Tobacco smokers
ತಂಬಾಕು ಸೇವನೆ ಕುರಿತು ಸಾಕಷ್ಟು ವಿಧದಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಸೇವನೆ ಮಾಡುವವರ ಸಂಖ್ಯೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬಂದಿಲ್ಲ. ಬದಲಾಗಿ, ಯುವಜನರು, ಮಹಿಳೆಯರು ಸೇರಿದಂತೆ ತಂಬಾಕು ಅಥವಾ ತಂಬಾಕು ಉತ್ಪನ್ನಗಳನ್ನು ಜಗಿಯುವ ಹಾಗೂ ಸೇದುವ ಪ್ರಮಾಣ ಹೆಚ್ಚಾಗುತ್ತಲೇ ಇದೆ. ತಂಬಾಕು ಸೇವನೆಯಿಂದ ಏನೆಲ್ಲಾ ಆರೋಗ್ಯ ಸಮಸ್ಯೆ ಉಲ್ಬಣವಾಗಲಿದೆ ಎಂದು ಎಲ್ಲಾ ವಿಧದಲ್ಲೂ ಜಾಗೃತಿ ಮೂಡಿಸುತ್ತಿದ್ದರೂ ಜನ ಈ ಬಗ್ಗೆ ಹೆಚ್ಚು ಗಮನ ನೀಡದೆ ತಮ್ಮ ಪಾಡಿಗೆ ತಂಬಾಕು ಸೇವನೆಯಲ್ಲಿ ಮುಳುಗಿದ್ದಾರೆ. ತಂಬಾಕು ಸೇವನೆ ನಿಧಾನ ವಿಷದ ರೀತಿಯಲ್ಲಿ ಕೊಲ್ಲುತ್ತಾ ಬರುತ್ತದೆ. ತಂಬಾಕು ಸೇವನೆಯಿಂದ ಯಾರಿಗೆ ಏನೆಲ್ಲಾ ಆರೋಗ್ಯ ಸಮಸ್ಯೆ ಕಾಡಲಿದೆ ಹಾಗೂ ಇದರಿಂದ ಹೊರಬರುವ ದಾರಿಯ ಕುರಿತು ತಜ್ಞವೈದ್ಯರಾದ ಡಾ. ಸುದರ್ಶನ್ ಕೆ. ಹಾಗೂ ಡಾ. ಮಂಜುನಾಥ್ ವಿವರಿಸಿದ್ದಾರೆ.
ಕ್ಯಾನ್ಸರ್‌ಗೆ ಆಹ್ವಾನ
ಜಗಿಯುವ ಹಾಗೂ ಸೇದುವ ಯಾವುದೇ ತಂಬಾಕು ಉತ್ಪನ್ನವೂ ಅಪಾಯಕಾರಿಯೇ. ಜಗಿಯುವ ತಂಬಾಕಿನಿಂದ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಇನ್ನು, ಶ್ವಾಸಕೋಶ, ಹೃದಯ ಸಮಸ್ಯೆ, ಕಿಡ್ನಿ ಸೇರಿದಂತೆ ಪ್ರತಿಯೊಂದು ಕಾಯಿಲೆಗೂ ಧೂಮಪಾನ ನಂಟು ಇರುತ್ತದೆ. ಹೀಗಾಗಿ ಧೂಮಪಾನ ಹಾಗೂ ಜಗಿಯುವ ತಂಬಾಕು ಸೇವನೆ ನಿಲ್ಲಿಸುವುದು ಉತ್ತಮ.
ಪಕ್ಕದಲ್ಲಿದ್ದವರಿಗೂ ಕ್ಯಾನ್ಸರ್
ಇನ್ನು, ಕೆಲವರು ಯಾವುದೇ ರೀತಿಯ ಧೂಮಪಾನದ ಅಭ್ಯಾಸವಿಲ್ಲದೇ ಇದ್ದರೂ, ಕ್ಯಾನ್ಸರ್ ಅಪಾಯಕ್ಕೆ ಸಿಲುಕುತ್ತಾರೆ. ಎಂದರೆ, ಅವರ ಸುತ್ತಮುತ್ತಲಿನ ಜನರು ನಿರಂತರವಾಗಿ ಧೂಮಪಾನ ಮಾಡುತ್ತಿದ್ದರೆ, ಪಕ್ಕದಲ್ಲೇ ನಿಂತವರು ಸಹಜವಾಗಿ ಅದರ ಹೊಗೆಯ ವಲಯದಲ್ಲಿ ಇರುತ್ತಾರೆ ಮತ್ತು ಅವರ ಶ್ವಾಸಕೋಶದೊಳಗೂ ಈ ಹೊಗೆ ಹೋಗುತ್ತದೆ. ಈ ರೀತಿಯ ಪ್ಯಾಸಿವ್ ಸ್ಮೋಕಿಂಗ್ ವಿಧಾನದಿಂದಲೂ ಕ್ಯಾನ್ಸರ್ ಕಾಯಿಲೆ ಕಾಡುವ ಅಪಾಯವಿದೆ. ಅದರಲ್ಲೂ ವಯಸ್ಸಾದವರು, ಮಹಿಳೆಯರು ಹಾಗೂ ಸೂಕ್ಷ್ಮ ಆರೋಗ್ಯ ಹೊಂದಿರುವವರು ಈ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.
ಪುರುಷರ ಬಂಜೆತನ
ಇತ್ತೀಚೆಗೆ ಪುರುಷ ಬಂಜೆತನ ಎಂಬುದು ಸಾಮಾನ್ಯವಾಗಿದೆ. ಇದಕ್ಕೆ ಪುರುಷರು ಧೂಮಪಾನ ಮಾಡುವುದೂ ಒಂದು ಕಾರಣವೆನ್ನಲಾಗಿದೆ. ಶೇ.5ರಷ್ಟು ಜನರಲ್ಲಿ ತಂಬಾಕು ಸೇವನೆಯಿಂದಲೇ ಬಂಜೆತನ ಉಂಟಾಗಿದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ತಂಬಾಕು ಮಾನವ ದೇಹದ ಪ್ರತಿಯೊಂದು ವ್ಯವಸ್ಥೆಯ ಮೇಲೆ, ವಿಶೇಷವಾಗಿ ಶ್ವಾಸಕೋಶ ಮತ್ತು ಸಂತಾನೋತ್ಪತ್ತಿ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ತಂಬಾಕಿನಲ್ಲಿರುವ ನಿಕೋಟಿನ್ ಮತ್ತು ಇತರ ಹಾನಿಕಾರಕ ರಾಸಾಯನಿಕಗಳು ಲೈಂಗಿಕ ಹಾರ್ಮೋನುಗಳ ಕಾರ್ಯವನ್ನು ದುರ್ಬಲಗೊಳಿಸಲಿದ್ದು, ಪುರುಷರಲ್ಲಿ ವೀರ್ಯ ಉತ್ಪಾದನೆ ಕಡಿಮೆ ಮಾಡಲಿದೆ. ಮಹಿಳೆಯರಲ್ಲಿ ಅಂಡಾಣುಗಳ ಗುಣಮಟ್ಟ ಕುಗ್ಗಿಸಲಿದೆ. ಅಷ್ಟೆ ಅಲ್ಲದೆ, ತಂಬಾಕು ಸೇವನೆಯು ಶ್ವಾಸಕೋಶದಲ್ಲಿ ಫೈಬ್ರೋಸಿಸ್ ಅನ್ನು ಹೆಚ್ಚಿಸಿ, ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಹೃದಯರಕ್ತನಾಳದ ಕಾಯಿಲೆಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಇದು ಉಲ್ಬಣಗೊಳಿಸಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಕಾಮಾಸಕ್ತಿಯನ್ನು ಕಡಿಮೆ ಮಾಡಿ, ಟೆಸ್ಟೋಸ್ಟೆರಾನ್, ಈಸ್ಟ್ರೊಜೆನ್ ಮತ್ತು ಬೆಳವಣಿಗೆಯ ಹಾರ್ಮೋನ್‌ನಂತಹ ಪ್ರಮುಖ ಸಂತಾನೋತ್ಪತ್ತಿ ಹಾರ್ಮೋನುಗಳ ಏರಿಳಿತಕ್ಕೆ ಕಾರಣವಾಗಲಿದೆ.
