ADVERTISEMENT

ಅಕಾಲಿಕ ಬಿಳಿ ಕೂದಲನ್ನು ನಿಯಂತ್ರಿಸಲು ಇಲ್ಲಿವೆ ಸರಳ ಮನೆಮದ್ದುಗಳು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 0:30 IST
Last Updated 19 ಫೆಬ್ರುವರಿ 2026, 0:30 IST
   

ಬಿಳಿ ಕೂದಲು ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರಲ್ಲಿ ಕಾಣುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಕ–ಯುವತಿಯರಲ್ಲೂ ಬಿಳಿ ಕೂದಲು ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಅನೇಕರು ಬಿಳಿ ಕೂದಲಿಗೆ ಬೇಸತ್ತು ರಾಸಾಯನಿಕಯುಕ್ತ ಶಾಂಪ್ಯೂ, ಕ್ರೀಂಗಳ ಮೊರೆ ಹೋಗುತ್ತಾರೆ. ಶಾಂಪೂ ಬಳಕೆಯಿಂದ ಬಿಳಿ ಕೂದಲಿಗೆ ಆ ಕ್ಷಣಕ್ಕೆ ಪರಿಹಾರ ಸಿಕ್ಕರೂ ಮತ್ತೆ ಮತ್ತೆ ಬಿಳಿ ಕೂದಲುಗಳು ಹುಟ್ಟುತ್ತಲೇ ಇರುತ್ತವೆ. ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಆಗಲು ಕಾರಣ, ಪರಿಹಾರ ಕ್ರಮಗಳ ಬಗ್ಗೆ ಆಯುರ್ವೇದ ತಜ್ಞರಾದ ಡಾ. ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಆಗಲು ಕಾರಣಗಳು

  • ಅತಿಯಾದ ಚಿಂತೆ: ಅತಿಯಾಗಿ ಚಿಂತೆ ಮಾಡುವುದರಿಂದ, ದುಃಖಿಸುವುದರಿಂದ ಅಕಾಲಿಕ ಬಿಳಿ ಕೂದಲು ಆಗುತ್ತವೆ.

    ADVERTISEMENT
  • ಒತ್ತಡ: ಮಾನಸಿಕ ಹಾಗೂ ದೈಹಿಕ ಒತ್ತಡದಿಂದ, ಕ್ರೋಧ (ಅತಿಯಾದ ಕೋಪ) ಸಣ್ಣಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುವುದು, ಯಾವಾಗಲೂ ಕೂಗಾಡುವುದರಿಂದ ಪಿತ್ತ ಹೆಚ್ಚಾಗಿ ಬಳಿ ಕೂದಲು ಹುಟ್ಟುತ್ತವೆ.

  • ಜೀವನ ಶೈಲಿ: ಪ್ರತಿನಿತ್ಯ ವ್ಯಾಯಾಮ ಮಾಡದಿದ್ದರೆ, ಆರೋಗ್ಯಕ್ಕೆ ಸೂಕ್ತ ಎನಿಸುವ ಪೌಷ್ಟಿಕ ಆಹಾರದ ಬದಲು ಅತಿಯಾದ ಎಣ್ಣೆಯುಕ್ತ ಆಹಾರ ಸೇವನೆಯು ಬಿಳಿ ಕೂದಲಿಗೆ ಕಾರಣವಾಗಿದೆ.

  • ಆನುವಂಶೀಯತೆ: ಕುಟುಂಬದಲ್ಲಿ ಯಾರಾದರೂ ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲು ಹೊಂದಿದ್ದರೆ ಅದು ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಬಿಳಿ ಕೂದಲು ನಿಯಂತ್ರಿಸಲು ಪರಿಹಾರ ಕ್ರಮಗಳು

  • ಬಿಳಿ ಕೂದಲನ್ನು ಕೀಳುವ ಬದಲು ಆ ಕೂದಲನ್ನು ಕತ್ತರಿಸಿಕೊಳ್ಳಬಹುದು.

  • ಆಹಾರ ಕ್ರಮದಲ್ಲಿ ಬದಲಾವಣೆ: ವಿಟಮಿನ್ ಅಧಿಕವಾಗಿರುವ ಪಾಲಕ್ ಸೊಪ್ಪು, ಹರಿವೆ ಸೊಪ್ಪು, ಮೆಂತೆ ಸೊಪ್ಪಿನ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಬಿಳಿ ಕೂದಲನ್ನು ನಿಯಂತ್ರಿಸಲು ಸಹಕಾರಿ.

  • ಮೊಟ್ಟೆ ಸೇವನೆ: ಮೊಟ್ಟೆಯು ಅಧಿಕ ಪೋಷಕಾಂಶವನ್ನು ಹೊಂದಿದೆ. ಪ್ರತಿದಿನ ಮೊಟ್ಟೆ ಬೇಯಿಸಿ ಸೇವಿಸುವುರಿಂದ ಕೂದಲಿನ ಆರೋಗ್ಯಕ್ಕೆ ಉಪಯುಕ್ತವಾಗಿದೆ.

    ಒಂದು ವೇಳೆ ಮೊಟ್ಟೆ ಸೇವಿಸಲು ಆಗದೇ ಇದ್ದರೆ ಹಸಿ ಮೊಟ್ಟೆಯ ಬಿಳಿ ಭಾಗ ತೆಗೆದು ಅದಕ್ಕೆ 4ರಿಂದ5 ಚಮಚ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಬೇಕು. ವಾರಕೊಮ್ಮೆ ಹೀಗೆ ಮಾಡುವುದರಿಂದ ಬಿಳಿ ಕೂದಲನ್ನು ನಿಯಂತ್ರಿಸಿಕೊಳ್ಳಬಹುದು.

  • ನೆಲ್ಲಿಕಾಯಿ ಸೇವನೆ: ಪ್ರತಿದಿನ 1ರಿಂದ2 ನೆಲ್ಲಿಕಾಯಿ ಅಥವಾ 2ಚಮಚ ನೆಲ್ಲಿಕಾಯಿ ಪುಡಿಯನ್ನು 1ಲೋಟ ಬಿಸಿ ನೀರಿಗೆ ಸೇರಿಸಿ ಸೇವನೆ ಮಾಡುವುದರಿಂದ ಬಿಳಿ ಕೂದಲನ್ನು ನಿಯಂತ್ರಿಕೊಳ್ಳಬಹುದು.

  • ಹಾಲು ಸೇವನೆ: ಹಾಲಿನ ಅಲರ್ಜಿ ಇಲ್ಲದಿದ್ದರೆ ಪ್ರತಿದಿನ 1–2 ಲೋಟ ಹಾಲು ಸೇವನೆ ಮಾಡುವುದರಿಂದ ಕೂದಲಿನ ಆರೈಕೆಗೆ ಉಪಯುಕ್ತವಾಗಿದೆ.

  • ವಿಟಮಿನ್ ಸಿ ಅಂಶದ ಆಹಾರ ಸೇವನೆ: ಕಿತ್ತಳೆ, ಮೂಸಂಬಿ, ಅನಾನಸ್ ಹಣ್ಣು, ತುಪ್ಪ, ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಬಿಳಿ ಕೂದಲನ್ನು ತಡೆಗಟ್ಟಬಹುದು.

  • ವ್ಯಾಯಾಮ: ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ.