ಪಟ್ಟಂತೆ ಒಂದೊಂದೇ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ನಡೆದಿದೆ. ಶತಮಾನಗಳಿಂದ ಇರುವ ಪ್ರಾಕೃತಿಕ ನಿಯಮ ಉಲ್ಲಂಘಿಸಿ ಒಂದೆಡೆ ನದಿಗಳ ದಿಕ್ಕನ್ನು ತಿರುಗಿಸಲು ಯೋಜಿಸಿದ್ದರೆ,  ಮತ್ತೊಂದೆಡೆ ಲಕ್ಷಾಂತರ ಮರಗಳನ್ನು ನೆಲಕ್ಕುರುಳಿಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಬೇಡ್ತಿ ನದಿಯ ಭಾಗವಾಗಿರುವ ಶಾಲ್ಮಲಾ ನದಿಯಲ್ಲಿರುವ ಶಿರಸಿ ತಾಲ್ಲೂಕಿನ ಐತಿಹಾಸಿಕ ಸಹಸ್ರಲಿಂಗ ತಾಣ. 

ರಾಜ್ಯದಲ್ಲಿ ಪಶ್ಚಿಮ ಘಟ್ಟದ ವಿಸ್ತಾರ 20,668 ಚ.ಕಿ.ಮೀ. ಇದರ ವ್ಯಾಪ್ತಿಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಬರುತ್ತವೆ. ಇಲ್ಲಿನ ಅರಣ್ಯ ಪ್ರದೇಶವು ಅಪರೂಪದ ಸಸ್ಯಗಳಿಗೆ ಅಲ್ಲದೇ ಹುಲಿ, ಆನೆ, ಕಾಡೆಮ್ಮೆ, ಅಳಿವಿನಂಚಿನಲ್ಲಿರುವ ಸಿಂಹಬಾಲದ ಮಂಗಗಳಿಗೆ, ಮಲಬಾರ್ ಗ್ಲೈಡಿಂಗ್ ಕಪ್ಪೆ, ಕಾಳಿಂಗ ಮುಂತಾದ ಪ್ರಾಣಿ, ಪಕ್ಷಿ ಮತ್ತು ಕೀಟಗಳಿಗೆ ಆಶ್ರಯತಾಣವಾಗಿದೆ. ಅರಣ್ಯಪ್ರದೇಶದಲ್ಲಿ ಸ್ವಲ್ಪ ಏರುಪೇರಾದರೂ ಅವುಗಳ ಆವಾಸಸ್ಥಾನ ನಾಶವೇ ಆಗುತ್ತದೆ.

‘ಹಸಿರು ಸಂಪತ್ತಿನ ಮಹತ್ವ ಅರಿಯದೇ ಅವೈಜ್ಞಾನಿಕ ಯೋಜನೆಗಳನ್ನು ಹೀಗೆ ಜಾರಿಗೊಳಿಸಲು ಯತ್ನಿಸಿದರೆ, ಅನಾಹುತ ಸಂಭವಿಸುವುದೇ ಹೊರತು ಯಾರಿಗೂ ಪ್ರಯೋಜನ ಆಗುವುದಿಲ್ಲ’ ಎಂಬುದು ಪರಿಸರವಾದಿಗಳ ಮಾತು. ‘ಅಮೂಲ್ಯ ಪರಿಸರವನ್ನು ಈ ಪೀಳಿಗೆಯವರಿಗೆ ಅಷ್ಟೇ ಅಲ್ಲ, ಮುಂಬರುವ ಪೀಳಿಗೆಗಳಿಗೂ ಉಳಿಸಿಕೊಳ್ಳುವ ಕನಿಷ್ಠ ಕಾಳಜಿಯೂ ಇಲ್ಲ’ ಎಂಬ ಬೇಸರ ನಾಯಕ ಅವರದ್ದು.

ಶರಾವತಿ ಕಣಿವೆಗೆ ಧಕ್ಕೆ ತರುವ ಶರಾವತಿ ಪಂಪ್ಡ್ ಸ್ಟೋರೇಜ್, ಅಂಕೋಲಾದ ಕೇಣಿಯಲ್ಲಿ ನಿರ್ಮಾಣಗೊಳ್ಳಲಿರುವ ಆಳಸಮುದ್ರ ಗ್ರೀನ್‌ಫೀಲ್ಡ್ ಖಾಸಗಿ ಬಂದರು ಯೋಜನೆಗಳಿಗೆ ಈಗಾಗಲೇ ಪ್ರಬಲ ಪ್ರತಿರೋಧವಿದೆ. ಆದರೆ, ಇದರ ಮಧ್ಯೆ ಪಶ್ಚಿಮಾಭಿಮುಖವಾಗಿ ಹರಿಯುವ ಬೇಡ್ತಿ ನದಿಯನ್ನು ಪೂರ್ವಾಭಿಮುಖವಾಗಿ ಹರಿಯುವ ವರದಾ ನದಿ ಜೊತೆ ಜೋಡಿಸುವ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧತೆಗೆ ಅನುಮೋದನೆ ಸಿಕ್ಕಿದೆ.

ಅರಬ್ಬಿ ಸಮುದ್ರ ಸೇರುವ ಅಘನಾಶಿನಿ ನದಿಯನ್ನೂ ಬಂಗಾಳ ಕೊಲ್ಲಿಗೆ ಸೇರುವ ತುಂಗಭದ್ರಾ ನದಿಯ ಉಪನದಿ ವೇದಾವತಿಗೆ ಜೋಡಿಸುವ ಯೋಜನೆಗೂ ಸಿದ್ಧತೆ ನಡೆದಿದೆ. ಇದಕ್ಕೂ ಸ್ಥಳೀಯರ ವಿರೋಧವಿದೆ. ಕಳೆದ ಎರಡು ತಿಂಗಳುಗಳಿಗೂ ಹೆಚ್ಚು ಅವಧಿಯಿಂದ ನದಿ ಜೋಡಣೆ ಯೋಜನೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ ನಡೆದಿದೆ. ಮಹಿಳೆಯರೂ ಗ್ರಾಮ ಮಟ್ಟದಲ್ಲಿ ಪಾದಯಾತ್ರೆ ನಡೆಸಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

‘ಬೇಡ್ತಿ–ವರದಾ ನದಿ ಜೋಡಣೆ ಆಗಬೇಕು ಎಂಬುದು ಹಾವೇರಿ ಜಿಲ್ಲೆ ಜನರ ಬಹುದಿನಗಳ ಕನಸು. ಇದಕ್ಕಾಗಿ ವರ್ಷಗಳಿಂದ ಹೋರಾಡಿದ್ದೇವೆ. ಯೋಜನೆ ಜಾರಿಯಾದರೆ ಹಾವೇರಿ ಜಿಲ್ಲೆ ಬರಗಾಲ ಮುಕ್ತವಾಗಲಿದೆ. ಗದಗ, ಕೊಪ್ಪಳ ಜಿಲ್ಲೆಗೂ ನೀರು ಸಿಗಲಿದೆ. ಬೇಸಿಗೆಯಲ್ಲೂ ನೀರಿನ ಸಮಸ್ಯೆ ಇರುವುದಿಲ್ಲ’ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳುತ್ತಾರೆ.

‘ಬೇಡ್ತಿ ನದಿಯ 22 ಟಿಎಂಸಿ ನೀರು ಸಮುದ್ರ ಸೇರಿ ಪೋಲಾಗುತ್ತಿದೆ. ಅದೇ ನೀರನ್ನು ವರದಾ ನದಿಗೆ ಬಿಟ್ಟರೆ, ಬೇಸಿಗೆ ಆರಂಭದಲ್ಲಾದರೂ ಕುಡಿಯಲು ನೀರು ಸಿಗುತ್ತದೆ. ಹಾವೇರಿ, ಗದಗ, ಕೊಪ್ಪಳ ಜಿಲ್ಲೆಯ 16 ಲಕ್ಷ ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯವಾಗುತ್ತದೆ’ ಎಂಬುದು ಅವರ ಅಭಿಪ್ರಾಯ. ನೀರನ್ನು ಅಣೆಕಟ್ಟು ಮೂಲಕ ಸಂಗ್ರಹಿಸಿ ಇಟ್ಟುಕೊಂಡರೆ, ಹಾವೇರಿ ಜಿಲ್ಲೆಗೆ ವರ್ಷಪೂರ್ತಿ ನೀರು ಸಿಗುತ್ತದೆ ಎಂಬ ಆಲೋಚನೆ ಅವರದ್ದು.

ಹಾವೇರಿ ತಾಲ್ಲೂಕಿನ ದೇವಗಿರಿ ಬಳಿ ಹರಿಯುತ್ತಿರುವ ವರದಾ ನದಿಯ ನೋಟ

ಈ ನದಿ ಜೋಡಣೆ ವಿಷಯ ನಿನ್ನೆ–ಮೊನ್ನೆಯದ್ದಲ್ಲ. 1992ರಿಂದಲೇ ಇದರ ಬಗ್ಗೆ ಚರ್ಚೆ ನಡೆದಿದ್ದು, ಈಗ ಡಿಪಿಆರ್‌ ಹಂತಕ್ಕೆ ಬಂದಿದೆ. ಗದಗ ಜಿಲ್ಲೆಯ ಹಿರೇವಡ್ಡಟ್ಟಿ ಬಳಿ ದೊಡ್ಡ ಅಣೆಕಟ್ಟು ಮತ್ತು ಶಿರಸಿ ಬಳಿಯ ಮೆಣಸನಗೋಡ ಬಳಿ ಚಿಕ್ಕ ಸೇತುವೆ ನಿರ್ಮಿಸುವ ಆಲೋಚನೆ ಇತ್ತು. ನದಿ ಜೋಡಣೆ ಬಗ್ಗೆ 2003–04ರಲ್ಲಿ ಸಮೀಕ್ಷೆ ನಡೆಸಿದ್ದ ಸಿವಿಲ್ ಎಂಜಿನಿಯರ್ ಎನ್. ಶಂಕರಪ್ಪ ತೋರಣಗಲ್ಲು, ಅಂದಿನ ಕಾಲದಲ್ಲೇ ಅಂದಾಜು ₹ 622 ಕೋಟಿ ಹಣ ಬೇಕೆಂದು ವರದಿ ನೀಡಿದ್ದರು. ಸುರಂಗ ಮಾದರಿಯ ನದಿ ಜೋಡಣೆ ಕೆಲಸಕ್ಕೆ 500 ಎಕರೆ ಅರಣ್ಯ ಪ್ರದೇಶದಲ್ಲಿ ಇರುವ 1,741 ಮರಗಳನ್ನು ಕಡಿಯಬೇಕಿತ್ತು.

2021ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಯೋಜನೆಯನ್ನು ರಾಜ್ಯ ಬಜೆಟ್‌ನಲ್ಲೇ ಪ್ರಸ್ತಾಪಿಸಿದ್ದರು. ಡಿಪಿಆರ್ ಸಿದ್ಧಪಡಿಸಲು ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜೆನ್ಸಿಗೆ ಕೋರಿದ್ದರು. ಆದರೆ, ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಯೋಜನೆ ಜಾರಿಯಾಗಲಿಲ್ಲ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ, ಅರಣ್ಯಕ್ಕೆ ಧಕ್ಕೆಯಾಗದಂತೆ ಯೋಜನೆಗೆ ಹೊಸ ರೂಪ ನೀಡಲಾಗಿತ್ತು. ಈಗ 2025ರಲ್ಲಿ ಯೋಜನೆಯಲ್ಲಿ ಸಾಕಷ್ಟು ಮಾರ್ಪಾಡು ಮಾಡಿರುವ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು (ಎನ್‌ಡಬ್ಲ್ಯುಡಿಎ), ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ವರದಿ ಸಲ್ಲಿಸಿದೆ. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಜಲಶಕ್ತಿ ಸಚಿವಾಲಯ ಸಿದ್ಧಪಡಿಸುವ ಡಿಪಿಆರ್‌ಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. ಒಟ್ಟು ₹ 10 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ ₹ 9 ಸಾವಿರ ಕೋಟಿ ಭರಿಸಲಿದೆ.

ಬೇಡ್ತಿ– ವರದಾ ನದಿ ಮಾತ್ರವಲ್ಲದೇ ವರದಾ–ಧರ್ಮಾ–ಬೇಡ್ತಿ ನದಿಗಳ ಜೋಡಣೆಗೂ ಅವಕಾಶ ಲಭ್ಯವಾಗುವ ನಿರೀಕ್ಷೆಯಿದೆ. ವರದಾ–ಬೇಡ್ತಿ ನದಿ ಜೋಡಣೆಯಿಂದ 10.6 ಟಿಎಂಸಿ ಹಾಗೂ ವರದಾ–ಧರ್ಮಾ–ಬೇಡ್ತಿ ನದಿ ಜೋಡಣೆಯಿಂದ 7.84 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲಿದೆ. ಹೆಚ್ಚುವರಿ ನೀರನ್ನು ಹಿರೇವಡ್ಡಟ್ಟಿ ಬಳಿ ಸಂಗ್ರಹಿಸಲು ಸಹ ತೀರ್ಮಾನಿಸಲಾಗಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಎತ್ತಿನಹೊಳೆ ಯೋಜನೆ ಕಾಲುವೆ ಕಾಮಗಾರಿ.

ಬೇಡ್ತಿ ಹಾಗೂ ವರದಾ ನದಿಗಳು 20 ಕಿ.ಮೀ. ಅಂತರದಲ್ಲಿ ಹಾದು ಹೋಗಿವೆ. ಇದೇ 20 ಕಿ.ಮೀ. ಜಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿದೆ. ಸುರಂಗ ಮಾರ್ಗದಲ್ಲಿ ನದಿ ಜೋಡಣೆ ಮಾಡಿದರೆ, ಅರಣ್ಯಕ್ಕೆ ಹಾನಿಯಾಗಲಿದೆ. ಹೀಗಾಗಿ, ನೆಲದಡಿ ಪೈಪ್‌ ಅಳವಡಿಸುವ ಮೂಲಕ ನದಿ ಜೋಡಿಸುವ ಬಗ್ಗೆ ಹೊಸ ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ. 20 ಕಿ.ಮೀ. ಜಾಗ ಹೊರತುಪಡಿಸಿ ಬೇರೆ ಕಡೆಯಿಂದ ಹಿರೇವಡ್ಡಟ್ಟಿಯವರೆಗೂ 100 ಕಿ.ಮೀ. ಪೈಪ್‌ ಮೂಲಕವೇ ನೀರು ಹರಿಸುವ ಬಗ್ಗೆ ಚರ್ಚೆಗಳು ನಡೆದಿವೆ. 20 ಕಿ.ಮೀ. ಅಂತರದಲ್ಲಿ ಸೇರುವ ನದಿಗಳನ್ನು 100 ಕಿ.ಮೀ. ಅಂತರದಲ್ಲಿ ಸೇರಿಸಿದರೆ ಯೋಜನೆ ವೆಚ್ಚವೂ ಹೆಚ್ಚಾಗಲಿದೆ.

