ಪ್ರಾತಿನಿಧಿಕ ಚಿತ್ರ
ಕೃಪೆ: ChatGPT
‘ಕೌನ್ ಬನೇಗಾ ಕರೋಡ್‌ಪತಿ’ ಟಿ.ವಿ. ಶೋನಲ್ಲಿ ನಿರ್ವಾಹಕ ಅಮಿತಾಭ್ ಬಚ್ಚನ್ ಅವರೊಂದಿಗೆ ಗುಜರಾತ್‌ನ ಬಾಲಕನೊಬ್ಬ ನಡೆದುಕೊಂಡ ರೀತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ದುರಹಂಕಾರದ ನಡೆ, ಪೋಷಕರ ವೈಫಲ್ಯ, ಮಾನಸಿಕ ಅಸ್ವಾಸ್ಥ್ಯ ಎಂಬೆಲ್ಲ ದಿಕ್ಕಿನಲ್ಲಿ ಚರ್ಚೆಗಳು ಸಾಗಿವೆ. ಮಕ್ಕಳ ಅಸಹಜ ವರ್ತನೆ ‘ಮನೆ ಮನೆ ಕಥೆ’ಯಾಗಿರುವ ಈ ಹೊತ್ತಿನಲ್ಲಿ, ಅದರಲ್ಲಿ ಪೋಷಕರ ಪಾತ್ರವೆಷ್ಟು, ಕೈತಪ್ಪಿ ಹೋಗದಂತೆ ನಮ್ಮ ಮಕ್ಕಳನ್ನು ಕಾಪಿಟ್ಟುಕೊಳ್ಳುವುದು ಹೇಗೆ ಎನ್ನುವುದನ್ನು ವಿಶ್ಲೇಷಿಸಿದೆ ಈ ಲೇಖನ
ಟಿ.ವಿ. ಶೋವೊಂದರಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ ನಿರ್ಭಿಡೆಯಿಂದ ನಡೆದುಕೊಂಡ ಬಾಲಕ ಇಶಿತ್ ಭಟ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ಕೇಂದ್ರಬಿಂದು. ಮಕ್ಕಳಲ್ಲಿ ಇಂತಹ ವಿಪರೀತದ ನಡವಳಿಕೆ ಕಂಡುಬಂದಾಗಲೆಲ್ಲ ಅದನ್ನು ಎಡಿಎಚ್‌ಡಿ (ಅಟೆನ್ಷನ್ ಡೆಫಿಸಿಟ್/ಹೈಪರ್ ಆ್ಯಕ್ಟಿವಿಡಿ ಡಿಸಾರ್ಡರ್) ಎಂದು ಹೇಳುವುದಿದೆ. ವಿಡಿಯೊ ತುಣುಕೊಂದನ್ನು ನೋಡಿ, ಮಗುವಿಗೆ ಅಂತಹ ಸಮಸ್ಯೆ ಇದೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಮನೋವೈದ್ಯರು ಪರಿಶೀಲಿಸಿ ಅದನ್ನು ನಿರ್ಧರಿಸಬೇಕಷ್ಟೆ. ಅದನ್ನು ಹೊರತುಪಡಿಸಿ ನೋಡುವುದಾದರೆ, ಇದು ಈಗ ಇಶಿತ್ ಒಬ್ಬನ ಸಮಸ್ಯೆಯಾಗಿ ಉಳಿದಿಲ್ಲ. ಬಹುತೇಕ ಮಕ್ಕಳಲ್ಲಿ ಇಂತಹ ಅಸಹಜ ನಡವಳಿಕೆ ಕಂಡುಬರುತ್ತಿದೆ.
