ADVERTISEMENT

ಒಳನೋಟ | ವನ್ಯಜೀವಿಗೆ ಉರುಳಾದ ಹೆದ್ದಾರಿಗಳು

ಓದೇಶ ಸಕಲೇಶಪುರ
Published 3 ಮೇ 2025, 23:33 IST
Last Updated 3 ಮೇ 2025, 23:33 IST
<div class="paragraphs"><p>ವನ್ಯಜೀವಿಧಾಮದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ವಾಹನ ಅಪಘಾತಕ್ಕೆ ಬಲಿಯಾಗಿರುವ ಸೀಳುನಾಯಿ</p></div>

ವನ್ಯಜೀವಿಧಾಮದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ವಾಹನ ಅಪಘಾತಕ್ಕೆ ಬಲಿಯಾಗಿರುವ ಸೀಳುನಾಯಿ

   

ರಾಮನಗರ: ಘಟನೆ 1: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಸಾವನದುರ್ಗ ಅರಣ್ಯ ಪ್ರದೇಶದ ನಡುವೆ ಹಾದು ಹೋಗಿರುವ ಬೆಂಗಳೂರು –ಕನಕಪುರ ರಸ್ತೆಯ ದೇವಿಕಾ ರಾಣಿ– ರೋರಿಚ್ ಎಸ್ಟೇಟ್ ಬಳಿ 2022 ಮಾರ್ಚ್ 25ರಂದು ರಸ್ತೆ ದಾಟುತ್ತಿದ್ದ ಕಾಡಾನೆಗೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಗುದ್ದಿತು. ಡಿಕ್ಕಿಯ ತೀವ್ರತೆಗೆ ಗಾಯಗೊಂಡು ನೆಲಕ್ಕುರಳಿದ ಆನೆ, ನೋವಿನಲ್ಲೇ ಮೆತ್ತಗೆ ಮೇಲಕ್ಕೆದ್ದು ಕಾಡು ಹೊಕ್ಕಿತು. ಮಾರನೇ ದಿನ ಘಟನಾ ಸ್ಥಳದಿಂದ ಅನತಿ ದೂರದಲ್ಲಿ ಆನೆ ಕೊನೆಯುಸಿರೆಳೆದಿತ್ತು.

ಘಟನೆ 2: ರಾಮನಗರ ಜಿಲ್ಲೆಯ ದೊಡ್ಡಮಣ್ಣುಗುಡ್ಡೆ ಅರಣ್ಯದ ಕಡೆಯಿಂದ 2024ರ ಜ. 31ರಂದು ಆಹಾರ ಅರಸಿ ಬಂದ ಕರಡಿಗೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ಗೆ ಅಡ್ಡವಾಗಿ ನಿರ್ಮಿಸಿದ್ದ ತಂತಿ ಬೇಲಿ ಎದುರಾಯಿತು. ಬೇಲಿ ಏರಿ ರಸ್ತೆಗಿಳಿದಿದ್ದ ಕರಡಿಗೆ ವೇಗವಾಗಿ ಬಂದ ವಾಹನವೊಂದು ಗುದ್ದಿತು. ಡಿಕ್ಕಿಯ ತೀವ್ರತೆಗೆ ಕರಡಿ‌ಯ ದೇಹದ ಭಾಗಗಳು ಛಿದ್ರಗೊಂಡಿದ್ದವು.

ADVERTISEMENT

ಅಭಿವೃದ್ಧಿ ಹೆಸರಿನ ಹೆದ್ದಾರಿಗಳು ಹಾಗೂ ರಸ್ತೆಗಳಲ್ಲಿ ನಿತ್ಯ ಸಂಭವಿಸುತ್ತಿರುವ ವನ್ಯಜೀವಿಗಳ ಮಾರಣಹೋಮಕ್ಕೆ ಮೇಲಿನ ಘಟನೆಗಳು ಸಣ್ಣ ನಿದರ್ಶನಗಳಷ್ಟೇ. ಆಧುನಿಕತೆಯ ಭರದಲ್ಲಿ ನಗರೀಕರಣದ ಕಬಂಧಬಾಹುಗಳು ವನ್ಯಜೀವಿಗಳ ಆವಾಸಸ್ಥಾನವಾದ ಅರಣ್ಯಕ್ಕೆ ಚಾಚಿಕೊಂಡಿವೆ. ತಮ್ಮದೇ ಲೋಕದಲ್ಲಿ ಬದುಕುತ್ತಿದ್ದ ವನ್ಯಜೀವಿಗಳು, ಮನುಷ್ಯನ ಅಕ್ರಮ ಪ್ರವೇಶಕ್ಕೆ ನಲುಗಿ ನಿತ್ಯ ಜೀವ ಬಿಡುತ್ತಿವೆ.

ದೊಡ್ಡ ನಗರಗಳ ನಡುವಣ ಅಂತರ ತಗ್ಗಿಸಿ ಸಮೀಪಕ್ಕೆ ಬೆಸೆಯುವ ಸಲುವಾಗಿ ನಿರ್ಮಾಣಗೊಳ್ಳುತ್ತಿರುವ ಹೆದ್ದಾರಿಗಳು ಕಾಡುಗಳನ್ನು ಇಲ್ಲವೇ ಎರಡು ಕಾಡುಗಳನ್ನು ಬೆಸೆಯುವ ಸಂಪರ್ಕ ಪ್ರದೇಶ (ಕಾರಿಡಾರ್‌)ವನ್ನೇ ಸೀಳಿಕೊಂಡು ಹೋಗುತ್ತಿವೆ. ಹಲವು ಬಗೆಯ ಹೆದ್ದಾರಿ ಯೋಜನೆಗಳ ಉದ್ದೇಶ ಒಂದು ನಗರದಿಂದ ಮತ್ತೊಂದು ನಗರವನ್ನು ತಲುಪುವುದಷ್ಟೇ. ಜೀವ ಸರಪಳಿಯ ಭಾಗವಾಗಿ ಬದುಕುತ್ತಿರುವ ವನ್ಯಜೀವಿಗಳು ಇಲ್ಲಿ ನಗಣ್ಯ. ಪರಿಸರದ ಭಾಗವಾಗಿರುವ ವನ್ಯಜೀವಿಗಳು, ಪಕ್ಷಿಗಳು, ಚಿಟ್ಟೆಗಳು, ಸೂಕ್ಷ್ಮಜೀವಿಗಳ ಒಳಗೊಳ್ಳುವಿಕೆ ಇಲ್ಲದೆಯೇ ಹೆದ್ದಾರಿ ಯೋಜನೆಗಳು ರೂಪುಗೊಳ್ಳುತ್ತಿವೆ. ಹಾಗಾಗಿ, ಹೆದ್ದಾರಿಗಳಲ್ಲಿ ವೇಗವಾಗಿ ಚಲಿಸುವ ವಾಹನಗಳಿಗೆ ಸಿಲುಕಿ ಲೆಕ್ಕವಿಲ್ಲದಷ್ಟು ಪ್ರಾಣಿ–ಪಕ್ಷಿಗಳು ಉಸಿರು ಚೆಲ್ಲುತ್ತಿವೆ.