ಈ ಎಲ್ಲದರ ಬೆನ್ನಲ್ಲೇ ಗೋವಾ–ತಮ್ನಾರ್ ವಿದ್ಯುತ್ 400 ಕೆವಿ ವಿದ್ಯುತ್ ಮಾರ್ಗ ಯೋಜನೆಗೆ ರಾಜ್ಯ ಸರ್ಕಾರ ಹಸಿರುನಿಶಾನೆ ತೋರಿಸಿದೆ. ಇದು ಪಶ್ಚಿಮ ಘಟ್ಟದ 435 ಎಕರೆ ಪ್ರದೇಶಕ್ಕೆ ಧಕ್ಕೆ ತರಲಿದ್ದು, 13,954 ಮರಗಳ ಮಾರಣಹೋಮ ಆಗಲಿದೆ.

ಹೆದ್ದಾರಿ ವಿಸ್ತರಣೆ, ವಿದ್ಯುತ್ ತಂತಿ ಮಾರ್ಗ ವಿಸ್ತರಣೆ, ಬಂದರು ನಿರ್ಮಾಣ...ಹೀಗೆ ಸಾಲು ಸಾಲು ಯೋಜನೆಗಳಿಗೆ ಉತ್ತರ ಕನ್ನಡದಲ್ಲಿನ ಪಶ್ಚಿಮ ಘಟ್ಟದ ಕಾಡುಗಳು ನಿಧಾನಕ್ಕೆ ಕರಗುತ್ತಿವೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66 ಮತ್ತು ಹಾವೇರಿಯಿಂದ ಶಿರಸಿ ಮಾರ್ಗವಾಗಿ ಕುಮಟಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–766ಇ ವಿಸ್ತರಣೆಗೆ ಕಳೆದು ಒಂದು ದಶಕದಲ್ಲಿ 12 ಸಾವಿರಕ್ಕೂ ಹೆಚ್ಚು ಮರಗಳು ನಾಶವಾಗಿವೆ. ಪ್ರಾಕೃತಿಕ ಸಂಪತ್ತಿಗೆ ಭಾರಿ ಪೆಟ್ಟು ಬಿದ್ದಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಿಂದ ಜಗತ್ತಿನಲ್ಲೇ ಅಪರೂಪದ ರಾಮಪತ್ರೆ ಜಡ್ಡಿ (ಮಿಸ್ಟರಿಕಾ ಸ್ವ್ಯಾಂಪ್), ಸೀಮಿತ ಸಂಖ್ಯೆಯ ಸಿಂಹ ಬಾಲದ ಸಿಂಗಳೀಕ ಸೇರಿದಂತೆ ಅಳಿವಿನಂಚಿನಲ್ಲಿನ ಸಸ್ಯ, ಜೀವ ಪ್ರಬೇಧಗಳಿರುವ ಶರಾವತಿ ಕಣಿವೆ ಮತ್ತು ಶರಾವತಿ ಅಭಯಾರಣ್ಯಕ್ಕೆ ಅಪಾಯ ಎದುರಾಗಲಿದೆ ಎಂಬುದು ಪರಿಸರವಾದಿಗಳ ಆತಂಕ.

ಅಂದಾಜು ₹10,500 ಕೋಟಿ ವೆಚ್ಚದ ಈ ಯೋಜನೆಯ ಮೂಲಕ ಗೇರುಸೊಪ್ಪ ಜಲಾಶಯದಿಂದ ಸಾಗರ ತಾಲ್ಲೂಕಿನ ತಳಕಳಲೆ ಜಲಾಶಯಕ್ಕೆ ನೀರು ಸಾಗಿಸಿ ಜಲವಿದ್ಯುತ್ ಉತ್ಪಾದಿಸುವ ಉದ್ದೇಶವಿದೆ. ಇದಕ್ಕಾಗಿ ದಟ್ಟ ಅರಣ್ಯದ ಕೆಳಭಾಗದಲ್ಲಿ 7 ಕಿ.ಮೀ ಉದ್ದ ಸುರಂಗ ಮಾರ್ಗ ರಚಿಸಲು ಉದ್ದೇಶಿಸಲಾಗಿದೆ. 16 ಸಾವಿರ ಮರಗಳು ಹನನವಾಗಲಿದ್ದು, ಯೋಜನೆಗೆ 54.55 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ ಎಂದು ಯೋಜನೆ ಜಾರಿಗೊಳಿಸುತ್ತಿರುವ ಕೆಪಿಸಿಎಲ್ ಹೇಳಿದೆ.

‘ಶರಾವತಿ ನದಿಗೆ ಗೇರುಸೊಪ್ಪದಲ್ಲಿ ಶರಾವತಿ ಟೇಲರಿಸ್ ಯೋಜನೆ ಹೆಸರಿನಲ್ಲಿ ಜಲಾಶಯ ನಿರ್ಮಿಸುವ ವೇಳೆ ಇನ್ನುಮುಂದೆ ಶರಾವತಿ ನದಿ ಕಣಿವೆಯಲ್ಲಿ ಯಾವುದೇ ಯೋಜನೆ ಜಾರಿಗೆ ತರುವುದಿಲ್ಲ ಎಂದು ಹೈಕೋರ್ಟ್‌ನಲ್ಲಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಸಲ್ಲಿಸಿದ ಅಫಿಡವಿಟ್‌ನ್ನು ಉಲ್ಲಂಘಿಸಿದೆ. 342ಕ್ಕೂ ಹೆಚ್ಚು ಸಸ್ಯ ಪ್ರಭೇದ, ಜೀವಿಗಳಿರುವ ಅಭಯಾರಣ್ಯ ಸಂರಕ್ಷಿಸಬೇಕಿದ್ದ ಸರ್ಕಾರವೇ ಒಪ್ಪಿತ ನೀತಿ ಉಲ್ಲಂಘಿಸಿ ಯೋಜನೆ ಜಾರಿಗೆ ಮುಂದಾಗಿದೆ’ ಎಂಬುದು ಪರಿಸರವಾದಿಗಳ ಆರೋಪ.

‘ಪಂಪ್ಡ್ ಸ್ಟೋರೇಜ್ ಯೋಜನೆಯ ಪರಿಸರ ಪರಿಣಾಮ ವರದಿಯೇ ತಪ್ಪಿನಿಂದ ಕೂಡಿದೆ. ಯೋಜನೆಗೆ ಪರವಾದ ವರದಿಯನ್ನು ಸಲ್ಲಿಸಲಾಗಿದೆ. ಅರಣ್ಯ ಇಲಾಖೆಯ ವಿಭಾಗ ಮಟ್ಟದ ಅಧಿಕಾರಿಗಳು ಯೋಜನೆಗೆ ಅನುಮತಿ ನೀಡಬಾರದು ಎಂದು ಸಲ್ಲಿಸಿದ್ದ ವರದಿಗೆ ವಿರುದ್ಧವಾಗಿ ಉನ್ನತ ಮಟ್ಟದಿಂದ ಯೋಜನೆಗೆ ಒಪ್ಪಿಗೆ ದೊರೆತಿದೆ. ಇದು ಪರಿಸರ ಕಾಯ್ದೆಗಳ ಉಲ್ಲಂಘನೆ’ ಎಂಬುದು ಅವರ ಆಕ್ಷೇಪ.