ಗರ್ಭಿಣಿಯರಿಗೆ ತಂಬಾಕು ಸೇವನೆ ನಿಷಿದ್ಧ
ಇನ್ನು, ಗರ್ಭಿಣಿಯರಲ್ಲಿ ತಂಬಾಕು ಸೇವನೆಯು ಭ್ರೂಣದ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಗರ್ಭಪಾತ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಗರ್ಭಾಶಯದ ಬೆಳವಣಿಗೆಯ ನಿರ್ಬಂಧ (IUGR) ನಂತಹ ಕಳಪೆ ಗರ್ಭಧಾರಣೆಯ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಯಾವುದೇ ರೂಪದಲ್ಲಿ ತಂಬಾಕು ಸೇವನೆಯು ಸಾಮಾನ್ಯವಾಗಿ ಪುರುಷರಿಗಿಂತ ಮಹಿಳಾ ಸಂಗಾತಿಗೆ ಹೆಚ್ಚು ಹಾನಿಕಾರಕ. ಇದು ವಿಶೇಷವಾಗಿ 35 ವರ್ಷ ವಯಸ್ಸಿನ ನಂತರ ಅಂಡಾಣು (ಎಗ್) ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲೂ ಇಳಿಕೆಗೆ ಕಾರಣವಾಗಬಹುದು. ತಂಬಾಕಿನಲ್ಲಿರುವ ನಿಕೋಟಿನ್ ಮತ್ತು ಇತರ ಹಾನಿಕಾರಕ ವಸ್ತುಗಳು ಸಂತಾನೋತ್ಪತ್ತಿ ಕಾರ್ಯಕ್ಕೆ ಅಗತ್ಯವಾದ ಹಾರ್ಮೋನ್ ವ್ಯವಸ್ಥೆಗೆ ಹಾನಿಕಾರಕ. ಈ ಹಾರ್ಮೋನುಗಳ ಅಸಮತೋಲನವು ಕಳಪೆ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಇದು ಗರ್ಭಪಾತ, ಅವಧಿಪೂರ್ವ ಹೆರಿಗೆ, ಕಡಿಮೆ ತೂಕದ ಶಿಶು ಜನನ ಮತ್ತು ಗರ್ಭಾವಸ್ಥೆಯಿಂದ ಉಂಟಾಗುವ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಪ್ರಸೂತಿ ತೊಡಕುಗಳ ಅಪಾಯವನ್ನು ಹೆಚ್ಚಿಸುತ್ತದೆ.
ತಂಬಾಕು ಬೇಡವೇ ಬೇಡ
ಕುಟುಂಬದ ಸಂತೋಷಕ್ಕಾಗಿ ಹಾಗೂ ನಮ್ಮ ಆರೋಗ್ಯದ ದೃಷ್ಟಿಯಿಂದ ತಂಬಾಕು ಸೇವನೆ ತ್ಯಜಿಸುವುದು ಅತಿ ಅವಶ್ಯಕ. ಯಾವುದೇ ವ್ಯಕ್ತಿ ಒಮ್ಮೆಲೇ ತಂಬಾಕು ಸೇವನೆ ಅಥವಾ ಧೂಮಪಾನ ಬಿಡಲು ಯಾವ ವೈದ್ಯರೂ ಸಲಹೆ ನೀಡುವುದಿಲ್ಲ. ಸೇವನೆಯ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ, ಒಂದು ದಿನ ಸಂಪೂರ್ಣವಾಗಿ ತ್ಯಜಿಸುವ ವಿಧಾನ ಸೂಕ್ತ. ಇದರಿಂದ ಆರೋಗ್ಯದ ಹಲವು ಅನುಕೂಲಗಳನ್ನು ನೀವು ನೋಡಬಹುದು. ತಂಬಾಕು ಸೇವನೆ ಒಂದು ಚಟವಷ್ಟೆ. ಅದರಿಂದ ಒತ್ತಡ ಕಡಿಮೆಯಾಗುವುದು ಅಥವಾ ಶೀಘ್ರ ನೆಮ್ಮದಿ ಸಿಗುತ್ತದೆ ಎಂದೆಲ್ಲಾ ಭಾವಿಸಿದ್ದರೆ, ಅದು ಶುದ್ಧ ಸುಳ್ಳು. ಧೂಮಪಾನ ಹಾಗೂ ತಂಬಾಕು ಜಗಿಯುವುದರಿಂದ ನಯಾಪೈಸೆ ಒಳ್ಳೆಯ ಅಂಶಗಳಿಲ್ಲ. ಬದಲಾಗಿ ಕೆಟ್ಟ ಅಂಶಗಳೇ ಹೆಚ್ಚು. ಹೀಗಾಗಿ ಸೂಕ್ತ ವೈದ್ಯರ ಸಲಹೆ ಹಾಗೂ ನಿಮ್ಮ ಮಾನಸಿಕ ಹಿತದಿಂದ ಈ ಚಟವನ್ನು ಬಿಡುವತ್ತ ಬಲವಾದ ಹೆಜ್ಜೆ ಇಡುವುದು ಅತ್ಯವಶ್ಯಕ.
***
-ಲೇಖಕರು: ಡಾ. ಸುದರ್ಶನ್ ಕೆ., ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಶ್ವಾಸಕೋಶ ತಜ್ಞರು ಹಾಗೂ ಡಾ.ಮಂಜುನಾಥ್, ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ನ ಉಪ ವೈದ್ಯಕೀಯ ನಿರ್ದೇಶಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.