
ಚಿತ್ರ: ಎಐ
ಭೂಮಿ ಮೇಲಿನ ಪ್ರತಿ ಜೀವಿಗೂ ನೀರು ಅತಿ ಮುಖ್ಯ. ಇತ್ತೀಚಿನ ಹವಮಾನ ವೈಪರೀತ್ಯದಿಂದಾಗಿ ಸೂಕ್ತ ಸಮಯಕ್ಕೆ ಮಳೆಯಾಗದೆ ಹಲವು ಪ್ರದೇಶಗಳು ಮರುಭೂಮಿಯಾಗಿ ಪರಿವರ್ತನೆಯಾಗುತ್ತಿವೆ. ‘ವರ್ಲ್ಡ್ ಅಟ್ಲಾಸ್’ ವಿಶ್ವದ ಅತಿ ಒಣ ಪ್ರದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಾದರೆ ವಿಶ್ವದ ಅತಿ ಒಣ ಪ್ರದೇಶಗಳು ಯಾವುವು ಎಂಬುದನ್ನು ತಿಳಿಯೋಣ.
ಈಜಿಪ್ಟ್:
ವಿಶ್ವದ ಅತ್ಯಂತ ಒಣ ದೇಶಗಳಲ್ಲಿ ‘ಈಜಿಪ್ಟ್’ ಮೊದಲ ಸ್ಥಾನ ಪಡೆದುಕೊಂಡಿದೆ. ಈಜಿಪ್ಟ್‌ನ ಬಹುಪಾಲು ಪ್ರದೇಶ ಸಹಾರಾ ಮರುಭೂಮಿಯಲ್ಲಿ ಹರಡಿಕೊಂಡಿರುವ ಕಾರಣ ಇಲ್ಲಿನ ವಾತಾವರಣದ ಸ್ವರೂಪ ಭಿನ್ನವಾಗಿದೆ. ಇಲ್ಲಿನ ಉಪೋಷ್ಣವಲಯದ ಎತ್ತರದ ಪ್ರದೇಶ, ಮೋಡವಿಲ್ಲದ ಆಕಾಶ ಹಾಗೂ ತೀವ್ರ ಸೂರ್ಯನ ಬಿಸಿಲು ಮಳೆಗೆ ಅಡ್ಡಿಯಾಗುತ್ತಿದೆ. ಇಲ್ಲಿ ವಾರ್ಷಿಕ ಕೇವಲ 18 ಮಿ.ಮೀ ಮಳೆಯಾಗುತ್ತದೆ.
ಲಿಬಿಯಾ:
ಲಿಬಿಯಾದ ಬಹುತೇಕ ಭಾಗ ಸಹಾರಾ ಮರುಭೂಮಿಯಲ್ಲಿಯೇ ಇರುವುದರಿಂದ ಈಜಿಪ್ಟ್‌ನಲ್ಲಿರುವ ವಾತಾವರಣವನ್ನೇ ಹೊಂದಿದೆ. ಏಪ್ರಿಲ್‌ನಿಂದ ಅಕ್ಟೋಬರ್ ನಡುವೆ ಮೆಡಿಟರೇನಿಯನ್ ಸಮುದ್ರದ ಕಡೆಯಿಂದ ಬರುವ ಮಳೆ ಮೋಡಗಳು ಕರಾವಳಿಯಲ್ಲಿ ತುಂತುರು ಮಳೆ ಸುರಿಸಿ ಹಿಂತಿರುಗುತ್ತವೆ. ಇಲ್ಲಿನ ತಾಪಮಾನ 35 ಡಿಗ್ರಿ ಸೆಲ್ಶಿಯಸ್‌ನಿಂದ 48 ಡಿಗ್ರಿ ಸೆಲ್ಶಿಯಸ್ ವರೆಗೂ ಹೆಚ್ಚಾಗುತ್ತದೆ. ಇಲ್ಲಿ ವಾರ್ಷಿಕ ಕೇವಲ 56 ಮಿ.ಮೀ ಮಳೆಯಾಗುತ್ತದೆ.