‘ಶರಾವದಿ ನದಿಯಲ್ಲಿ 14 ಕಿ.ಮೀ ದೂರದವರೆಗೆ ಉಪ್ಪುನೀರು ನುಗ್ಗುತ್ತಿದೆ. ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದರೆ 1 ಕೋಟಿಗೂ ಹೆಚ್ಚು ಲೀಟರ್ ನೀರನ್ನು ಮೇಲ್ಮಟ್ಟದ ಜಲಾಶಯಕ್ಕೆ ಸಾಗಿಸಲಾಗುತ್ತದೆ. ಗೇರುಸೊಪ್ಪ ಜಲಾಶಯದಿಂದ ನದಿಗೆ ಹರಿಯುವ ನೀರಿನ ಪ್ರಮಾಣ ಇಳಿಕೆಯಾಗಲಿದೆ. ಇದರಿಂದ ಉಪ್ಪುನೀರು ಇನ್ನಷ್ಟು ದೂರದವರೆಗೆ ನುಗ್ಗಲಿದೆ. ನದಿಯಲ್ಲಿ 45 ಪ್ರಬೇಧದ ಮೀನುಗಳಿವೆ. ಅವುಗಳಿಗೆ ಸೂಕ್ತ ಪೋಷಕಾಂಶ ಸಿಗದೆ ಅವೂ ನಶಿಸಲಿವೆ’ ಎಂದು ಪರಿಸರ ಸಂಶೋಧಕ ಗುರುಪ್ರಸಾದ್ ಹೆಗಡೆ ಹೇಳುತ್ತಾರೆ.

ಅಂಕೋಲಾದ ಕೇಣಿಯಲ್ಲಿ ನಿರ್ಮಿಸಲಿರುವ ಗ್ರೀನ್‌ಫೀಲ್ಡ್ ಬಂದರು ಯೋಜನೆ ವಿರುದ್ಧ ಬೇಲೆಕೇರಿ ಸಮೀಪ ಸಮುದ್ರದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ಮೀನುಗಾರರನ್ನು ನಿಯಂತ್ರಿಸಲು ಕರಾವಳಿ ಕಾವಲು ಪಡೆ ಪೊಲೀಸರು ಪ್ರಯತ್ನಿಸಿದ್ದರು.

ಪರಿಸರವಾದಿಗಳ ವಿರೋಧದ ನಡುವೆಯೇ ಮೂರು ದಶಕದಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ ಜಾರಿಗೆ ಪ್ರಯತ್ನ ನಡೆದಿದೆ. 1999ರಲ್ಲಿಯೇ ₹494 ಕೋಟಿ ವೆಚ್ಚದ ಯೋಜನೆಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಚಾಲನೆ ನೀಡಿದ್ದರು. ಹುಬ್ಬಳ್ಳಿಯಿಂದ ಕಲಘಟಗಿವರೆಗೆ 34 ಕಿ.ಮೀ ಉದ್ದ ರೈಲು ಮಾರ್ಗವೂ ನಿರ್ಮಾಣಗೊಂಡಿತ್ತು. ಆ ಬಳಿಕ ಯೋಜನೆ ನನೆಗುದಿಗೆ ಬಿದ್ದಿತ್ತು. ಪರಿಸರಕ್ಕೆ ಹಾನಿಯಾಗಲಿದೆ ಎಂಬ ಕಾರಣ ನೀಡಿ ಪರಿಸರವಾದಿ ಸಂಘಟನೆಗಳ ಆಕ್ಷೇಪಣೆಯಿಂದ ಕಳೆದ ಮೂರು ದಶಕದಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಪಶ್ಚಿಮ ಘಟ್ಟ ಸೀಳಿಕೊಂಡು ಈಗಾಗಲೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ರೈಲು ಮಾರ್ಗದಿಂದ ಅರಣ್ಯಕ್ಕೆ, ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಧಕ್ಕೆ ಉಂಟಾಗಲಿದ್ದು, ವನ್ಯಜೀವಿಗಳ ಸಂಚಾರಕ್ಕೂ ಅಡ್ಡಿಯುಂಟಾಗಲಿದೆ ಎಂದು ವಾದಿಸಿದ್ದ ಪರಿಸರವಾದಿ ಸಂಘಟನೆಗಳು ಯೋಜನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ಕಾರ್ಯಗತವಾದರೆ ಅಭ್ಯಂತರ ಇಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) 2016ರಲ್ಲಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪರಿಸರವಾದಿಗಳು ಯೋಜನೆ ಕಾರ್ಯರೂಪಕ್ಕೆ ತರುವುದನ್ನು ಪ್ರಶ್ನಿಸಿದ್ದರು. 2024ರಲ್ಲಿ ಆದೇಶಿಸಿದ್ದ ಹೈಕೋರ್ಟ್ ವನ್ಯಜೀವಿ ಮಂಡಳಿ ಸಹಾಯದೊಂದಿಗೆ ಅಧ್ಯಯನ ಕೈಗೊಂಡು, ಪರಿಷ್ಕೃತ ಯೋಜನಾ ವರದಿ ಸಲ್ಲಿಸಲು ಸೂಚಿಸಿತ್ತು. ರೈಲ್ವೆ ಇಲಾಖೆ ಪರಿಷ್ಕೃತ ವಿಸ್ತೃತ ಯೋಜನಾ ವರದಿ ಸಲ್ಲಿಸಿದೆ. ಅದರಂತೆ, ಯೋಜನೆಗೆ ಕನಿಷ್ಠ 1.58 ಲಕ್ಷ ಮರಗಳು ಬಲಿಯಾಗಲಿವೆ, 595 ಹೆಕ್ಟೇರ್ ಅರಣ್ಯದ ಬದಲಿಗೆ 585 ಹೆಕ್ಟೇರ್ ಬಳಕೆಯಾಗಲಿದೆ. 164.4 ಕಿ.ಮೀ ಉದ್ದದ ಮಾರ್ಗದ ಪೈಕಿ 97 ಕಿ.ಮೀ ಅರಣ್ಯದಲ್ಲಿ ಹಾದುಹೋಗಲಿದೆ. ಅರಣ್ಯದಲ್ಲಿ ಹಾದುಹೋಗುವ ಮಾರ್ಗದಲ್ಲಿ 57 ಸುರಂಗಗಳ ನಿರ್ಮಾಣವಾಗಲಿದೆ ಎಂದು ವಿವರಿಸಿದೆ.