280ಕ್ಕೂ ಹೆಚ್ಚು ವನ್ಯಜೀವಿಗಳು ಬಲಿ: 

ರಾಜ್ಯ ಅರಣ್ಯ ಇಲಾಖೆಯ ಅಂಕಿಅಂಶಗಳೇ ಹೇಳುವಂತೆ, ಕಳೆದ ಆರು ವರ್ಷಗಳಲ್ಲಿ 280ಕ್ಕೂ ಹೆಚ್ಚು ವನ್ಯಜೀವಿಗಳು ಅರಣ್ಯ ಪ್ರದೇಶದಲ್ಲಿ ವಾಹನ ಅಪಘಾತಕ್ಕೆ ಬಲಿಯಾಗಿವೆ. ಈ ಪೈಕಿ 68 ಚುಕ್ಕೆ ಜಿಂಕೆ, 62 ಚಿರತೆ, 25 ಕೃಷ್ಣಮೃಗ, 24 ಕರಡಿ, 18 ನರಿ, 17 ಕಾಡುಹಂದಿ, 7 ನವಿಲು, 8 ಚಿರತೆ ಬೆಕ್ಕು ಸೇರಿದಂತೆ ವಿವಿಧ ಪ್ರಾಣಿ–ಪಕ್ಷಿಗಳು ಜೀವ ತೆತ್ತಿವೆ. ಸಾಕು ಪ್ರಾಣಿಗಳು ಸಹ ಜೀವ ಕಳೆದುಕೊಳ್ಳುತ್ತಿವೆ. ಇವು ವರದಿಯಾಗಿರುವ ಪ್ರಕರಣಗಳಷ್ಟೇ. ದಟ್ಟಾರಣ್ಯದಲ್ಲಿ ರಾತ್ರಿ ಮತ್ತು ನಸುಕಿನಲ್ಲಿ ಸಂಭವಿಸುವ ಎಷ್ಟೋ ವನ್ಯಜೀವಿಗಳ ಸಾವು–ನೋವುಗಳು ಯಾರ ಗಮನಕ್ಕೂ ಬರುವುದೇ ಇಲ್ಲ. ಗೊತ್ತಾದ ಪ್ರಕರಣಗಳಲ್ಲಷ್ಟೇ ಪ್ರಾಣಿಗಳ ಕಳೇಬರ ಗುರುತಿಸಿ ಅಂತ್ಯಕ್ರಿಯೆ ನಡೆಸುತ್ತೇವೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಸಂಪರ್ಕ ಸೇತು:

ಕರ್ನಾಟಕವು ಉತ್ಕೃಷ್ಟ ಅರಣ್ಯ, ವನ್ಯಜೀವಿ ಹಾಗೂ ಜಲ ಸಂಪತ್ತನ್ನು ಹೊಂದಿದೆ. ದೇಶದ ಶೇ 25ರಷ್ಟು ಆನೆ ಸಂತತಿ ಮತ್ತು ಶೇ 18ರಷ್ಟು ಹುಲಿ ಸಂತತಿ ರಾಜ್ಯದಲ್ಲಿದೆ. 5 ರಾಷ್ಟ್ರೀಯ ಉದ್ಯಾನವನಗಳು, 30 ವನ್ಯಜೀವಿ ಅಭಯಾರಣ್ಯಗಳು, 16 ಸಂರಕ್ಷಿತ / ಸಮುದಾಯ ಮೀಸಲು ಅರಣ್ಯಗಳನ್ನು ಒಳಗೊಂಡಂತೆ ಶೇ 25ರಷ್ಟು ಅರಣ್ಯ ಪ್ರದೇಶವನ್ನು ವನ್ಯಜೀವಿ ಮತ್ತು ಜೀವವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. ಅರಣ್ಯಗಳಲ್ಲಿ ಸಾಗಿರುವ ಹೆದ್ದಾರಿ ಅಥವಾ ರಸ್ತೆಗಳು ಸ್ಥಳೀಯ ಜನವಸತಿ ಪ್ರದೇಶ ಅಥವಾ ನೆರೆಯ ರಾಜ್ಯಗಳಿಗೆ ಸಂಪರ್ಕ ಸೇತುವಾಗಿವೆ.

ಅರಣ್ಯದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ವಾಹನ ಅಪಘಾತಕ್ಕೆ ಬಲಿಯಾಗಿರುವ ಚಿರತೆ

ರಾಜ್ಯದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳಾದ ಬನ್ನೇರುಘಟ್ಟ, ಅಣಶಿ, ಕುದುರೆಮುಖ ಹಾಗೂ 5 ಹುಲಿ ಸಂರಕ್ಷಿತ ಪ್ರದೇಶಗಳಾದ ಕಾಳಿ, ಭದ್ರಾ, ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಸ್ಥಳೀಯ ರಸ್ತೆಗಳು ಹಾದು ಹೋಗಿವೆ. ದೇಶದ ಏಕೈಕ ರಣಹದ್ದು ಅಭಯಾರಣ್ಯವಾದ ರಾಮನಗರದ ರಾಮದೇವರ ಬೆಟ್ಟದ ಸುತ್ತಲಿನ ಪರಿಸರ ಸೂಕ್ಷ್ಮವಲಯ ಪ್ರದೇಶವೂ ಹೆದ್ದಾರಿಯಿಂದ ಮುಕ್ತವಾಗಿಲ್ಲ.

ವೇಗದ ಮಿತಿ ಲೆಕ್ಕಕ್ಕಿಲ್ಲ: 

ರಾಷ್ಟ್ರೀಯ ಉದ್ಯಾನವನ, ವನ್ಯಜೀವಿಧಾಮ, ಹುಲಿ ಸಂರಕ್ಷಿತ ಪ್ರದೇಶ, ಅಭಯಾರಣ್ಯಗಳಲ್ಲಿರುವ ರಸ್ತೆಗಳಲ್ಲಿ ವಾಹನಗಳ ವೇಗಕ್ಕೆ ಪ್ರತಿ ಗಂಟೆಗೆ 30ರಿಂದ 40 ಕಿ.ಮೀ. ದಾಟುವಂತಿಲ್ಲ. ವಾಹನಗಳ ವೇಗ ಕಡಿಮೆ ಇದ್ದಾಗ ಪ್ರಾಣಿ ಅಡ್ಡಬಂದು ಡಿಕ್ಕಿ ಹೊಡೆದರೂ ಅವುಗಳು ಸಾವಿನಿಂದ ಪಾರಾಗಬಹುದು ಎಂಬ ಉದ್ದೇಶಕ್ಕೆ ವೇಗಕ್ಕೆ ಮಿತಿ ಹೇರಲಾಗಿದೆ. ದಾರಿಯುದ್ದಕ್ಕೂ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದರೂ, ವಾಹನ ಚಾಲಕರಿಗೆ ವೇಗದ ಮಿತಿ ಲೆಕ್ಕಕ್ಕಿಲ್ಲವಾಗಿದೆ. ಹಾಗಾಗಿಯೇ, ಅಪರಿಚಿತ ವಾಹನಕ್ಕೆ ಸಿಲುಕಿ ಪ್ರಾಣಿ ಸಾವು ಎಂಬುದು ಸುದ್ದಿಯಾಗುತ್ತಿದೆಯೇ ಹೊರತು, ಡಿಕ್ಕಿ ಹೊಡೆದವರ ವಿರುದ್ದ ಕಾನೂನು ಕ್ರಮ ಕೈಗೊಂಡ ನಿದರ್ಶನ ಅತಿ ವಿರಳ.

‘ಅಪಘಾತಗಳು ಸಾಮಾನ್ಯವಾಗಿ ಬೆಳಗಿನ ಜಾವ ಇಲ್ಲವೇ ರಾತ್ರಿ ಸಂಭವಿಸುತ್ತಿವೆ. ಹೀಗಾಗಿ ಅಪಘಾತ ಮಾಡಿದ ವಾಹನಗಳ ಪತ್ತೆ ಸಾಧ್ಯವಾಗಿಲ್ಲ. ಅಪಘಾತ ತಪ್ಪಿಸಲು ವನ್ಯಜೀವಿ ವಲಯದಲ್ಲಿ ವಾಹನಗಳಿಗೆ ವೇಗಮಿತಿ ನಿಗದಿಪಡಿಸಿದ್ದೇವೆ. ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಹಾಕಲಾಗಿದೆ’ ಎಂದು ಶಿವಮೊಗ್ಗ ವನ್ಯಜೀವಿ ವಲಯದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ಹೇಳಿದರು.

ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಹಾವಿನ ಮೇಲೆ ವಾಹನ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿರುವ ಹಾವು

ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ–ಸಾಗರ ಮೂಲಕ ಬೆಂಗಳೂರು–ಹೊನ್ನಾವರ ನಡುವಿನ ರಾಷ್ಟ್ರೀಯ ಹೆದ್ದಾರಿ, ಶಿವಮೊಗ್ಗ–ತೀರ್ಥಹಳ್ಳಿ ಮೂಲಕ ಮಲ್ಪೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಹಾಗೂ ಶಿವಮೊಗ್ಗ–ಹೊಸನಗರ–ಬೈಂದೂರು ನಡುವಿನ ರಾಷ್ಟ್ರೀಯ ಹೆದ್ದಾರಿಗಳಿವೆ. ಈ ಹಾದಿಯಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯ, ಜೋಗ ಸಮೀಪ ಸಿಂಗಳೀಕ ಅಭಯಾರಣ್ಯ, ಶರಾವತಿ ವನ್ಯಧಾಮ, ಆಗುಂಬೆ ಬಳಿಯ ಮೂಕಾಂಬಿಕಾ ವನ್ಯಜೀವಿಧಾಮಗಳಿದ್ದು, ಕಾಡು ಪ್ರಾಣಿಗಳ ನಿರಂತರ ಓಡಾಟ ಸಾಮಾನ್ಯವಾಗಿದೆ. ಆದರೆ ಹೆದ್ದಾರಿಯಲ್ಲಿನ ವಾಹನಗಳ ವೇಗ ಪ್ರಾಣಿಗಳ ನಿದ್ದೆಗೆಡಿಸಿದೆ. ಅಪಘಾತಗಳಿಗೆ ಜಿಂಕೆಯಾದಿಯಾಗಿ ವಿವಿಧ ಪ್ರಾಣಿಗಳು ಬಲಿಯಾಗುತ್ತಿವೆ.

ಆವಾಸಸ್ಥಾನ ವಿಸ್ತರಣೆ: 

ಅರಣ್ಯ ಪ್ರದೇಶವನ್ನು ಅಭಿವೃದ್ಧಿಯ ಭೂತ ಪ್ರವೇಶಿಸಿದಂತೆ ವನ್ಯಜೀವಿಗಳ ಆವಾಸಸ್ಥಾನ ಅರಣ್ಯದಾಚೆಗೆ ಹಿಗ್ಗುತ್ತಿದೆ. ಮತ್ತೊಂದೆಡೆ ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿದೆ. ರಾಷ್ಟ್ರೀಯ ಉದ್ಯಾನವನಗಳಲ್ಲಿ ಹುಲಿ ಸಾಂದ್ರತೆಯ ಹೆಚ್ಚಳ ಹಾಗೂ ಅಭಿವೃದ್ಧಿ ಒತ್ತಡ, ಹೊಸ ಆವಾಸಸ್ಥಳಗಳ ಹುಡುಕಾಟದ ಒತ್ತಡಕ್ಕೆ ಅವುಗಳನ್ನು ಸಿಲುಕಿಸಿವೆ. ಹುಲಿ ಸಂರಕ್ಷಿತಾರಣ್ಯಗಳಾದ ಬಂಡೀಪುರ ಮತ್ತು ನಾಗರಹೊಳೆಯಿಂದ ಮೈಸೂರು ನಗರ ಸುಮಾರು 60 ಕಿ.ಮೀ. ದೂರವಿದ್ದರೂ, ಕಳೆದ ವರ್ಷ ನಗರದಿಂದ ಕೇವಲ ಐದು ಕಿ.ಮೀ. ದೂರದಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿ ಹುಲಿಯೊಂದು ಕಾರಿಗೆ ಬಲಿಯಾಗಿತ್ತು. ಆವಾಸಸ್ಥಾನಕ್ಕೆ ಸೂಕ್ತವಲ್ಲದ ಪ್ರದೇಶಗಳತ್ತಲೂ ಹುಲಿಗಳು ಬರುತ್ತಿವೆ. ಸಣ್ಣ ಪುಟ್ಟ ಕಿರು ಅರಣ್ಯಗಳನ್ನು ಹಾದು ಹೋಗಿರುವ ಹೆದ್ದಾರಿಗಳನ್ನು ದಾಟಿಯೇ ವನ್ಯಜೀವಿಗಳು ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿವೆ ಎನ್ನುವುದು ಪರಿಸರವಾದಿಗಳ ಪ್ರತಿಪಾದನೆ.

ವಾಹನ ಸಂಚಾರ ನಿರ್ಬಂಧ:

ಶೇ 60ರಷ್ಟು ಅರಣ್ಯವೇ ಇರುವ ಚಾಮರಾಜನಗರ ಜಿಲ್ಲೆಯು ಕೇರಳ ಹಾಗೂ ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಗುಂಡ್ಲುಪೇಟೆ ತಾಲ್ಲೂಕಿನಲ್ಲಿದ್ದು, ಈ ಮಾರ್ಗದ ಮೂಲಕ ತಮಿಳುನಾಡು ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಿವೆ. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ಧಾರಿ ಸಂಖ್ಯೆ–766 ಬಂಡೀಪುರದ ಕಾಡಿನೊಳಗೆ 12 ಕಿ.ಮೀ. ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ 766 ಮೂಲಕ ಬಂಡೀಪುರದ ಅರಣ್ಯದೊಳಗೆ 30 ಕಿ.ಮೀ. ಸಾಗಿದರೆ ಕೇರಳ ಚೆಕ್‌ಪೋಸ್ಟ್ ಸಿಗುತ್ತದೆ. ಇಲ್ಲಿನ ಮುಖ್ಯ ಹೆದ್ದಾರಿಗಳು ಬಹುತೇಕ ಅರಣ್ಯ ಪ್ರದೇಶದೊಳಗೆ ಹಾದು ಹೋಗಿರುವುದರಿಂದ ಮೂರು ರಾಜ್ಯಗಳು ರಾತ್ರಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿವೆ. ರಾತ್ರಿ ವಾಹನ ಓಡಾಟವಿದ್ದಾಗ ಕಾಡುಪ್ರಾಣಿಗಳ ಸಾವು ನಿರಂತರವಾಗಿತ್ತು. ಇದೀಗ, ರಾತ್ರಿ ಸಂಚಾರ ನಿರ್ಬಂಧ ತೆರವುಗೊಳಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಅರಣ್ಯದಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ವಾಹನ ಅಪಘಾತಕ್ಕೆ ಬಲಿಯಾಗಿರುವ ಕರಡಿ

ಕೊಳ್ಳೇಗಾಲದಿಂದ ಹನೂರು ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ–79, ಕಾವೇರಿ ಮತ್ತು ಮಲೆಮಹದೇಶ್ವರ ವನ್ಯದಾಮಗಳ ಮಧ್ಯೆ ಹಾದು ಹೋಗುತ್ತದೆ. ಮಧುವನಹಳ್ಳಿಯಿಂದ ತಮಿಳುನಾಡಿನ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ–38 ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಅರ್ಧನಾರಿಪುರ ಮೂಲಕ ಹಾದು ಹೋಗುತ್ತದೆ. ಚಾಮರಾಜನಗರದ ಅಟ್ಟುಗೂಳಿಪುರದಿಂದ ಪುಣಜನೂರು ಚೆಕ್‌ಪೋಸ್ಟ್‌ವರೆಗೆ 20 ಕಿ.ಮೀ. ರಸ್ತೆ ಕಾಡಿನೊಳಗೆ ಹಾದು ಹೋಗುತ್ತದೆ.

ಸುಪ್ರೀಂ ಅಂಗಳ ತಲುಪಿದ್ದ ಆದೇಶ: 

ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅರ್ಧನಾರಿಪುರ – ಸತ್ಯಮಂಗಲ  ರಸ್ತೆಯಲ್ಲಿ ಪ್ರಾಣಿಗಳು ವಾಹನಗಳಿಗೆ ಬಲಿಯಾಗುತ್ತಿದ್ದುದ್ದರಿಂದ ತಮಿಳುನಾಡಿನ ಈರೋಡ್ ಜಿಲ್ಲಾಧಿಕಾರಿ ರಾತ್ರಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದರು. ಇದನ್ನು ಪ್ರಶ್ನಿಸಿ ಲಾರಿ ಮಾಲೀಕರ ಸಂಘವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಸುಪ್ರೀಂ ಕೋರ್ಟ್ ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿದ್ದರಿಂದ ವನ್ಯಜೀವಿಗಳ ಸಾವಿಗೆ ಬ್ರೇಕ್ ಬಿತ್ತು. ಇದರ ಬೆನ್ನಲ್ಲೆ ಹುಣಸೆಪಾಳ್ಯ ಬಳಿ ಚಿರತೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಗಿನ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಚೆಕ್‌ಪೋಸ್ಟ್‌ಗಳಲ್ಲಿ ರಾತ್ರಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದರು. ಆದರೂ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ದಿನಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ರಾತ್ರಿಯಿಡೀ ವಾಹನಗಳ ಸಂಚರಿಸುತ್ತಿರುವುದರಿಂದ ವನ್ಯಪ್ರಾಣಿಗಳು ವಾಹನಗಳಿಗೆ ಸಿಲುಕಿ ಸಾವೀಗೀಡಾಗುತ್ತಲೇ ಇವೆ.‌