ಇದರ ಪ್ರಮುಖ ಮೂಲ ಪೋಷಕರು ಎನ್ನದೇ ವಿಧಿಯಿಲ್ಲ. ಪೋಷಕತ್ವದ ಸೋಲಿನ ಬಗ್ಗೆ ಆಧುನಿಕ ಪೋಷಕರು ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕಾದ ಹೊತ್ತಿದು. ಆತಂಕ, ಒತ್ತಡ, ಖಿನ್ನತೆಯಂತಹ ಪದಗಳನ್ನು ಕೇಳಿಯೂ ಗೊತ್ತಿರದಿದ್ದ ನಮ್ಮ ಮಕ್ಕಳೀಗ ಖುದ್ದು ಅವುಗಳ ‘ಫಲಾನುಭವಿ’ಗಳಾಗುತ್ತಿದ್ದಾರೆ. ಒತ್ತಡ ನಿರ್ವಹಣೆ ಎಂಬುದು ಒಂದು ಫ್ಯಾಷನ್ ಆಗಿರುವ, ಅದನ್ನೊಂದು ಸಾಮಾನ್ಯ ಸಂಗತಿ ಎಂಬಂತೆ ಬಿಂಬಿಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ.
ಸಾರ್ವಜನಿಕ ವೇದಿಕೆಯಲ್ಲಿ ಕುಳಿತಿದ್ದಾಗ ‘ಆತ್ಮವಿಶ್ವಾಸ ಕಳೆದುಕೊಳ್ಳಬೇಡ’ ಎಂದು ಹಿರಿಯರಾದ ನಮ್ಮನ್ನೇ ನಮ್ಮ ಮನಸ್ಸು ಪದೇಪದೇ ಎಚ್ಚರಿಸುತ್ತಿರುತ್ತದೆ. ಇನ್ನು ಪುಟ್ಟ ಮಕ್ಕಳ ಸ್ಥಿತಿ ಹೇಗಿರಬೇಡ? ಅಂತಹದ್ದೊಂದು ವೇದಿಕೆಯಲ್ಲಿ ಕುಳಿತಾಗ ಮಗು ತೀವ್ರ ಒತ್ತಡ ಅನುಭವಿಸುತ್ತಿರುತ್ತದೆ. ಹೇಗೆ ನಡೆದುಕೊಳ್ಳಬೇಕು ಎನ್ನುವುದು ತಿಳಿಯದೆ ಗೊಂದಲಕ್ಕೆ ಒಳಗಾಗುತ್ತದೆ. ಮುಖ್ಯವಾಗಿ, ದಿಟ್ಟತನಕ್ಕೂ ಅತಿಯಾದ ಆತ್ಮವಿಶ್ವಾಸಕ್ಕೂ ಇರುವ ವ್ಯತ್ಯಾಸವನ್ನು ನಾವು ಮಕ್ಕಳಿಗೆ ಮನದಟ್ಟು ಮಾಡಿಸದಿರುವುದೇ ಇದಕ್ಕೆ ಕಾರಣ. ನಮ್ರತೆ, ವಿನಯ, ಆಧ್ಯಾತ್ಮಿಕತೆಯನ್ನು ನಾವು ಅವರಿಗೆ ಹೇಳಿಕೊಡುತ್ತಿಲ್ಲ, ವಾಸ್ತವ ಅರಿತು ಬದುಕುವುದನ್ನು ಕಲಿಸುತ್ತಿಲ್ಲ. ಆಧ್ಯಾತ್ಮಿಕತೆ ಏನಿದ್ದರೂ ವಯಸ್ಕರಿಗಷ್ಟೇ ಅಂದುಕೊಳ್ಳುತ್ತೇವೆ. ವಾಸ್ತವದಲ್ಲಿ ಅದು ನಮ್ಮೆಲ್ಲರ ಬದುಕಿನ ಭಾಗವೇ ಆಗಿದೆ. ನಮ್ಮ ಪ್ರತಿ ಸಮಸ್ಯೆಗೂ ಭಗವದ್ಗೀತೆಯಲ್ಲಿ ಪರಿಹಾರವಿದೆ. ಅದರ ಮಹತ್ವವನ್ನು ಅರಿತು ಅದರ ಸದುಪಯೋಗಕ್ಕೆ ಮುಂದಾಗಿರುವ ಸಾವಿರಾರು ಪಾಶ್ಚಿಮಾತ್ಯ ಲೇಖಕರು ನಮಗೆ ಸಿಗುತ್ತಾರೆ. ಆದರೆ ‘ಹಿತ್ತಲ ಗಿಡ’ ನಮಗೆ ಮದ್ದಾಗುತ್ತಿಲ್ಲ.
