ಪ್ರಾತಿನಿಧಿಕ ಚಿತ್ರ
ಸಾಕಷ್ಟು ಜನರು ಹಲವು ಕಾರಣಗಳಿಗೆ ಉಪವಾಸ ಮಾಡುವುದನ್ನು ನೋಡಿದ್ದೇವೆ. ಅದರಲ್ಲೂ ತೂಕ ಇಳಿಕೆ, ಇಂಟರ್ಮಿಟೆಂಟ್ ಫಾಸ್ಟಿಂಗ್ ಸೇರಿದಂತೆ ಹಲವು ರೀತಿಯ ಉಪವಾಸಗಳನ್ನು ಜನರು ಅನುಸರಿಸುವುದು ಹೊಸ ಟ್ರೆಂಡ್ ಆಗಿದೆ. ಇದರೊಂದಿಗೆ, ಆಧ್ಯಾತ್ಮಿಕ, ಧಾರ್ಮಿಕ ಆಚರಣೆ ಹೆಸರಿನಲ್ಲಿ ದಿನಗಟ್ಟಲೆ ಏನನ್ನೂ ಸೇವಿಸದೆ ಉಪವಾಸ ಮಾಡುವವರೂ ಇದ್ದಾರೆ. ಈ ಎಲ್ಲಾ ರೀತಿಯ ಉಪವಾಸಗಳು ಎಲ್ಲರಿಗೂ ಪ್ರಯೋಜನಕಾರಿಯೇ? ನೆನಪಿಡಿ, ಕೆಲವರಿಗೆ ಉಪವಾಸವು ವರವಾದರೆ, ಇನ್ನು ಕೆಲವರಿಗೆ ಅಪಾಯವನ್ನೂ ತಂದೊಡ್ಡಬಹುದು. ಉಪವಾಸದ ಸತ್ಯ-ಮಿಥ್ಯಗಳ ಬಗ್ಗೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ವೈದ್ಯ, ಡಾ. ಶ್ರೀಹರಿ ಕುಲಕರ್ಣಿ ಅವರು ಇಲ್ಲಿ ವಿವರಿಸಿದ್ದಾರೆ.
ದೀರ್ಘಕಾಲದ ಉಪವಾಸ ಅಂದರೆ 24 ಗಂಟೆಗಳಿಗಿಂತ ಹೆಚ್ಚು ಕಾಲ ನೀರು ಸಹ ಸೇವನೆ ಮಾಡದೇ ಖಾಲಿ ಹೊಟ್ಟೆಯಲ್ಲಿ ಇರುವವರೂ ಇದ್ದಾರೆ. ಇನ್ನು ಕೆಲವರು ಮಧ್ಯಂತರ ಉಪವಾಸ ಅಂದರೆ, ಸಮಯದ ಪರಿಮಿತಿ ಇಟ್ಟುಕೊಂಡು ಉಪವಾಸ ನಡೆಸುತ್ತಾರೆ. ಅಂದ್ರೆ, ಇಂಟರ್ಮಿಟೆಂಟ್ ಫಾಸ್ಟಿಂಗ್ ಹೆಸರಿನಲ್ಲಿ 8 ಗಂಟೆಗಳ ಕಾಲವಷ್ಟೇ ಆಹಾರ ಸೇವಿಸಿ ಉಳಿದ ಸಮಯದಲ್ಲಿ ಏನನ್ನೂ ಸೇವಿಸದೇ ಇರುವುದು. ಧಾರ್ಮಿಕ ಉಪವಾಸ ಮಾಡುವವರು ವಿಶೇಷವಾಗಿ ರಂಜಾನ್ ಸಮಯದಲ್ಲಿ, ಏಕಾದಶಿ ಮುಂತಾದ ವ್ರತ ಅಥವಾ ವಾರದಲ್ಲಿ ನಿರ್ದಿಷ್ಟ ದಿನಗಳಲ್ಲಿ ಮಾಡುವ ಉಪವಾಸ ಸೇರಿದಂತೆ ಹಲವರು ಯಾವುದೇ ಸಮಯದ ಮಿತಿ ಇಲ್ಲದೆಯೂ ಉಪವಾಸ ಮಾಡುತ್ತಾರೆ. ಈ ರೀತಿ ಉಪವಾಸ ಮಾಡುವ ಮೊದಲು ಅದು ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಹಾಗೂ ಅಪಾಯಕಾರಿ ಎಂಬುದರ ಬಗ್ಗೆ ತಿಳಿಯಬೇಕು.