ನಿಯಂತ್ರಣಕ್ಕೆ ರಸ್ತೆ ಉಬ್ಬು: 

ಮಡಿಕೇರಿಗೆ ಹೊಂದಿಕೊಂಡಂತಿರುವ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಮತ್ತಿಗೋಡು ಆನೆ ಶಿಬಿರದ ಸಮೀಪ 2018ರ ಅ. 8ರಂದು ನಸುಕಿನಲ್ಲಿ ‘ರಂಗ’ ಹೆಸರಿನ ಆನೆ ರಸ್ತೆ ದಾಟುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿತ್ತು. ಅದಕ್ಕೂ ಮುಂಚೆ ಆನೆ ಚೌಕೂರು ವಲಯದಲ್ಲಿ ಕಾಡೆಮ್ಮೆ ವಾಹನಕ್ಕೆ ಬಲಿಯಾಯಿತು. ಈ ಘಟನೆಗಳ ಬೆನ್ನಲ್ಲೇ, ಈ ಮಾರ್ಗದಲ್ಲಿ 500 ಮೀಟರ್‌ಗೆ ಒಂದರಂತೆ ರಸ್ತೆ ಉಬ್ಬು ಹಾಕಲಾಯಿತು. ಅಪಘಾತಗಳು ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಆದರೆ, ವಾಹನಗಳ ಮೇಲೆ ಕಾಡಾನೆ ದಾಳಿ ಆಗಾಗ ನಡೆಯುತ್ತಿರುತ್ತದೆ.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ವರ್ತುಲ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಪುನುಗು ಬೆಕ್ಕು 

ಕೊಡಗಿನಲ್ಲಿ ಹಾದು ಹೋಗಿರುವ ಏಕೈಕ ರಾಷ್ಟ್ರೀಯ ಹೆದ್ದಾರಿ– 275 ವಿಸ್ತರಿಸುವ ಕುರಿತ ಚರ್ಚೆಗಳು ನಡೆದಿವೆ. ಒಂದು ವೇಳೆ ವಿಸ್ತರಣೆಯಾದರೆ ಕುಶಾಲನಗರದಿಂದ ಸಂಪಾಜೆವರೆಗೂ ರಸ್ತೆ ಚತುಷ್ಪಥವಾಗಲಿದೆ. ಮತ್ತೊಂದೆಡೆ, ಕೇರಳ ಸಂಪರ್ಕಿಸುವ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವವನ್ನು ರಾಜ್ಯ ಸರ್ಕಾರ 2018ರಲ್ಲೇ ಕೇಂದ್ರಕ್ಕೆ ಕಳುಹಿಸಿದೆ. ಅರಕಲಗೂಡು– ಸೋಮವಾರಪೇಟೆ– ಮಡಿಕೇರಿ– ವಿರಾಜಪೇಟೆ– ಮಾಕುಟ್ಟ ಮೂಲಕ ಕೇರಳ ಸಂಪರ್ಕಿಸುವ ಅಂತರರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೇಗೇರಿಸಲು ಡಿಪಿಆರ್ ಸಲ್ಲಿಕೆಯಾಗಿದೆ. ಇದು ವನ್ಯಜೀವಿಗಳಿಗೆ ಬಹಳ ದೊಡ್ಡ ಆಪತ್ತನ್ನು ತರುವ ಸಾಧ್ಯತೆ ಇದೆ. 

ಕೇರಳ ಸಂಪರ್ಕಿಸುವ ಮತ್ತೊಂದು ರಾಜ್ಯ ಹೆದ್ದಾರಿ ಮಡಿಕೇರಿ– ಪಣತ್ತೂರು ರಸ್ತೆಯನ್ನೂ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವ ಕೇಂದ್ರದ ಮುಂದಿದೆ. ಒಂದು ವೇಳೆ ಈ ಎರಡೂ ಪ್ರಸ್ತಾವಗಳಿಗೆ ಕೇಂದ್ರ ಅಸ್ತು ಎಂದರೆ ಈ ರಸ್ತೆಗಳಲ್ಲಿ ಹೆಚ್ಚಿನ ವಾಹನಗಳು ಸಂಚರಿಸುವುದು ನಿಶ್ಚಿತ. ಈಗಾಗಲೇ ಬಂಡೀಪುರ ಭಾಗದಲ್ಲಿ ರಾತ್ರಿ ಸಂಚಾರ ನಿಷೇಧವಾಗಿರುವುದರಿಂದ ಈ ಭಾಗದಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿವೆ. ಈ ಯೋಜನೆಗಳಲ್ಲಿ ವನ್ಯಜೀವಿ ಕಾರಿಡಾರ್‌ ನಿರ್ಲಕ್ಷ್ಯಿಸಿದರೆ ವನ್ಯಜೀವಿಗಳ ಪ್ರಾಣಕ್ಕೆ ಮತ್ತಷ್ಟು ಸಂಚಕಾರ ಬರಲಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಶೇ 12ರಷ್ಟು ಸಾವು:

ಉತ್ತರ ಕನ್ನಡ ಜಿಲ್ಲೆಯು ಶೇ 80ರಷ್ಟು ಅರಣ್ಯ ಭೂಮಿಯಿದ್ದರೂ ಇಲ್ಲಿನ ಹೆದ್ದಾರಿಗಳಲ್ಲಿ ವಾಹನ ಅಪಘಾತಕ್ಕೆ ತುತ್ತಾಗುವ ವನ್ಯಜೀವಿಗಳ ಸಂಖ್ಯೆ ವಾರ್ಷಿಕವಾಗಿ ಸರಾಸರಿ 12ರಷ್ಟಿದೆ. ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಹಾದು ಹೋಗಿರುವ ಸದಾಶಿವಗಢ–ಔರಾದ್ ರಾಜ್ಯ ಹೆದ್ದಾರಿಯಲ್ಲೇ ಅಪಘಾತ ಹೆಚ್ಚು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಶೇ 85ರಷ್ಟು ಅರಣ್ಯ ವ್ಯಾಪಿಸಿದ್ದು, ಕರ್ನಾಟಕ– ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಯನ್ನೂ ಸಂದಿಸುತ್ತದೆ. ಈ ತಾಲ್ಲೂಕೊಂದರಲ್ಲೇ ಒಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಐದು ರಾಜ್ಯ ಹೆದ್ದಾರಿಗಳು ಅರಣ್ಯದ ಮೂಲಕ ಹಾದು ಹೋಗಿವೆ. ಇಲ್ಲಿ ವನ್ಯಜೀವಿಗಳು ಅಪಘಾತಕ್ಕೀಡಾಗುವುದು ತೀರಾ ಕಡಿಮೆ.

ಮೈಸೂರು ವಿಮಾನ ನಿಲ್ದಾಣದ ಬಳಿ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದ ಹುಲಿ

‘ವನ್ಯಜೀವಿಗಳು ಅಪಘಾತಕ್ಕೆ ಉಂಟಾಗುವುದನ್ನು ತಪ್ಪಿಸಲು ಹೆದ್ದಾರಿಯಲ್ಲಿ ಅಲ್ಲಲ್ಲಿ ನಿಧಾನವಾಗಿ ಚಲಿಸುವಂತೆ ಎಚ್ಚರಿಸುವ ಫಲಕ ಅಳವಡಿಸಲಾಗಿದೆ. ದಟ್ಟ ಅರಣ್ಯದ ನಡುವೆ ಹಾದುಹೋದ ಭಗವತಿ–ಕುಳಗಿ ರಸ್ತೆ, ಕ್ಯಾಸಲ್‍ರಾಕ್–ಭೀಮಗಡ ರಸ್ತೆಯಲ್ಲಿ ಸಂಜೆ 6 ರಿಂದ ಮುಂಜಾನೆ 6 ಗಂಟೆವರೆಗೆ ಸಂಚಾರ ನಿಷೇಧಿಸಲಾಗುತ್ತಿದೆ. ಹೀಗಾಗಿ ಅಪಘಾತ ಕಡಿಮೆಯಾಗಿದೆ’ ಎಂದು ಕಾಳಿ ಹುಲಿ ಸಂರಕ್ಷಿತಾರಣ್ಯದ ಡಿಸಿಎಫ್ ನೀಲೇಶ ಶಿಂಧೆ ಕಾರಣವನ್ನು ತಿಳಿಸಿದರು.

ಬೆಳಗಾವಿ– ಪಣಜಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸಿಂಧನೂರು– ಹೆಮ್ಮಡಗಾ, ಬೆಳಗಾವಿ– ಚೋರ್ಲಾ, ನಾಗರಗಾಳಿ– ಕಡಕೋಳ, ಚಾಂಬೋಟಿ– ಜತ್ತ, ಧಾರವಾಡ– ರಾಮನಗರ ರಾಜ್ಯ ಹೆದ್ದಾರಿಗಳು ಅರಣ್ಯದಲ್ಲಿವೆ. ಅದರಲ್ಲೂ ಸಿಂಧನೂರು– ಹೆಮ್ಮಡಗಾ ರಾಜ್ಯ ಹೆದ್ದಾರಿ ಭೀಮಗಡ ದಟ್ಟಾಣ್ಯದಲ್ಲೇ ಹಾದು ಹೋಗಿದೆ. 2019ರಲ್ಲಿ ಈ ಹೆದ್ದಾರಿಯ ಮೇಲೆ ಒಂದು ಹುಲಿ ತನ್ನ ಮರಿಗಳ ಜತೆಗೆ ವಿಹರಿಸುತ್ತಿರುವುದು ಅರಣ್ಯ ಇಲಾಖೆಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಂದಿನಿಂದ ಈ ಮಾರ್ಗದಲ್ಲಿ ರಾತ್ರಿ 6ರಿಂದ ಬೆಳಿಗ್ಗೆ 6ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಆವಾಸಸ್ಥಾನ ವಿಭಜನೆ:

ಚಿಕ್ಕಮಗಳೂರಿನ ಪಶ್ಚಿಮ ಘಟ್ಟದಿಂದ ಕರಾವಳಿಗೆ ಸಂಪರ್ಕಿಸುವ ಘಾಟಿಗಳಲ್ಲಿ ವನ್ಯಜೀವಿಗಳ ಆವಾಸವನ್ನು ಹೆದ್ದಾರಿಗಳು ವಿಭಜಿಸಿವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ 2 ಹೆದ್ದಾರಿ ಹಾದು ಹೋಗಿವೆ. ಶೃಂಗೇರಿಯಿಂದ ಕೆರೆಕಟ್ಟೆ ಮೂಲಕ ಮಾಳ ಮೂಲಕ ಮಂಗಳೂರು ತಲುಪುವ ರಾಷ್ಟ್ರೀಯ ಹೆದ್ದಾರಿ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 45 ಕಿ.ಮೀ. ಹಾದು ಹೋಗಿದೆ. ಎಸ್.ಕೆ.ಬಾರ್ಡರ್‌ನಿಂದ ಕಳಸ ತಲುಪುವ ಮುಖ್ಯರಸ್ತೆಯು ಕುದುರೆಮುಖ ಉದ್ಯಾನದಲ್ಲಿ 31 ಕಿ.ಮೀ. ಹಾದು ಹೋಗುತ್ತಿದೆ. ಈ ಎರಡೂ ರಸ್ತೆಯಲ್ಲಿ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿಕೊಂಡಿದೆ. ಪಾಸ್‌ಗಳನ್ನು ನೀಡಿ ವಾಹನಗಳನ್ನು ಮಧ್ಯದಲ್ಲಿ ನಿಲ್ಲಿಸದಂತೆ ನೋಡಿಕೊಳ್ಳುತ್ತಿದೆ. ಆದರೂ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಸಾಯುತ್ತಿವೆ.

ಬಂಡೀಪುರದಲ್ಲಿ ಲಾರಿ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದ ಕಾಡಾನೆ

ಮಂಗಳೂರಿನಿಂದ ಮೈಸೂರು ಸಂಪರ್ಕಿಸುವ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಬಳಿ ವನ್ಯಜೀವಿ ಓಡಾಟ ಇದೆ. ಹಾಸನದಿಂದ ಸಾಗುವ ಶಿರಾಡಿ ಘಾಟಿಯಲ್ಲಿ ಗುಂಡ್ಯ, ಅಡ್ಡಹೊಳೆಗಳ ಬಳಿಯೂ ವನ್ಯಜೀವಿಗಳ ಓಡಾಟವನ್ನು ರಾಷ್ಟ್ರೀಯ ಹೆದ್ದಾರಿ ಸೀಳಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಿಸುವ ಚಾರ್ಮಾಡಿ ಘಾಟಿ ಕೂಡ ರಾಷ್ಟ್ರೀಯ ಹೆದ್ದಾರಿಯಾಗಿದೆ. ಬೆಂಗಳೂರು–ಮಂಗಳೂರು ನಡುವಣ ರಾಷ್ಟ್ರೀಯ ಹೆದ್ದಾರಿ–75 ಶಿರಾಡಿ ಘಾಟಿ ಮಾರ್ಗವಾಗಿ ಹಾದು ಹೋಗಿದೆ. ಉಡುಪಿ ಜಿಲ್ಲೆಯ ಮೂರು ಕಡೆಗಳಲ್ಲಿ ವಾಹನ ಮತ್ತು ವನ್ಯಜೀವಿ ಸಂಚಾರ ಒಟ್ಟಿಗೇ ಇದೆ. ಮೂಕಾಂಬಿಕ ಅಭಯಾರಣ್ಯದಲ್ಲಿ ಎರಡು ರಸ್ತೆಗಳು ಹಾದು ಹೋಗುತ್ತವೆ. ಬೈಂದೂರು–ಕೊಲ್ಲೂರು, ಕೊಲ್ಲೂರು–ಕುಂದಾಪುರ ಹೆದ್ದಾರಿಗಳು ಹಾದು ಹೋಗಿವೆ. ಇಲ್ಲಿ ಕಡವೆ ಸೇರಿ ಹಲವು ವನ್ಯಜೀವಿಗಳ ಓಡಾಟ ಇದೆ. ಸೋಮೇಶ್ವರ ಅಭಯಾರಣ್ಯದಲ್ಲಿ ಆಗುಂಬೆ ಘಾಟಿ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ಸಂಪರ್ಕಿಸುವ ಹೆದ್ದಾರಿ ಹಾದು ಹೋಗಿದೆ.

ಬೆಂಗಳೂರಿಗೆ ಹೊಂದಿಕೊಂಡಂತಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬನ್ನೇರುಘಟ್ಟ ವನ್ಯಜೀವಿ ವಲಯವು ಮುತ್ತತ್ತಿ ಮೂಲಕ ಬಿಳಿಗಿರಿರಂಗನ ಬೆಟ್ಟಕ್ಕೂ, ಹಾರೋಹಳ್ಳಿ, ಮಾಗಡಿ ಮೂಲಕ ಕಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಕನಕಪುರ– ಮಹದೇಶ್ವರಬೆಟ್ಟದ ಮೂಲಕ ತಮಿಳುನಾಡಿನ ಬನ್ನಾರಿಯಮ್ಮ ಪ್ರದೇಶವನ್ನು ಸಂಪರ್ಕಿಸುತ್ತದೆ. ಬೆಂಗಳೂರು ಮೈಸೂರಿನ ಹೆದ್ದಾರಿ ಸಹ ವನ್ಯಜೀವಿ ಕಾರಿಡಾರ್‌ಗಳನ್ನು ಛಿದ್ರಮಾಡಿವೆ. ಯೋಜನೆ ಮಾಡುವಾಗ ಹೇಳಿದ್ದಕ್ಕು ನಂತರ ಕಾರ್ಯರೂಪಕ್ಕೆ ಬಂದ ರಸ್ತೆಗೂ ಸಂಬಂಧವೇ ಇಲ್ಲ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ. ಈ ರಸ್ತೆಗಳಲ್ಲಿ ಪ್ರಾಣಿಗಳ ಓಡಾಟಕ್ಕೆ ಕಿಂಚಿತ್ತು ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿಲ್ಲ. 

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ನುಜ್ಜಿ ಸಮೀಪ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯಲ್ಲಿ ವಾಹನ ಅಪಘಾತದಿಂದ ಜಿಂಕೆ ಮೃತಪಟ್ಟಿರುವುದು (ಸಂಗ್ರಹ ಚಿತ್ರ)

‘ಯುರೋಪ್‌ನ ದೇಶಗಳಲ್ಲಿ ಹೆದ್ದಾರಿಗಳಲ್ಲಿ ಪ್ರಾಣಿಗಳ ಕಾರಿಡಾರ್‌ ಇದ್ದರೆ ವಿಶಾಲವಾದ ಮೇಲ್ಸೆತುವೆ ಮೇಲೆ ಕಾಡನ್ನೇ ಸೃಷ್ಟಿಸಿರುತ್ತಾರೆ. ಇಲ್ಲಿ ಕಾಡಿನ ಜೀವಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಪೆಂಚ್ ಮತ್ತು ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಣಿಗಳ ಕೆಳಸೇತುವೆ, ಅಸ್ಸಾಂನಲ್ಲಿ ಆನೆಗಳಿಗೆ ಕಾರಿಡಾರ್‌ ಮಾಡಿದಂತೆ ರಾಜ್ಯದಲ್ಲೂ ಮಾಡಬೇಕಿತ್ತು‘ ಎನ್ನುತ್ತಾರೆ ಪರಿಸರಕ್ಕಾಗಿ ನಾವು ಸಂಘಟನೆಯ ಆಂಜನೇಯ ರೆಡ್ಡಿ ನೀರಾವರಿ.

‘ಜೀವ ಪರಿಸರದ ಸಮಗ್ರತೆಗೆ ಧಕ್ಕೆ’

ಹೆದ್ದಾರಿಗಳಲ್ಲಿ ಕಾಡುಜೀವಿಗಳು ಅಪಘಾತಕ್ಕೀಡಾಗುವ ಮಾಹಿತಿಯಷ್ಟೇ ನಮಗೆ ಲಭ್ಯವಾಗುತ್ತಿದೆ. ಆದರೆ ಅದರ ಪರಿಣಾಮಗಳು ಗ್ರಹಿಕೆಗೆ ನಿಲುಕದಷ್ಟು ಗಂಭೀರವಾಗಿವೆ. ಊರು–ಕೇರಿಗಳನ್ನು ಸೀಳುವ ಈ ಹೆದ್ದಾರಿಗಳು ಅಲ್ಲಿನ ಜನರ ಬದುಕು ಮತ್ತು ಜೀವ ಪರಿಸರವನ್ನು ದ್ವಂಸಗೊಳಿಸುತ್ತವೆ. ಅಲ್ಲಿ ನೆಲೆಸಿರುವ ಜೀವಿಗಳ ನಡುವೆ ಸಂವಾದಕ್ಕೆ ಗೋಡೆ ನಿರ್ಮಿಸುತ್ತವೆ. ಕಾಲಾಂತರದಿಂದ ಹರಿಯುತ್ತಿದ್ದ ಹಳ್ಳ–ಕೊಳ್ಳಗಳು ತಮ್ಮ ಜಾಡು ಬದಲಿಸಿ ಯೋಜನೆಗಳ ನಕ್ಷೆಗೆ ಅನುಗುಣವಾಗಿ ಚಲಿಸಬೇಕು. ಇದು ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳನ್ನು ಅಸ್ತವ್ಯಸ್ತಗೊಳಿಸುವುದಲ್ಲದೆ ಅಂತರ್ಜಲದ ಜೀವಂತಿಕೆಗೂ ಮಾರಕವಾಗುತ್ತಿದೆ. ಒಟ್ಟಾರೆಯಾಗಿ ಈ ಹೆದ್ದಾರಿಗಳು ಪ್ರಗತಿಯ ಹೆಸರಿನಲ್ಲಿ ಸ್ಥಳೀಯರ ಬದುಕನ್ನು ಅಳಿದುಳಿದ ಜೀವ ಪರಿಸರದ ಸಮಗ್ರತೆಗೆ ಧಕ್ಕೆಯುಂಟು ಮಾಡುತ್ತಿವೆ’ ಎನ್ನುತ್ತಾರೆ ಪರಿಸರವಾದಿ ಕೃಪಾಕರ.

‘ಎನ್‌ಎಚ್‌ಎಐ ಹೇಳಿದ್ದೊಂದು ಮಾಡಿದ್ದೊಂದು‘

‘ಬೆಂಗಳೂರು–ಮೈಸೂರು ಹೆದ್ದಾರಿಗೆ ರಣಹದ್ದು ಅಭಯಾರಣ್ಯ ವ್ಯಾಪ್ತಿಯ ಪರಿಸರ ಸೂಕ್ಷ್ಮವಲಯ ಸೇರಿದಂತೆ 20.18 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆಯಾಗಿದೆ. ವನ್ಯಜೀವಿಗಳ ಓಡಾಟಕ್ಕೆ ಧಕ್ಕೆಯಾಗದಂತೆ ಓವರ್‌ಪಾಸ್ ಮತ್ತು ಅಂಡರ್‌ಪಾಸ್‌ ನಿರ್ಮಾಣ ಕುರಿತು ಎನ್‌ಎಚ್‌ಎಐ ನಮಗೆ ತೋರಿಸಿದ್ದ ನೀಲನಕ್ಷೆಗೂ ಈಗ ನಿರ್ಮಿಸಿರುವುದಕ್ಕೂ ವ್ಯತಿರಿಕ್ತವಾಗಿವೆ. ಹೆದ್ದಾರಿ ಉದ್ಘಾಟನೆಗೆ ಮುಂಚೆ ಪರಿಶೀಲಿಸಿದ್ದ ಡಿಐಜಿಎಫ್ (ಡೆಪ್ಯೂಟಿ ಡೈರೆಕ್ಟರ್ ಜನರಲ್ ಆಫ್ ಫಾರೆಸ್ಟ್) ವನ್ಯಜೀವಿಗಳ ಓಡಾಟಕ್ಕೆ ಪೂರಕ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಎನ್‌ಎಚ್‌ಎಐ ನಿರ್ಲಕ್ಷ್ಯಿಸಿದೆ. ನಾವು ಬರೆದ ಪತ್ರಕ್ಕೂ ಅಲ್ಲಿನ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ರಾಮನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ತಿಳಿಸಿದರು.

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುವುದಾಗಿ ಅರಣ್ಯ ಇಲಾಖೆಗೆ ಭರವಸೆ ನೀಡಿದ್ದ ವನ್ಯಜೀವಿ ಕಾರಿಡಾರ್ ಮಾದರಿ

118 ಕಿ.ಮೀ. ಉದ್ದದ ಹೆದ್ದಾರಿಯ ಎರಡೂ ಬದಿ ನಿರ್ಮಿಸಿರುವ ತಂತಿ ಬೇಲಿ ವನ್ಯಜೀವಿಗಳು ಜಾನುವಾರುಗಳು ಆಚೀಚೆ ಹೋಗದಂತೆ ತಡೆದಿದೆ. ಇದರಿಂದಾಗಿ ವನ್ಯಜೀವಿಗಳು ತಂತಿಬೇಲಿ ಏರಿ ಅಥವಾ ಮುರಿದು ಹೆದ್ದಾರಿ ದಾಟಲು ಯತ್ನಿಸಿ ವಾಹನಗಳಿಗೆ ಸಿಲುಕಿ ಸಾಯುತ್ತಿವೆ. ಅವುಗಳನ್ನು ತಿನ್ನಲು ಬರುವ ಹದ್ದು ಸೇರಿದಂತೆ ಇತರ ಪಕ್ಷಿಗಳು ಅಪಘಾತಕ್ಕೆ ಬಲಿಯಾಗುತ್ತಿವೆ. ವನ್ಯಜೀವಿಗಳು ರಸ್ತೆ ದಾಟಲು ಎನ್‌ಎಚ್‌ಎಐ ಮಂಡ್ಯ ಜಿಲ್ಲೆಯ ಕೆ. ಶೆಟ್ಟಿಹಳ್ಳಿ‌ ಬಳಿ ಅರ್ಧಂಬರ್ಧ ಮೇಲ್ಸೇತುವೆ ನಿರ್ಮಿಸಿದೆ.