‘ಪಶ್ಚಿಮ ಘಟ್ಟವೇ ಬಹುಭಾಗ ಆವರಿಸಿಕೊಂಡಿರುವ ಉತ್ತರ ಕನ್ನಡದಲ್ಲಿ ಅಭಿವೃದ್ಧಿ ಯೋಜನೆಗಳ ಹೇರಿಕೆಯಿಂದ ಅರಣ್ಯ ನಾಶ ಹೆಚ್ಚುತ್ತಿದೆ. ಈ ಹಿಂದೆ ಕೈಗಾ ಅಣು ಸ್ಥಾವರ, ಹೆದ್ದಾರಿ ವಿಸ್ತರಣೆ ಯೋಜನೆಗಳಿಗೆ ಬೃಹತ್‌ ಗಾತ್ರದ ಮರಗಳು ನಾಶಗೊಂಡವು. ಅವುಗಳ ಪರಿಣಾಮ ರಣಹದ್ದು, ಹದ್ದುಗಳ ಸಂತತಿ ಕ್ಷೀಣಿಸಿತು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದರೆ, ಶರಾವತಿ ಕಣಿವೆಯಲ್ಲಿ ಎತ್ತರದ, ಹೂವು ಹಣ್ಣು ಬಿಡುವ ಮರಗಳು ನಾಶಗೊಳ್ಳುತ್ತವೆ. ಅಂತಹ ಮರಗಳನ್ನೇ ಅವಲಂಬಿಸಿರುವ ಸಿಂಹಬಾಲದ ಸಿಂಗಳೀಕಗಳು ಅವಸಾನಗೊಳ್ಳಲಿವೆ’ ಎನ್ನುತ್ತಾರೆ ಜೀವ ಸಂರಕ್ಷಣಾ ಶಾಸ್ತ್ರಜ್ಞ ಕೇಶವ ಕೊರ್ಸೆ.

‘ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ 10 ವರ್ಷಗಳಲ್ಲಿ 588 ಭೂಕುಸಿತ ಪ್ರಕರಣಗಳು ವರದಿಯಾಗಿವೆ. ನಿರಂತರವಾಗಿ ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಎರಡು ವರ್ಷಗಳ ಹಿಂದೆ ಜಿಲ್ಲೆಯಾದ್ಯಂತ ಅಧ್ಯಯನ ಕೈಗೊಂಡು 439 ಸ್ಥಳಗಳು ಭೂಕುಸಿತದ ಅಪಾಯ ಎದುರಿಸುತ್ತಿವೆ. ನದಿ ಜೋಡಣೆ ಸೇರಿ ಅಭಿವೃದ್ಧಿ ಯೋಜನೆಗಳಿಗೆ ಪಶ್ಚಿಮ ಘಟ್ಟ ನಾಶವಾದರೆ ಇಂತಹ ಅವಘಡಗಳು ಘಟಿಸುತ್ತಲೇ ಸಾಗುತ್ತವೆ’ ಎನ್ನುತ್ತಾರೆ ಅವರು.

ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆ ಸಲುವಾಗಿ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ್ದ ಪರಿಣಾಮ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿತ ಸಂಭವಿಸಿರುವುದು.

‘ಬೇಡ್ತಿ, ಅಘನಾಶಿನಿ ನದಿಗಳಲ್ಲಿ ಕೇವಲ ಜುಲೈನಿಂದ-ಸೆಪ್ಟೆಂಬರ್ ತಿಂಗಳ ಮಳೆಗಾಲದ ಅವಧಿಯಲ್ಲಿ ಮಾತ್ರ ಮಳೆನೀರಿನ ಪ್ರವಾಹ ಇರುತ್ತದೆ. ಉಳಿದ 9 ತಿಂಗಳು ನೀರು ತೀರಾ ಕಡಿಮೆ ಇರುತ್ತದೆ. ಹೀಗಾಗಿ, ಈ ಯೋಜನೆಗಳಿಂದ ಈ ನದಿಗಳಲ್ಲಿ ಹರಿಯಬೇಕಾದ ಕನಿಷ್ಠ ಸ್ವಾಭಾವಿಕ ಪ್ರವಾಹವೂ ಇಲ್ಲವಾಗಿ, ಹೊಳೆ-ತೊರೆ-ಕೆರೆಗಳ ಜಲಮೂಲವಾದ ಅಂತರ್ಜಲ ಮರುಪೂರಣ ಕುಸಿದು, ಗಂಭೀರ ನೀರಿನ ಕೊರತೆ ಉಂಟಾಗಲಿದೆ’ ಎಂದು ಆತಂಕ ಅವರದ್ದು.

ನದಿ ತಿರುವು, ಶರಾವತಿ ಪಂಪ್ಡ್ ಸ್ಟೋರೇಜ್‌ನಂತಹ ಯೋಜನೆಗೆ ಪರಿಸರದ ಮೇಲ್ಮೈ ನಾಶಪಡಿಸದೆ ಸುರಂಗ ಕೊರೆದು ಯೋಜನೆ ಜಾರಿಗೊಳಿಸುವ ಯೋಚನೆ ಇದೆ. ಆದರೆ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸುರಂಗ ಕೊರೆಯುವುದೇ ದೊಡ್ಡ ಅವಘಡಕ್ಕೆ ಕಾರಣವಾಗುತ್ತದೆ. ಸುರಂಗ ನಿರ್ಮಾಣದ ವೇಳೆ ಉಂಟಾಗುವ ಕಂಪನಗಳು ವಸತಿ ಪ್ರದೇಶಕ್ಕೆ ಅಲ್ಲದೇ ಅರಣ್ಯಕ್ಕೆ ಅಪಾಯ ತರಬಲ್ಲದು. ಭೂಕುಸಿತ ಉಂಟಾಗಿ, ವನ್ಯಜೀವಿಗಳ ಆವಾಸ ಬದಲಾಗಬಹುದು.

‘ನದಿ ನೀರು ಸಮುದ್ರ ಸೇರುವ ಮೂಲಕ ಪೋಲಾಗುತ್ತಿದೆ ಎಂಬ ಸರ್ಕಾರದ ತರ್ಕವೇ ಹಾಸ್ಯಾಸ್ಪದ. ಇದಕ್ಕೂ ಮುನ್ನ ವೈಜ್ಞಾನಿಕ ವರದಿಗಳನ್ನು ಸರ್ಕಾರ ಅರಿಯಬೇಕು. ಅರಬ್ಬಿ ಸಮುದ್ರದತ್ತ ಹರಿಯುವ ನದಿಯನ್ನು ಬಂಗಾಳ ಕೊಲ್ಲಿಯತ್ತ ತಿರುಗಿಸಿದರೆ ಪಶ್ಚಿಮ ಕರಾವಳಿಯ ಮೇಲೆ ಅಪಾಯಕ್ಕೆ ಕಾರಣವಾಗುತ್ತದೆ’ ಎನ್ನುತ್ತಾರೆ ಕಡಲಜೀವ ವಿಜ್ಞಾನಿ ವಿ.ಎನ್.ನಾಯಕ.

