
ಚಿತ್ರ: ಗೆಟ್ಟಿ
ಮಲಗಿದ್ದಾಗ ಕನಸುಗಳು ಬೀಳುವುದು ಸಹಜ. ಕನಸಿನಲ್ಲಿ ಹಲವು ಘಟನೆಗಳು ನಡೆಯುತ್ತವೆ. ಅದನ್ನು ಮನಸ್ಸಿನ ಅಳಲು, ಬಯಕೆ ಹಾಗೂ ಭಾವನೆಗಳ ಪ್ರತಿಬಿಂಬ ಎಂದು ಮನೋವಿಜ್ಞಾನ ಹೇಳುತ್ತದೆ. ಕನಸು ಬೀಳಲು ಕಾರಣವೇನು, ಯಾವಾಗ ಕನಸು ಬೀಳುತ್ತದೆ ಹಾಗೂ ಕನಸಿಗೂ ವ್ಯಕ್ತಿಗೂ ಸಂಬಂಧವಿದೆಯೇ ಎಂಬುದನ್ನು ನೋಡೋಣ.
ಕನಸು ಎಂದರೇನು?
ಕನಸು ಎಂದರೆ ನಿದ್ರೆಯಲ್ಲಿರುವಾಗ ಮನಸ್ಸಿನಲ್ಲಿ ಮೂಡುವ ಭಾವಚಿತ್ರಗಳು, ಧ್ವನಿಗಳು ಅಥವಾ ಘಟನೆಗಳ ಸರಣಿಗಳಾಗಿವೆ. ಇದನ್ನು ‘ಮನಸ್ಸಿನ ಚಿತ್ರಪಟ’ ಎಂತಲೂ ಕರೆಯಲಾಗುತ್ತದೆ.
ಕನಸುಗಳು ನಮ್ಮ ದೈನಂದಿನ ಜೀವನದ ಚಿಂತನೆ, ಭಯ, ಆಸೆ ಹಾಗೂ ಆಕಾಂಕ್ಷೆಗಳನ್ನು ತೋರಿಸುತ್ತವೆ.
ಕೆಲವೊಮ್ಮೆ ಕನಸು ಅಸ್ಪಷ್ಟವಾಗಿರುತ್ತದೆ. ಕೆಲವೊಮ್ಮೆ ಸ್ಪಷ್ಟ ಸಂದೇಶ ಕೊಡುತ್ತದೆ.
ಕನಸು ಯಾವ ಹಂತದಲ್ಲಿ ಬೀಳುತ್ತದೆ?
ನಿದ್ರೆಯಲ್ಲಿ ಎರಡು ಹಂತಗಳಿವೆ. ಅವುಗಳೆಂದರೆ,
1. NREM (Non-Rapid Eye Movement) – ಕಣ್ಣುಗಳು ವಿಶ್ರಾಂತಿ ಪಡೆಯುವ ಹಂತ.
2. REM (Rapid Eye Movement) – ಕಣ್ಣುಗಳು ವೇಗವಾಗಿ ಚಲಿಸುವ ಹಂತ.
ಕಣ್ಣುಗಳು ವೇಗವಾಗಿ ಚಲಿಸುವ ಹಂತದಲ್ಲಿ, ಮಿದುಳಿನ ಕೆಲ ಭಾಗಗಳು ಚಟುವಟಿಕೆಯಿಂದ ಕೂಡಿರುತ್ತವೆ. ಬಹುಪಾಲು ಕನಸುಗಳು ಈ ಹಂತದಲ್ಲಿಯೇ ಬೀಳುತ್ತವೆ.
ಕನಸು ಬೀಳಲು ಮನೋವೈಜ್ಞಾನಿಕ ಕಾರಣಗಳು:
ಈಡೇರದ ಬಯಕೆಗಳು:
ಫ್ರಾಯ್ಡ್ ಪ್ರಕಾರ, ಕನಸು ಈಡೇರದ ಬಯಕೆಗಳನ್ನು ತೃಪ್ತಿಪಡಿಸುವ ಮಾರ್ಗವಾಗಿದೆ.
ನಾವು ದಿನದಲ್ಲಿ ಹೆಚ್ಚು ಯೋಚಿಸುವ ಭಾವನೆಗಳು ಕನಸಿನ ರೂಪದಲ್ಲಿ ಹೊರಹೊಮ್ಮುತ್ತವೆ ಎಂದು ಮನೋವಿಜ್ಞಾನ ಹೇಳುತ್ತದೆ.
ಭಾವನೆಗಳನ್ನು ವ್ಯಕ್ತಪಡಿಸುವುದು :
ಕನಸುಗಳು ನಮ್ಮ ಮನಸ್ಸಿನ ಒತ್ತಡ, ದುಃಖ, ಭಯ, ಆನಂದ ಇವುಗಳಿಗೆ ವ್ಯಕ್ತಪಡಿಸುವ ದಾರಿ.
