ADVERTISEMENT

ಮಕ್ಕಳಲ್ಲಿ ಕಫದ ಸಮಸ್ಯೆ: ಆಯುರ್ವೇದ ವೈದ್ಯಕೀಯ ಪದ್ಧತಿಯ ಪರಿಹಾರೋಪಾಯಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2025, 10:03 IST
Last Updated 17 ಡಿಸೆಂಬರ್ 2025, 10:03 IST
   

ಎಲ್ಲಾ ವಯಸ್ಸಿನ ಮಕ್ಕಳಲ್ಲೂ ಕಫದ ಸಮಸ್ಯೆ ಬಿಟ್ಟೂ ಬಿಡದೆ ಕಾಡುತ್ತಿರುತ್ತದೆ. ಈ ಸಮಸ್ಯೆಗೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಆಯುರ್ವೇದದ ಪ್ರಕಾರ 16 ವರ್ಷಗಳ ಒಳಗಿನ ಮಕ್ಕಳನ್ನು ‘ಬಾಲ ’ ಎಂದು ಕರೆಯಲಾಗುತ್ತದೆ. ಬಾಲ್ಯವು ದೇಹದ ವೃದ್ಧಿ, ರೋಗನಿರೋಧಕ ಶಕ್ತಿಯ ನಿರ್ಮಾಣ ಹಾಗೂ ಮನೋವಿಕಾಸದ ಅತ್ಯಂತ ಸೂಕ್ಷ್ಮ ಹಂತವಾಗಿದೆ. ಮಕ್ಕಳನ್ನು ಆಹಾರದ ಆಧಾರದ ಮೇಲೆ ಮೂರು ವಿಭಾಗಗಳಾಗಿ ವಿವರಿಸಲಾಗಿದೆ.

1. ಕ್ಷೀರಪ – ತಾಯಿ ಎದೆ ಹಾಲಿನ ಮೇಲೆ ಅವಲಂಬಿತವಾಗಿರುವ ಶಿಶು

ADVERTISEMENT

2. ಕ್ಷೀರಾನ್ನ – ಹಾಲು ಜತೆಗೆ ಅಲ್ಪ ಘನ ಆಹಾರ ಸೇವಿಸುವ ಮಕ್ಕಳು

3. ಅನ್ನಾದ – ಅನ್ನಪಾನ ಎಂದರೆ ಎಲ್ಲಾ ವಿಧದ ಆಹಾರ ಸೇವಿಸುವ ಮಕ್ಕಳು

ಈ ಎಲ್ಲ ವಯಸ್ಸಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಫದ ಸಮಸ್ಯೆ ಕಾಡುತ್ತಿರುತ್ತದೆ. ಜತೆಗೆ ಅವರು ಅಲ್ಪಬಲ ಹಾಗೂ ಅಪೂರ್ಣ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ, ಋತುಬದಲಾವಣೆಗೆ ಹೆಚ್ಚು ಸಂವೇದನಶೀಲರಾಗಿರುತ್ತಾರೆ.

ಮಕ್ಕಳ ಅಪೇಕ್ಷೆ ಮತ್ತು ಆಹಾರದ ಪಾತ್ರ

ಮಕ್ಕಳು ಸಹಜವಾಗಿ ಮಧುರ ರುಚಿಯ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ, ಸಿಹಿ ಪದಾರ್ಥಗಳು, ಮೊಸರು, ಚಾಕೊಲೇಟ್‌, ಐಸ್ ಕ್ರೀಮ್, ತಂಪು ಪಾನೀಯ ಮುಂತಾದವುಗಳು ಮಕ್ಕಳಿಗೆ ಆಕರ್ಷಕವಾದರೂ, ಇವುಗಳ ಅತಿಸೇವನೆ ಕಫಕ್ಕೆ ಕಾರಣವಾಗುತ್ತವೆ. ಅದರಲ್ಲೂ ಚಳಿಗಾಲದ ಸಮಯದಲ್ಲಿ ಇಂತಹ ಆಹಾರ ಸೇವನೆಯಿಂದ ನೆಗಡಿ, ಕೆಮ್ಮು, ಮೂಗು ಕಟ್ಟುವುದು, ಗಂಟಲು ನೋವು, ಉಸಿರಾಟದ ತೊಂದರೆ ಅಡಿನಾಯ್ಡ್ ಮತ್ತು ಟಾನ್ಸಿಲ್ ಸಮಸ್ಯೆಯನ್ನು ಹೆಚ್ಚಿಸುತ್ತವೆ.