ಆನೆಗಳಿಗಾಗಿ ಮೇಲ್ಸೇತುವೆ:

ಕನಕಪುರ–ಬೆಂಗಳೂರು ರಸ್ತೆಯ ದೇವಿಕಾ ರಾಣಿ ರೋರಿಚ್ ಎಸ್ಟೇಟ್ ಬಳಿ ರಸ್ತೆ ದಾಟುತ್ತಿದ್ದ ಕಾಡಾನೆಗೆ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿತ್ತು. ಇದರ ಬೆನ್ನಲ್ಲೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಡೆಯಿಂದ ಬರುವ ಆನೆಗಳು ಸಾವನದುರ್ಗ ಬೆಟ್ಟದ ಅರಣ್ಯ ಪ್ರದೇಶಕ್ಕೆ ಹೋಗಲು ಅನುವಾಗುವಂತೆ ಎನ್‌ಎಚ್‌ಎಐ ಓವರ್‌ಪಾಸ್‌ ಸೇತುವೆ ನಿರ್ಮಿಸಿದೆ. ಸೇತುವೆ ಸುತ್ತಮುತ್ತ ಗಿಡ–ಮರಗಳನ್ನು ನೆಟ್ಟಿದ್ದು ಆನೆಗಳಿಗೆ ಸ್ವಾಭಾವಿಕ ಮಾರ್ಗದಂತೆ ಕಾಣುವಂತೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಡಿಸಿಎಫ್ ರವೀಂದ್ರ ಕುಮಾರ್ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ. ಶೆಟ್ಟಿಹಳ್ಳಿ ಬಳಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ–27ರಲ್ಲಿ ವನ್ಯಜೀವಿಗಳ ಓಡಾಟಕ್ಕೆ ನಿರ್ಮಿಸಿರುವ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ

ರಸ್ತೆ ದಾಟಲು ಬೇಲಿಗೆ ಕತ್ತರಿಸಿದರು:

ಹೆದ್ದಾರಿಯುದ್ದಕ್ಕೂ ಇರುವ ಬೇಲಿ ಕಾರಣಕ್ಕೆ ಸ್ಥಳೀಯರು ರಸ್ತೆ ದಾಟಲು ಮತ್ತು ತಮ್ಮ ಜಾನುವಾರುಗಳನ್ನು ಮೇಯಿಸಲು ರಸ್ತೆ ದಾಟಲು ಕನಿಷ್ಠ ಮೂರ್ನಾಲ್ಕು ಕಿಲೋಮೀಟರ್ ಹೋಗಬೇಕು. ಹಾಗಾಗಿ ಕೆಲವರು ಬೇಲಿಯನ್ನೇ ಕತ್ತರಿಸಿ ಅಪಾಯ ಲೆಕ್ಕಿಸದೆ ಹೆದ್ದಾರಿ ಮಧ್ಯೆಯೇ  ತಮ್ಮ ಜೊತೆಗೆ ಜಾನುವಾರುಗಳನ್ನು ರಸ್ತೆ ದಾಟಿಸುವುದು ಸಾಮಾನ್ಯವಾಗಿದೆ.    

ವನ್ಯಜೀವಿಗಾಗಿ ದೇಶದ ಅತಿ ಉದ್ದದ ಕೆಳ ಸೇತುವೆ

ವಾಹನಗಳ ಜೊತೆಗೆ ವನ್ಯಜೀವಿಗಳ ಸಂಚಾರಕ್ಕೂ ಅನುವಾಗುವಂತಹ ಎಲಿವೇಟೆಡ್ ವನ್ಯಜೀವಿ ಕಾರಿಡಾರ್‌ ಅನ್ನು ರಾಷ್ಟ್ರೀಯ ಹೆದ್ದಾರಿ–44ರಲ್ಲಿ ಎನ್‌ಎಚ್‌ಎಐ ನಿರ್ಮಿಸಿದೆ. ಮಧ್ಯಪ್ರದೇಶದ ಸಿನೋಯ್‌ ಮತ್ತು ಮಹಾರಾಷ್ಟ್ರದ ನಾಗಪುರ ನಡುವಣ ಪೆಂಚ್ ಮತ್ತು ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 37 ಕಿ.ಮೀ. ಈ ಹೆದ್ದಾರಿ ಹಾದು ಹೋಗುತ್ತದೆ. ಈ ಮಾರ್ಗದಲ್ಲಿ 4 ಕೆಳ ಸೇತುವೆ ಮತ್ತು 5 ಸಣ್ಣ ಸೇತುವೆ ನಿರ್ಮಿಸಲಾಗಿದೆ. ಈ ಪೈಕಿ 2 ಕೆಳಸೇತುವೆ 750 ಮೀಟರ್‌ ಉದ್ದವಿದ್ದು ದೇಶವಷ್ಟೇ ಅಲ್ಲದೆ ವಿಶ್ವದ ಅತಿ ಉದ್ದದ ವನ್ಯಜೀವಿ ಅಂಡರ್‌ಪಾಸ್ ಎಂದು ಹೆಸರಾಗಿವೆ.

ಪೆಂಚ್ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿರ್ಮಿಸಿರುವ ಎಲಿವೆಟೇಡ್ ಕಾರಿಡಾರ್‌ನಲ್ಲಿ ವನ್ಯಜೀವಿಗಳು ರಸ್ತೆ ದಾಟುವುದಕ್ಕಾಗಿ ನಿರ್ಮಿಸಿರುವ ಕೆಳ ಸೇತುವೆ ಚಿತ್ರ ಕೃಪೆ: ಎನ್‌ಎಚ್‌ಎಐ

ವಾಹನಗಳ ಶಬ್ದದಿಂದ ವನ್ಯಜೀವಿಗಳಿಗೆ ತೊಂದರೆಯಾಗಬಾರದೆಂದು ಹೆದ್ದಾರಿಯುದ್ದಕ್ಕೂ ಶಬ್ದ ನಿರೋಧಕ ಗೋಡೆ ಅಳವಡಿಸಲಾಗಿದೆ. ವನ್ಯಜೀವಿಗಳ ಚಲನವಲನ ಸೆರೆಗೆ ಕ್ಯಾಮೆರಾಗಳನ್ನು ಅಳವಡಿಲಾಗಿದೆ. ಹೆದ್ದಾರಿ ಪೂರ್ಣಗೊಂಡ ಒಂದು ವರ್ಷದ ಬಳಿಕ 2019ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಇಲ್ಲಿನ ಕೆಳಸೇತುವೆಗಳಲ್ಲಿ ಹುಲಿ ಚಿರತೆ ಚುಕ್ಕಿ ಜಿಂಕೆ ಸೇರಿದಂತೆ 17 ಬಗೆಯ ಒಟ್ಟು 5381 ಪ್ರಾಣಿಗಳು ಹಾದು ಹೋಗಿರುವುದು ಕ್ಯಾಮೆರಾದಲ್ಲಿ ದಾಖಲಾಗಿತ್ತು. 2020ರಲ್ಲಿ ಈ ಸಂಖ್ಯೆ 16608 ತಲುಪಿತ್ತು ಎನ್ನುತ್ತವೆ ವರದಿಗಳು.