ಉಪವಾಸ ಮಾಡುವುದರಿಂದ ಸಾಕಷ್ಟು ಆರೋಗ್ಯದ ಪ್ರಯೋಜನಗಳಿವೆ. ನಿರಾಹಾರದಲ್ಲಿದ್ದರೆ ವಿವಿಧ ಅಂಗಗಳಲ್ಲಿ ಆರೋಗ್ಯಕರ ಬದಲಾವಣೆ ಉಂಟಾಗುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ದೂರವಾಗಿಸಿ, ನಮ್ಮಲ್ಲಿರುವ ಕೆಟ್ಟ ರೋಗಾಣು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಮೂತ್ರಪಿಂಡದಲ್ಲಿನ ವಿಷ ಮತ್ತು ಕಲ್ಲುಗಳನ್ನು ಹೊರಹಾಕುತ್ತದೆ. ಶ್ವಾಸಕೋಶದಲ್ಲಿನ ವಿಷ, ನೀರನ್ನು ಹೊರಹಾಕಲು ಉಪವಾಸ ಉತ್ತಮ ಆಯ್ಕೆ. ಇದು ಆಯಾಸವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಹೃದಯದ ಸುತ್ತಲಿನ ಕೊಬ್ಬು ಮತ್ತು ನೀರನ್ನು ಕಡಿಮೆ ಮಾಡಿ, ಹೃದಯ ಬಡಿತವನ್ನೂ ಸುಧಾರಿಸುತ್ತದೆ.
ಉಪವಾಸವು ಯಕೃತ್ತನ್ನು ಸಡಿಲಗೊಳಿಸಿ, ಅದರಲ್ಲಿರುವ ಕಲ್ಮಶವನ್ನು ತೆಗೆದುಹಾಕುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸಕ್ರಿಯವಾಗುತ್ತದೆ. ಉಪವಾಸವು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಸೆಳೆತ, ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಿ, ಕೀಲುಗಳಲ್ಲಿ ಸಂಗ್ರಹವಾಗಿರುವ ಕೊಬ್ಬು, ನೀರು ಮತ್ತು ಮಾಂಸದಂತಹ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಉಪವಾಸ ಹೆಚ್ಚು ಸಹಕಾರಿ. ಅಲ್ಲದೆ ಚರ್ಮದ ಕಾಂತಿಯನ್ನೂ ಅದು ಹೆಚ್ಚಿಸುತ್ತದೆ. ಎಲ್ಲರಿಗೂ ತಿಳಿದಂತೆ ದೇಹದ ತೂಕವೂ ಇಳಿಯಲಿದೆ. ಇನ್ನೂ ಕೆಲವರಿಗೆ ರಕ್ತದೊತ್ತಡ ಕಡಿಮೆ ಮಾಡಲು ಸಹ ಉಪವಾಸವು ಸಹಕಾರಿಯಾಗಿದೆ.
ಉಪವಾಸದಿಂದ ಪ್ರಯೋಜನವಷ್ಟೇ ಅಲ್ಲ, ಅಪಾಯವೂ ಇದೆ ಎಂಬುದನ್ನು ಗಮನಿಸಬೇಕು. ಉಪವಾಸ ಎಲ್ಲರಿಗೂ ಒಪ್ಪುವಂಥದ್ದಲ್ಲ. ಹೃದ್ರೋಗ, ಮಕ್ಕಳು, ವೃದ್ಧರು, ಗರ್ಭಿಣಿಯರು, ಬಾಣಂತಿಯರು, ಕ್ಷಯ ರೋಗಿಗಳು, ರಕ್ತಹೀನತೆ ಇರುವವರು ಉಪವಾಸ ಮಾಡುವುದು ಒಳ್ಳೆಯದಲ್ಲ. ಇನ್ನು, ಮಧುಮೇಹ ಹೊಂದಿರುವವರು ಸಹ ಉಪವಾಸ ಕೈಗೊಳ್ಳಬಾರದು. ಡಯಾಬಿಟಿಕ್ ರೋಗಿಗಳು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲೇಬೇಕು. ಇಲ್ಲವಾದರೆ ದೇಹದಲ್ಲಿ ಗ್ಲೂಕೋಸ್ ಮಟ್ಟ ಕುಸಿದು, ಅವರು ಮೂರ್ಛೆ ಹೋಗುವ ಸಾಧ್ಯತೆ ಹೆಚ್ಚು.