ಪಶ್ಚಿಮ ಘಟ್ಟದಲ್ಲಿ ನಡೆಯಲಿರುವ ಅಭಿವೃದ್ಧಿ ಯೋಜನೆಗಳಿಂದ ಅರಣ್ಯ ನಾಶ ಆಗುವುದಲ್ಲದೆ, ಕರಾವಳಿ ಪರಿಸರದ ಹಾನಿಗೂ ಕಾರಣವಾಗುತ್ತದೆ. ಮಳೆಯ ಪ್ರಮಾಣ ಕಡಿಮೆಯಾಗಿ ನದಿಗಳಲ್ಲಿ ನೀರಿನ ಹರಿವು ಕುಸಿದು, ಈಗಾಗಲೇ ತಲೆದೋರಿರುವ ಕರಾವಳಿಯ ಮತ್ಸ್ಯಕ್ಷಾಮ ಇನ್ನಷ್ಟು ಬಿಗಡಾಯಿಸಿ, ಮೀನುಗಾರರ ಜೀವನೋಪಾಯ ನಾಶವಾಗುತ್ತದೆ. ನದಿಯ ಹರಿವು ಕಡಿಮೆಯಾದಾಗ ಸಮುದ್ರದ ಉಪ್ಪುನೀರು ಕರಾವಳಿಯ ಒಳಪ್ರದೇಶಗಳಿಗೆ ನುಗ್ಗಿ, ಬಾವಿ, ಕೃಷಿಮಣ್ಣು, ಕುಡಿಯುವ ನೀರಿನ ಮೂಲ ಅತಿಯಾಗಿ ಉಪ್ಪಾಗುತ್ತದೆ. ಇದರಿಂದ ಭೂಮಿ ಫಲವತ್ತತೆ ನಷ್ಟವಾಗಿ ಬೇಸಾಯ ಕಷ್ಟವಾಗುತ್ತದೆ.

ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದ ಸಾರ್ವಜನಿಕ ಪರಿಸರ ಆಲಿಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಜನರು.

ಯಾರು ಏನು ಹೇಳುತ್ತಾರೆ?

ಅರಣ್ಯ ನಾಶದಿಂದ ವನ್ಯಪ್ರಾಣಿಗಳ ಆವಾಸ ಸ್ಥಾನ ಛಿದ್ರವಾಗಿ ಊರು-ಕೇರಿ ಮತ್ತು ಕೃಷಿಭೂಮಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರುತ್ತದೆ. ಬೇಡ್ತಿ-ಅಘನಾಶಿನಿ ನದಿ ತಪ್ಪಲಿನ ಲಕ್ಷಾಂತರ ಜನರ ಜೀವನೋಪಾಯಕ್ಕೆ ತೊಂದರೆ ಆಗುತ್ತದೆ.
- ಕೇಶವ ಕೊರ್ಸೆ, ಜೀವ ಸಂರಕ್ಷಣಾ ಶಾಸ್ತ್ರಜ್ಞ
ನದಿತಿರುವು ಯೋಜನೆಗಳಿಂದ ನದಿಯ ಸಹಜಪ್ರವಾಹ ಕಡಿಮೆಯಾಗುತ್ತದೆ. ಕರಾವಳಿ ಪ್ರದೇಶಕ್ಕೆ ಸಾಗುವ ಸಹಜ ನೀರು ಹಾಗೂ ಪೋಶಕಾಂಶದ ಪ್ರಮಾಣ ಕುಗ್ಗಿ ಮೀನುಗಾರಿಕೆ ಹಾಗೂ ಕೃಷಿಯ ಫಲವತ್ತತೆ ಕುಸಿಯುತ್ತದೆ.
- ವಿ.ಎನ್.ನಾಯಕ, ಕಡಲಜೀವಶಾಸ್ತ್ರಜ್ಞ
ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ 40ಕ್ಕೂ ಹೆಚ್ಚು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದೇವೆ. ಅರಣ್ಯ ಮತ್ತು ಜೀವವಿರೋಧಿ ಯೋಜನೆಗಳನ್ನು ಜಾರಿಗೊಳಿಸದೇ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು
- ಅನಂತ ಹೆಗಡೆ ಅಶೀಸರ, ಅಧ್ಯಕ್ಷ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ
ಅರಣ್ಯ ಸಂಪತ್ತಿನ ಸಂರಕ್ಷಣೆ ಇಂದಿನ ತುರ್ತು ಅಗತ್ಯವಿದೆ. ಒಂದು ವೇಳೆ ಪ್ರಾಕೃತಿಕ ಸಂರಕ್ಷಣೆಗೆ ಆದ್ಯತೆ ನೀಡದಿದ್ದಲ್ಲಿ ಒಟ್ಟಾರೆ ಜೀವ ಸಂಕುಲಕ್ಕೆ ಅಪಾಯ ಆಗಲಿದೆ. ಹಲವು ಸಮಸ್ಯೆ ಕಾಡುತ್ತವೆ.
- ಬಾಲಚಂದ್ರ ಸಾಯಿಮನೆ, ಪರಿಸರವಾದಿ
ಪಶ್ಚಿಮ ಘಟ್ಟಗಳ ಮಹತ್ವವನ್ನು ಅರಿಯುವ ಕೆಲಸ ಸರ್ಕಾರದಿಂದ ಆಗಬೇಕು. ಯೋಜನೆಗಳನ್ನು ಜಾರಿಗೊಳಿಸುವ ಮುನ್ನ ಅದರ ಸಾಧಕ–ಬಾಧಕಗಳನ್ನು ಅರಿಯಬೇಕು. ಇಲ್ಲದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ.
- ಮಹಾಬಲೇಶ್ವರ ಸಾಯಿಮನೆ, ಪರಿಸರವಾದಿ
ಬೇಡ್ತಿ– ವರದಾ ನದಿಗಳ ಜೋಡಣೆ ಹಾವೇರಿ ಮತ್ತು ಗದಗ ಜಿಲ್ಲೆ ಜನರ ಕನಸು. ಇದರಿಂದ ಕುಡಿಯಲು ಮತ್ತು ಕೃಷಿಗೂ ನೀರು ಸಿಗುತ್ತದೆ. ಯೋಜನೆ ಜಾರಿಗೆ ಎಲ್ಲರೂ ಸಹಕರಿಸಬೇಕು. ಯೋಜನೆ ವಿರೋಧಿಸುವುದು ಸರಿಯಲ್ಲ.
– ಬಸವರಾಜ ಬೊಮ್ಮಾಯಿ, ಸಂಸದ
ಬೃಹತ್ ಯೋಜನೆಗಳ ಅನುಷ್ಠಾನದಿಂದ ಪಶ್ಚಿಮ ಘಟ್ಟಕ್ಕೆ ಅಪಾಯವಾಗಲಿದೆ. ಪರಿಸರ ಅಲ್ಲದೇ ಒಟ್ಟಾರೆ ಜೀವ ಸಂಕುಲ ರಕ್ಷಣೆಗೆ ಹೋರಾಟ ಅನಿವಾರ್ಯ ಆಗಿದೆ
- ಗಿರಿಧರ ಕುಲಕರ್ಣಿ, ಪರಿಸರವಾದಿ

11 ವರ್ಷವಾದರೂ ಎತ್ತಿನಹೊಳೆ ಯೋಜನೆ  ಅಪೂರ್ಣ...