ಪೆಂಚ್ ರಾಷ್ಟ್ರೀಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿರ್ಮಿಸಿರುವ ಎಲಿವೆಟೇಡ್ ಕಾರಿಡಾರ್ ಚಿತ್ರ ಕೃಪೆ: ಎನ್‌ಎಚ್‌ಎಐ

ಅಸ್ಸಾಂನ ಆನೆ ಕಾರಿಡಾರ್‌ ಮಾದರಿ

ಪೆಂಚ್‌ ವನ್ಯಜೀವಿ ಕಾರಿಡಾರ್ ಯಶಸ್ಸಿನ ಬೆನ್ನಲ್ಲೇ ಅಸ್ಸಾಂನ ಲಮ್ಡಿಂಗ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ–54ರಲ್ಲಿ ಆನೆಗಳಿಗಾಗಿ 2 ಕೆಳಸೇತುವೆ ಮತ್ತು 2 ಸಣ್ಣ ಸೇತುವೆ ಹಾಗೂ ಉತ್ತರಾಖಂಡದ ಹೆದ್ದಾರಿ– 58 ಮತ್ತು 72ರಲ್ಲಿ 3 ಕೆಳ ಸೇತುವೆ ನಿರ್ಮಾಣವನ್ನು ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಅಸ್ಸಾಂನ ದಿಯೊಸೊರ್‌ನಲ್ಲಿ ಕಾಂಜಿರಂಗ ರಾಷ್ಟ್ರೀಯ ಉದ್ಯಾನದ ಬುರಾಪಹಾರ್ ವಲಯದಿಂದ ಪೊರ್ಕುಪಾ ಅರಣ್ಯ ವಲಯದವರೆಗೆ ಆನೆಗಳ ಓಡಾಟಕ್ಕೆ 4.4 ಕಿ.ಮೀ. ಉದ್ದ ಮತ್ತು 2.9 ಕಿ.ಮೀ. ಅಗಲದ ಕಾರಿಡಾರ್ ನಿರ್ಮಿಸಲಾಗಿದೆ. ಅದೇ ರೀತಿ ದುಲುಂಗ್–ಸಬನ್‌ಸಿರಿ ಕಾರಿಡಾರ್ ಧಿರಿಂಗ್ ದಿಬ್ರು ಸೈಕೋವ ಕಾಂಚನಗಿರಿ ಹಾಗೂ ಅಮುಗ್ರಿ ಕಾರಿಡಾರ್‌ ನಿರ್ಮಿಸಿ ಕಾಡಾನೆಗಳ ಸರಾಗ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ದೊಡ್ಡ ಪ್ರಾಣಿಗಳಾದರೆ ವಾಹನ ಸವಾರರಿಗೆ ಕಾಣಿಸುತ್ತವೆ. ಹಾವು ಓತಿಕ್ಯಾತ ಕಪ್ಪೆ ಸಿಂಗಳೀಕ ಸೇರಿ ಸಣ್ಣಪುಟ್ಟ ವನ್ಯಜೀವಿಗಳು ಲೆಕ್ಕಕ್ಕಿಲ್ಲವಾಗಿವೆ. ಇವು ಜೀವವೈವಿದ್ಯತೆಗೆ ಕೊಡುಗೆ ನೀಡುತ್ತಿಲ್ಲವೇ ಇವುಗಳನ್ನು ನಾವು ರಕ್ಷಣೆ ಮಾಡಬೇಕಲ್ಲವೆ?.
ಡಿ.ವಿ. ಗಿರೀಶ್ ವೈಲ್ಟ್‌ ಕ್ಯಾಟ್ –ಸಿ ಸಂಸ್ಥೆ
ಬಂಡೀಪುರ ಕಳ್ಳಸಾಗಣೆಗೆ ದೊಡ್ಡ ದಾರಿ. ಅದಕ್ಕೆ ರಾತ್ರಿ ಸಂಚಾರಕ್ಕೆ ದೊಡ್ಡಮಟ್ಟದ ಲಾಬಿ ನಡೆಯುತ್ತಿದೆ. ಅಲ್ಲಿ ರಾತ್ರಿ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರೇ ಇರುವುದಿಲ್ಲ. ಆದರೂ ರಾತ್ರಿ ಸಂಚಾರ ಯಾಕೆ ಬೇಕು? .
ಜೋಸೆಫ್ ಹೂವರ್, ಪರಿಸರವಾದಿ
ಹೆದ್ದಾರಿಗಳಲ್ಲಿ ಪಕ್ಷಿಗಳು ಸಹ ವಾಹನ ಅಪಘಾತಕ್ಕೆ ಬಲಿಯಾಗುತ್ತಿರುವುದರ ಕುರಿತು ತಜ್ಞರ ನೇತೃತ್ವದಲ್ಲಿ ಅಧ್ಯಯನ ನಡೆಸಬೇಕು. ಪಕ್ಷಿಗಳು ವಾಹನಗಳಿಗೆ ಸಿಲುಕದಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.
ಗೌರಿ ಶಿವಯೋಗಿ, ಪಶು–ಪಕ್ಷಿಗಳ ಸಂರಕ್ಷಕಿ
ಹೆದ್ದಾರಿ ನಿರ್ಮಾಣ ಮತ್ತು ವಿಸ್ತರಣೆ ಮಾಡುವಾಗ ವನ್ಯಜೀವಿಗಳು ರಸ್ತೆ ದಾಟಲು ಮೇಲ್ಸೇತುವೆ ಮತ್ತು ಅಂಡರ್‌ಪಾಸ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕನಕಪುರ ರಸ್ತೆಯಲ್ಲಿ ಈಗಾಗಲೇ ನಿರ್ಮಾಣವಾಗಿದ್ದು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ 3 ಕಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.
ವಿಲಾಸ್ ಪಿ. ಬ್ರಹ್ಮಂಕರ್, ಪ್ರಾದೇಶಿಕ ಅಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಸುಪ್ರೀಂಕೋರ್ಟ್‌ ತೀರ್ಪಿನಂತೆ ಬಂಡೀಪುರದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ನಿರ್ಬಂಧ ತೆರವಿಗೆ ಕೇರಳದಿಂದ ಅಧಿಕೃತ ಪ್ರಸ್ತಾವ ಬಂದಿಲ್ಲ. ಸಭೆಗಳೂ ನಡೆದಿಲ್ಲ. ಕೋರ್ಟ್ ಆದೇಶ ಮುಂದುವರಿಯಲಿದೆ.
ಪ್ರಭಾಕರನ್, ನಿರ್ದೇಶಕ, ಬಂಡೀಪುರ ಹುಲಿ ಯೋಜನೆ
ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ನಿರ್ಮಾಣ ಅಥವಾ ವಿಸ್ತರಣೆ ಯೋಜನೆ ರೂಪಿಸುವಾಗ ಆ ಮಾರ್ಗಗಳಲ್ಲಿ ಕಡ್ಡಾಯವಾಗಿ ವನ್ಯಜೀವಿಗಳ ಸರಾಗ ಓಡಾಟಕ್ಕೆ ಓವರ್‌ಪಾಸ್ ಮತ್ತು ಅಂಡರ್‌ಪಾಸ್ ಸೇತುವೆ ನಿರ್ಮಿಸಬೇಕಾಗುತ್ತದೆ. ಇಲ್ಲದಿದ್ದರೆ ಇಲಾಖೆ ಅರಣ್ಯದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಅನುಮತಿ ನೀಡದು.
ಸುಭಾಷ್ ಕೆ. ಮಾಲ್ಖಡೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)
ಹೆದ್ದಾರಿ ನಿರ್ಮಿಸುವಾಗ ಅರಣ್ಯದೊಳಗೆ ಮಾತ್ರ ವನ್ಯಜೀವಿಗಳಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಯೋಚಿಸಲಾಗುತ್ತದೆ. ಅರಣ್ಯೇತರ ಪ್ರದೇಶದಲ್ಲೂ ಸಾಗುವ ಪ್ರಾಣಿಗಳ ಸುರಕ್ಷತೆಗೂ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ದೂರದೃಷ್ಟಿಯುಳ್ಳ ತಜ್ಞರು ಹಾಗೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಯೋಜನೆ ರೂಪಿಸಬೇಕು.
ಗಿರಿಧರ ಕುಲಕರ್ಣಿ, ಪರಿಸರ ಕಾರ್ಯಕರ್ತ
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ
ಪೂರಕ ಮಾಹಿತಿ: ಮೋಹನ್ ಕುಮಾರ ಸಿ., ಕೆ.ಎಸ್‌. ಗಿರೀಶ, ಸಿದ್ದು ಆರ್‌.ಜಿ. ಹಳ್ಳಿ, ಹನೂರು ಬಸವರಾಜ್, ವೆಂಕಟೇಶ್ ಜಿ.ಎಚ್, ಆರ್‌. ಮಂಜುನಾಥ್, ವಿಜಯಕುಮಾರ್ ಎಸ್‌.ಕೆ, ಗಣಪತಿ ಹೆಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.