ಮಕ್ಕಳ ಬುದ್ಧಿಕೋಶಕ್ಕೆ (ಐಕ್ಯು) ಈಗ ಎಲ್ಲಿಲ್ಲದ ಮಹತ್ವ. ಆದರೆ ನಾವೀಗ ಬಹುಮುಖ್ಯವಾಗಿ ಉದ್ದೀಪಿಸಬೇಕಾಗಿರುವುದು ಅವರ ಭಾವನಾತ್ಮಕ ಕೋಶ ಮತ್ತು ಸಾಮಾಜಿಕ ಕೋಶವನ್ನು. ಇದನ್ನು ಅರಿಯದ ಅರಿವುಗೇಡಿಗಳಾಗಿದ್ದೇವೆ. ನಾವು ಹೇರಿದ ನಿರೀಕ್ಷೆಗಳ ಭಾರದಲ್ಲಿ ಮಗುವಿನ ಆಕಾಂಕ್ಷೆಗಳು ನಲುಗಿಹೋಗುತ್ತಿವೆ. ಅದಕ್ಕೇ ಎಲ್ಲರ ಮನೆಯ ಮಕ್ಕಳಲ್ಲೂ ಈಗ ಮುಗ್ಧತೆ ಸದ್ದಿಲ್ಲದೇ ಮಾಯವಾಗಿದೆ. ನಮ್ಮಂತೆಯೇ ಬದಲಾಗಿರುವ ನಮ್ಮ ಮಕ್ಕಳು ಈಗ ಮಕ್ಕಳಾಗಿ ಉಳಿದಿಲ್ಲ, ಅವರೆಲ್ಲರೂ ಈಗ ‘ಮಿನಿ ಅಡಲ್ಟ್’ಗಳು, ಝೆನ್ ಜೀ ಪೀಳಿಗೆಯವರು! ಎಲ್ಲಾ ಇದ್ದೂ ಇಲ್ಲದಂತಾಗಿರುವ, ನಿಜವಾದ ಸಂತೋಷವನ್ನೇ ಅನುಭವಿಸಲಾಗದ ಸ್ಪಂದನಾರಹಿತರು.
ಅತಿಯಾದ ಮೊಬೈಲ್ ವೀಕ್ಷಣೆಯಿಂದ ನಿರಂತರವಾಗಿ ಬಿಡುಗಡೆಯಾಗುವ ರಾಸಾಯನಿಕಗಳ ಒತ್ತಡ ನಮ್ಮ ಮಕ್ಕಳ ಎಲ್ಲ ಖುಷಿಯನ್ನೂ ಕಸಿಯುತ್ತಿದೆ. ಅದಕ್ಕೇ ಕೇಳಿದ್ದನ್ನು ಕೈಗಿಟ್ಟರೂ, ಐಷಾರಾಮಿ ಪ್ರವಾಸ ಮಾಡಿಸಿಕೊಂಡು ಬಂದರೂ ಅವರ ಮುಖದಲ್ಲಿ ಸಂತೋಷ ಕುಡಿಯೊಡೆಯುತ್ತಿಲ್ಲ, ತೃಪ್ತಿಯ ಭಾವ ಮಿನುಗುತ್ತಿಲ್ಲ. ಮೊಬೈಲ್‌ನಲ್ಲಿ ನಾವು ವಿಡಿಯೊ ನೋಡುತ್ತಿರುವಾಗ, ಇನ್‌ಸ್ಟಾಗ್ರಾಂನಲ್ಲಿ ಸ್ಕ್ರೋಲ್ ಮಾಡುತ್ತಿರುವಾಗ ನಾನಾ ವಿಧದ ರಾಸಾಯನಿಕಗಳು ಮೆದುಳಿನಲ್ಲಿ ಬಿಡುಗಡೆಯಾಗುತ್ತವೆ. ಯಾರೋ ತಬ್ಬಿಕೊಂಡಿದ್ದು, ಮತ್ತ್ಯಾರೋ ಖುಷಿಯಿಂದ ಜಿಗಿಯುತ್ತಿರುವುದು, ಯಾರಿಗೆ ಇನ್ಯಾರೋ ಸಹಾಯ ಮಾಡುತ್ತಿರುವುದು ಎಲ್ಲವನ್ನೂ ನಿರಂತರವಾಗಿ ನೋಡುತ್ತಾ ಹೋದಾಗ, ಬಗೆಬಗೆಯ ರಾಸಾಯನಿಕಗಳು ಒಟ್ಟಿಗೇ ಬಿಡುಗಡೆಯಾಗುತ್ತಾ ಹೋಗುತ್ತವೆ. ಅವೆಲ್ಲವನ್ನೂ ತಾಳಿಕೊಳ್ಳುವ ಶಕ್ತಿ ಇಲ್ಲದಿರುವುದರಿಂದಲೇ ಈಗಿನ ಪೋಷಕರಲ್ಲಿ ಸದಾ ಒತ್ತಡ, ಒಂದಲ್ಲ ಒಂದು ವಿಷಯಕ್ಕೆ ಅನ್ಯಮನಸ್ಕತೆ, ಅಶಾಂತಿ... ದೊಡ್ಡವರೇ ಹೀಗಾಗಿರುವಾಗ ಇನ್ನು ಮಕ್ಕಳ ಸ್ಥಿತಿ ಹೇಗಿರಬೇಡ?
ಮಗುವಿಗೆ ಕೊಡಲು ಈಗ ನಮ್ಮ ಬಳಿ ಸಮಯವಿಲ್ಲ. ಅದರ ಕುತೂಹಲ ತಣಿಸುವ ಮನಃಸ್ಥಿತಿಯಲ್ಲಿ ನಾವಿಲ್ಲ. ಗಮನ ಬೇರೆಡೆ ತಿರುಗಿಸಲು ಅದರ ಕೈಗೆ ಮೊಬೈಲ್ ಕೊಟ್ಟು ಕೂರಿಸುತ್ತೇವೆ. ಮಗುವಿನ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಐ.ಡಿ ಕ್ರಿಯೇಟ್ ಮಾಡಿ ಏನೇನೋ ಪೋಸ್ಟ್ ಮಾಡುತ್ತೇವೆ. ಯೂಟ್ಯೂಬ್ ಚಾನೆಲ್ ಶುರು ಮಾಡಿ, ಅವರಿಗೂ ಸಬ್‌ಸ್ಕ್ರೈಬರ್‌ಗಳ ಲೆಕ್ಕ ಹಾಕುತ್ತಾ ಕೂರುವ ಹುಚ್ಚು ಹಿಡಿಸುತ್ತಿದ್ದೇವೆ. ಹೆಚ್ಚು ಲೈಕು, ಕಾಮೆಂಟ್‌ಗಳು ಬರಲಿಲ್ಲವೆಂದರೆ ಮಗುವಿನಲ್ಲಿ ಆತ್ಮವಿಶ್ವಾಸ ಕುಗ್ಗುತ್ತದೆ. ಇಂತಹ ಸಾಮಾಜಿಕ ಸಾಧನಗಳ ಒತ್ತಡವು ಮಕ್ಕಳ ಒಟ್ಟಾರೆ ಬೆಳವಣಿಗೆಯನ್ನು ಕುಗ್ಗಿಸುತ್ತದೆ. ಹೇಳಿಕೇಳಿ ಮಗುವಿನ ವ್ಯಕ್ತಿತ್ವ ಇರುವುದೇ ಸ್ಪಾಂಜ್‌ನಂತೆ. ಏನನ್ನು ನೋಡುತ್ತದೋ ಏನೆಲ್ಲ ಕೇಳುತ್ತದೋ ಅದೆಲ್ಲವನ್ನೂ ಹೀರಿಕೊಳ್ಳುತ್ತಲೇ ಅದರ ನಡವಳಿಕೆ ರೂಪುಗೊಳ್ಳುತ್ತಾ ಹೋಗುತ್ತದೆ. ಇಶಿತ್‌ನ ಅಸಹಜ ನಡವಳಿಕೆಯೂ ಅದರ ಪ್ರತಿಫಲನ ಅಷ್ಟೆ. ಲಿಂಗಾಧಾರಿತ ಪೋಷಕತ್ವ, ದ್ವಿಮುಖ ನೀತಿಯೂ ಇಂತಹ ದುಃಸ್ಥಿತಿಗೆ ಕೊಡುಗೆ ನೀಡುತ್ತಿವೆ. ಹೆಣ್ಣುಮಗುವೊಂದು ದಿಟ್ಟತನದಿಂದ ನಡೆದುಕೊಂಡರೆ ಅದಕ್ಕೆ ‘ಕೋಪಿಷ್ಟೆ’ ಎಂಬ ಹಣೆಪಟ್ಟಿ ಕಟ್ಟುತ್ತೇವೆ, ಅದೇ ಗಂಡುಮಗುವನ್ನು ‘ಶಕ್ತಿಶಾಲಿ’ ಎಂದು ಕೊಂಡಾಡುತ್ತೇವೆ. ಹಾಗೆಯೇ ಆರ್ಥಿಕವಾಗಿ ಸಬಲವಾಗಿರುವ ಕುಟುಂಬದ ಬಾಲಕನೊಬ್ಬ ತೋರುವ ಧಾರ್ಷ್ಟ್ಯವು ಆತ್ಮವಿಶ್ವಾಸ ಎನ್ನಿಸಿಕೊಂಡರೆ, ಬಡವರ ಮಗುವಿನ ಅಂತಹದೇ ವರ್ತನೆ ಅಗೌರವದಂತೆ ತೋರುತ್ತದೆ.
ಒಳ್ಳೆಯ ಪೋಷಕರಾಗಬೇಕೆಂಬ ಭರದಲ್ಲಿ, ನಮಗೆ ಸಿಗದಿದ್ದನ್ನೆಲ್ಲಾ ಮಕ್ಕಳಿಗೆ ಕರುಣಿಸಿಬಿಡುವ ಹುಂಬತನದಲ್ಲಿ ಅವಾಸ್ತವಿಕ ಪ್ರಪಂಚಕ್ಕೆ ಮಕ್ಕಳನ್ನು ದೂಡುತ್ತಿದ್ದೇವೆ. ಹೀಗೇ ಅವರ ಭಾವನೆಗಳಿಗೆ ಹಾನಿ ಮಾಡುತ್ತಾ ಹೋದರೆ, ಭವಿಷ್ಯದ ಬಲಿಪಶುಗಳು ನಾವೇ ಎಂಬುದು ಅರಗಿಸಿಕೊಳ್ಳಲು ಕಷ್ಟವೆನಿಸುವ ಕಹಿ ಸತ್ಯವೇ ಹೌದು. ಅದಾಗಬಾರದೆಂದರೆ, ನಮಗೆ ನಾವೇ ಹಾಕಿಕೊಳ್ಳುವ ಗಡಿಗಳೊಳಗೆ ಪ್ರಜ್ಞಾಪೂರ್ವಕವಾಗಿ ಮಕ್ಕಳನ್ನು ಬೆಳೆಸುವುದನ್ನು ಕಲಿಯಬೇಕು. ಬೇಡದ್ದನ್ನು ನಯವಾಗಿ, ಆದರೆ ಅಷ್ಟೇ ದೃಢವಾಗಿ ಹೇಳುವುದನ್ನು ನಾವು ರರೂಢಿಸಿಕೊಳ್ಳಲೇಬೇಕು.
ಲೇಖಕಿ: ಆಪ್ತ ಸಮಾಲೋಚಕಿ, ವೆಲ್‌ನೆಸ್ ಕೋಚ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.