ಕೋಲಾರ ಚಿಕ್ಕಬಳ್ಳಾಪುರ ತುಮಕೂರು ಸೇರಿ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ 11 ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. 2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಆಗಿನ ಸಂಸದ ವೀರಪ್ಪ ಮೊಯಿಲಿ ಅವರು ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆಯ ಪ್ರಗತಿ ಕಿಂಚಿತ್ತೂ ಆಗಿಲ್ಲ. ನೇತ್ರಾವತಿ ನದಿ ಮೂಲಕ ಅರಬ್ಬಿ ಸಮುದ್ರ ಸೇರುತ್ತಿದ್ದ ಎತ್ತಿನಹೊಳೆ ಮತ್ತು ಅದರ ಉಪ ಹಳ್ಳಗಳ ನೀರು ಹೇಮಾವತಿ ನದಿ ಮೂಲಕ ಈಗ ಬಂಗಾಳಕೊಲ್ಲಿ ಸೇರುತ್ತಿದೆ. ಸಕಲೇಶಪುರ ತಾಲ್ಲೂಕಿನ 8 ಕಡೆ ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿದೆ. ಅದನ್ನು ಪೈಪ್‌ಲೈನ್‌ ಮೂಲಕ ಆಲೂರು ಬೇಲೂರು ಅರಸೀಕೆರೆ ತಾಲ್ಲೂಕುಗಳ ಮೂಲಕ ತುಮಕೂರು ಜಿಲ್ಲೆಗೆ ಹರಿಸುವುದು ಯೋಜನೆ ಉದ್ದೇಶ. ಯೋಜನೆಯ ನೀರು ಈವರೆಗೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕನ್ನೇ ತಲುಪಿಲ್ಲ. ಸದ್ಯಕ್ಕೆ ಕಾಲುವೆಯ 32 ನೇ ಕಿ.ಮೀ.ವರೆಗೆ ಮಾತ್ರ ಹರಿಯುತ್ತಿದೆ. ಒಟ್ಟು 24 ಟಿಎಂಸಿ ನೀರನ್ನು ಬಯಲು ಸೀಮೆಗೆ ಹರಿಸುವ ಉದ್ದೇಶ ಯೋಜನೆಯದ್ದು. ಟೆಲಿಮೆಟ್ರಿಕ್‌ ವ್ಯವಸ್ಥೆಯ ಮೂಲಕ ನೀರಿನ ಲಭ್ಯತೆಯನ್ನು ಅಧ್ಯಯನ ಮಾಡಲಾಗಿದೆ. ಆದರೆ ಯೋಜನೆಗೆ ನಿಗದಿ ಮಾಡಿರುವ 24 ಟಿಎಂಸಿ ನೀರು ಈವರೆಗೆ ಲಭ್ಯವಾಗಿಲ್ಲ.

‘ಇದು ಅವೈಜ್ಞಾನಿಕ ಯೋಜನೆ ನದಿ ಮೂಲ ನಾಶವಾಗುತ್ತದೆ ಎಂದು ಪ್ರಾರಂಭದಲ್ಲಿಯೇ ಹೇಳಿದ್ದೆವು. 5 ರಿಂದ 6 ಟಿಎಂಸಿ ಮಾತ್ರ ನೀರು ಸಿಗುತ್ತಿದ್ದು ಇದು ಸಾಕಾಗುವುದಿಲ್ಲ ಎಂದು ಶರಾವತಿ ನೀರು ಸೇರಿಸಲು ಹೊರಟಿದ್ದಾರೆ. ಯೋಜನೆಯನ್ನು ವಿಸ್ತರಿಸಿ ಗಿರಿಹೊಳೆ ಅಡ್ಡಹೊಳೆ ನೀರನ್ನು ಸೇರಿಸಲು ಮುಂದಾಗಿದ್ದಾರೆ. ಇನ್ನಷ್ಟು ಅರಣ್ಯ ನಾಶವಾಗಲಿದ್ದು ಆನೆ– ಮಾನವ ಸಂಘರ್ಷ ಹೆಚ್ಚಲಿದೆ’ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಆತಂಕ ವ್ಯಕ್ತಪಡಿಸುತ್ತಾರೆ.

ಅರ್ಧಕ್ಕೆ ನಿಂತ ಕಾಲುವೆ ಕಾಮಗಾರಿ: ತನಗೆ ಸೇರಿದ ಜಾಗದಲ್ಲಿ ಕಾಲುವೆ ನಿರ್ಮಿಸಲು ಅರಣ್ಯ ಇಲಾಖೆ ತಕರಾರು ಎತ್ತಿದ್ದು ಬೇಲೂರು ತಾಲ್ಲೂಕಿನ ಐದಳ್ಳ ಕಾವಲು ಬಳಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕಾಲುವೆ ನಿರ್ಮಾಣಕ್ಕೆ ತೊಂದರೆ ಎದುರಾಗಿದೆ. ಈ ಜಾಗವನ್ನು ಬಿಟ್ಟು ಕೊಡುವಂತೆ ಕೇಂದ್ರ ಅರಣ್ಯ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವಕ್ಕೆ ಇದುವರೆಗೆ ಅನುಮೋದನೆ ಸಿಕ್ಕಿಲ್ಲ. ಕಾಲುವೆಯೇ ಇಲ್ಲದಿರುವುದರಿಂದ 32 ಕಿ.ಮೀ.ನಿಂದ ಮುಂದೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.

ಅರಣ್ಯ ಇಲಾಖೆ ಆಕ್ಷೇಪವೇನು?: ‘ಹಾಸನ ತುಮಕೂರು ಜಿಲ್ಲೆಗಳಲ್ಲಿ ಗುರುತ್ವಾಕರ್ಷಣೆ ಕಾಲುವೆ ನಿರ್ಮಿಸಲು ತುಮಕೂರಿನ ಬೆಣ್ಣೆಹಳ್ಳದ ಕಾವಲ್ ಕಂಚಿಗಾನಹಳ್ಳಿ ಹಾಗೂ ಹಾಸನದ ಐದಳ್ಳಿ ಕಾವಲ್‌ ಕುಮರಿಹಳ್ಳಿ ಸೇರಿ 432 ಎಕರೆ ಅರಣ್ಯ ಭೂಮಿ ಬಳಸಲು ಒಪ್ಪಿಗೆ ಕೊಡಬೇಕು’ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಕೇಂದ್ರ ಅರಣ್ಯ ಸಚಿವಾಲಯದ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದರು.

ಈ ಕುರಿತು ಸಭೆ ನಡೆಸಿದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ‘ಯೋಜನೆಗೆ ನಿಯಮಬಾಹಿರವಾಗಿ ಹೆಚ್ಚುವರಿ ಅರಣ್ಯ ಬಳಸಲಾಗಿದೆ. ಎಷ್ಟು ಅರಣ್ಯ ಬಳಸಲಾಗಿದೆ ಎಂಬ ವಿವರ ಸಹಿತ ರಾಜ್ಯ ಸರ್ಕಾರವು ಅರಣ್ಯ ಸಚಿವಾಲಯಕ್ಕೆ ಹೊಸ ಪ್ರಸ್ತಾವ ಸಲ್ಲಿಸಬೇಕು. ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ಹೆಸರು ಹಾಗೂ ಅವರ ವಿರುದ್ಧ ಕೈಗೊಂಡ ಕ್ರಮದ ವರದಿ ಸಲ್ಲಿಸಬೇಕು’ ಎಂದು ತಾಕೀತು ಮಾಡಿದೆ.

ಪಶ್ಚಿಮ ಘಟ್ಟದಲ್ಲಿ ಜಾರಿಯಾದ ಯೋಜನೆಗಳು..

  • ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌4ಎ) ವಿಸ್ತರಣೆ

  • ಬೆಳಗಾವಿ - ಚೋರ್ಲಾ ಘಾಟ್ ರಸ್ತೆ ವಿಸ್ತರಣೆ

  • ದೇವಿಮನೆ ಘಾಟ್ ಮೂಲಕ ಶಿರಸಿ ಕುಮಟಾ ರಸ್ತೆ (ಎನ್‌ಎಚ್766ಇ) ವಿಸ್ತರಣೆ.