ಇನ್ನು, ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳು ಹೆಚ್ಚು ನೀರು ಸೇವಿಸುವ ಮೂಲಕ ಉಪವಾಸ ಮಾಡಬಹುದೇ ಹೊರತು, ಪಾನೀಯಗಳನ್ನು ತ್ಯಜಿಸಿ ಉಪವಾಸ ಮಾಡಬಾರದು. ನಿರ್ಜಲೀಕರಣವು ರಕ್ತದ ಪ್ರಮಾಣದಲ್ಲಿ ಕುಸಿತಕ್ಕೆ ಕಾರಣವಾಗಿ ತಲೆತಿರುಗುವಿಕೆಯ ಸಾಧ್ಯತೆ ಹೆಚ್ಚು. ಜೊತೆಗೆ, ಮೂತ್ರಪಿಂಡದ ಕಾರ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಬಿಪಿ, ಶುಗರ್ ಹೊಂದಿರುವವರು ವೈದ್ಯರ ಸಲಹೆಯ ಆಧಾರದಲ್ಲೇ ಉಪವಾಸದ ಕ್ರಮಕೈಗೊಳ್ಳಬೇಕು. ಇನ್ನು, ದೀರ್ಘಕಾಲದ ಕಾಯಿಲೆ ಹೊಂದಿರುವವರು, ಈಗಾಗಲೇ ಕೆಲವು ಔಷಧಗಳನ್ನು ನಿತ್ಯ ಸೇವಿಸುವವರು ಸಹ ಉಪವಾಸಕ್ಕೆ ಯೋಗ್ಯರಾಗಿರುವುದಿಲ್ಲ. ವೈದ್ಯರ ಸಲಹೆ ಪಡೆದುಕೊಂಡು ಉಪವಾಸಕ್ಕೆ ಕೈ ಹಾಕಬೇಕು ಇಲ್ಲವಾದರೆ ಆರೋಗ್ಯ ಇನ್ನಷ್ಟು ಹದಗೆಡಬಹುದು.
ದೇಹದ ತೂಕ ಇಳಿಸಲು ಅಥವಾ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಂಪೂರ್ಣ ಉಪವಾಸ ಒಂದೇ ಮಾರ್ಗವಲ್ಲ. ತಮ್ಮ ಜೀವನ ಶೈಲಿಯನ್ನು ಮೊದಲು ಬದಲಿಸಬೇಕು, ನಿತ್ಯ ದೈಹಿಕ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ, ಹಣ್ಣು, ತರಕಾರಿ, ಧಾನ್ಯಗಳ ಸೇವನೆ ಇರಲಿ. ಸಂಪೂರ್ಣ ಆಹಾರ ತ್ಯಜಿಸುವುದಕ್ಕಿಂತ ಮಿತವಾಗಿ ಆಹಾರ ಸೇವಿಸಿ. ಇದು ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಜೊತೆಗೆ, ನಿತ್ಯ ವ್ಯಾಯಾಮವನ್ನು ರೂಢಿಸಿಕೊಳ್ಳಿ. ಒತ್ತಡಮುಕ್ತ ಜೀವನ ನಡೆಸಿ, ಧೂಳು, ಪ್ರದೂಷಣೆಯಿಂದ ದೂರವಿರಿ. ಮಾನಸಿಕ ಆರೋಗ್ಯದ ಸುಧಾರಣೆಗೆ ಆದ್ಯತೆ ನೀಡಿ. ಇಷ್ಟೆಲ್ಲಾ ಅನುಸರಿಸುವ ಮೂಲಕ ನಿಮ್ಮ ಆರೋಗ್ಯ ದಿನಚರಿಯನ್ನು ಉತ್ತಮಗೊಳಿಸಿಕೊಳ್ಳಿ.
ಲೇಖಕರು: ಕನ್ಸಲ್ಟೆಂಟ್-ಇಂಟರ್ನಲ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.