ADVERTISEMENT

ಡಾರ್ಕ್‌ ಸರ್ಕಲ್‌ ಹೋಗಲಾಡಿಸಲು ಇಲ್ಲಿದೆ ಮನೆಮದ್ದು

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 12:39 IST
Last Updated 22 ಜನವರಿ 2026, 12:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಆಹಾರ, ಜೀವನ ಶೈಲಿಯ ಬದಲಾವಣೆ, ಕೆಲವು ಆರೋಗ್ಯ ಸಮಸ್ಯೆಗಳಿಂದ ಉಂಟಾಗು ಕಣ್ಣಿನ ಸುತ್ತಲಿನ ಕಪ್ಪು ಮುಖದ ಅಂದೆಗೆಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಜನರಿಗೆ ಈ ಡಾರ್ಕ್ ಸರ್ಕಲ್‌ ಸಮಸ್ಯೆ ಕಾಡುತ್ತಿದೆ.

ನಿಯಮಿತವಾದ ಆರೈಕೆಯಿಂದ, ಆರೋಗ್ಯ ಕಾಪಾಡಿಕೊಳ್ಳುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಈ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್‌ ಕುಲಕರ್ಣಿ ಅವರು ನೀಡಿದ ಮಾಹಿತಿ ಇಲ್ಲಿದೆ.

ADVERTISEMENT
ಡಾರ್ಕ್ ಸರ್ಕಲ್ ಸಮಸ್ಯೆಗೆ ಕಾರಣಗಳು

ನಿದ್ರಾಹೀನತೆ: ಸರಿಯಾದ ಸಮಯಕ್ಕೆ ನಿದ್ದೆ ಮಾಡದಿರುವುದು

ಮಾನಸಿಕ ಒತ್ತಡ: ಯಾವುದೇ ವಿಷಯದ ಬಗ್ಗೆ ಅತಿಯಾಗಿ ಯೋಚಿಸುವುದರಿಂದಲೂ ಡಾರ್ಕ್ ಸರ್ಕಲ್ ಬರುವ ಸಾಧ್ಯತೆ ಇರುತ್ತದೆ.

ಆನುವಂಶಿಕತೆ: ಕುಟುಂಬದಲ್ಲಿ ಯಾರಿಗಾದರೂ ಡಾರ್ಕ್ ಸರ್ಕಲ್ ಇದ್ದರೆ, ಅದು ಮಕ್ಕಳಿಗೂ ಬರುವ ಸಾಧ್ಯತೆ ಇರುತ್ತದೆ.

ಪೌಷ್ಟಿಕಾಂಶದ ಕೊರತೆ: ಅತಿಯಾದ ಜಂಕ್ ಫುಡ್ ಸೇವನೆಯಿಂದ, ದೇಹಕ್ಕೆ ಬೇಕಾದ ಪೌಷ್ಟಿಕಾಂಶ ದೊರೆಯದೇ ಇದ್ದಾಗ ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗುತ್ತದೆ.

ಕಣ್ಣಿಗೆ ಒತ್ತಡ: ಕನ್ನಡಕ ಹಾಕಿ ಅಭ್ಯಾಸ ಮಾಡಿಕೊಂಡು, ಬಳಿಕ ಕನ್ನಡಕ ಇಲ್ಲದೆ ಬರಿಗಣ್ಣಿನಲ್ಲಿ ದೂರದ ಅಕ್ಷರಗಳನ್ನು ಓದುವುದರಿಂದ ಅದು ಕಣ್ಣಿನ ಒತ್ತಡಕ್ಕೆ ಕಾರಣವಾಗುತ್ತದೆ. ಇದರಿಂದಲೂ ಡಾರ್ಕ್ ಸರ್ಕಲ್ ಆಗುವ ಸಾಧ್ಯತೆ ಇರುತ್ತದೆ.

ರಾತ್ರಿ ಪಾಳಿಯ ಕೆಲಸದ ಪರಿಣಾಮ: ರಾತ್ರಿಪಾಳಿಯಲ್ಲಿ ಕೆಲಸ ಮಾಡುವುದರಿಂದ ಕಣ್ಣಿನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ, ರಾತ್ರಿ ಸಮಯದಲ್ಲಿ ಕೆಲಸ ಮಾಡುವುದಾದರೆ 7 ರಿಂದ 8 ಗಂಟೆ ಒಳಗೆ ಊಟ ಮಾಡಬೇಕು. ಇಡೀ ರಾತ್ರಿ ಕೆಲಸ ಮಾಡಿ ಬೆಳಗ್ಗೆ ಮಲಗುವ ಅಭ್ಯಾಸವಿದ್ದರೆ ಆ ಸಮಯದಲ್ಲಿ ಸ್ವಲ್ಪ ಊಟ ಸೇವಿಸಬೇಕು.