  • ಶಿವಮೊಗ್ಗ ಜಿಲ್ಲೆಯಲ್ಲಿ ಮೂಕಾಂಬಿಕಾ ಮತ್ತು ಶರಾವತಿ ವನ್ಯಜೀವಿ ಅಭಯಾರಣ್ಯದ ಮೂಲಕ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್369ಇ) ವಿಸ್ತರಣೆ.

  • ಮೂಕಾಂಬಿಕಾ ಮತ್ತು ಶರಾವತಿ ವನ್ಯಜೀವಿ ಅಭಯಾರಣ್ಯದ ಮೂಲಕ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌766ಸಿ) ರಸ್ತೆ ವಿಸ್ತರಣೆ.

  • ಶಿವಮೊಗ್ಗದಲ್ಲಿನ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ಮತ್ತು ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲಕ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್169) ವಿಸ್ತರಣೆ.

  • ಆಗುಂಬೆ ಘಾಟ್ ಮತ್ತು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಮೂಲಕ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌169ಎ) ವಿಸ್ತರಣೆ

  • ಚಿಕ್ಕಮಗಳೂರು ಮುಖಾಂತರ (ಎನ್‌ಎಚ್‌173) ಹೆದ್ದಾರಿ ವಿಸ್ತರಣೆ

  • ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ಮೂಲಕ  ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌234) ವಿಸ್ತರಣೆ

  • ಶಿರಡ್ಡಿ ಘಾಟ್ ಮೂಲಕ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌75) ವಿಸ್ತರಣೆ

  • ಮೈಸೂರು-ಮಡಿಕೇರಿ-ಬಂಟ್ವಾಳ-ಮಂಗಳೂರು ಹೆದ್ದಾರಿ (ಎನ್‌ಎಚ್‌275) ವಿಸ್ತರಣೆ.

ಪಶ್ಚಿಮ ಘಟ್ಟದಲ್ಲಿ ಉದ್ದೇಶಿತ ಯೋಜನೆಗಳು..

  • ಭೀಮಘಡ ವನ್ಯಜೀವಿ ಅಭಯಾರಣ್ಯದಲ್ಲಿ ಕಳಸಾ ಭಂಡೂರಿ ನದಿ ತಿರುವು ಯೋಜನೆ

  • ಕ್ಯಾಸ್ಟೆಲ್ ರಾಕ್ - ಕುಲೆಮ್ (ಗೋವಾ) ಕರ್ನಾಟಕದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ರೈಲ್ವೆ ಡಬಲ್ ಟ್ರ್ಯಾಕಿಂಗ್

  • ಕೈಗಾ ಪರಮಾಣು ವಿದ್ಯುತ್ ಸ್ಥಾವರ ವಿಸ್ತರಣೆ 5ನೇ ಮತ್ತು 6ನೇ ಹಂತ.

  • ತಾಳಗುಪ್ಪ - ಶರಾವತಿ ವನ್ಯಜೀವಿ ಅಭಯಾರಣ್ಯದ ಮೂಲಕ ಹೊನ್ನಾವರ ರೈಲು ಮಾರ್ಗ

  • ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದಲ್ಲಿ ಕೊಡಚಾದ್ರಿ ಬೆಟ್ಟಗಳಿಗೆ ರೋಪ್‌ವೇ

  • ಚನ್ನರಾಯಪಟ್ಟಣ - ಹೊಳೆನರಸೀಪುರ-ಅರಕಲಗೋಡು-ಕೊಡ್ಲಿಪೇಟೆ-ಮಡಿಕೇರಿ ರಸ್ತೆ ವಿಸ್ತರಣೆ

  • ಹೆಳೇಬೀಡು -ಹಾಸನ -ಅರಕಲಗೋಡು-ಪಿರಿಯಾಪಟ್ಟಣ-ಕುಟ್ಟ -ಕಣ್ಣೂರು (ಕೇರಳ) ರಸ್ತೆ ವಿಸ್ತರಣೆ

  • ಕೊಡಗು ಪಶ್ಚಿಮ ಘಟ್ಟಗಳ ಮಡಿಕೇರಿ-ವಿರಾಜಪೇಟೆ-ಮಕುಟ್ಟ-ಕಣ್ಣೂರು ರಸ್ತೆ ವಿಸ್ತರಣೆ

  • ಕೊಡಗು ಜಿಲ್ಲೆಯ ಮಡಿಕೇರಿ-ಭಾಗಮಂಡಲ-ಪಾಣಟೂರು-ಹೊಸದುರ್ಗ (ಕೇರಳ) ರಸ್ತೆ ವಿಸ್ತರಣೆ.

  • ಕಾವೇರಿಯಲ್ಲಿ ಸಕಲೇಶಪುರ-ಶುಕ್ರವಾರ ಸಂತೆ-ಕೊಡ್ಲಿಪೇಟೆ-ವಿರಾಜಪೇಟೆ-ತಲಶೇರಿ ರಸ್ತೆ ವಿಸ್ತರಣೆ

  • ಮೈಸೂರು-ಕುಶಾಲನಗರ-ಮಡಿಕೇರಿ ರೈಲು ಮಾರ್ಗ

  • ಕೊಡಗು ಮೂಲಕ ಮೈಸೂರು-ತಲಶೇರಿ ರೈಲು ಮಾರ್ಗ.

  • ಕಾಣಿಯೂರು - ಕನ್ಹಗಡ್ ರೈಲು ಮಾರ್ಗ. * ಆಗುಂಬೆ ಸುರಂಗ ರಸ್ತೆ

ಇಂದು ಶಿರಸಿಯಲ್ಲಿ ಸಮಾವೇಶ

ಬೇಡ್ತಿ–ವರದಾ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರಬಲ ಪ್ರತಿರೋಧ ವ್ಯಕ್ತವಾಗುತ್ತಿದ್ದು ಜ.11ರಂದು ಭಾನುವಾರ ಶಿರಸಿಯಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಾವಿರಾರು ಜನರು ಸಮಾವೇಶದ ಮೂಲಕ ಯೋಜನೆ ಕೈಬಿಡುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೂ ಕೆಲ ತಿಂಗಳು ಮುಂಚಿನಿಂದಲೇ ಯೋಜನೆ ವಿರುದ್ಧ ಜನಜಾಗೃತಿ ಮೂಡಿಸಲು ಜಿಲ್ಲೆಯ ಪ್ರತಿ ಗ್ರಾಮ ಮಟ್ಟದಲ್ಲಿ ಅಘನಾಶಿನಿ–ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ ಮಾರ್ಗದರ್ಶನದಲ್ಲಿ ಮಹಿಳೆಯರು ಪಾದಯಾತ್ರೆ ನಡೆಸುತ್ತ ಯೋಜನೆಯ ದುಷ್ಪರಿಣಾಮ ಜನರಿಗೆ ತಿಳಿಸುವ ಕರಪತ್ರಗಳನ್ನು ಹಂಚುತ್ತಿದ್ದಾರೆ.

ಪರಿಕಲ್ಪನೆ: ಜಿ.ಡಿ.ಯತೀಶ್‌ಕುಮಾರ್ | ಪೂರಕ ಮಾಹಿತಿ: ಸಂತೋಷ ಜಿಗಳಿಕೊಪ್ಪ, ಚಿದಂಬರಪ್ರಸಾದ, ಜಿ.ಎಚ್.ವೆಂಕಟೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.