ಎನ್. ಚಂದ್ರಶೇಖರನ್
–ಪಿಟಿಐ ಚಿತ್ರ
ನವದೆಹಲಿ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡುವುದಾಗಿ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷ ಎನ್. ಚಂದ್ರಶೇಖರನ್ ಘೋಷಿಸಿದ್ದಾರೆ.
‘ವಿಮಾನ ದುರಂತದಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಈ ಕ್ಷಣಕ್ಕೆ ನಾವು ಅನುಭವಿಸುತ್ತಿರುವ ನೋವನ್ನು ಮಾತುಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರು ಮತ್ತು ಗಾಯಾಳುಗಳಿಗೆ ಅಗತ್ಯ ನೆರವು ಒದಗಿಸುತ್ತೇವೆ’ ಎಂದು ಚಂದ್ರಶೇಖರನ್ ತಿಳಿಸಿರುವುದಾಗಿ ಟಾಟಾ ಸಮೂಹ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
‘ದುರಂತದಲ್ಲಿ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಟಾಟಾ ಸಮೂಹವೇ ಭರಿಸಲಿದೆ ಮತ್ತು ಅಗತ್ಯವಿರುವ ಎಲ್ಲಾ ರೀತಿ ನೆರವನ್ನು ಒದಗಿಸಲಾಗುವುದು. ಜತೆಗೆ, ಬಿಜೆ ಮೆಡಿಕಲ್‌ನ ಹಾಸ್ಟೆಲ್ ನಿರ್ಮಾಣಕ್ಕೂ ಸಹಾಯ ಮಾಡುತ್ತೇವೆ. ಈ ಕಠಿಣ ಸಂದರ್ಭದಲ್ಲಿ ಮೃತರ ಕುಟುಂಬಸ್ಥರೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ’ ಎಂದು ಚಂದ್ರಶೇಖರನ್ ಭರವಸೆ ನೀಡಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನಿಂದ ಇಂಗ್ಲೆಂಡ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮೇಘಾನಿನಗರ್ ಪ್ರದೇಶದಲ್ಲಿ ಇಂದು (ಗುರುವಾರ) ಮಧ್ಯಾಹ್ನ 1.40ರ ಸುಮಾರಿಗೆ ಪತನಗೊಂಡಿದೆ.
ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 242 ಪ್ರಯಾಣಿಕರು ದುರಂತಕ್ಕೀಡಾದ ವಿಮಾನದಲ್ಲಿ ಇದ್ದರು. ಈ ಪೈಕಿ 169 ಜನ ಭಾರತೀಯ ಪ್ರಜೆಗಳು, 53 ಜನ ಬ್ರಿಟಿಷ್ ಪ್ರಜೆಗಳು, ಒಬ್ಬರು ಕೆನಡಾದವರು ಹಾಗೂ 7 ಮಂದಿ ಪೋರ್ಚುಗಲ್ ಪ್ರಜೆಗಳಿದ್ದರು ಎಂದು ಏರ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.