ಸಂಪೂರ್ಣ ನಿದ್ದೆ ಆದ ಬಳಿಕ ಚೆನ್ನಾಗಿ ಊಟ ಸೇವನೆ ಮಾಡುವುದರಿಂದ ದಣಿವನ್ನು ನಿಯಂತ್ರಿಸಬಹುದು. ಮುಖದ ಅಂದವನ್ನು ಕುಂದದಂತೆ ಕಾಪಾಡಿಕೊಳ್ಳಬಹುದು. ರಾತ್ರಿ ಕೆಲಸದ ವೇಳೆ ಹಸಿವಾದಾಗ ಊಟದ ಬದಲು ಹಣ್ಣುಗಳ ಸೇವನೆ ಮಾಡಬಹುದು.

ಮನೆಯಲ್ಲೇ ಸಿಗುವ ವಸ್ತುಗಳಲ್ಲಿದೆ ಪರಿಹಾರ

  • ಮೂಸಂಬಿ ಅಥವಾ ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪೌಡರ್ ಮಾಡಿ ಕೊಬ್ಬರಿ ಎಣ್ಣೆ ಅಥವಾ ಬಾದಮಿ ಎಣ್ಣೆಯಲ್ಲಿ ಮಿಶ್ರಣ ಮಾಡಿ, ರಾತ್ರಿ ಮಲಗುವ ವೇಳೆ ಕಣ್ಣಿನ ಕೆಳಭಾಗದಲ್ಲಿ ಪ್ರತಿದಿನ ಹಚ್ಚಿ ಮಲಗಬೇಕು.

  • ಸೌತೆಕಾಯಿಯ ಪೇಸ್ಟ್‌ಗೆ 1ರಿಂದ2 ಚಮಚ ಕಡಲೆ ಹಿಟ್ಟು ಸೇರಿಸಿ ಮಿಶ್ರಣ ಮಾಡಿ, ಕಣ್ಣಿನ ಕೆಳಭಾಗದಲ್ಲಿ ಹಚ್ಚುವುದರಿಂದ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.

  • ಆಲೂಗಡ್ಡೆಯನ್ನು ವೃತ್ತಾಕಾರದಲ್ಲಿ ಕತ್ತರಿಸಿ ಡಾರ್ಕ್ ಸರ್ಕಲ್ ಇರುವಲ್ಲಿ ಮಸಾಜ್ ಮಾಡಿಕೊಳ್ಳಬೇಕು.

  • ಸಿಪ್ಪೆ ತೆಗೆದು ತುಂಡು ಮಾಡಿಕೊಂಡ ಪಪ್ಪಾಯ ಹಣ್ಣನ್ನು ಕಣ್ಣಿನ ಕೆಳ ಭಾಗದಲ್ಲಿ ಹಚ್ಚುವುದರಿಂದ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳಬಹುದು.

  • ಪ್ರತಿದಿನ ಪ್ರಾಣಾಯಾಮವನ್ನು ಮಾಡುವುದರಿಂದ ಒತ್ತಡ ನಿವಾರಣೆ ಆಗುವುದರ ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಸಹಕಾರಿಯಾಗಲಿದೆ.

  • ನಿಯಮಿತವಾಗಿ ಕ್ಯಾರೆಟ್ ಸೇವನೆ ಮಾಡಬೇಕು. ಕ್ಯಾರೆಟ್ ಸೇವಿಸಲು ಆಗದೇ ಇದ್ದರೆ, ಇದನ್ನು ಪೇಸ್ಟ್ ಮಾಡಿ ಅರ್ಧ ಚಮಚ ಬಾದಾಮಿ ಎಣ್ಣೆ ಸೇರಿಸಿ ಕಣ್ಣಿನ ಕೆಳಭಾಗದಲ್ಲಿ ಹಚ್ಚಿಕೊಳ್ಳಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಡಾರ್ಕ್  ಸರ್ಕಲ್ ಸಮಸ್ಯೆಯಿಂದ ಪಾರಾಗಬಹುದು

  • ಪ್ರತಿದಿನ ರಾತ್ರಿ 6 ರಿಂದ 7 ಗಂಟೆಗಳ ಕಾಲ ನಿದ್ರಿಸಬೇಕು. ರಾತ್ರಿ ಚೆನ್ನಾಗಿ ನಿದ್ದೆ ಮಾಡುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.