ಹೇಮಂತ ಋತು /ಚಳಿಗಾಲ – ಕಫ ವ್ಯಾಧಿಗಳ ಕಾಲ

ಅಷ್ಟಾಂಗ ಹೃದಯದ ಋತುಚರ್ಯಾ ಅಧ್ಯಾಯದ ಪ್ರಕಾರ ಹೇಮಂತ ಋತುವಿನಲ್ಲಿ ಜಠರಾಗ್ನಿ ಬಲವಾಗಿರುತ್ತದೆ. ಆದರೆ ಮಕ್ಕಳಲ್ಲಿ ಅಗ್ನಿ ಪೂರ್ಣವಾಗಿ ಅಭಿವೃದ್ಧಿಯಾಗಿಲ್ಲದ ಕಾರಣ, ಚಳಿ ಮತ್ತು ಮಧುರ–ಗುರು ಆಹಾರದ ಸಂಯೋಗದಿಂದ ಕಫದ ಸಂಚಯ ಹೆಚ್ಚಾಗುತ್ತದೆ. ಇದರಿಂದಾಗಿ ಈ ಋತುವಿನಲ್ಲಿ ಮಕ್ಕಳು ಆಗಾಗ ಉಸಿರಾಟದ ಸೋಂಕುಗಳಿಗೆ (Recurrent Respiratory Tract Infections) ಒಳಗಾಗುತ್ತಿರುತ್ತಾರೆ.

ಚಳಿಗಾಲದಲ್ಲಿ ಮಕ್ಕಳಿಗೆ ಸೂಕ್ತವಾದ ಆಹಾರಗಳು

ಬಿಸಿ, ತಾಜಾ, ಸುಲಭ ಜೀರ್ಣವಾಗುವ ಆಹಾರ

ಗೋಧಿ, ಅಕ್ಕಿ, ಬಾರ್ಲಿಯಿಂದ ತಯಾರಿಸಿದ ಬಿಸಿ ಅನ್ನ

ತರಕಾರಿ ಮತ್ತು ಕಾಳುಗಳಿಂದ ತಯಾರಿಸಿದ ಸೂಪ್

ಅಲ್ಪ ಪ್ರಮಾಣದಲ್ಲಿ ತುಪ್ಪ

ಜೇನು ತುಪ್ಪ

ಜೀರಿಗೆ, ಶುಂಠಿ, ಕಾಳು ಮೆಣಸು, ಲವಂಗ ಸೇರಿಸಿದ ಆಹಾರ

ಬಿಸಿ ನೀರು ಅಥವಾ ಗ್ರೀನ್ ಟೀ (ಮಕ್ಕಳಿಗೆ ಸೂಕ್ತ ಪ್ರಮಾಣದಲ್ಲಿ)

ಸೇವನೆಗೆ ಸೂಕ್ತವಲ್ಲದ ಆಹಾರಗಳು

ತಣ್ಣನೆಯ ಪಾನೀಯಗಳು

ಐಸ್ ಕ್ರೀಮ್, ಚಾಕೊಲೇಟ್

ಬೇಕರಿ ಪದಾರ್ಥಗಳು

ಮೊಸರು

ಅತಿಯಾಗಿ ಹಾಲು ಸೇವಿಸಬಾರದು.

ಲೇಖಕರು: ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು,

ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.