ಸೌದಿ ಅರೇಬಿಯಾ:
ಸೌದಿ ಅರೇಬಿಯಾದಲ್ಲಿ ವಾರ್ಷಿಕ ಮಳೆಯ ಪ್ರಮಾಣ 50ಮಿ.ಮೀ ನಿಂದ 150 ಮಿ.ಮೀ ಆಗಿದೆ. ಇಲ್ಲಿನ ನಜ್ದ್ ಮತ್ತು ರುಬಾ ಅಲ್ ಖಾಲಿ ಪ್ರದೇಶಗಳು ಇದಕ್ಕಿಂತ ಕಡಿಮೆ ಪ್ರಮಾಣದ ಮಳೆ ಪಡೆಯುತ್ತವೆ. ಇಲ್ಲಿ ಮೇ ನಿಂದ ಸೆಪ್ಟೆಂಬರ್ ವರೆಗೆ ಹೆಚ್ಚು ಬಿಸಿಲಿನ ತಾಪವಿರುತ್ತದೆ. ಇಲ್ಲಿನ ನೈಋತ್ಯ ಪರ್ವತಗಳು ಮಾತ್ರ ವಾರ್ಷಿಕ 250 ಮಿ.ಮೀ.ಗಿಂತ ಹೆಚ್ಚಿನ ಬೇಸಿಗೆ ಮಳೆಯನ್ನು ಪಡೆಯುತ್ತವೆ.
ಕತಾರ್:
ಸಮತಟ್ಟಾದ ಪರ್ಯಾಯ ದ್ವೀಪವಾದರೂ ಮರುಭೂಮಿ ಹವಾಮಾನವನ್ನು ‘ಕತಾರ್’ ಹೊಂದಿದೆ. ಇಲ್ಲಿ ವಾರ್ಷಿಕ 75 ಮಿ.ಮೀ ಮಳೆಯಾಗುತ್ತದೆ. ಇಲ್ಲಿನ ತಾಪಮಾನ 42 ಡಿಗ್ರಿ ಸೆಲ್ಶಿಯಸ್‌ನಿಂದ 43 ಡಿಗ್ರಿ ಸೆಲ್ಶಿಯಸ್ ವರೆಗೆ ಏರಿಕೆಯಾಗುತ್ತದೆ. ಇಲ್ಲಿ ಧೂಳು ಹಾಗೂ ಮರಳು ಮಿಶ್ರಿತ ಬಿರುಗಾಳಿ ಆಗಾಗ ಏಳುತ್ತದೆ. ಡಿಸೆಂಬರ್ ನಿಂದ ಏಪ್ರಿಲ್ ನಡುವೆ ಅಲ್ಪ ಪ್ರಮಾಣದ ಮಳೆಯಾಗುತ್ತದೆ.
ಯುನೈಟೆಡ್ ಅರಬ್ ಎಮಿರೇಟ್ಸ್:
ಇಲ್ಲಿ ವಾರ್ಷಿಕವಾಗಿ 100 ಮಿ.ಮೀಗಿಂತ ಕಡಿಮೆ ಮಳೆಯಾಗುತ್ತದೆ. ವಿಶ್ವದ ಅತಿ ಒಣ ದೇಶಗಳ ಪಟ್ಟಿಯಲ್ಲಿರುವ ‘ಯುನೈಟೆಡ್ ಅರಬ್ ಎಮಿರೇಟ್ಸ್’ನಲ್ಲಿ ಮಳೆ ಅಪರೂಪ. ಒಂದೇ ಬಾರಿಗೆ ಮಳೆ ಸುರಿದು ಪ್ರವಾಹಕ್ಕೆ ಕಾರಣವಾಗುತ್ತದೆ. ಇಲ್ಲಿ ಈಜಿಪ್ಟ್‌ನ ವಾತವಾರಣವಿದ್ದು ಅಕ್ಟೋಬರ್ ನಿಂದ ಏಪ್ರಿಲ್ ನಡುವೆ ತೀವ್ರ ತಾಪಮಾನ ಮಳೆ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.
ಇತರೆ 5 ಅತಿ ಒಣ ದೇಶಗಳ ಪಟ್ಟಿ ಹೀಗಿದೆ:
ಬಹ್ರೇನ್ (83 ಮಿ.ಮೀ), ಅಲ್ಜೀರಿಯಾ (89 ಮಿ.ಮೀ), ಮೌರಿಟೇನಿಯಾ (92 ಮಿ.ಮೀ), ಜೋರ್ಡಾನ್ (111 ಮಿ.ಮೀ) ಹಾಗೂ ಕುವೈತ್ (121 ಮಿ.ಮೀ) ವಾರ್ಷಿಕವಾಗಿ ಮಳೆ ಪಡೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.