ಇದು ಮನಸ್ಸಿನ ಸಮತೋಲನವನ್ನು ಕಾಪಾಡಲು ಸಹಾಯಕ.
ಸ್ಮರಣಾ ಪ್ರಕ್ರಿಯೆ ಮತ್ತು ಕಲಿಕೆ:
ಆ ದಿನ ನಡೆದ ಘಟನೆಗಳನ್ನು ಮೆದುಳು ಶೇಕರಿಸಿಕೊಳ್ಳುವಾಗ, ಕೆಲವು ಸ್ಮರಣೆಗಳು ಕನಸಿನ ರೂಪದಲ್ಲಿ ಬರುತ್ತವೆ.
ಇದು ಕಲಿಕೆಯ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಸೃಜನಶೀಲತೆ ಮತ್ತು ಕಲ್ಪನೆ:
ಕನಸುಗಳು ಸೃಜನಶೀಲತೆಯ ಭಾಗವೂ ಹೌದು. ಇವು ಹೊಸ ಆವಿಷ್ಕಾರಗಳಿಗೆ ಕಾರಣವಾಗಬಹುದು.
ಕನಸಿನ ವಿಧಗಳು (Types of Dreams)
ಸಾಮಾನ್ಯ ಕನಸುಗಳು (Ordinary Dreams): ದೈನಂದಿನ ಚಿಂತನೆ, ನೆನಪು ಅಥವಾ ಘಟನೆಗಳ ಪ್ರತಿಫಲ.
ಭಯಾನಕ ಕನಸುಗಳು (Nightmares): ಭಯ ಅಥವಾ ಆತಂಕದಿಂದ ಬರುವ ಕನಸುಗಳು. ಇವು ಕೆಲವೊಮ್ಮೆ ನಿದ್ರೆಯನ್ನು ಹಾಳು ಮಾಡುತ್ತವೆ.
ಲೂಸಿಡ್ ಕನಸುಗಳು (Lucid Dreams): ಕನಸು ಕಾಣುವಾಗಲೇ ನಾವು ಕನಸಿನಲ್ಲಿದ್ದೇವೆ ಎಂಬುದು ನಮಗೆ ಅರಿವಿರುತ್ತದೆ. ಇದು ಅತ್ಯಂತ ಅಪರೂಪದ ಮತ್ತು ಜಾಗೃತ ಮನಸ್ಸಿನ ಅನುಭವವಾಗಿದೆ.
ಪುನಃಪುನಃ ಬರುವ ಕನಸುಗಳು (Recurring Dreams): ಒಂದು ಕನಸು ಮತ್ತೆ ಮತ್ತೆ ಬರುವುದು. ಇದು ಸಮಸ್ಯೆಯ ಸೂಚನೆಯೂ ಆಗಿರಬಹುದು.
ಸಂಕೇತಾತ್ಮಕ ಕನಸುಗಳು (Symbolic Dreams): ಇಲ್ಲಿ ಮನಸ್ಸು ನೇರವಾಗಿ ಏನನ್ನು ಹೇಳುವುದಿಲ್ಲ. ಸಂಕೇತಗಳ ಮೂಲಕ ಸೂಚಿಸುತ್ತದೆ.
ಉದಾಹರಣೆ: ನೀರು ಕನಸಿನಲ್ಲಿ ಬಂದರೆ ಸ್ವಾತಂತ್ರ್ಯದ ಬಯಕೆ ಎಂದು ಅರ್ಥೈಸಲಾಗುತ್ತದೆ.
ಕನಸು ಮತ್ತು ವ್ಯಕ್ತಿತ್ವದ ಸಂಬಂಧ:
ಕುತೂಹಲಮಯ ವ್ಯಕ್ತಿಗಳು ತಮ್ಮ ಕನಸಿನ ಅರ್ಥವನ್ನು ಹುಡುಕಲು ಪ್ರಯತ್ನಿಸುತ್ತಾರೆ.
ಕನಸುಗಳು ವ್ಯಕ್ತಿಯ ಅಂತರಂಗದ ಬಯಕೆ ಹಾಗೂ ಭಯವನ್ನು ಸೂಚಿಸುತ್ತವೆ.
ಮನೋವಿಜ್ಞಾನ ಪ್ರಕಾರ, ಕನಸಿನ ವಿಶ್ಲೇಷಣೆ ವ್ಯಕ್ತಿಯ ಮನಸ್ಸಿನ ನಿಜ ಸ್ವರೂಪವನ್ನು ತಿಳಿಯಲು ಸಹಾಯಕ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.