ಅರವಿಂದ ಕೇಜ್ರಿವಾಲ್ ಮತ್ತು ಅಣ್ಣಾ ಹಜಾರೆ (ಪಿಟಿಐ ಸಂಗ್ರಹ ಚಿತ್ರ)
ಮುಂಬೈ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ದೆಹಲಿ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಎಎಪಿ) ಹಣದ ಕಡೆಗೆ ಚಿತ್ತ ಹರಿಸಿ, ಮದ್ಯ ನೀತಿಯಲ್ಲಿ ಮುಳುಗಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಜ್ರಿವಾಲ್ ಅವರನ್ನು ಟೀಕಿಸಿರುವ ಹಜಾರೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವವರು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವವರ ವ್ಯಕ್ತಿತ್ವವು ಪರಿಶುದ್ಧವಾಗಿರಬೇಕು, ನಿಷ್ಕಳಂಕವಾಗಿರಬೇಕು. ತ್ಯಾಗದ ಸದ್ಗುಣಗಳ ಬಗ್ಗೆ ಅರಿತಿರಬೇಕು ಹಾಗೆಯೇ, ಅವಮಾನಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು ಎಂದು ಹೇಳಿದ್ದಾರೆ.
ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ 2011ರಲ್ಲಿ ನಡೆಸಿದ ಹೋರಾಟದ ವೇಳೆ ರಚನೆಯಾದ ಎಎಪಿಯು, 2015 ಹಾಗೂ 2020ರಲ್ಲಿ ಭಾರಿ ಬಹುಮತದೊಂದಿಗೆ ಗೆದ್ದು ಅಧಿಕಾರಕ್ಕೇರಿತ್ತು. ಈ ಬಾರಿ, ತೀವ್ರ ಹಿನ್ನಡೆ ಅನುಭವಿಸಿದೆ.
ದೆಹಲಿ ವಿಧಾನಸಭೆಯು 70 ಸ್ಥಾನಗಳ ಪೈಕಿ 54 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಗೆ ಈಗಾಗಲೇ ಸ್ಪಷ್ಟ ಬಹುಮತ ಲಭಿಸಿದೆ. 37 ಕಡೆ ಗೆಲುವಿನ ನಗೆ ಬೀರಿರುವ ಕೇಸರಿ ಪಕ್ಷ, ಇನ್ನೂ 11 ಕಡೆ ಮುನ್ನಡೆ ಕಾಯ್ದುಕೊಂಡಿದೆ. 17 ಸ್ಥಾನಗಳಲ್ಲಿ ಗೆದ್ದಿರುವ ಎಎಪಿ, 5 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.
ಎಎಪಿ ಮುಖ್ಯಸ್ಥ ಕೇಜ್ರಿವಾಲ್, ಪಕ್ಷದ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಪ್ರಮುಖರು ಸೋಲು ಕಂಡಿದ್ದಾರೆ.
ಫಲಿತಾಂಶದ ಬಗ್ಗೆ ರಾಳೇಗಣಸಿದ್ಧಿ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಹಜಾರೆ, 'ಅಬಕಾರಿ ನೀತಿಯ ವಿಷಯದೊಂದಿಗೆ ಹಣದ ವಿಷಯವೂ ಬಂತು. ಅವರು ಅದರಲ್ಲಿ ಮುಳುಗಿಹೋದರು. ಎಎಪಿಯ ಹೆಸರಿಗೆ ಕಳಂಕ ಅಂಟಿಕೊಂಡಿತು. ಶುದ್ಧ ವ್ಯಕ್ತಿತ್ವದ ಮಾತನಾಡುತ್ತಿದ್ದ ಅರವಿಂದ ಕೇಜ್ರಿವಾಲ್, ನಂತರ ಮದ್ಯದ ಬಗ್ಗೆ ಮಾತನಾಡಿದ್ದನ್ನು ಜನರು ಗಮನಿಸಿದರು' ಎಂದು ಹೇಳಿದ್ದಾರೆ.
'ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಅಗತ್ಯವನ್ನು ಮನಗಾಣುವಲ್ಲಿ ವಿಫಲವಾದ ಹಾಗೂ ತಪ್ಪು ಹಾದಿಯನ್ನು ಹಿಡಿದ ಕಾರಣ ಎಎಪಿಯು ಸೋಲು ಕಂಡಿದೆ' ಎಂದು ಪ್ರತಿಪಾದಿಸಿರುವ ಹಜಾರೆ, 'ಹಣವು ಮುನ್ನಲೆಗೆ ಬಂದಿತು. ಇದು ಎಎಪಿಯ ವರ್ಚಸ್ಸಿಗೆ ಧಕ್ಕೆ ತಂದಿತು. ಅದೇ, ಸೋಲಿಗೆ ಕಾರಣವಾಯಿತು' ಎಂದು ಕಾರಣ ತಿಳಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟದ ವೇಳೆ ಹಜಾರೆ ಹಾಗೂ ಕೇಜ್ರಿವಾಲ್ ಜೊತೆಯಲ್ಲೇ ಇದ್ದರು. ಆದರೆ, ಕೇಜ್ರಿವಾಲ್ ಅವರು, 2012ರಲ್ಲಿ ಎಎಪಿ ರಚಿಸಲು ಮುಂದಾದಾಗ, ಇಬ್ಬರೂ ದೂರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.